ಭಾನುವಾರ, ಜೂನ್ 20, 2021
23 °C

ಪ್ರತಿ ಆಸ್ಪತ್ರೆಯಲ್ಲೂ ಪುಸ್ತಕ ಮಳಿಗೆ ತೆರೆಯಲಿ - ಡಾ.ಸಿ.ಆರ್. ಚಂದ್ರಶೇಖರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರತಿ ಆಸ್ಪತ್ರೆಯಲ್ಲೂ ಪುಸ್ತಕ ಮಳಿಗೆ ತೆರೆಯಲಿ - ಡಾ.ಸಿ.ಆರ್. ಚಂದ್ರಶೇಖರ್

ಬೆಂಗಳೂರು: `ವೈದ್ಯಕೀಯ ಸಾಹಿತ್ಯದಲ್ಲಿ ಮಾತ್ರ ನಿಖರ ಸಾಹಿತ್ಯ ಕಾಣಲು ಸಾಧ್ಯ~ ಎಂದು ಲೈಂಗಿಕ ತಜ್ಞರಾದ ಡಾ. ಪದ್ಮಿನಿ ಪ್ರಸಾದ್ ಭಾನುವಾರ ಇಲ್ಲಿ ಅಭಿಪ್ರಾಯಪಟ್ಟರು.ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ನವ ಕರ್ನಾಟಕ ಪ್ರಕಾಶನ ಹೊರ ತಂದಿರುವ ಆರು ವೈದ್ಯಕೀಯ ಕೃತಿಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, `ಇಂದಿನ ದಿನಗಳಲ್ಲಿ ಜನಸಾಮಾನ್ಯರಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವ ತಿಳಿವಳಿಕೆ ಅಧಿಕವಾಗಿದೆ. ತಂತ್ರಜ್ಞಾನ ಬೆಳವಣಿಗೆಯಿಂದ ಜನರ ಜೀವನ ಶೈಲಿಯಲ್ಲಿ ಬದಲಾವಣೆಯಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ ನವಕರ್ನಾಟಕ ಪ್ರಕಾಶನ ಹೊರ ತಂದಿರುವ ವೈದ್ಯಕೀಯ ಕೃತಿಗಳು ಜನಸಾಮಾನ್ಯರಿಗೆ ಸಹಾಯಕವಾಗಲಿ~ ಎಂದರು.`ವೈದ್ಯಕೀಯ ಸಾಹಿತ್ಯ ಕೃತಿ ಬರೆಯವವರೇ ಅಪರೂಪ. ಸಭೆ- ಸಮಾರಂಭಗಳಲ್ಲಿ ಜನರಿಗೆ ಉಡುಗೊರೆಯಾಗಿ ವಸ್ತುಗಳನ್ನು ಕೊಡುವುದರ ಬದಲು ವೈದ್ಯ ಸಾಹಿತ್ಯದ ಪುಸ್ತಕಗಳನ್ನು ಕೊಡಲು ಎಲ್ಲರೂ ಮುಂದಾಗಬೇಕು~ ಎಂದು ಮನವಿ ಮಾಡಿದ ಅವರು, `ವೈದ್ಯ ಸಾಹಿತ್ಯದಲ್ಲಿ ಹೆಚ್ಚು ಕೃತಿಗಳನ್ನು  ಪ್ರಕಟಿಸಿರುವ ನವಕರ್ನಾಟಕ ಪ್ರಕಾಶನದ ಕಾರ್ಯ ಶ್ಲಾಘನೀಯ~ ಎಂದರು.ಮನೋವೈದ್ಯ ಡಾ.ಸಿ.ಆರ್. ಚಂದ್ರಶೇಖರ್ ಮಾತನಾಡಿ, `ಆರೋಗ್ಯ ಸಾಹಿತ್ಯ ಪ್ರತಿಯೊಬ್ಬರಿಗೂ ಉಪಯುಕ್ತವಾಗಿದೆ. ವೈದ್ಯರು ಮಾಡುವಂತಹ ಕೆಲಸವನ್ನು ಇಂದು ಪುಸ್ತಕಗಳು ಮಾಡುತ್ತಿವೆ.ರಾಜ್ಯದ ಪ್ರತಿಯೊಂದು ಆಸ್ಪತ್ರೆಗಳಲ್ಲಿಯೂ ಪುಸ್ತಕ ಮಳಿಗೆ ತೆರೆಯಲು ಸರ್ಕಾರ ಮುಂದಾಗಬೇಕು. ಅದಕ್ಕೆ ನಾವೆಲ್ಲರೂ ಕೈಜೋಡಿಸುತ್ತೇವೆ~ ಎಂದು ಹೇಳಿದರು.ಕೃತಿಗಳನ್ನು ಪರಿಚಯಿಸಿದ ಡಾ.ನಾ.ಸೋಮೇಶ್ವರ್, `ಪ್ರತಿಯೊಂದು ವೈದ್ಯಕೀಯ ಕೃತಿಗಳು ಜನಸಾಮಾನ್ಯರಿಗೆ ಉಪಯುಕ್ತವಾಗಿದ್ದು, ಎಲ್ಲರೂ ಕೊಂಡು ಓದಬಹುದಾದ ಪುಸ್ತಕಗಳಾಗಿವೆ~ ಎಂದರು.ಕಾರ್ಯಕ್ರಮದಲ್ಲಿ ಡಾ.ಸಿ.ಆರ್. ಚಂದ್ರಶೇಖರ್ ಅವರ `ವೃದ್ಧರ ಮನಸ್ಸು ಹೀಗೇಕೆ?~ ಮತ್ತು `ನಿದ್ರೆ- ಕನಸು, 50 ಪ್ರಶ್ನೆಗಳು~, ಡಾ.ಎಸ್.ವಿ. ಪರಮೇಶ್ವರ್ ಅವರ `ಬೊಜ್ಜುದೇಹ~, ಶ್ವೇತಾ ನರಗುಂದ ಅವರ `ಮಗುವಿರಲಿ ಮನೆಯಲ್ಲಿ, ನಗುವಿರಲಿ ಮನದಲ್ಲಿ~, ಎಂ.ಎಸ್.ಎಸ್.ಮೂರ್ತಿ ಅವರ `ಐವಿಎಫ್ ಇರುವಾಗ ಬಂಜೆತನದ ಅಂಜಿಕೆ ಏಕೆ?~ ಹಾಗೂ ಡಾ. ಗಣೇಶರಾವ್ ನಾಡಿಗೇರ್ ಅವರ `ಮಾನಸಿಕ ಅಸ್ವಸ್ಥರ ಪುನಶ್ಚೇತನ: ಏಕೆ ಹೇಗೆ? ಪುಸ್ತಕ ಬಿಡುಗಡೆ ಮಾಡಲಾಯಿತು. ನವ ಕರ್ನಾಟಕ ಪ್ರಕಾಶನದ ವ್ಯವಸ್ಥಾಪಕ ನಿರ್ದೇಶಕ ಆರ್. ಎಸ್. ರಾಜಾರಾಮ್ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.