ಬುಧವಾರ, ಮೇ 18, 2022
27 °C

ಪ್ರಧಾನಿ ಭೇಟಿ ಮಾಡಲಿರುವ ಐಐಟಿ ಅಧ್ಯಾಪಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಐಐಟಿಗಳು ಸೇರಿದಂತೆ ಕೇಂದ್ರದಿಂದ ಅನುದಾನ ಪಡೆಯುವ ಎಂಜಿನಿಯರಿಂಗ್ ಕಾಲೇಜುಗಳಿಗೆಲ್ಲ ಒಂದೇ ಸಾಮಾನ್ಯ ಪರೀಕ್ಷೆ ನಡೆಸುವ ಕೇಂದ್ರ ಸರ್ಕಾರದ ಪ್ರಸ್ತಾಪ ವಿರೋಧಿಸುತ್ತಿರುವ ಐಐಟಿ ಅಧ್ಯಾಪಕರು ಶುಕ್ರವಾರ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿಯಾಗಲಿದ್ದಾರೆ.ನಮ್ಮ ಮನವಿಗೆ ಪ್ರಧಾನಿಯವರ  ಕಚೇರಿ ಸ್ಪಂದಿಸಿದೆ. ಗುರುವಾರ ಪ್ರಧಾನಿ ಕಚೇರಿ ಅಧಿಕಾರಿಗಳನ್ನು ಭೇಟಿ ಮಾಡುತ್ತೇವೆ. ಶುಕ್ರವಾರ ಪ್ರಧಾನಿ ಸಿಂಗ್ ಅವರನ್ನು ಭೇಟಿಯಾಗುತ್ತೇವೆ ಎಂದು ಅಖಿಲ ಭಾರತ ಐಐಟಿ ಅಧ್ಯಾಪಕರ ಒಕ್ಕೂಟದ (ಎಐಐಐಟಿಎಫ್‌ಎಫ್) ಪ್ರತಿನಿಧಿಗಳು ತಿಳಿಸಿದ್ದಾರೆ.ಕೇಂದ್ರದ ಪ್ರಸ್ತಾಪದ ವಿರುದ್ಧ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುವುದಾಗಿ ಹೇಳಿರುವ ದೆಹಲಿ ಐಐಟಿ ಹಳೆಯ ವಿದ್ಯಾರ್ಥಿಗಳ ಸಂಘ, ಈ ಬೆಳವಣಿಗೆಯನ್ನು ಸ್ವಾಗತಿಸಿದೆ. ಈ ಭೇಟಿಯಲ್ಲಿ ಐಐಟಿಗಳ ಪ್ರತ್ಯೇಕ ಶೈಕ್ಷಣಿಕ ಸ್ಥಾನಮಾನ ಕಾಪಾಡುವ ಮಾರ್ಗೋಪಾಯಗಳು ಹೊರಹೊಮ್ಮುವ ಸಾಧ್ಯತೆ ಇದೆ ಎಂದು ಆಶಯ ವ್ಯಕ್ತಪಡಿಸಿದೆ.

ಅಲ್ಲದೇ ದೆಹಲಿ ಐಐಟಿ ಹಳೆ ವಿದ್ಯಾರ್ಥಿಗಳ ಸಂಘ ಸಹ ಪ್ರಧಾನಿ ಭೇಟಿಗೆ ಅವಕಾಶ ಕೋರಿ ಮನವಿ ಸಲ್ಲಿಸಿದೆ.ಒಂದೇ ಸಾಮಾನ್ಯ ಪ್ರವೇಶ ಪರೀಕ್ಷೆ ಪ್ರಸ್ತಾಪದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಕಪಿಲ್ ಸಿಬಲ್ ಮಂಗಳವಾರ ಹೇಳಿರುವ ಹಿನ್ನೆಲೆಯಲ್ಲಿ ಇದು  ಮಹತ್ವ ಪಡೆದಿದೆ.

ಕೇಂದ್ರದ ಈ ಪ್ರಸ್ತಾವದ ವಿರುದ್ಧ `ಎಐಐಐಟಿಎಫ್‌ಎಫ್~ ಮೇ 31ರಂದು ಪ್ರಧಾನಿಯವರಿಗೆ ಪತ್ರ ಬರೆದಿತ್ತು.

 

ಪ್ರತಿ ಐಐಟಿಯೂ ಪ್ರತ್ಯೇಕ ಶೈಕ್ಷಣಿಕ ಸ್ಥಾನ ಹೊಂದಿದ್ದು ಪ್ರವೇಶ ಹಾಗೂ ಶೈಕ್ಷಣಿಕ ವಿಚಾರಗಳಿಗೆ ಸಂಬಂಧಿಸಿ ತನ್ನದೇ ಆದ ನಿಯಮಾವಳಿ ಪಾಲಿಸುತ್ತಿದೆ. ಅದನ್ನು ಬದಲಿಸಬಾರದು ಎಂದು ಈ ಪತ್ರದಲ್ಲಿ ಒತ್ತಾಯಿಸಲಾಗಿದೆ.

ಕೇಂದ್ರ ಸರ್ಕಾರ ಮೇ 28ರಂದು ಈ ಕುರಿತು ಪ್ರಕಟಣೆ ನೀಡಿತ್ತು. 2013ನೇ ಸಾಲಿನಿಂದ ಐಐಟಿ, ಎನ್‌ಐಟಿ ಹಾಗೂ ಐಐಐಟಿಗಳಿಗೆ ಒಂದೇ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸುವುದಾಗಿ ಹೇಳಿತ್ತು.ಈ ಸಂಸ್ಥೆಗಳಿಗೆ ಪ್ರವೇಶ ನೀಡುವಾಗ ಪ್ರವೇಶ ಪರೀಕ್ಷೆಯ ಅಂಕಗಳ ಜತೆ 12ನೇ ತರಗತಿಯ ಅಂಕಗಳನ್ನು ಗಣನೆಗೆ ತೆಗೆದುಕೊಳ್ಳುವುದಾಗಿ ತಿಳಿಸಿತ್ತು.ಈ ಹಿಂದೆ ಐಐಟಿ, ಎನ್‌ಐಟಿ ಹಾಗೂ ಐಐಐಟಿಗಳ ಶೈಕ್ಷಣಿಕ ಮಂಡಳಿ ಸಭೆಯಲ್ಲಿ ಈ ಪ್ರಸ್ತಾಪಕ್ಕೆ ಯಾವುದೇ ವಿರೋಧ ವ್ಯಕ್ತವಾಗಿರಲಿಲ್ಲ. ಐಐಟಿಗಳು ಈಗ ಬಂಡಾಯದ ದನಿ ತೆಗೆದಿವೆ ಎಂದು ಕಪಿಲ್ ಸಿಬಲ್ ಹೇಳುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.