ಮಂಗಳವಾರ, ಮೇ 18, 2021
24 °C

ಪ್ರವಾಹ: ಸತ್ತವರ ಸಂಖ್ಯೆ 207ಕ್ಕೆ ಏರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರವಾಹ: ಸತ್ತವರ ಸಂಖ್ಯೆ 207ಕ್ಕೆ ಏರಿಕೆ

ಡೆಹ್ರಾಡೂನ್ / ನವದೆಹಲಿ / ಶಿಮ್ಲಾ/ ಇಂದೋರ್  (ಪಿಟಿಐ, ಐಎಎನ್‌ಎಸ್): ಹಿಮಾಲಯದ ಸುನಾಮಿ' ಎಂದೇ ಬಣ್ಣಿಸಲಾದ ಉತ್ತರಾಖಂಡದ ಮಹಾಮಳೆಗೆ ಮೃತಪಟ್ಟವರ ಸಂಖ್ಯೆ 207ಕ್ಕೆ ಮುಟ್ಟಿದೆ. ಇನ್ನೂ 50 ಸಾವಿರ ಮಂದಿ ಅಪಾಯದಲ್ಲಿ ಸಿಲುಕಿದ್ದು, ಅವರನ್ನು ರಕ್ಷಿಸುವ ಕಾರ್ಯ ಭರದಿಂದ ಸಾಗುತ್ತಿದೆ ಎಂದು ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಶುಕ್ರವಾರ ತಿಳಿಸಿದ್ದಾರೆ. ಮೃತರಲ್ಲಿ ಇಂದೋರ್‌ನ ಮೂವರು ಬಿಜೆಪಿ ಮುಖಂಡರೂ ಸೇರಿದ್ದಾರೆ.

ಶುಕ್ರವಾರ ಹರಿದ್ವಾರದಲ್ಲಿ 40 ಜನರ ಶವ ಪತ್ತೆಯಾಗಿವೆ. ಕೇದಾರನಾಥ, ಬದರಿನಾಥ ಪ್ರದೇಶದಲ್ಲಿ ಪ್ರವಾಹ ಸಂಕಷ್ಟದಲ್ಲಿ ಸಿಲುಕಿರುವ 250 ಜನರ ಸಂರಕ್ಷಣೆ ಮಾಡಿದ ಹೊರತಾಗಿಯೂ, ಇನ್ನೂ ಅಲ್ಲಲ್ಲಿ ಉಳಿದಿರುವ 9 ಸಾವಿರ ಜನರ ಸಂರಕ್ಷಣೆಗೆ 40 ಹೆಲಿಕಾಪ್ಟರ್‌ಗಳು ಕಾರ್ಯಾಚರಣೆಯಲ್ಲಿ ತೊಡಗಿವೆ. ಮಹಾಮಳೆಯ `ದುರ್ಘಟನೆ ಅಸಹನೀಯ'ವಾಗಿದೆ ಎಂದು ಉತ್ತರಾಖಂಡದ ಪ್ರಧಾನ ಕಾರ್ಯದರ್ಶಿ ರಾಕೇಶ್ ಶರ್ಮ ಹೇಳಿದ್ದಾರೆ.

ರಾಜಾಸ್ತಾನದ 2 ಸಾವಿರ ಮಂದಿ ನಾಪತ್ತೆಯಾಗಿದ್ದು, ಅವರು ಸಾವನ್ನಪ್ಪಿರಬಹುದೆಂದು ಅಂದಾಜು ಮಾಡಲಾಗಿದೆ. ನವದೆಹಲಿಯಿಂದ ಸಿಕಂದರಾಬಾದ್ ಗೆ ವಿಶೇಷ ರೈಲನ್ನು ನಿಯೋಜಿಸಲಾಗಿದ್ದು, ರೈಲಿನಲ್ಲಿ ಆಂಧ್ರಪ್ರದೇಶದ ಸಂತ್ರಸ್ಥರು ಪ್ರಯಾಣ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್‌ನ ಸಂಸದರು ಮತ್ತು ಶಾಸಕರ ಒಂದು ತಿಂಗಳ ವೇತನ ಹಾಗೂ ಸಂಸದರ ಪರಿಹಾರ ನಿಧಿಯಿಂದ  10 ಲಕ್ಷ ರೂ ಅನುದಾನವನ್ನು ಸಂತ್ರಸ್ತರ ನೆರವಿಗೆ ನೀಡಲಾಗುವುದು ಎಂದು ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ತಿಳಿಸಿದ್ದಾರೆ.

ಮುಖ್ಯಮಂತ್ರಿ ಭೇಟಿ

ಶಿಮ್ಲಾ:
ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ವೀರಭದ್ರ ಸಿಂಗ್ ಮಳೆಯಿಂದ ಭೂ ಕುಸಿತ ಉಂಟಾದ ಪ್ರದೇಶಗಳಿಗೆ ತೆರಳಿ ಸಂತ್ರಸ್ತರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಪುನರ್ವಸತಿ ಕಲ್ಪಿಸುವ ಕುರಿತು ಚರ್ಚೆ ನಡೆಸಿದ್ದಾರೆ.ಸಂಪರ್ಕ ಕಡಿತ: ವಿದ್ಯುತ್, ಕುಡಿಯುವ ನೀರೂ ಇಲ್ಲ

ಹಿಮಾಚಲ ಪ್ರದೇಶದ ಕಿನ್ನೂರು ಜಿಲ್ಲೆ ಮಳೆಯಿಂದ ಎಲ್ಲ ಬಗೆಯ ಸಂಪರ್ಕ ಕಡಿದುಕೊಂಡಿದೆ. ಹೀಗಾಗಿ, ಇಲ್ಲಿನ ಜನ ಜೀವನ ಅಯೋಮಯವಾಗಿದೆ ಎಂದು ಭಾರತೀಯ ಸೇನೆ ಅಧಿಕಾರಿಗಳು ತಿಳಿಸಿದ್ದಾರೆ. ಇಲ್ಲಿ ವಿದ್ಯುತ್, ರಸ್ತೆ ಸಂಪರ್ಕ ಕಡಿತಗೊಂಡಿದೆ. ಮೊಬೈಲ್ ಗೋಪುರಗಳು ಸೇರಿದಂತೆ ಬಹುತೇಕ ಮರಗಳು ಬುಡಮೇಲಾಗಿವೆ. ಮೊಬೈಲ್ ಸಿಗ್ನಲ್ ಇರಲಿ ಕುಡಿಯುವ ನೀರೂ ಕೂಡ ದೊರಕದಂತಹ ನರಕಸದೃಶ ಸ್ಥಿತಿ ಉಂಟಾಗಿದೆ. ಎಲ್ಲೆಂದರಲ್ಲಿ ಉಂಟಾಗಿರುವ ಭೂ ಕುಸಿತಗಳಿಂದಾಗಿ ಇಲ್ಲಿಗೆ ತೆರಳಲು ರಕ್ಷಣಾ ಪಡೆ ಪರದಾಡುವಂತಾಗಿದೆ ಎಂದು ಅವರು ಹೇಳಿದ್ದಾರೆ.ದೆಹಲಿ: ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚನೆ

ನವದೆಹಲಿ:
ನವದೆಹಲಿ ನಗರ ವ್ಯಾಪ್ತಿಯಲ್ಲಿ ಹರಿಯುವ ಯಮುನಾ ನದಿ ಅಪಾಯಮಟ್ಟ(204.83 ಮೀ)ಕ್ಕಿಂತ ಕಡಿಮೆ ಇದೆ. ಆದರೂ ಮುನ್ನಚ್ಚರಿಕಾ ಕ್ರಮವಾಗಿ ನದಿ ಪಾತ್ರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸರ್ಕಾರ ಸೂಚನೆ ನೀಡಿದೆ.ಈ ಮಧ್ಯೆ ನದಿಯಲ್ಲಿ ತೇಲಿ ಬರುವ ಕಳೇಬರದ ಡಿಎನ್ಎ ನ್ನು ಸಂಗ್ರಹಿಸುವಂತೆ ಉತ್ತರಪ್ರದೇಶದ ಪೊಲೀಸರು ಎಲ್ಲಾ ಜಿಲ್ಲಾ ಮುಖ್ಯಸ್ಥರಿಗೂ ಸೂಚನೆ ನೀಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.