ಶುಕ್ರವಾರ, ಫೆಬ್ರವರಿ 26, 2021
19 °C
ಈ ವರ್ಷದಿಂದಲೇ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಜಾರಿ: ವಿಶುಕುಮಾರ್‌

ಪ್ರಶಸ್ತಿ ಪುರಸ್ಕೃತ ಸಿನಿಮಾಗಳ ಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಶಸ್ತಿ ಪುರಸ್ಕೃತ ಸಿನಿಮಾಗಳ ಪ್ರದರ್ಶನ

ಮೈಸೂರು: ಪ್ರಶಸ್ತಿ ಪುರಸ್ಕೃತ ಚಲನ ಚಿತ್ರಗಳ ಪ್ರದರ್ಶನವನ್ನು ಈ ವರ್ಷದಿಂದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಪ್ರದರ್ಶನ ಮಾಡಲು ಯೋಜನೆ ರೂಪಿಸಲಾಗಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕ ಎನ್.ಆರ್. ವಿಶುಕುಮಾರ್ ತಿಳಿಸಿದರು.ಮೈಸೂರು ಫಿಲ್ಮ್ ಸೊಸೈಟಿ, ಬೆಳ್ಳಿ ಮಂಡಲ ಹಾಗೂ ವಾರ್ತಾ ಇಲಾಖೆ ವತಿಯಿಂದ ಇಲ್ಲಿನ ಕಲಾಮಂದಿರದಲ್ಲಿ ಏರ್ಪಡಿಸಲಾಗಿದ್ದ ಚಲನಚಿತ್ರ ನಿರ್ದೇಶಕ ಪಿ. ಶೇಷಾದ್ರಿ ಅವರ ಸಿನಿಮಾವಲೋಕನ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.ಹಳೆಯ ಚಿತ್ರಗೀತೆಗಳ ‘ಗಾನಯಾನ’ ಎಂಬ ಕಾರ್ಯಕ್ರಮವನ್ನು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಕಳೆದ ವರ್ಷ ಆಯೋಜಿಸಲಾಗಿತ್ತು. ಇದೇ ರೀತಿ ಈ ವರ್ಷ ಪ್ರಶಸ್ತಿ ಪುರಸ್ಕೃತ ಚಿತ್ರಗಳ ಪ್ರದರ್ಶನಕ್ಕೆ ಯೋಜಿಸಲಾಗಿದ್ದು, ಅದರ ಸ್ವರೂಪವನ್ನು ನಿರ್ಧರಿಸಬೇಕಿದೆ ಎಂದು ಅವರು ಮಾಹಿತಿ ನೀಡಿದರು.ಹಿಂದೆಗಿಂತ ಒಳ್ಳೆಯ ಸಿನಿಮಾ ಇಂದು ಬರುತ್ತಿದೆ! ಎಪ್ಪತ್ತರ ದಶಕದಲ್ಲಿ ಬರುತ್ತಿದ್ದ ಒಳ್ಳೆಯ ಸಿನಿಮಾಗಳು ಇಂದು ಬರುತ್ತಿಲ್ಲ ಎಂಬ ಹಳಹಳಿಕೆ ಎಲ್ಲರಿಂದಲೂ ಸಾಮಾನ್ಯವಾಗಿ ಕೇಳಿ ಬರುತ್ತಿದೆ. ಆದರೆ, ವಾಸ್ತವದಲ್ಲಿ ಹಿಂದಿನ ಕಾಲಕ್ಕಿಂತಲೂ ಒಳ್ಳೆಯ ಸಿನಿಮಾಗಳು ಪ್ರಸ್ತುತ ತಯಾರಾಗುತ್ತಿವೆ. ಆದರೆ, ಅವು ಪ್ರೇಕ್ಷಕರಿಗೆ ತಲುಪುತ್ತಿಲ್ಲ ಎಂದು ಚಿತ್ರ ನಿರ್ದೇಶಕ ಗಿರೀಶ ಕಾಸರವಳ್ಳಿ ವಿಶ್ಲೇಷಿಸಿದರು.ಅಂದಿನ ಸಂಸ್ಕಾರ, ಚೋಮನದುಡಿ ಹೊರತುಪಡಿಸಿದರೆ ಉಳಿದೆಲ್ಲಾ ಸಿನಿಮಾಗಳಿಗಿಂತಲೂ ಒಳ್ಳೆಯ ಸಿನಿಮಾಗಳು ಇಂದು ಬರುತ್ತಿವೆ. ಆದರೆ, ಅವುಗಳಿಗೆ ಥಿಯೇಟರುಗಳ ಕೊರತೆ ಕಾಡುತ್ತಿದೆ. ಇದನ್ನು ನಿವಾರಿಸಲು ಪ್ರಶಸ್ತಿ ಪುರಸ್ಕೃತ ಚಿತ್ರಗಳ ಪ್ರದರ್ಶನವನ್ನು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಪ್ರದರ್ಶಿಸಲು ಸರ್ಕಾರ ಮುಂದಾಗಿರುವುದು ಒಳ್ಳೆಯದು ಎಂದು ಅವರು ಶ್ಲಾಘಿಸಿದರು.ಶೇಷಾದ್ರಿ ಅವರ ಮುನ್ನುಡಿ, ಬೇರು, ಬೆಟ್ಟದ ಜೀವ, ಡಿಸೆಂಬರ್ 1 ಚಿತ್ರಗಳು ಕನ್ನಡ ಸಿನಿಮಾ ಪ್ರಪಂಚದಲ್ಲಿ ಮಹತ್ವದ ಸಿನಿಮಾಗಳಾಗಿವೆ. ಮುನ್ನುಡಿ ಹಾಗೂ ಡಿಸೆಂಬರ್ 1 ಸಿನಿಮಾ ಎರಡನ್ನೂ ನೋಡಿದರೆ ಕಥೆ ಹೇಳುವ ಕ್ರಮದಲ್ಲಿ ಆಗಿರುವ ಪಲ್ಲಟವನ್ನು ಗುರುತಿಸಬಹುದು ಎಂದು ಅವರು ವಿಶ್ಲೇಷಿಸಿದರು.ಪೂರ್ವಸಿದ್ಧತೆ ಬೇಕು: ಶೇಷಾದ್ರಿ ಅವರಂತಹ ನಿರ್ದೇಶಕರ ಕಲಾತ್ಮಕ ಸಿನಿಮಾಗಳನ್ನು ನೋಡುವುದಕ್ಕೆ ಒಂದು ವಿಧದ ಪೂರ್ವಸಿದ್ಧತೆ ಬೇಕೆನಿಸುತ್ತದೆ ಎಂದು ಸಾಹಿತಿ ಕೃಷ್ಣಮೂರ್ತಿ ಹನೂರು ಅಭಿಪ್ರಾಯಪಟ್ಟರು.ಇಂದು ಎಲ್ಲಾ ವಿಷಯದಲ್ಲೂ ದ್ವಂದ್ವಗಳು ಮೂಡಿವೆ. ಹಾಗೆಯೇ ವ್ಯಾಪಾರಿ ಸಿನಿಮಾಗಳು ಬೇಕೋ ಕಲಾತ್ಮಕ ಸಿನಿಮಾಗಳು ಬೇಕೋ ಎನ್ನುವ ದ್ವಂದ್ವವೂ ಸಾಕಷ್ಟಿದೆ. ಇದರಲ್ಲಿ ವ್ಯಾಪಾರಿ ಸಿನಿಮಾಗಳು ಮಾರ್ಗದರ್ಶಕ ಎಂದು ಅನ್ನಿಸುತ್ತಿಲ್ಲ ಎಂದು ಅವರು ತಿಳಿಸಿದರು.

ವ್ಯಾಪಾರಿ ಸಿನಿಮಾದಲ್ಲಿ ನಾಯಕನೇ ಪ್ರಧಾನ. ಅವನಿಗೆ ಬೇಕಾದ ನಾಯಕಿ, ಬೇಕಾದ ಬಟ್ಟೆ, ಸ್ಥಳ, ಹೊಡೆದಾಟ, ಆಯುಧ... ಹೀಗೆ ಎಲ್ಲವೂ ನಾಯಕನ ಸುತ್ತಲೇ ಗಿರಕಿ ಹೊಡೆಯುತ್ತದೇ ವಿನಹ ಸಮಾಜದ ಸಮಸ್ಯೆಗಳ ಸುತ್ತ ಅಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಮುಖ್ಯಾಂಶಗಳು

* ಶೇಷಾದ್ರಿ ವ್ಯಾಪಾರಿ ಸಿನಿಮಾ ಜತೆ ರಾಜಿ ಮಾಡಿಕೊಂಡಿಲ್ಲ

* ಕಲಾತ್ಮಕ ಸಿನಿಮಾಗಳು ವೀಕ್ಷಣೆಗೆ ಲಭ್ಯವಾಗಬೇಕು

* ಇಂತಹ ಸಿನಿಮಾ ನೋಡಲು ಪೂರ್ವಸಿದ್ಧತೆ ಬೇಕು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.