ಭಾನುವಾರ, ಮೇ 9, 2021
25 °C

ಪ್ರಶ್ನೆ - ಉತ್ತರ

ಎಲ್ .ಎಸ್. ಶ್ಯಾಮ ಸುಂದರ ಶರ್ಮ,ಶಿಕ್ಷಣ ತಜ್ಞರು Updated:

ಅಕ್ಷರ ಗಾತ್ರ : | |

ಪ್ರಶ್ನೆ ಕಳುಹಿಸಬೇಕಾದ ವಿಳಾಸ: ಸಂಪಾದಕರು, ಶಿಕ್ಷಣ ವಿಭಾಗ, ಪ್ರಜಾವಾಣಿ, 75 ಎಂ.ಜಿ ರಸ್ತೆ,ಬೆಂಗಳೂರು 560001

ಪ್ರಶ್ನೆಗಳನ್ನು ಇ- ಮೇಲ್‌ನಲ್ಲೂ ಕಳುಹಿಸಬಹುದು: shikshana@prajavani.co.in

ಆಂಜಿನಪ್ಪ ಎಂ.,  ತವಟಹಳ್ಳಿ, ಹೊಸಕೋಟೆ ತಾಲ್ಲೂಕು

ನಾನು ಈಗ ಬಿ.ಎ. ಅಂತಿಮ ವರ್ಷದಲ್ಲಿ ಓದುತ್ತಿದ್ದೇನೆ. ಜೊತೆಗೆ ಕಂಪ್ಯೂಟರ್ ಬೇಸಿಕ್ ಮಾಡಿಕೊಂಡಿದ್ದೇನೆ. ಪದವಿ ಮುಗಿದ ನಂತರ ತಕ್ಷಣ ಕೆಲಸ ಮಾಡುವ ಅವಶ್ಯಕತೆ ಇದೆ. ಕೆಲಸದ ಜೊತೆಗೆ ಹೆಚ್ಚಿಗೆ ಓದಲು ಅರ್ಹನಾಗಿರುತ್ತೇನೆಯೇ?

ನೀವು ಕಂಪ್ಯೂಟರ್ ಜ್ಞಾನ ಹೊಂದಿರುವುದರಿಂದ ಅದರಲ್ಲೇ ಹೆಚ್ಚಿನ ತರಬೇತಿ ಮುಗಿಸಿಕೊಳ್ಳಲು ಪ್ರಯತ್ನಿಸಿ. ನಿಮಗೆ ಖಾಸಗಿ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳಿಗೆ ಹೆಚ್ಚಿನ ಅವಕಾಶ ಇರುತ್ತದೆ. ಹೋಟೆಲ್ ಉದ್ಯಮ, ಡೇಟಾ ಎಂಟ್ರಿ, ಡಿಟಿಪಿ, ವ್ಯಾಪಾರ ಮಳಿಗೆಗಳು ಹೀಗೆ ಎಲ್ಲಾದರೂ ಕೆಲಸ ಪಡೆದುಕೊಳ್ಳಿ. ಒಂದಷ್ಟು ಅನುಭವ ಗಳಿಸಿಕೊಂಡು ಮುಂದೆ ಉತ್ತಮ ನೌಕರಿಗೆ ಪ್ರಯತ್ನಿಸಬಹುದು. ನೀವು ಕೆಲಸ ಮಾಡುತ್ತಲೇ ಹೆಚ್ಚಿನ ವಿದ್ಯಾಭ್ಯಾಸದಲ್ಲಿ ತೊಡಗಬಹುದು. ಆದರೆ ಓದುವ ಕೋರ್ಸು ನಿಮಗೆ ಉದ್ಯೋಗದಲ್ಲಿ ಪ್ರಗತಿಗೆ ಸಹಾಯಕ ಆಗುವಂತಿದ್ದರೆ ಒಳ್ಳೆಯದು. ಇಂಗ್ಲಿಷ್ ಭಾಷೆಯಲ್ಲಿ ಹೆಚ್ಚಿನ ಪರಿಣತಿ ಇದ್ದಲ್ಲಿ ಮಾರ್ಕೆಟಿಂಗ್ ಮುಂತಾದ ಕ್ಷೇತ್ರಗಳಲ್ಲಿ ಅನುಕೂಲ ಆಗುತ್ತದೆ.

ಬಸು ಪೂಜಾರ, ವರ್ಚಗಲ್, ಮುಧೋಳ

ನಾನು ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆಯುತ್ತಿದ್ದೇನೆ. ಇದುವರೆಗೆ ಕನ್ನಡ ಮಾಧ್ಯಮದಲ್ಲೇ ಓದಿದ್ದೇನೆ. ಮುಂದೆ ಕಾಮರ್ಸ್ ವಿಭಾಗದಲ್ಲಿ ಕನ್ನಡವನ್ನು ಆಯ್ಕೆ ಮಾಡಿಕೊಳ್ಳಬಹುದೇ? ಬಿ.ಕಾಂ.ನಲ್ಲಿ ಕೂಡ ಕನ್ನಡ ಮಾಧ್ಯಮ ಆಯ್ಕೆ ಮಾಡಿಕೊಳ್ಳಬಹುದೇ
? ನನಗೆ ಸಿ.ಎ. ಆಗಲು ಇಷ್ಟವಿದೆ. ಅದನ್ನು ಕನ್ನಡ ಮಾಧ್ಯಮದಲ್ಲಿ ಕಲಿಯಬಹುದೇ?

ನೀವು ಮುಂದಿನ ಎಲ್ಲ ವಿಧ್ಯಾಭ್ಯಾಸವನ್ನೂ ಕನ್ನಡ ಮಾಧ್ಯಮದಲ್ಲೇ ಓದಬಹುದು. ಆದರೆ ನಿಮಗೆ ಗೊತ್ತಿರುವಂತೆ ನಿಮ್ಮ ಉದ್ಯೋಗ ಅವಕಾಶಗಳು ಕರ್ನಾಟಕಕ್ಕೆ ಹೆಚ್ಚಾಗಿ ಸೀಮಿತವಾಗುತ್ತವೆ. ಆದ್ದರಿಂದ ನೀವು ಯಾವುದಾದರೂ ಹಂತದಲ್ಲಿ, ಅಂದರೆ ಪಿಯುಸಿ ಅಥವಾ ಪದವಿಯಲ್ಲಿ ಇಂಗ್ಲಿಷ್ ಮಾಧ್ಯಮ ಆರಿಸಿಕೊಳ್ಳುವುದು ಒಳ್ಳೆಯದು. ನಿಮ್ಮ ಹಸ್ತಾಕ್ಷರದಿಂದ ನೀವು ಪ್ರತಿಭಾವಂತರೆಂದು ಭಾವಿಸಿದ್ದೇನೆ.  ಆದ್ದರಿಂದ ಈ ಬದಲಾವಣೆ ನಿಮಗೆ ಸ್ವಲ್ಪ ಕಾಲ ಕಷ್ಟ ಎನಿಸಬಹುದಾದರೂ ಮುಂದೆ ಹೊಂದಿಕೊಳ್ಳಬಹುದು. ಅದರಲ್ಲೂ ಸಿ.ಎ. ರಾಷ್ಟ್ರ ಮಟ್ಟದ ಪರೀಕ್ಷೆಯಾದುದರಿಂದ ಅಲ್ಲಿ ಕನ್ನಡ ಮಾಧ್ಯಮದಲ್ಲಿ ಬರೆಯಲು ಅವಕಾಶ ಸಿಗಲಾರದು.

ಅಶ್ವಿನಿ ಮ. ಸಾಲಿ. ಬಾಗಲಕೋಟೆ

ನಾನು ಬಿಜಾಪುರ ಮಹಿಳಾ ಕಾಲೇಜಿನ ಬಾಗಲಕೋಟೆ ಶಾಖೆಯಲ್ಲಿ ಬಿ.ಎ. ಪ್ರಥಮ ವರ್ಷ ವ್ಯಾಸಂಗ ಮಾಡುತ್ತಿದ್ದೇನೆ. ನನ್ನ ತಂದೆ ರಾಮದುರ್ಗಕ್ಕೆ ವರ್ಗವಾಗಿ ಹೋಗುವ ವಿಚಾರದಲ್ಲಿದ್ದಾರೆ. ಅಲ್ಲಿ ಈ ವಿ.ವಿ. ಇಲ್ಲ. ನಾನು ದ್ವಿತೀಯ ವರ್ಷದಲ್ಲಿ ಬೇರೆ ವಿ.ವಿ.ಗೆ ದಾಖಲಾಗಬಹುದೇ? ಮುಂದೆ ಏನೂ ಸಮಸ್ಯೆ ಬರುವುದಿಲ್ಲವೇ?

ವರ್ಗಾವಣೆ ಹೊಂದುವ ವಿದ್ಯಾರ್ಥಿಗಳಿಗಾಗಿ ಒಂದು ವಿ.ವಿ.ಯಿಂದ ಮತ್ತೊಂದು ವಿ.ವಿ.ಗೆ ಸೇರಲು ಅವಕಾಶಗಳು ಇರುತ್ತವೆ. ಆದರೆ ನೀವು ಪ್ರಥಮ ಬಿ.ಎ. ಪರೀಕ್ಷೆ ಪೂರ್ತಿಗೊಳಿಸಿರಬೇಕು. ವಿ.ವಿ.ಗಳವರು ಇಂತಹ ವಿದ್ಯಾರ್ಥಿಗಳಿಗಾಗಿ ಕೆಲವು ನಿಯಮಾವಳಿಗಳನ್ನು ರೂಪಿಸಿರುತ್ತಾರೆ. ಅವುಗಳ ಅನುಸಾರ ನೀವು ಹೊಸ ಕಾಲೇಜಿಗೆ ಸೇರಿಕೊಳ್ಳಲು ಅಡ್ಡಿಯಿಲ್ಲ. ವಿ.ವಿ.ಯಿಂದ ವಿ.ವಿ.ಗೆ ಬದಲಾವಣೆ ಆದಾಗ ಪಠ್ಯಕ್ರಮದಲ್ಲೂ ಅಲ್ಪ ಸ್ವಲ್ಪ ವ್ಯತ್ಯಾಸ ಆಗಬಹುದು. ನೀವು ಆಯ್ಕೆ ಮಾಡಿಕೊಂಡ ಭಾಷೆ ಹಾಗೂ ವಿಷಯಗಳು ಹೊಸ ಕಾಲೇಜಿನಲ್ಲಿ ಇರಬೇಕಾಗುತ್ತದೆ. ನೀವು ಬಿ.ಎ. ಮುಗಿಸಿ ಅಂಕಪಟ್ಟಿ ಪಡೆದುಕೊಂಡಲ್ಲಿ ಸಮಸ್ಯೆಗಳು ಬರಲಾರವು.

ಅಶ್ಫಾಕ್ ಅಹಮದ್ ಎಂ.ಎಚ್., ಹುಬ್ಬಳ್ಳಿ

ನಾನು ಈಗ ಅರಣ್ಯ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದೇನೆ. ಎರಡು ವಿಷಯಗಳಲ್ಲಿ ಅನುತ್ತೀರ್ಣನಾಗಿದ್ದೇನೆ. ಇವನ್ನು ಪೂರೈಸಿಕೊಂಡ ನಂತರ ಬಿ.ಎ. ಮಾಡಬೇಕೆಂದಿದ್ದೇನೆ. ಡಿಪ್ಲೊಮಾ ನಂತರ ನೇರವಾಗಿ ಬಿ.ಎ. ಮಾಡಬಹುದೇ? ಎರಡನೇ ವರ್ಷಕ್ಕೆ ನೇರವಾಗಿ ಪ್ರವೇಶ ಸಿಗಬಹುದೇ ತಿಳಿಸಿ.

ಡಿಪ್ಲೊಮಾ ಮಾಡಿದವರಿಗೆ ನೇರವಾಗಿ ಎರಡನೇ ವರ್ಷಕ್ಕೆ ಬಿ.ಇ. ಪದವಿಗೆ ಸೇರಲು ಅವಕಾಶ ಇರುತ್ತದೆ. ನೀವು ವಯಸ್ಸಿನ ಆಧಾರದ ಮೇಲೆ ಪಿಯುಸಿ ಇಲ್ಲದೆಯೂ ನೇರವಾಗಿ ಬಿ.ಎ., ಮಾಡಬಹುದು. ಆದರೆ ನಿಮ್ಮ ವಿಷಯಗಳು ಬೇರೆ ಬೇರೆ ಇರುವುದರಿಂದ ಅಲ್ಲಿ ಯಾವ ವಿನಾಯಿತಿಯೂ ಸಿಗಲಾರದು.

ಆನಂದ, ರೋಣ

ನಾನು ಪಿಯುಸಿ ಮುಗಿಸಿ ಈಗ ಮೂರು ವರ್ಷಗಳಾದವು. ಬಿ.ಕಾಂ.ಗೆ ಸೇರಿದರೂ ಕಾಲೇಜಿಗೆ ಹೋಗಲಾಗಲಿಲ್ಲ. ಪಿಯುಸಿಯಲ್ಲಿ ಕಡಿಮೆ ಅಂಕ ಬಂದಿದ್ದರಿಂದ ತುಂಬಾ ನೊಂದಿರುವೆ. ಈಗ ಮತ್ತೆ ಪರೀಕ್ಷೆ ಬರೆಯೋಣ ಎನಿಸುತ್ತದೆ. ಏನು ಮಾಡಲಿ ದಯಮಾಡಿ ತಿಳಿಸಿ.

-ನೀವು ಈ ಹಿಂದೆ ಬಿ.ಕಾಂ.ಗೆ ಸೇರಿಕೊಂಡಿರುವುದರಿಂದ ಪದವಿ ಕಲಿಯಲು ಅರ್ಹತೆ ಗಳಿಸಿಕೊಂಡಿರುತ್ತೀರಿ. ಈಗ ಅನುಕೂಲ ಇದ್ದಲ್ಲಿ ಮತ್ತೆ ಬಿ.ಕಾಂ.,ಗೆ ಸೇರಿಕೊಂಡು ಓದು ಮುಂದುವರಿಸಿ. ಪಿಯುಸಿ ಅಂಕಗಳು ಕಡಿಮೆಯಾಗಿದ್ದಕ್ಕೆ ಈಗ ಚಿಂತಿಸಿ ಫಲವಿಲ್ಲ. ಮುಂದೆ ಚೆನ್ನಾಗಿ ಅಭ್ಯಾಸ ಮಾಡಿ ಹೆಚ್ಚಿನ ಅಂಕಗಳನ್ನು ಗಳಿಸಿದಲ್ಲಿ ಯಾವುದೇ ಕೊರತೆ ಇರುವುದಿಲ್ಲ. ನೀವು ದೂರಶಿಕ್ಷಣದ ಮೂಲಕವೂ ಶಿಕ್ಷಣ ಮುಂದುವರಿಸಬಹುದು.

ನಾಗರಾಜ ಶಿ. ಗೌಡರ, ಹೊನ್ನೂರ, ಜಮಖಂಡಿ

ನಾನು 2013ರಲ್ಲಿ ಎಸ್.ಎಸ್.ಎಲ್.ಸಿ. ಬರೆದಿದ್ದೇನೆ. ನನಗೆ ಇಂಗ್ಲಿಷ್ ಕಷ್ಟ ಎನಿಸುತ್ತದೆ. ಆದರೆ ಗಣಿತದಲ್ಲಿ ಆಸಕ್ತಿ ಇದೆ. ನನ್ನ ತಂದೆ ಸೈನ್ಸ್ ಓದು ಎನ್ನುತ್ತಾರೆ. ನನಗೆ ಕಾಮರ್ಸ್ ಇಷ್ಟವಿದೆ. ದ್ವಿತೀಯ ಪಿಯುಸಿ ಮುಗಿಸಿಕೊಂಡಲ್ಲಿ ಬಸ್ ಕಂಡಕ್ಟರ್ ಕೆಲಸಕ್ಕೆ ಅರ್ಜಿ ಹಾಕಬಹುದು ಎನ್ನುತ್ತಾರೆ. ನನಗೆ ಪದವಿ ಮುಗಿಸಿ ಅಧಿಕಾರಿ ಆಗುವ ಆಸೆ ಇದೆ. ಏನು ಮಾಡಲಿ?

-ಮೊದಲು ಎಸ್.ಎಸ್.ಎಲ್.ಸಿ. ಅಂಕಗಳನ್ನು ನೋಡಿಕೊಂಡು, ನಿನಗೆ ಆಸಕ್ತಿ ಇರುವ ವಿಷಯ ಆರಿಸಿಕೊಂಡು, ಪಿಯುಸಿಗೆ ಸೇರುವುದು ಉತ್ತಮ. ಪಿಯುಸಿ ನಂತರ ಕೆಲಸಕ್ಕೆ ಸೇರುವುದೋ, ಓದು ಮುಂದುವರಿಸುವುದೋ ನಿರ್ಧರಿಸಬಹುದು. ಯಾವುದಕ್ಕೂ ಕಷ್ಟಪಟ್ಟು ಅಭ್ಯಾಸ ಮಾಡಿ ಉತ್ತಮ ಅಂಕ ಗಳಿಸುವುದು ಒಳ್ಳೆಯದು.

ರವಿಕುಮಾರ್ ಕೆ.ಎಸ್.

ನಾನು ಪಿಯುಸಿ ಮುಗಿಸಿದ್ದೇನೆ. ಈಗ ಬಿ.ಎ., ದ್ವಿತೀಯ ವರ್ಷದಲ್ಲಿ ಅಧ್ಯಯನ ಮಾಡುತ್ತಿದ್ದೇನೆ. ನನ್ನ ವಯಸ್ಸು ಇಪ್ಪತ್ತು.  ಕಲಾ ವಿಭಾಗದಲ್ಲಿ ಬಹಳಷ್ಟು ಸ್ಪರ್ಧೆ ಇರುವುದರಿಂದ ಬೇರೆ ಕೋರ್ಸ್ ಮಾಡಬೇಕೆಂದಿರುವೆ. ಹೆಚ್ಚು ಉದ್ಯೋಗ ಅವಕಾಶಗಳಿರುವ ಕೋರ್ಸುಗಳಿದ್ದರೆ ತಿಳಿಸಿ. ನಾನು ಬಿ.ಎ. ಕೋರ್ಸ್ ಮುಂದುವರಿಸುವುದು ಒಳ್ಳೆಯದೋ ಬೇರೆ ಕೋರ್ಸು ಮಾಡುವುದೋ ತಿಳಿಯದಾಗಿದೆ.

-ನಮ್ಮ ದೇಶದಲ್ಲಿ ಬಹಳಷ್ಟು ಜನ ಪಿಯುಸಿ ನಂತರ ಪದವಿಗೆ ಹೋಗುವುದು ವಾಡಿಕೆ. ವಿಜ್ಞಾನ ಹಾಗೂ ವಾಣಿಜ್ಯ ವಿಭಾಗಗಳಲ್ಲಿ ಪದವೀಧರರಿಗೆ ಹೆಚ್ಚಿನ ಬೇಡಿಕೆ ಇದೆ. ಆದರೆ ಕಲಾ ವಿಭಾಗವು ನಿಂತ ನೀರಿನಂತೆ ಹೆಚ್ಚಿನ ಸುಧಾರಣೆ ಕಾಣದೆ ಹಾಗೇ ಇದೆ. ಅದರಲ್ಲೂ ಗ್ರಾಮಾಂತರ ಪ್ರದೇಶಗಳಲ್ಲಿ ಸರ್ಕಾರ ಹೆಚ್ಚಿನ ಕಾಲೇಜುಗಳನ್ನು ತೆರೆದು, ಸಹಸ್ರಾರು ವಿದ್ಯಾರ್ಥಿಗಳು ಅವುಗಳಿಂದ ಹೊರ ಬರುತ್ತಿದ್ದಾರೆ.  ಸಾಂಪ್ರದಾಯಿಕವಾಗಿ ಇವರು ಸರ್ಕಾರಿ ನೌಕರಿ, ಸ್ಪರ್ಧಾತ್ಮಕ ಪರೀಕ್ಷೆ, ಶಿಕ್ಷಕ ವೃತ್ತಿ ಮುಂತಾದವುಗಳ ಆಕಾಂಕ್ಷಿಗಳಾಗಿರುತ್ತಾರೆ. ಹೀಗಾಗಿ ಇಲ್ಲಿ ಸ್ಪರ್ಧೆ ಹೆಚ್ಚು. ಅಂದರೆ ಕಲಾ ವಿಭಾಗದಲ್ಲಿ ನೌಕರಿ ಸಿಗುವುದು ಕಷ್ಟ ಎಂದೂ ಹೇಳಲಾಗುವುದಿಲ್ಲ. ಅಲ್ಲೂ ಪ್ರತಿಭಾವಂತರಿಗೆ ಮನ್ನಣೆ ಇದೆ.  ಸರ್ಕಾರ ಈ ಬಗ್ಗೆ ಗಮನಿಸಿ ಇದರಲ್ಲಿ ಸುಧಾರಣೆ ತರಬೇಕಾದ ಅಗತ್ಯವಿದೆ.ಇನ್ನು ನೀವು ಈಗಾಗಲೇ ದ್ವಿತೀಯ ವರ್ಷದಲ್ಲಿ ಇದ್ದೀರಿ. ಕಾಲೇಜನ್ನು ಬಿಡದೇ ಕೆಲವು ತರಬೇತಿ ಕೋರ್ಸುಗಳನ್ನು ಮಾಡಿಕೊಳ್ಳಿ. ಉದಾಹರಣೆಗೆ ಕಂಪ್ಯೂಟರ್ ತರಬೇತಿ, ವೃತ್ತಿ ಶಿಕ್ಷಣ, ಅಲ್ಪಾವಧಿ ಕೋರ್ಸುಗಳು, ಮುಕ್ತ ವಿ.ವಿ.ಯ ಡಿಪ್ಲೊಮಾಗಳು ಇತ್ಯಾದಿ. ಇವುಗಳಿಂದ ನಿಮಗೆ ಉದ್ಯೋಗ ದೊರೆತಲ್ಲಿ ಆಗ ಬಿ.ಎ. ಬಿಡುವ ವಿಚಾರ ಮಾಡಬಹುದು. ಬಿ.ಎ. ಮುಗಿಸುವ ವೇಳೆಗೆ ಯಾವ ಸ್ನಾತಕೋತ್ತರ ಕೋರ್ಸಿಗೆ ಬೇಡಿಕೆ ಇದೆಯೋ ಪರಿಶೀಲಿಸಿ. ನಿಮ್ಮ ಆಸಕ್ತಿಗೆ ಅನುಸಾರವಾಗಿ ಅದನ್ನು ಕಲಿಯಬಹುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.