ಮಂಗಳವಾರ, ಮೇ 24, 2022
27 °C

`ಪ್ರೋತ್ಸಾಹದಾಯಕ ಸುದ್ದಿಗಳಿಗೆ ಆದ್ಯತೆ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಔರಾದ್: ಪತ್ರಕರ್ತರು ಪ್ರೋತ್ಸಾಹದಾಯಕ ಸುದ್ದಿಗಳಿಗೆ ಆದ್ಯತೆ ನೀಡಿದರೆ ಅದರಿಂದ ಇತರರಿಗೂ ಪ್ರೇರಣೆ ಸಿಗುತ್ತದೆ ಎಂದು ಭಾಲ್ಕಿ ಹಿರೇಮಠ ಸಂಸ್ಥಾನದ ಬಸವಲಿಂಗ ಪಟ್ಟದ್ದೇವರು ನುಡಿದರು.ಇಲ್ಲಿಯ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಭಾನುವಾರ ತಾಲ್ಲೂಕು ಪತ್ರಕರ್ತರ ಸಂಘ ಹಮ್ಮಿಕೊಂಡ ಪತ್ರಿಕಾ ದಿನಾಚರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಪತ್ರಿಕೆಗಳಲ್ಲಿ ಅಪರಾಧ ಮತ್ತು ಋಣಾತ್ಮಕ ವಿಷಯಗಳು ಹೆಚ್ಚು ವೈಭವೀಕರಿಸುವುದು ನೋಡುತ್ತೇವೆ. ಇದರ ಹೊರತಾಗಿಯೂ ಸಮಾಜದ ಕಣ್ಣಿಗೆ ಕಾಣದ ಅದೆಷ್ಟೋ ವಿಷಯಗಳಿವೆ. ಅವುಗಳ ಕಡೆ ಗಮನ ಹರಿಸುವುದು ಪತ್ರಕರ್ತರ ಕೆಲಸ ಎಂದು ಸ್ವಾಮೀಜಿ ಅಭಿಪ್ರಾಯಪಟ್ಟರು.ಪತ್ರಕರ್ತ ರಿಷಿಕೇಶ್ ದೇಸಾಯಿ ಉಪನ್ಯಾಸ ನೀಡಿ, ಪತ್ರಕರ್ತರು ಬಹಳ ಜಾಗೃತಿಯಿಂದ ಕೆಲಸ ಮಾಡಬೇಕಾಗುತ್ತದೆ. ಎಲ್ಲೊ ಒಂದು ಸಣ್ಣ ತಪ್ಪಾದರೂ ಕೂಡ ಅದರ ಪರಿಣಾಮ ದೀರ್ಘ ಕಾಲ ಕಾಡುತ್ತಿರುತ್ತದೆ. ವಾಸ್ತವಿಕ ವಿಷಯದ ಕಡೆ ಹೆಚ್ಚಿನ ಗಮನ ನೀಡುವುದು ಅಗತ್ಯ ಎಂದು ತಿಳಿಸಿದರು.ಶಾಸಕ ಪ್ರಭು ಚವ್ಹಾಣ್ ಕಾರ್ಯಕ್ರಮ ಉದ್ಘಾಟಿಸಿ, ರಾಜಕಾರಣಿಗಳಿಂದ ಆಗದ ಕೆಲಸ ಪತ್ರಕರ್ತರು ಮಾಡಲು ಸಾಧ್ಯವಿದೆ ಎಂಬುದು ಸಾಕಷ್ಟು ಸಲ ನನ್ನ ಅನುಭವಕ್ಕೆ ಬಂದಿದೆ ಎಂದರು, ನಿವೇಶನ ವ್ಯವಸ್ಥೆ ಮಾಡಿಕೊಂಡರೆ ನಾನು ಪತ್ರಿಕಾ ಭವನಕ್ಕೆ ಅನುದಾನ ಕೊಡುವುದಾಗಿ ಭರವಸೆ ನೀಡಿದರು. ವಾಸ್ತವಿಕ ವರದಿ ಮಾಡುವವರಿಗೆ ನನ್ನ ಪೂರ್ಣ ಬೆಂಬಲವಿದೆ ಎಂದರು.ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಸಿದ್ರಾಮಯ್ಯ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಮಾಧ್ಯಮ ಆಕಾಡೆಮಿ ಸದಸ್ಯ ಮಾಳಪ್ಪ ಅಡಸಾರೆ, ಆನಂದ ದೇವಪ್ಪ ಮಾತನಾಡಿದರು. ಸಂಘದ ರಾಜ್ಯ ಪ್ರತಿನಿಧಿ ಡಿ.ಕೆ. ಗಣಪತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಶಿಕುಮಾರ ಪಾಟೀಲ, ಸರ್ಕಲ್ ಇನ್ಸ್‌ಪೆಕ್ಟರ್ ಎನ್.ಬಿ. ಮಠಪತಿ, ಪತ್ರಕರ್ತರ ಸಂಘದ ತಾಲ್ಲೂಕು ಅಧ್ಯಕ್ಷ ಅಮರೇಶ ಚಿದ್ರೆ, ಜಿಲ್ಲಾ ಉಪಾಧ್ಯಕ್ಷ ಶರಣಪ್ಪ ಚಿಟ್ಮೆ ಇದ್ದರು.ಪತ್ರಿಕಾ ಭವನ ನಿರ್ಮಾಣಕ್ಕೆ ನಿವೇಶನ ಕೊಡಲು ಒಪ್ಪಿಕೊಂಡ ಹಿರಿಯ ಜೀವಿ ಚಂದ್ರಪ್ಪ ಪಾಟೀಲ ಅವರನ್ನು ಸತ್ಕರಿಸಲಾಯಿತು. ಶಿವಕುಮಾರ ಮುಕ್ತೆದಾರ ಸ್ವಾಗತಿಸಿದರು. ಮನ್ಮಥಪ್ಪ ಸ್ವಾಮಿ ಪ್ರಾಸ್ತಾವಿಕ ಮಾತನಾಡಿದರು. ಗುರುನಾಥ ವಡ್ಡೆ ನಿರೂಪಿಸಿದರು. ಬಸವರಾಜ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.