ಶುಕ್ರವಾರ, ಜೂನ್ 18, 2021
27 °C

ಬದಲಾಗಲಿರುವ ಬಿಎಸ್‌ವೈ ಭವಿಷ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: `ಜೆಎಸ್‌ಡಬ್ಲ್ಯು~ (ಜೆಎಸ್‌ಡಬ್ಲ್ಯು) ಮತ್ತು `ಸೌತ್‌ವೆಸ್ಟ್~ ಗಣಿ ಕಂಪೆನಿ (ಎಸ್‌ಡಬ್ಲ್ಯುಎಂಸಿ) ಗಳಿಂದ `ದೇಣಿಗೆ~ ಪಡೆದ ಆರೋಪಗಳಿಂದ ಬಿಡುಗಡೆ ಪಡೆದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ  ರಾಜಕೀಯ ಭವಿಷ್ಯ ಕುರಿತು ಬಿಜೆಪಿ ಸಂಸದೀಯ ಮಂಡಳಿ ತೀರ್ಮಾನ ಕೈಗೊಳ್ಳಲಿದೆ.ರಾಜ್ಯಪಾಲರು ದುರುದ್ದೇಶದಿಂದ ಯಡಿಯೂರಪ್ಪ ಮೇಲೆ ಮೊಕದ್ದಮೆ ಹೂಡಲು ಅನುಮತಿ ನೀಡಿದ್ದಾರೆ. ಕಾಂಗ್ರೆಸ್ ರಾಜಭವನವನ್ನು ದುರುಪಯೋಗ ಮಾಡಿಕೊಂಡಿದೆ. ಮಾಜಿ ಮುಖ್ಯಮಂತ್ರಿ ನಿರಪರಾಧಿ ಎಂಬುದು ನಮಗೆ ಗೊತ್ತಿದೆ. ತೀರ್ಪು ಇದನ್ನು ದೃಢಪಡಿಸಿದೆ ಎಂದು ಮೂಲಗಳು ತಿಳಿಸಿವೆ.ಯಡಿಯೂರಪ್ಪ ಅವರ ರಾಜಕೀಯ ಭವಿಷ್ಯ ಕುರಿತು ಬಿಜೆಪಿ ಸಂಸದೀಯ ಮಂಡಳಿ ನಿರ್ಧರಿಸಲಿದೆ. ಸದ್ಯಕ್ಕೆ ಸಂಸದೀಯ ಮಂಡಳಿ ಸೇರುವ ಸಾಧ್ಯತೆಗಳಿಲ್ಲ. ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಆಗಲಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.ಸಿಇಸಿ ಪರಿಶೀಲನೆ: ಈ ಮಧ್ಯೆ, ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಡುತ್ತಿರುವ ಧಾರವಾಡ ಮೂಲದ ಸಮಾಜ ಪರಿವರ್ತನಾ ಸಮುದಾಯ ಸುಪ್ರೀಂ ಕೋರ್ಟ್ ಮುಂದೆ ಸಲ್ಲಿಸಿರುವ ಮಧ್ಯಂತರ ಅರ್ಜಿಯಲ್ಲಿ, ಈ ಎರಡು ಕಂಪೆನಿಗಳ ಜತೆ ಯಡಿಯೂರಪ್ಪ ಮತ್ತು ಅವರ ಕುಟುಂಬದ ಸದಸ್ಯರ ವ್ಯವಹಾರ ಕುರಿತು ಸಿಬಿಐ ತನಿಖೆ ನಡೆಸುವಂತೆ ಕೇಳಿದೆ. ಈ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ವಿರುದ್ಧದ ಆರೋಪಗಳನ್ನು ಪರಿಶೀಲಿಸಿ ಸಿಬಿಐ ತನಿಖೆ ಅಗತ್ಯವಿದೆಯೇ ಎಂಬ ಬಗ್ಗೆ ಶಿಫಾರಸು ಮಾಡುವಂತೆ ನ್ಯಾಯಾಲಯ `ಕೇಂದ್ರ ಉನ್ನತಾಧಿಕಾರ ಸಮಿತಿ~ (ಸಿಇಸಿ)ಗೆ ಕೇಳಿದೆ.

 

ಕೋರ್ಟ್ ಸೂಚನೆ ಹಿನ್ನೆಲೆಯಲ್ಲಿ ಸಿಇಸಿ ಸಮಾಜ ಪರಿವರ್ತನಾ ಸಮುದಾಯದ ಎಸ್.ಆರ್.ಹಿರೇಮಠ ಅವರ ವಿಚಾರಣೆ ಪೂರ್ಣಗೊಳಿಸಿದೆ. ಇದಕ್ಕೆ ಪೂರಕವಾಗಿ ಲೋಕಾಯುಕ್ತ ವರದಿ ಮತ್ತು ಪೂರಕ ದಾಖಲೆಗಳನ್ನು ಹಿರೇಮಠ ಸಿಇಸಿಗೆ ಸಲ್ಲಿಸಿದ್ದಾರೆ.ಅಕ್ರಮ ಗಣಿಗಾರಿಕೆ ಕುರಿತು ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಎಚ್. ಕಪಾಡಿಯಾ ನೇತೃತ್ಚದ ಹಸಿರು ಪೀಠ ಸಿಇಸಿ ವರದಿ ಪರಿಶೀಲಿಸಿ ಸಿಬಿಐ ತನಿಖೆ ಕುರಿತು ತೀರ್ಮಾನ ಮಾಡುವವರೆಗೆ ಬಿಜೆಪಿ ಯಡಿಯೂರಪ್ಪನವರ ವಿಷಯದಲ್ಲಿ ಯಾವುದೇ ಆತುರದ ತೀರ್ಮಾನ ಕೈಗೊಳ್ಳುವುದಿಲ್ಲ ಎಂದು ಮೂಲಗಳು ಹೇಳಿವೆ.ಉಡುಪಿ- ಚಿಕ್ಕಮಗಳೂರು ಲೋಕಸಭೆ ಉಪ ಚುನಾವಣೆ ಮುಗಿಯುವವರೆಗೂ ರಾಜ್ಯದ ಬೆಳವಣಿಗೆ ಕುರಿತು ತಲೆಕೆಡಿಸಿಕೊಳ್ಳುವ ಸ್ಥಿತಿಯಲ್ಲಿ ಬಿಜೆಪಿ ನಾಯಕತ್ವ ಇಲ್ಲ. ಯಡಿಯೂರಪ್ಪ ಮಂಗಳವಾರ ಗಡ್ಕರಿ ಅವರನ್ನು ಭೇಟಿ ಮಾಡಿದ ವೇಳೆ ಪಕ್ಷ ಬಿಡುವ ದುಡುಕಿನ ತೀರ್ಮಾನ ಮಾಡದಂತೆ ಮನವೊಲಿಸಿ ಕಳುಹಿಸಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.