ಮಂಗಳವಾರ, ಜೂನ್ 22, 2021
26 °C
ನಾನು ಉದ್ಯಮಿ

ಬದುಕಿನ ‘ಕಹಿ’ಗೆ ಉದ್ಯಮವೇ ‘ಸಿಹಿ’

ಈರಪ್ಪ ಹಳಕಟ್ಟಿ Updated:

ಅಕ್ಷರ ಗಾತ್ರ : | |

ಸವಾಲುಗಳನ್ನು ಮೆಟ್ಟಿ ನಿಲ್ಲುವುದ ರಲ್ಲಿಯೇ ತೃಪ್ತಿಯಿದೆ’ ಎನ್ನುವ ಕೊಡಗಿನ ಛಾಯಾ ನಂಜಪ್ಪ, ಬದುಕಿನಲ್ಲಿ ಬಂದ ಕಷ್ಟಗಳನ್ನು ಮೆಟ್ಟಿ ನಿಂತ­ವರು. ಸದ್ಯ, ಭಾರತದಲ್ಲಿಯೇ ಆಧುನಿಕ ತಂತ್ರ­ಜ್ಞಾನವುಳ್ಳ ಅತಿದೊಡ್ಡ ಜೇನುತುಪ್ಪ ಸಂಸ್ಕರಣಾ ಘಟಕ  ನಡೆಸುತ್ತಿರುವ ಮಹಿಳೆ ಎಂಬ ಹಿರಿಮೆಗೆ ಪಾತ್ರ­ರಾ­ದವರು. ಹಲವು ಸಾಹಸಗಳನ್ನು ಕೈಗೊಂಡಿರುವ ಛಲಗಾತಿ. ಜಾಗತಿಕ ಮಾರುಕಟೆಯತ್ತ ಇದೀಗ ಚಿತ್ತ ನೆಟ್ಟಿ­ರುವ ಅವರ ಯಶೋಗಾಥೆಯನ್ನು ಅವರಿಂದಲೇ ಕೇಳೊಣ...



ನಿಸರ್ಗ ರಮಣೀಯ ಕೊಡಗು ನನ್ನ ತವರು. ಶಿಕ್ಷಕರಾದ ಅಪ್ಪ, ಅಮ್ಮನ ಏಕೈಕ ಮುದ್ದಿನ ಮಗಳು ನಾನು. ಒಂದು ಕಾಲದಲ್ಲಿ ವಾರಿಗೆಯ ಗೆಳತಿಯರೆಲ್ಲ ನನ್ನ ನೋಡಿ ‘ಪುಟ್‌ಚೇಂಗಿ ಪುಟ್ಟಂಡು ನೀಡನ್ನಕ್ಕೆ‘ (ಹುಟ್ಟಿದರೆ ಹುಟ್ಟಬೇಕು ನಿನ್ನಂಗ) ಎಂದು ಅನ್ನುವಾಗಲೆಲ್ಲ ಸ್ವಪ್ನದ ಹೊಳೆಯಲ್ಲಿ ತೇಲಿದವಳು ನಾನು.ವಿಧಿವಿಲಾಸ ಎನ್ನುವಂತೆ ಸಿಹಿ ಸ್ವಪ್ನದಲ್ಲಿ ತೇಲುವ ವಯಸ್ಸಿನಲ್ಲಿ ಧುತ್ತೆಂದು ಎದುರಾದ ದುಃಸ್ವಪ್ನ ದಂತಹ ಘಟನೆಗಳು ನನ್ನನ್ನು ಬದುಕೆಂಬ ಪುಸ್ತಕದ ಕರಾಳ ಅಧ್ಯಾಯಕ್ಕೆ ತಂದು ನಿಲ್ಲಿಸಿದವು.



ದಯವಿಟ್ಟು ಅದೇನೆಂದು ಕೆದಕಿ ಕೇಳದಿರಿ. ಏಕೆಂದರೆ ‘ಜಗವೆಲ್ಲ ನಗುತಿರಲಿ, ಜಗದಳಲು ನನಗಿರಲಿ’ ಎನ್ನುವಾಕೆ ನಾನು.... ನನ್ನ ಸಂಕಲ್ಪ ಶಕ್ತಿಗೆ ಸವಾಲಾದ ಆ ಗಳಿಗೆಯಲಿ ನನ್ನ ಕಂಡು ಅನುಕಂಪ ನುಡಿಯುವವರೆ ಎಲ್ಲ. ಆದರದು ನನಗೆ ಬೇಕಿರಲಿಲ್ಲ. ಏಕೆಂದರೆ ಧೈರ್ಯ, ಶೌರ್ಯ, ನಿಷ್ಠೆ, ಸತ್ಯ ಸಂಧತೆ ಹಾಗೂ ನೇರನುಡಿಗೆ ಹೆಸರಾದ ಕೊಡವರ ಕುವರಿ ನಾನು.



ಈ ನಡುವೆಯೇ ನಾನು ದೂರಶಿಕ್ಷಣದ ಮೂಲಕ ಸಮೂಹ ಸಂವಹನ ವಿಷಯದಲ್ಲಿ ಡಿಪ್ಲೊಮಾ ಮತ್ತು ಸ್ನಾತಕೋತ್ತರ ಡಿಪ್ಲೊಮಾ ಪಡೆದೆ. ಆದರೆ ಕೆಲಸಕ್ಕೆ ಹೋಗುವ ಸ್ಥಿತಿಯಲ್ಲಿರಲಿಲ್ಲ. ಬೆಂಗಳೂರಿನ ನೀರವ ಕತ್ತಲೆಯ ಮಧ್ಯೆ ಏಕಾಂಗಿಯಾಗಿ ಕುಳಿತು ‘ಮುಂದೇನು ಮಾಡುವುದು?’ ಎಂದು ಚಿಂತಿಸುತ್ತಿದ್ದ ಗಳಿಗೆಯಲ್ಲಿ ಹೊಳೆದದ್ದೇ ಸ್ವಂತ ಉದ್ಯಮ. ಆಗ ನನ್ನ ನೋವಿಗೆ ಅದೊಂದೇ ಸೂಕ್ತ ಮದ್ದಾಗಿ ಕಂಡಿತು.



ಯಾವ ಉದ್ಯಮ? ಯಾರು ಮಾರ್ಗದರ್ಶಕರು? ಗೊತ್ತಿಲ್ಲ.  ನನ್ನ ಕುಟುಂಬದಲ್ಲಿ ಈ ಮೊದಲು ಯಾರೂ ಉದ್ಯಮಿಗಳಿರಲಿಲ್ಲ. ಆಗ ನನಗೆ ಮೊದಲು ನೆನಪಿಗೆ ಬಂದದ್ದೇ ತವರೂರಿನ ಪ್ರಮುಖ ಉತ್ಪನ್ನ­ಗಳಲ್ಲೊಂದಾದ ಜೇನುತುಪ್ಪ. ಜೇನುತುಪ್ಪ ಮಾರಾ­ಟವನ್ನೇ ಉದ್ಯಮವಾಗಿಸಿಕೊಳ್ಳಲು ನಿರ್ಧರಿಸಿದೆ. ಆಗ, ನೆರವಿಗೆ ಬಂದದ್ದು ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ. ಅದು ನನಗೆ ಯೋಜನೆಯೊಂದರಲ್ಲಿ ಸಬ್ಸಿಡಿ ಹೆಸರಿನಲ್ಲಿ ಆರ್ಥಿಕ ನೆರವು ನೀಡುವ ಮೂಲಕ ನನ್ನಾಸೆಗೆ ನೀರೆರಿಯಿತು.



ಜತೆಗೆ ’ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್’ ನನ್ನ ಯೋಜನಾ ವರದಿಯನ್ನು ನೋಡಿದಾಕ್ಷಣವೇ  ಸಾಲ ನೀಡಲು ಮುಂದೆ ಬಂತು. ಅದರೊಂದಿಗೆ ಅಮ್ಮ ಕೂಡ ಆಭರಣ ಅಡವಿಟ್ಟು ಹಾಗೂ ತಮ್ಮ ಸಣ್ಣ ಉಳಿತಾಯದ ಹಣ ನೀಡಿ ಹರಸಿದರು. ಆಗ ನಾನು ಪುಣೆಗೆ ತೆರಳಿ ಜೇನುತುಪ್ಪ ಸಂಸ್ಕರಣೆ ಕುರಿತಂತೆ ತರಬೇತಿ ಪಡೆದು ಮರಳಿದೆ.



ಮೊದಲ ಹೆಜ್ಜೆ

2007ರಲ್ಲಿ ಬೆಂಗಳೂರಿನ ಬೊಮ್ಮನ ಹಳ್ಳಿಯಲ್ಲಿ ನನ್ನ ಕನಸಿನ ಮೂರ್ತರೂಪ ವಾದ ಚಿಕ್ಕ ಪ್ರಮಾಣದ ‘ಜೇನುತುಪ್ಪ ಸಂಸ್ಕರಣಾ ಘಟಕ’ ತೆರೆಯುವ ಮೂಲಕ ಕುಟುಂಬದಲ್ಲಿ ಮೊದಲಿಗಳಾಗಿ ಉದ್ಯಮಕ್ಕೆ ಅಡಿಯಿಟ್ಟೆ.ಉದ್ಯಮವೆಂಬ ನೀರಿಗೆ ಇಳಿದಾಯ್ತು. ಚಳಿ, ನಡುಕವೆಂದರೆ ಕೇಳುವವರು ಯಾರು? ಕಚ್ಚಾವಸ್ತು, ಮಾರುಕಟ್ಟೆ ಮತ್ತು ಅದರ ತಂತ್ರ ಎಲ್ಲವೂ ನನಗೆ ಅಪರಿಚಿತ. ಆದರೂ ಎದೆಗುಂದದೇ ಮುನ್ನುಗಿ ನಡೆದೆ.



ಹೀಗೆ ನಡೆಯುವಾಗ ಅಲ್ಲಲ್ಲಿ ಎಡವಿದ್ದು ಉಂಟು. ಎದ್ದು ಸಾವರಿಸಿಕೊಂಡು ನಡೆಯುತ್ತಾ ಹೋದೆ. ಸ್ಥಳೀಯ ಮಾರುಕಟ್ಟೆಗೆ ಪರಿಶುದ್ಧ, ಗುಣಮಟ್ಟದ ಜೇನುತುಪ್ಪ  ಒದಗಿಸಬೇಕೆಂಬುದು ನನ್ನ ಉದ್ಯಮದ ಮೊದಲ ಗುರಿಯಾಗಿತ್ತು. ಅಷ್ಟರಲ್ಲಾಗಲೇ ಗುರಿ ಸಾಧನೆಯಲ್ಲಿ ಹೆದ್ದಾರಿಯನ್ನು ಮುಟ್ಟಿದ್ದಾಗಿತ್ತು. ಈ ಹೊತ್ತಿಗೆ ಮಾರುಕಟ್ಟೆಯಲ್ಲಿದ್ದ ನನ್ನ ‘ನೆಕ್ಟರ್ ಫ್ರೆಶ್‌’ ಜೇನು ಉತ್ಪನ್ನದ ಗುಣಮಟ್ಟದ ಸುದ್ದಿ ಒಬ್ಬರಿಂದ ಒಬ್ಬರಿಗೆ ಹರಡಿತ್ತು.



‘ನೆಕ್ಟರ್ ಫ್ರೆಶ್‌’

20 ವರ್ಷಗಳಿಗಿಂತ ಅಧಿಕ ಕಾಲದಿಂದ ದೇಶದ ಪ್ರತಿಷ್ಠಿತ ಪಂಚತಾರಾ ಹೋಟೆಲ್‌ಗಳ ‘ಉಪಹಾರ’ದ ಟೇಬಲ್ ಮೇಲೆ ತಳವೂರಿ ಪ್ರಾಬಲ್ಯ ಸಾಧಿಸಿದ್ದ ವಿದೇಶಿ  ಬ್ರಾಂಡ್‌ಗಳನ್ನು ಕದಲಿಸಿತು ‘ನೆಕ್ಟರ್ ಫ್ರೆಶ್‌’. ಇಂಥದೊಂದು ಸಾಹಸ ಮಾಡಿದ ದೇಶದ ಮೊದಲ ಬ್ರಾಂಡ್ ಜೇನುತುಪ್ಪ ನಮ್ಮದು ಎಂದು ಹೇಳಿಕೊಳ್ಳಲು ಹೆಮ್ಮೆ ನನಗೆ. ಈ ಮಧ್ಯೆ ಬೆಂಗಳೂರಿನ ಸಂಸ್ಕರಣಾ ಘಟಕವನ್ನು ಮೈಸೂರಿಗೆ ಸ್ಥಳಾಂತರಿಸಲೇಬೇಕಾದ ಅನಿವಾರ್ಯ ಎದುರಾಯಿತು. ಆಗ ನಾನು ಎಷ್ಟೊಂದು  ಆಘಾತಕ್ಕೊಳಗಾದೆ ಎಂದರೆ ಅದು ಹೇಳಲಸಾಧ್ಯ. ಆಗ ನೆರವಿಗೆ ಬಂದದ್ದೇ ನನ್ನ ಮನೋಬಲ.



‘ಆಗುವುದೆಲ್ಲ ಒಳ್ಳೆಯದಕ್ಕೆ’ ಎಂದು ಕೊಂಡು 2010ರಲ್ಲಿ ಬೆಂಗಳೂರು ಘಟಕವನ್ನು ಮೈಸೂರಿಗೆ ಸ್ಥಳಾಂತರಿಸಿದೆ. ಅಲ್ಲಿ ದೂರದ ನೆಂಟರಾದ ರಾಜಪ್ಪ ಭೇಟಿಯಾದರು. ಅವರನ್ನು ವ್ಯಾಪಾರದ ಪಾಲುದಾರರನ್ನಾಗಿ ಸೇರಿಸಿಕೊಂಡೆ. ಈ ಪಾಲುದಾರಿಕೆಯಲ್ಲಿ ಶೇ 75ರಷ್ಟು ಪಾಲು ನನ್ನದಾಗಿಯೇ ಮುಂದುವರಿಯಿತು.

ಸದ್ಯ, ಮೈಸೂರಿನಲ್ಲಿರುವ ನಮ್ಮ ಘಟಕದಲ್ಲಿ ಪ್ರತಿ ತಿಂಗಳಿಗೆ 30 ಟನ್ ಜೇನುತುಪ್ಪ ಸಂಸ್ಕರಣ ಕಾರ್ಯ ನಡೆಯುತ್ತದೆ. ಈ ಘಟಕ  ಭಾರತ ದಲ್ಲಿಯೇ ಆಧುನಿಕ ತಂತ್ರಜ್ಞಾನದ ಅತಿದೊಡ್ಡ ಜೇನುತುಪ್ಪ ಸಂಸ್ಕರಣಾ ಘಟಕ ಎನಿಸಿಕೊಂಡಿದೆ. ದೇಶದ ಮೊದಲ ಪಾಲಿಪ್ರಾಪಲಿನ್ ಪ್ಯಾಕೇಜಿಂಗ್ ಘಟಕ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಇಂತಹ ಘಟಕವನ್ನು ಹೊಂದಿದ ದೇಶದ ಪ್ರಥಮ ಮಹಿಳೆ ನಾನು ಎಂದು ಹೇಳಿಕೊಳ್ಳುವುದು ನನಗೆ ಹೆಮ್ಮೆ.



ಇಂದು ದೊಡ್ಡ ಮಾಲ್‌ಗಳಲ್ಲಿ ಕಂಡು ಬರುವ ಪ್ರತಿಷ್ಠಿತ ಕಂಪೆನಿಗಳ ಬಹುತೇಕ ಬ್ರಾಂಡ್‌ಗಳು ಸೇರಿದಂತೆ  ಕೇರಳದ ಆರ್ಯುವೇದ ಪದ್ಧತಿಯಡಿ ಸಂಸ್ಕರಿಸಿದ ಜೇನುತುಪ್ಪದ ಉತ್ಪನ್ನಗಳು ನಮ್ಮ ಮೈಸೂರು ಸಂಸ್ಕರಣಾ ಘಟಕದಲ್ಲಿಯೇ ಪ್ಯಾಕ್ ಆಗುತ್ತವೆ.



ದಕ್ಷಿಣ ಭಾರತದಲ್ಲಿರುವ ಅರಣ್ಯವಾಸಿಗಳು, ಗುಡ್ಡಗಾಡಿನವರು ಮತ್ತು ಬುಡಕಟ್ಟು ಜನರಿಂದ ಅತಿದೊಡ್ಡ ಪ್ರಮಾಣದಲ್ಲಿ ಜೇನು ಖರೀದಿಸು ತ್ತಿರುವುದು ನಮ್ಮ ಸಂಸ್ಥೆ. ಇವರಲ್ಲಿ ಸಿದ್ದಿಗಳೆಂದರೆ ವಿಶೇಷ ಒಲವು ನಮಗೆ. ಜತೆಗೆ ಈ ಎಲ್ಲ ಜನರ ಸಬಲೀಕರಣದಲ್ಲಿ ನಮ್ಮದೊಂದು ಪುಟ್ಟ ಪಾಲಿದೆ ಎನ್ನುವ ತೃಪ್ತಭಾವವೂ ಇದೆ. ಮಧ್ಯವರ್ತಿಗಳನ್ನು ಬಿಟ್ಟು ನೇರವಾಗಿ ನಮ್ಮಂದಿಗೆ ವ್ಯವಹರಿಸಿರಿ. ಜೇನುತುಪ್ಪಕ್ಕೆ ನಿಮಗೆ ಉತ್ತಮ ಬೆಲೆ ಕೂಡ ನೀಡುತ್ತೇವೆ ಎಂದು ಗ್ರಾಮೀಣ ಭಾಗದ ಚಿಕ್ಕ ರೈತರಿಗೆ ಕಿವಿಮಾತು ಹೇಳುತ್ತೇವೆ.



ಈ ಹಿಂದೆ ಪ್ರತಿಷ್ಠಿತ ಹೋಟೆಲ್‌ ಗಳಲ್ಲಿದ್ದ ವಿದೇಶಿ ಬ್ರಾಂಡ್‌ಗಳ ಪ್ರಾಬಲ್ಯ ಮುರಿದ ಸಾಹಸ ಕುರಿತು ಹೇಳಿದ್ದೆನಲ್ಲ. ಅದರ ಮುಂದುವರಿದ ಭಾಗ,  ಮಾರುಕಟ್ಟೆ ಪೈಪೋಟಿಯ ಕಥೆ ಕೇಳಿ. ‘ನೆಕ್ಟರ್ ಫ್ರೆಶ್‌’ ಖರೀದಿಸಿದರೆ ಬರೀ ಜೇನುತುಪ್ಪ ಮಾತ್ರ ಸಿಗುತ್ತದೆ. ನಾವು ಜೇನುತುಪ್ಪದ ಜತೆಗೆ ಜಾಮ್ ಕೊಡುತ್ತೇವೆ ಎಂದು ಆಸ್ಟ್ರೇಲಿಯಾ ಮತ್ತು ಜರ್ಮನ್‌ ಕಂಪೆನಿಗಳು ಪೈಪೋಟಿ ನಡೆಸಿದವು. ನಾವೂ ಸಹ ಆಗ ಸಂಸ್ಕರಣಾ ಘಟಕವೊಂದರ ಸಹಕಾರದಲ್ಲಿ ಜಾಮ್ ತಯಾರಿಸಿ ಮಾರುಕಟ್ಟೆಗೆ ತಂದು ಪ್ರತಿಸ್ಪರ್ಧಿಗಳಿಗೆ ತಕ್ಕ ಉತ್ತರ ನೀಡಿದೆವು.



ಇಂದು ನಮ್ಮ ಬ್ರಾಂಡ್‌ ಉತ್ಪನ್ನಗಳು ತಾಜ್, ಲೀಲಾ, ವಿಂಡ್ಸರ್ ಮ್ಯಾನರ್, ಲಿ ಮೆರಿಡಿಯನ್, ಐಟಿಸಿ ಸೇರಿದಂತೆ ಬೆಂಗಳೂರಿನ ಬಹಳಷ್ಟು ಪ್ರತಿಷ್ಠಿತ ಹೋಟೆಲ್‌ಗಳಲ್ಲಿ ಸ್ಥಾನ ಪಡೆದಿವೆ.  ಮಲೇಷ್ಯಾ, ದುಬೈ ಸೇರಿದಂತೆ ಮಧ್ಯ ಪ್ರಾಚ್ಯ ದೇಶಗಳಿಗೂ ರಫ್ತು ಮಾಡುತ್ತಿದ್ದೇವೆ.



ಮುಂಬರುವ ದಿನಗಳಲ್ಲಿ ‘ಯೂರೋಪಿಯನ್ ಯೂನಿ­ಯನ್ ಸ್ಟ್ಯಾಂಡರ್ಡ್’ ತಲುಪುವುದು ನಮ್ಮ ಗುರಿ. ವಿಶ್ವದ ಎಲ್ಲ ಮೂಲೆಗಳಿಗೂ ನಮ್ಮ ಉತ್ಪನ್ನ­ಗಳನ್ನು ತಲುಪಿಸುವ ಮಹತ್ವಾಕಾಂಕ್ಷೆ ಇದೆ. ಇದನ್ನೆಲ್ಲ ಸಾಧಿಸಲು ನೀವು ಮಾರುಕಟ್ಟೆಯಲ್ಲಿ ಮಾಡಿದ ‘ಜಾದೂ’ ಯಾವುದು ಎಂದು ಅನೇಕರು ಕೇಳುತ್ತಾರೆ. ಅವರಿಗೆ ಹೇಳುವುದಿಷ್ಟೆ,  ‘ರಾಜಿಯಾಗದ ಗುಣ­ಮಟ್ಟ’. ಎರಡು ವರ್ಷದ ಹಿಂದೆ ಐಎಸ್‌ಒ 22000; -2005 ಪ್ರಮಾಣಪತ್ರವೂ ಲಭಿಸಿದೆ.



ಅಷ್ಟೇ ಅಲ್ಲದೆ, ನಾವು  ಸಾಧಾರಣ ಜೇನುತುಪ್ಪದ ಜತೆಗೆ ಬೇರೆ ಬೇರೆ ಋತುಗಳಿಗೆ ಅನುಸಾರವಾಗಿ ಅರಳುವ ಹೂವುಗಳ ಮಕರಂದದಿಂದ ಪ್ರತ್ಯೇಕವಾಗಿ ಸಂಗ್ರಹಿಸಲಾದ ಜೇನುತುಪ್ಪವನ್ನು 15 ಬಗೆ ಸ್ವಾದಗ ಳಲ್ಲಿ ಮಾರುಕಟ್ಟೆಗೆ ಪರಿಚಯಿಸಿದ್ದೇವೆ. ಇದು ಕೂಡ ದೇಶಿ ಮಾರುಕಟ್ಟೆಯಲ್ಲಿ ನಮ್ಮ ಮೊದಲ ಸಾಹಸ.



ಕೊಡಗಿನ ಕಾಫಿ

ಜೇನಿನೊಂದಿಗೆ ಕೊಡಗಿನ ಕಾಫಿಯನ್ನೇಕೆ ನಮ್ಮ ಬ್ರಾಂಡ್‌ನಲ್ಲಿ ಮಾರುಕಟ್ಟೆಗೆ ಪರಿಚಯಿಸಬಾರದು ಎಂಬ ಯೋಚನೆ ಹೊಳೆಯಿತು. 5 ತಿಂಗಳ ಹಿಂದಷ್ಟೇ  ಅದು ಕೂಡ ಕೈಗೂಡಿತು. ಇಂದು ಮಾರುಕಟ್ಟೆಯಲ್ಲಿ ನಮ್ಮ ಕಾಫಿ ಘಟಕ ಎಷ್ಟು ಜನಪ್ರಿಯತೆ ಪಡೆದಿದೆ ಎಂದರೆ ಸದ್ಯ ಭಾರತದ ಮಾರುಕಟ್ಟೆಯಲ್ಲಿರುವ ಬಹಳಷ್ಟು ಕಾಫಿ ಬ್ರಾಂಡ್‌ ಕಂಪೆನಿಗಳು ನಮಗೆ ಪ್ಯಾಕ್ ಮಾಡಿಕೊಡುವಂತೆ ಬೇಡಿಕೆ ಇಡುತ್ತಿದ್ದಾರೆ.



ಈ ನಡುವೆ ವಹಿವಾಟು ವಿಸ್ತಾರಗೊಳ್ಳುತ್ತಾ ನಡೆದಂತೆ ಈಗಿರುವ ಘಟಕದಲ್ಲಿ ಎಲ್ಲ ಬೇಡಿಕೆಯನ್ನೂ ಪೂರೈಸುವುದು ಕಷ್ಟ ಎನ್ನುವುದು ಅರಿವಿಗೆ ಬಂತು. ಜತೆಗೆ ಭವಿಷ್ಯದ ಯೋಜನೆಗಳಿಗಾಗಿ ಸುಸಜ್ಜಿತ ನೂತನ ಘಟಕವೊಂದನ್ನು ತೆರೆಯುವ ಯೋಚನೆ ಮೂಡಿತು. ಅದು ಕೂಡ ಕಾರ್ಯರೂಪಕ್ಕೆ ಬಂದಾಗಿದೆ.

ಮರೆಯದೇ ಹೇಳಲೇಬೇಕಾದ ಪ್ರಮುಖ ವಿಷಯವೆಂದರೆ, ತೋಟಗಾರಿಕೆ ಇಲಾಖೆ, ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನ ರಫ್ತು ಅಭಿವೃದ್ಧಿ ಪ್ರಾಧಿಕಾರ (ಅಪೇಡಾ), ಸಂಸ್ಕರಿತ ಆಹಾರ ಸಚಿವಾಲಯ ಸೇರಿದಂತೆ ಹಲವಾರು ಇಲಾಖೆಯ ಅಧಿಕಾರಿಗಳು ನಮ್ಮ ಮೇಲೆ ವಿಶ್ವಾಸವಿಟ್ಟು ಬೆಂಬಲ ನೀಡುತ್ತಾ ಬರುತ್ತಿದ್ದಾರೆ.



ಈ ಬಾರಿ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ ನಮ್ಮ ಬ್ರಾಂಡ್‌ ಉತ್ಪನ್ನವನ್ನು ರಾಷ್ಟ್ರೀಯ ಪ್ರಶಸ್ತಿಗೆ ಶಿಫಾರಸು ಮಾಡಿದೆ. ಜತೆಗೆ ಈ ವರ್ಷ ಕರ್ನಾಟಕ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟವು ಮಹಿಳಾ ದಿನಾಚರಣೆಯಂದು ‘ಮಹಿಳಾ ಉದ್ಯಮಿ’ ಪ್ರಶಸ್ತಿ ನೀಡಿ ಗೌರವಿಸಿದೆ.  ಹಲವು ಇಲಾಖೆಗಳು ಸನ್ಮಾನಿಸಿವೆ. ಸದ್ಯ,  ನಾನು ರಾಷ್ಟ್ರೀಯ ಜೇನು ಮಂಡಳಿ ಸದಸ್ಯೆ.



ಇಂದಿನ ದಿನ ಉದ್ಯಮವೊಂದು ಯಶಸ್ಸು ಗಳಿಸಬೇಕೆಂದರೆ ಅದಕ್ಕೆ ಜಾಹೀರಾತಿನ ಬೆಂಬಲ, ಜತೆಗೆ ವ್ಯವಸ್ಥಿತ ವಾದ ಒಂದು ತಂಡ ಬೇಕು. ಆದರೆ ನೀವು ನಂಬಿದರೆ ನಂಬಿ, ಬಿಟ್ಟರೆ ಬಿಡಿ ಈವರೆಗಿನ ಹೋರಾಟದಲ್ಲಿ ಒಬ್ಬಂಟಿ ಯಾಗಿರುವ ನಾನು ಜಾಹೀರಾತಿಗಾಗಿ ಒಂದು ಪೈಸೆ ಕೂಡ ಖರ್ಚು ಮಾಡಿಲ್ಲ!



ಪ್ರತಿ ರಂಗದಲ್ಲಿ ಸಮಾನತೆ ಬಯಸುವ ಹೆಣ್ಣು ಅನುಕಂಪ ಬಯಸಿ ಬದುಕಬಾರದು. ಪ್ರತಿಯೊಬ್ಬ­ರಿಗೂ ಅವರದೇ ಆದ ಸಾಮರ್ಥ್ಯ ಇರುತ್ತದೆ. ಅದನ್ನು ಬಂಡವಾಳವನ್ನಾಗಿಸಿಕೊಂಡು ಬದುಕಬೇಕೆಂಬ ಧ್ಯೇಯ ನನ್ನದು. ಇದನ್ನು ನಾನು ಉಪನ್ಯಾಸ ನೀಡಲು ಹೋಗುವ ಪ್ರತಿ ಸಂಸ್ಥೆಯಲ್ಲಿ ಹೇಳುತ್ತ ಬಂದಿರುವೆ.



ಮರೆತಿದ್ದೆ; ಪ್ರತಿಯೊಂದು ಪ್ರಾದೇಶಿಕ ಭಾಗವು ತನ್ನದೇ ಆದ ವಿಶಿಷ್ಠ ರುಚಿಯ ತಿಂಡಿ, ತಿನಿಸು ಹೊಂದಿ­ರುತ್ತದೆ. ಅದೇ ರೀತಿ ಕರಕುಶಲ ವಸ್ತುಗಳನ್ನು ಕೂಡ. ಇಂತಹವನ್ನು ಉತ್ತಮ ಗುಣಮಟ್ಟದಲ್ಲಿ ತಯಾರಿಸಿ ನಮಗೆ ಪೂರೈಸಿದರೆ ಅವನ್ನೆಲ್ಲಾ ನಮ್ಮದೇ ಬ್ರಾಂಡ್‌­ನಡಿ ಮಾರುಕಟ್ಟೆಗೆ ಪರಿಚಯಸಬೇಕೆಂಬ ಆಸೆ . ಆಸಕ್ತಿ ಉಳ್ಳವರು ಮೊ: 9448680861 ‌ಸಂಖ್ಯೆಗೆ ಕರೆ ಮಾಡಬಹುದು.



ಮಹಿಳೆಯರಿಗಾಗಿ

ಮಾರ್ಚ್‌ 9ರಂದು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ನಮ್ಮ ಹೊಸ ಸಂಸ್ಕರಣಾ ಘಟಕವು ಕಾರ್ಯ ಆರಂಭಿಸಲಿದೆ. ರೂ.5 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿ­ರುವ ಈ ಘಟಕವು ಪ್ರತಿ ತಿಂಗಳಿಗೆ 200 ಟನ್ ಜೇನು ಸಂಸ್ಕರಣೆ ಮಾಡುವ ಸಾಮರ್ಥ್ಯ ಹೊಂದಿದೆ. ಈ ಘಟಕವು ಹೆದ್ದಾರಿಗೆ ಹೊಂದಿಕೊಂಡಿರುವುದರಿಂದ ಅಲ್ಲಿ ಖಾದಿ ಬಟ್ಟೆಗಳು ಸೇರಿದಂತೆ ದೇಶದ ಎಲ್ಲ ಭಾಗಗಳಲ್ಲಿ ದೊರೆಯುವ ಗ್ರಾಮೀಣ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆ ಜತೆಗೆ ಕೊಡಗು ರುಚಿಯ ವಿಶೇಷ ರೆಸ್ಟೋರೆಂಟ್  ತೆರೆಯುವ ಯೋಚನೆಯಿದೆ. ಇದರಿಂದ ಗ್ರಾಮೀಣ ಜನರ ಕೌಶಲ ಪ್ರೋತ್ಸಾಹಿಸುವ ಮತ್ತು ಅವರ ಸಬಲೀಕರಣದಲ್ಲಿ ಭಾಗಿಯಾಗುವ ಆಶಯ ನಮ್ಮದು.

ಇದರೊಂದಿಗೆ ಮಹಿಳೆಯರು ನಡೆಸುತ್ತಿದ್ದ, ಆದರೆ ವೈಫಲ್ಯಗೊಂಡ ಘಟಕಗಳನ್ನು ಖರೀದಿಸಿ ಅವುಗಳನ್ನು ಪುನಃಶ್ಚೇತನಗೊಳಿಸುವ ಮೂಲಕ ಒಂದು ಕ್ಲಸ್ಟರ್ ಮಾಡಿ, ಗುಣಮಟ್ಟ ನಿಯಂತ್ರಣವನ್ನು ನಮ್ಮಲ್ಲಿಟ್ಟುಕೊಂಡು  ಹಪ್ಪಳ, ಚಟ್ನಿಪುಡಿ, ಉಪ್ಪಿನಕಾಯಿ ಸೇರಿದಂತೆ ವಿವಿಧ ಮಸಾಲೆ ಪದಾರ್ಥಗಳನ್ನು ನಮ್ಮ ಬ್ರಾಂಡ್‌ನಲ್ಲಿ ಮಾರುಕಟ್ಟೆ ಪರಿಚಯಿಸುವ ಆಲೋಚನೆಯೂ ಇದೆ.ನಮ್ಮ ಸಂಸ್ಥೆ ನೇರವಾಗಿ 50 ಜನರಿಗೆ, ಪರೋಕ್ಷವಾಗಿ 200 ಮಂದಿಗೆ ಉದ್ಯೋಗ ಒದಗಿಸಿದೆ. ಅವರಲ್ಲಿ ಶೇ 70ರಷ್ಟು ಜನರು ಅನಕ್ಷರಸ್ಥರು ಎನ್ನುವುದು ಗಮನಾರ್ಹ. ಹೊಸ ಘಟಕದ ಆರಂಭದ ನಂತರ ಒಟ್ಟು 150 ಜನರಿಗೆ ನೇರವಾಗಿ ಉದ್ಯೋಗ ನೀಡಿದಂತಾಗಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.