ಗುರುವಾರ , ಮೇ 13, 2021
24 °C

ಬನ್ನಿ-ತನ್ನಿ, ಬನ್ನಿ-ತಿನ್ನಿ!

ಬಿ.ಎನ್.ಮಲ್ಲೆೀಶ್ Updated:

ಅಕ್ಷರ ಗಾತ್ರ : | |

`ಯಾಕೋ ಬೋರ್ ಹೊಡೀತಿದೆ ಕಣ್ರಯ್ಯ, ಹರಟೆಕಟ್ಟೆ ಮೆಂಬರ್ಸ್‌ ಎಲ್ಲ ನಾಲ್ಕು ದಿನ ಎಲ್ಲಿಗಾದ್ರು ಜಾಲಿಯಾಗಿ ಹೋಗಿ ಬರೋಣ್ವಾ?~ ಗುಡ್ಡೆ ಹರಟೆ ಗೆಳೆಯರ ಮುಂದೆ ಪ್ರಸ್ತಾವನೆ ಸಲ್ಲಿಸಿದ.`ಎಲ್ಲಿಗಾದ್ರು ಯಾಕೆ, ಸುಮ್ನೆ ಯಾರಾದ್ರು ರಾಜಕೀಯ ಪಕ್ಷದೋರ ಜೊತೆ ಬರ ಪರಿಶೀಲನೆಗೆ ಹೋಗೋಣ ನಡೀರಿ. ಮಜಾ ಇರುತ್ತೆ...~ ಎಂದ ದುಬ್ಬೀರ ನಗುತ್ತ.

`ಅದ್ರಾಗೆ ಮಜ ಏನಿರ‌್ತತೋ ದುಬ್ಬೀರ? ಬಿಸಿಲು ತಿಂದು, ದೂಳು ಕುಡಿದು ಬರಬೇಕು ಅಷ್ಟೆ. ಅಷ್ಟಕ್ಕೂ ನಮ್ಮನ್ನು `ಬರ‌್ರಪ್ಪಾ~ ಅಂತ ಕರಿಯೋರು ಯಾರು?~ ಗುಡ್ಡೆ ಪ್ರಶ್ನಿಸಿದ.`ನಾವೇ ಹೋಗ್ಬೇಕು ಮಗಾ, ಹೆಂಗೂ ಎಲ್ರೂ ಈಗ ಬರದ ಬಾಲ ಹಿಡ್ಕಂಡು ಹೊಂಟಿದಾರೆ. ನಾವು ಅವರ ಬಾಲ ಹಿಡ್ಕಂಡು ಹೋಗೋದಪ್ಪ. ಊಟ, ತಿಂಡಿ, ರಾತ್ರಿ ಖರ್ಚೆಲ್ಲ ಕಳೆದು ಹೋಗುತ್ತೆ. ಈ ರಾಜಕಾರಣಿಗಳೇನು ಬರ ನೋಡೋಕೆ ಹೋಗ್ತಾರೆ ಅನ್ಕಂಡಿದೀಯ?~`ಮತ್ತೆ? ಇನ್ನೇನ್ ನೋಡೋಕೆ ಹೋಗ್ತಾರೆ?~`ಬರ ನೋಡೋ ನೆಪದಾಗೆ ರಾಜಕೀಯ ಮಾಡೋಕೆ ಹೋಗ್ತಾರೆ ಅಷ್ಟೆ. ಕೂಲಿಂಗ್ ಗ್ಲಾಸ್ ಹಾಕ್ಕಂಡು, ಬಿಸಿಲೇರಿ ನೀರು ಕುಡ್ಕೊಂಡು ದೊಡ್ಡ ದೊಡ್ಡ ಕಾರಿನಾಗೆ`ಬುರ್~ ಅಂತ ಬರ‌್ತಾರೆ.

 

ಒಣಗಿದ ಗಿಡ, ಬಿರುಕು ಬಿಟ್ಟ ನೆಲ ನೋಡ್ಕೊಂಡು ಟಿ.ವಿ.ಯೋರಿಗೆ ಇಂಟ್ರೂ ಕೊಡ್ತಾರೆ. ಬಿಜೆಪಿಯೋರು ಕಾಂಗ್ರೆಸ್‌ನೋರ‌್ನ, ಕಾಂಗ್ರೆಸ್‌ನೋರು ಜೆಡಿಎಸ್‌ನೋರ‌್ನ ಬೈತಾರೆ. ರಾತ್ರಿ ಯಾವುದಾರ ಎ.ಸಿ. ರೂಮಿನಾಗೆ ಗುಂಡು-ತುಂಡು ಸಮಾರಾಧನೆ ನಡೆಸಿ ತಣ್ಣಗೆ ಮಕ್ಕೋತಾರೆ. ಬೆಳಿಗ್ಗೆ ಮತ್ತೆ ಇನ್ನೊಂದು ಹಳ್ಳಿ ಕಡೆ ದೂಳೆಬ್ಬಿಸಿಕೊಂಡು ಹೋಗ್ತಾರೆ. ಬರ ಪರಿಶೀಲನೆ ಅಂದ್ರೆ ಇಷ್ಟೆ~ ದುಬ್ಬೀರ ವಿವರಿಸಿದ.ತಕ್ಷಣ ಮಿಸ್ಸಮ್ಮ `ನಿಂಗೊತ್ತಾ? ರಾಜಕಾರಣಿಯೊಬ್ರು ಬರ ಪರಿಶೀಲನೆ ಮಾಡೋಕೆ ಅಂತ ಶೇಂಗಾ ಹೊಲಕ್ಕೆ ಹೋಗಿದ್ರಂತೆ. ಶೇಂಗಾ ಗಿಡಗಳನ್ನ ನೋಡಿ `ಇದೇನ್ರಿ? ಎಲ್ಲ ಗಿಡದಾಗು ಬರೀ ಹೂವೇ ಬಿಟ್ಟಾವು, ಒಂದರಾಗೂ ಕಾಯಿ ಬಿಟ್ಟಿಲ್ಲ.

 

ಇದು ಭಾರೀ ನಷ್ಟ ಅಂತ ಬರ‌್ಕೊಂಡು ಪರಿಹಾರ ಕೊಡ್ರಿ~ ಅಂತ ಅಧಿಕಾರಿಗಳಿಗೆ ಆದೇಶಿಸಿದ್ರಂತೆ. ಅಧಿಕಾರಿಗಳು ಆ ರಾಜಕಾರಣಿ ಕಿವಿಯಲ್ಲಿ `ಸಾರ್, ಶೇಂಗಾ ನೆಲದ ಒಳಗೆ ಕಾಯಿ ಕಟ್ತತಿ, ಗಿಡದಾಗೆ ಬಿಡಲ್ಲ~ ಎಂದಾಗ ರಾಜಕಾರಣಿ ಪಿಟಿಕ್ ಅನ್ನಿಲ್ಲಂತೆ!~ ಮಿಸ್ಸಮ್ಮನ ಮಾತಿಗೆ ಎಲ್ಲರೂ ಜೋರಾಗಿ ನಕ್ಕರು.`ಅದೇ ತರ ಇನ್ನೊಬ್ಬ ರಾಜಕಾರಣಿಗೆ ರೈತರು ಘೇರಾವ್ ಹಾಕಿ `ನೆಲದಾಗೆ ಅಂತರ್ಜಲ ಬತ್ತಿ ಹೋಗೇತಿ. ಕುಡಿಯೋಕೆ ನೀರಿಲ್ಲ~ ಅಂತ ಗಲಾಟೆ ಮಾಡಿದ್ರಂತೆ. ಅದಕ್ಕೆ ಆ ರಾಜಕಾರಣಿ ನೆಲದಾಗೆ ನೀರಿಲ್ಲದಿದ್ರೇನಂತೆ, ಎರಡು ತಿಂಗಳು ತಡ್ಕಳ್ರಿ, ಆಕಾಶದಾಗಿಂದ ಬೇಕಾದಷ್ಟು ನೀರು ಬೀಳ್ತತಿ ಅಂದ್ರಂತೆ. ಏನಂತ ಗೊತ್ತಾತ?~ ಎಂದ ಗುಡ್ಡೆ.`ಎರಡು ತಿಂಗಳು ಕಳೆದ್ರೆ ಮಳಿಗಾಲ ಚಾಲೂ ಆಗ್ತತಲ್ಲಲೆ, ಅದನ್ನ ಹೇಳಿದಾನೆ ಶಾಣ್ಯಾ. ಹಿಡ್ಕಂಡು ಒದೀಬೇಕಿತ್ತು~ ಎಂದ ತೆಪರೇಸಿ ನಗುತ್ತ.ಇಂಥ ರಾಜಕಾರಣಿಗಳನ್ನೆಲ್ಲ ಚೇಂಜ್ ಮಾಡ್ಬೇಕಪ್ಪ. ನಮ್ಮ ಜನಕ್ಕೂ ಬುದ್ದಿ ಇಲ್ಲ. ಒಂದಿನ ಕುಡಿದು ಓಟು ಹಾಕೋದು, ಐದು ವರ್ಷ ಬೈಕೊಂಡು ತಿರುಗೋದು. ರಾಜಕೀಯದಲ್ಲಿ ಬದಲಾವಣೆ ಆಗ್ತಿರಬೇಕು ಅಲ್ವಾ?~ ಮಿಸ್ಸಮ್ಮ ಬೇಸರ ವ್ಯಕ್ತಪಡಿಸಿದಳು.`ಈಗ ರಾಜಕೀಯ ಪಕ್ಷದೋರೇ ಬದಲಾವಣೆ ಕೇಳ್ತಿದಾರೆ ಮಿಸ್ಸಮ್ಮ, `ನಮ್ಮ ಪಕ್ಷಕ್ಕೆ ಬನ್ನಿ, ಬದಲಾವಣೆ ತನ್ನಿ~ ಅಂತ ಒಬ್ರು, `ಮುಖ್ಯಮಂತ್ರಿನ ಜಾಗ ಖಾಲಿ ಮಾಡಿ ಅನ್ನಿ, ನನ್ನ ಅಧಿಕಾರಕ್ಕೆ ತನ್ನಿ~ ಅಂತ ಇನ್ನೊಬ್ರು. ಎಲ್ಲ ಕಡಿ ಈಗ `ಬನ್ನಿ-ತನ್ನಿ~ ಜಪ ಶುರುವಾಗೇತಿ ನೋಡು~ ಎಂದ ಗುಡ್ಡೆ.`ರಾಜಕೀಯದಾಗಷ್ಟೆ ಅಲ್ಲೋ ಗುಡ್ಡೆ, ಸರ್ಕಾರಿ ಕಛೇರಿಗಳಲ್ಲಿ, ಮಠಮಾನ್ಯಗಳಲ್ಲಿ ಇದು ಮೊದ್ಲಿನಿಂದ ಐತಿ. ಈ ಸ್ಲೋಗನ್‌ನ ಸ್ವಲ್ಪ ಚೇಂಜ್ ಮಾಡಿ ಸರ‌್ಕಾರಿ ಕಛೇರಿಗಳು, ಮಠಗಳಿಗೆ `ಬನ್ನಿ-ತನ್ನಿ~, ರಾಜಕಾರಣಿಗಳಿಗೆ `ಬನ್ನಿ-ತಿನ್ನಿ~ ಅಂತ ಮಾಡಿದ್ರೆ ಹೆಂಗೆ?~ ಎಂದ ದುಬ್ಬೀರ.`ಬೊಂಬಾಟ್~ ಎಂದ ಗುಡ್ಡೆ, `ತನ್ನಿ~ ಮತ್ತು `ತಿನ್ನಿ~ ಈ ಪದಗಳು ಇವತ್ತು ದೇಶಾನೇ ಆಳ್ತಿದಾವೆ. ಭೂಮಿ ಇರೋತಂಕ ಇವು ಶಾಶ್ವತ~ ಎಂದ.`ಭೂಕಂಪ ಆಗಿ ಎಲ್ರೂ ನೆಗೆದು ಬಿದ್ದಾಗ ಇವೂ ನಾಶ ಆಗ್ತಾವೇನಪ~ ಎಂದಳು ಮಿಸ್ಸಮ್ಮ.

`ಹೌದೂ ಮೊನ್ನೆ ಭೂಕಂಪ ಆತಲ್ಲ, ಪ್ರಳಯ ಹತ್ತಿರ ಬಂತು ಅಂತ ಯಾರಿಗೂ ಅನ್ನಿಸ್ಲಿಲ್ವಾ?~ ಪರಮೇಶಿ ಎಲ್ಲರ ಮುಖ ನೋಡಿದ.`ನನಗಂತೂ ಅನ್ನಿಸ್ತಪ. ಭೂಕಂಪಕ್ಕೆ ಸಿಕ್ಕು ಸಾಯೋ ಮುಂಚೆ ನಮ್ಮ ಕೊನೇ ಆಸೆನೆಲ್ಲ ತೀರಿಸ್ಕೊಳ್ಳೋದು ವಾಸಿ~ ಎಂದ ತೆಪರೇಸಿ.`ಓಕೆ, ನಿನ್ನ ಕೊನೇ ಆಸೆ ಏನೋ ಗುಡ್ಡೆ?~ ಮಿಸ್ಸಮ್ಮ ಕೇಳಿದಳು.

`ಈ ರಾಜ್ಯದ ಮುಖ್ಯಮಂತ್ರಿ ಆಗಬೇಕು ಅಂತ ಆಸೆ, ಮಾಡ್ತೀಯಾ?~`ನಾನೇನೋ ಮಾಡೋಕೆ ರೆಡಿ, ಆದ್ರೆ ಯಡ್ಯೂರಪ್ಪ ಒಪ್ಪಬೇಕಲ್ಲ. ಯಡ್ಯೂರಪ್ಪ ಒಪ್ಪಿದ್ರೂ ಸದಾನಂದಗೌಡ್ರು ಖುರ್ಚಿ ಬಿಟ್ಟು ಕೊಡಬೇಕಲ್ಲ?~ ಮಿಸ್ಸಮ್ಮ ನಕ್ಕಳು.`ಖುರ್ಚೀನೆ ಅವರವರ ಕೊನೆ ಆಸೆ ಇರ‌್ಬೇಕು ಅನ್ಸುತ್ತೆ. ಪ್ರಳಯ ಆಗೋಕೆ ಮುಂಚೆ ಇನ್ನೊಂದ್ಸಲ ಮುಖ್ಯಮಂತ್ರಿ ಆಗ್ಬೇಕು ಅಂತ ಯಡ್ಯೂರಪ್ಪ, ಪ್ರಳಯ ಆಗೋವಾಗ ನಾನೇ ಮುಖ್ಯಮಂತ್ರಿ ಆಗಿರಬೇಕು ಅಂತ ಸದಾನಂದ ಗೌಡ್ರು ಆಸೆ ಇಟ್ಕಂಡಿದಾರೆ ಅನ್ಸುತ್ತೆ. ಅವರ ನಡುವೆ ನಿನ್ನ ಆಸೆ ಈಡೇರಲ್ಲ ಬಿಡು~ ಎಂದ ಪರಮೇಶಿ.`ಹೋಗ್ಲಿ, ದುಬ್ಬೀರ ನಿನ್ನ ಕೊನೇ ಆಸೆ ಏನೋ? ಮೊನ್ನೆ ಭೂಕಂಪ ಆದಾಗ ನಿಂಗೆ ಹೆದ್ರಿಕೆ ಆಗ್ಲಿಲ್ವಾ?~ ಗುಡ್ಡೆ ಕೀಟಲೆ ಶುರು ಮಾಡಿದ.`ಏನು? ಹೆದರಿಕೆನಾ? ಏನೋ ಹಾಗಂದ್ರೆ? ನಾನು ಸಂಸಾರ ನಡೆಸ್ತಿರೋದೇ ಹೆಂಡ್ತಿ ಅನ್ನೋ ಭೂಕಂಪದ ಜೊತೆ. ನನಗ್ಯಾಕೋ ಹೆದ್ರಿಕೆ?~ ದುಬ್ಬೀರ ನಗುತ್ತ ತಿರುಗೇಟು ನೀಡಿದಾಗ ಎಲ್ಲರೂ ಗೊಳ್ಳಂತ ನಕ್ಕರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.