ಶುಕ್ರವಾರ, ಜೂನ್ 18, 2021
28 °C

ಬಳ್ಳಾರಿ ಪರ್ಯಾಯ ಗಣರಾಜ್ಯಕ್ಕೆ ಶರಣಾಗಿದ್ದು ನಿಜ

ಪ್ರಜಾವಾಣಿ ವಾರ್ತೆ ವಿ.ಎಸ್.ಸುಬ್ರಹ್ಮಣ್ಯ Updated:

ಅಕ್ಷರ ಗಾತ್ರ : | |

ಬೆಂಗಳೂರು: `ರಾಜ್ಯದಲ್ಲಿ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಜಿ.ಜನಾರ್ದನ ರೆಡ್ಡಿ ಅವರ `ಪರ್ಯಾಯ ಗಣರಾಜ್ಯ~ಕ್ಕೆ ಬಳ್ಳಾರಿ ಆಡಳಿತ ಶರಣಾಗಿದ್ದುದು ನಿಜ. ಜಿಲ್ಲೆಯ ಪೂರ್ಣ ಆಡಳಿತ ಹವಂಭಾವಿಯ `ಕುಟೀರ~ದಿಂದಲೇ ನಿರ್ವಹಣೆಯಾಗುತ್ತಿತ್ತು. ಈ ಕುರಿತು ಲೋಕಾಯುಕ್ತ ವರದಿಯಲ್ಲಿ ಇದ್ದ ಅಂಶಗಳೆಲ್ಲವೂ ನಿಜ~ ಎಂದು ಸರ್ಕಾರದ ಅಧಿಕಾರಿಗಳೇ ಸಿಬಿಐ ಎದುರು ಒಪ್ಪಿಕೊಂಡಿದ್ದಾರೆ.ಅಸೋಸಿಯೇಟೆಡ್ ಮೈನಿಂಗ್ ಕಂಪೆನಿ (ಎಎಂಸಿ) ನಡೆಸಿರುವ ಅವ್ಯವಹಾರಗಳ ಕುರಿತು ತನಿಖೆ ನಡೆಸುತ್ತಿರುವ ಡಿಐಜಿ ಆರ್.ಹಿತೇಂದ್ರ ನೇತೃತ್ವದ ಸಿಬಿಐ ತಂಡ ಬಳ್ಳಾರಿಯಲ್ಲಿ ಸೇವೆಯಲ್ಲಿದ್ದ 30ಕ್ಕೂ ಹೆಚ್ಚು ಅಧಿಕಾರಿಗಳನ್ನು ಈ ಸಂಬಂಧ ಪ್ರಶ್ನಿಸಿದೆ. ರೆಡ್ಡಿ ಪಡೆ ನಡೆಸಿದ ಎಲ್ಲ ಅಕ್ರಮಗಳಿಗೂ ಅನಿವಾರ್ಯವಾಗಿ ಸಹಕಾರ ನೀಡಿರುವುದಾಗಿ ಈ ಅಧಿಕಾರಿಗಳು ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ ಎಂದು ಸಿಬಿಐನ ಉನ್ನತ ಮೂಲಗಳು `ಪ್ರಜಾವಾಣಿ~ಗೆ ತಿಳಿಸಿವೆ.ಬಳ್ಳಾರಿಯಲ್ಲಿ ಕಾರ್ಯನಿರ್ವಹಿಸಿರುವ ಕಂದಾಯ, ಪೊಲೀಸ್, ಗಣಿ ಮತ್ತು ಭೂ ವಿಜ್ಞಾನ, ಅರಣ್ಯ, ಸಾರಿಗೆ, ವಾಣಿಜ್ಯ ತೆರಿಗೆ ಮತ್ತಿತರ ಹಿರಿಯ-ಕಿರಿಯ ಅಧಿಕಾರಿಗಳ ವಿಚಾರಣೆ ಇಲ್ಲಿನ ಗಂಗಾನಗರದಲ್ಲಿರುವ ಸಿಬಿಐ ಕಚೇರಿಯಲ್ಲಿ ನಿರಂತರವಾಗಿ ನಡೆಯುತ್ತಿದೆ. ಗಣಿ ಮತ್ತು ಭೂ ವಿಜ್ಞಾನ, ಅರಣ್ಯ ಇಲಾಖೆಗಳ ಪ್ರಧಾನ ಕಚೇರಿಗಳಲ್ಲಿ ಸೇವೆಯಲ್ಲಿದ್ದ ಕೆಲವರನ್ನೂ ವಿಚಾರಣೆಗೆ ಒಳಪಡಿಸಲಾಗಿದೆ.ಪ್ರಾಣಭಯದಲ್ಲಿ ಕೆಲಸ?: ಉನ್ನತ ಮೂಲಗಳ ಪ್ರಕಾರ, ಈವರೆಗೆ ಸಿಬಿಐ ಎದುರು ಹಾಜರಾದ ಹಲವು ಅಧಿಕಾರಿಗಳು, `ಜನಾರ್ದನ ರೆಡ್ಡಿ ಅವರ ಆಣತಿಯಂತೆ ನಡೆಯುವುದು ನಮಗೆ ಅನಿವಾರ್ಯ ಆಗಿತ್ತು. ಬಹುತೇಕ ಸಂದರ್ಭಗಳಲ್ಲಿ ಎಲ್ಲ ಕಾಯ್ದೆ, ನಿಯಮಗಳನ್ನು ಉಲ್ಲಂಘಿಸಿ ಕೆಲಸ ಮಾಡಿದ್ದೇವೆ. ಜನಾರ್ದನ ರೆಡ್ಡಿ ಅವರ `ಸಾಮ್ರಾಜ್ಯ~ದ ವಿರುದ್ಧ ನಡೆದರೆ ಜೀವಭಯ ಎದುರಿಸಬೇಕಿತ್ತು. ಸ್ವಯಂ ರಕ್ಷಣೆಗಾಗಿ ಅವರಿಗೆ ಶರಣಾಗಿದ್ದೆವು~ ಎಂದು ಹೇಳಿಕೆ ನೀಡಿದ್ದಾರೆ.ವಿಚಾರಣೆಗೆ ಹಾಜರಾದ ಬಹುತೇಕರು, `ಬಳ್ಳಾರಿ ಗಣರಾಜ್ಯ~ದ ಅಸ್ತಿತ್ವವನ್ನು ಒಪ್ಪಿಕೊಂಡಿದ್ದಾರೆ. ಕೆಲವರು, ರೆಡ್ಡಿ ಒತ್ತಡಕ್ಕೆ ಮಣಿದು ಕೈಗೊಂಡ ತಪ್ಪು ತೀರ್ಮಾನಗಳ ಪಟ್ಟಿಯನ್ನೂ ಒದಗಿಸಿದ್ದಾರೆ. ಅರಣ್ಯ, ಗಣಿ ಮತ್ತು ಭೂ ವಿಜ್ಞಾನ, ಕಂದಾಯ, ಪೊಲೀಸ್ ಇಲಾಖೆಗಳ ಅಧಿಕಾರಿಗಳು ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನೂ ನೀಡಿದ್ದಾರೆ ಎಂದು ತಿಳಿದುಬಂದಿದೆ.ಗಣಿ ಮಾಲೀಕರಿಂದ ಹಫ್ತಾ ವಸೂಲಿ, `ಜೀರೋ ಮೆಟೀರಿಯಲ್~ ಸಾಗಣೆ, ಅದಿರು ಸಾಗಣೆಗೆ ನಕಲಿ ಪರವಾನಗಿ ಬಳಕೆ ಮತ್ತಿತರ ಸಂಗತಿಗಳು ತಮಗೆ ಗೊತ್ತಿತ್ತು ಎಂಬುದನ್ನೂ ಅಧಿಕಾರಿಗಳು ಸಿಬಿಐ ತನಿಖಾ ತಂಡದ ಎದುರು ಬಹಿರಂಗಪಡಿಸಿದ್ದಾರೆ. ಲೋಕಾಯುಕ್ತ ತನಿಖೆಯ ಅವಧಿಯಲ್ಲಿ ತನಿಖಾ ತಂಡಕ್ಕೆ ಕೆಲ ಮಾಹಿತಿ ಒದಗಿಸದಂತೆ ಒತ್ತಡವನ್ನೂ ಹೇರಲಾಗಿತ್ತು ಎಂದು ಕೆಲವರು ತಿಳಿಸಿದ್ದಾರೆ.`ಜನಾರ್ದನ ರೆಡ್ಡಿ ಅಥವಾ ಅವರ ಆಪ್ತರು ನೀಡಿದ ಆದೇಶವೇ ಬಳ್ಳಾರಿಯಲ್ಲಿ ಅಂತಿಮ ಎಂಬ ವಾತಾವರಣ ಇತ್ತು. ಅವರ ಆದೇಶಕ್ಕೆ ವಿರುದ್ಧವಾಗಿ ನಡೆಯುವ ಅಧಿಕಾರಿಗಳಿಗೆ ನಿರಂತರವಾಗಿ ಕಿರುಕುಳ ನೀಡಲಾಗುತ್ತಿತ್ತು. ಕೆಲವರನ್ನು ರೆಡ್ಡಿ ನಿವಾಸ `ಕುಟೀರ~ಕ್ಕೆ ಕರೆಸಿ ಅಮಾನವೀಯವಾಗಿ ನಡೆಸಿಕೊಳ್ಳಲಾಗಿತ್ತು. ಅಧಿಕಾರಿಗಳು ತಮ್ಮ ವ್ಯವಹಾರಕ್ಕೆ ವಿರುದ್ಧವಾಗಿ ನಡೆಯುತ್ತಿದ್ದಾರೆಯೇ ಎಂಬುದನ್ನು ಪರಿಶೀಲಿಸಲು ಜನಾರ್ದನ ರೆಡ್ಡಿ ಅವರು ಆಪ್ತರ ತಂಡವೊಂದನ್ನು ನಿಯೋಜಿಸಿದ್ದರು~ ಎಂಬ ಹೇಳಿಕೆಗಳೂ ವಿಚಾರಣೆಗೆ ಹಾಜರಾದ ಅಧಿಕಾರಿಗಳಿಂದ ಹೊರಬಿದ್ದಿದೆ ಎನ್ನುತ್ತವೆ ಉನ್ನತ ಮೂಲಗಳು.ಅಲಿಖಾನ್ ದರ್ಬಾರು!: `ಬಳ್ಳಾರಿ ಗಣರಾಜ್ಯ~ದಲ್ಲಿ ಜನಾರ್ದನ ರೆಡ್ಡಿ ಅವರ ನಂಬುಗೆಯ ಬಂಟ ಮೆಹಫೂಜ್ ಅಲಿಖಾನ್ ಸರ್ಕಾರಿ ಕಚೇರಿಗಳು ಮತ್ತು ಅಧಿಕಾರಿಗಳ ಮೇಲೆ ನೇರವಾದ ಹಿಡಿತ ಹೊಂದಿದ್ದ ಎಂಬುದಕ್ಕೂ ಸಿಬಿಐಗೆ ಸಾಕ್ಷ್ಯ ದೊರೆತಿದೆ. 27ರ ಹರೆಯದ ಅಲಿಖಾನ್, ಒಂದು ಹಂತದಲ್ಲಿ ಸರ್ಕಾರಿ ಕಚೇರಿಗಳಿಗೆ ಬಂದು ಬೆದರಿಕೆ ಒಡ್ಡಿ ಕಡತಗಳಿಗೆ ಸಹಿ ಹಾಕಿಸಿಕೊಳ್ಳುತ್ತಿದ್ದ ಎಂಬ ಮಾಹಿತಿಯನ್ನೂ ರಾಜ್ಯ ಸರ್ಕಾರದ ಅಧಿಕಾರಿಗಳೇ ಸಿಬಿಐಗೆ ನೀಡಿದ್ದಾರೆ.`ಕೆಲ ವಿಷಯಗಳ ಬಗ್ಗೆ ತನಿಖಾ ತಂಡ ದಾಖಲೆ ಎದುರಿಗಿಟ್ಟು ರಾಜ್ಯ ಸರ್ಕಾರದ ಅಧಿಕಾರಿಗಳನ್ನು ಪ್ರಶ್ನಿಸುತ್ತಿದೆ. ದಾಖಲೆ ಕಂಡು ತಬ್ಬಿಬ್ಬಾದ ಅಧಿಕಾರಿಗಳು, ಅಲಿಖಾನ್ ಒತ್ತಡಕ್ಕೆ ಮಣಿದು ಸಹಿ ಹಾಕಿರುವುದನ್ನು ಒಪ್ಪಿಕೊಂಡಿದ್ದಾರೆ.ಅಲಿಖಾನ್ ಸರ್ಕಾರಿ ಕಚೇರಿಗಳಿಗೆ ಬಂದು ಕೆಲಸ ಮಾಡಿಸಿಕೊಂಡು ಹೋಗುತ್ತಿದ್ದ ಬಗ್ಗೆ ವರ್ಣರಂಜಿತ ಕತೆಗಳನ್ನೂ ತಪ್ಪೊಪ್ಪಿಗೆ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ~ ಎಂದು ಸಿಬಿಐ ಮೂಲಗಳು ಖಚಿತಪಡಿಸಿವೆ.

`ಐ.ಟಿ ಅಧಿಕಾರಿಗಳನ್ನು ಬೆದರಿಸಿದ್ದು ನಿಜ~

ಬಳ್ಳಾರಿಯ ಗಣಿ ಮಾಫಿಯಾದಲ್ಲಿ ಸಕ್ರಿಯವಾಗಿದ್ದ ಹಲವರ ಮೇಲೆ 2010ರ ಸೆಪ್ಟೆಂಬರ್‌ನಲ್ಲಿ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು. ಈ ಸಂದರ್ಭದಲ್ಲಿ ತಮ್ಮನ್ನು ಜಿಲ್ಲೆ ಪ್ರವೇಶಿಸದಂತೆ ತಡೆಯುವ, ಕಾರ್ಯಾಚರಣೆ ವೇಳೆ ಪ್ರತಿ ದಾಳಿ ನಡೆಸುವ ಯತ್ನ ನಡೆದಿತ್ತು ಎಂದು ತೆರಿಗೆ ಅಧಿಕಾರಿಗಳು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು.ಐ.ಟಿ ಅಧಿಕಾರಿಗಳು ತಮ್ಮ ವರದಿಯಲ್ಲಿ ಮಾಡಿದ್ದ ಆರೋಪಗಳ ಬಗ್ಗೆಯೂ ಸಿಬಿಐ, ರಾಜ್ಯ ಸರ್ಕಾರದ ಅಧಿಕಾರಿಗಳನ್ನು ಪ್ರಶ್ನಿಸಿದೆ. ಆದಾಯ ತೆರಿಗೆ ಅಧಿಕಾರಿಗಳು ಹೇಳಿದ್ದೆಲ್ಲವೂ ಸತ್ಯ ಎಂಬುದನ್ನೂ ಅವರು ಒಪ್ಪಿಕೊಂಡಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಬಗ್ಗೆ ಸಿಬಿಐ ಪ್ರತ್ಯೇಕ ವರದಿಯೊಂದನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.