ಬುಧವಾರ, ಮೇ 18, 2022
27 °C

ಬಹುಶ್ರುತ ವಿ.ಸೀ. ಒಂದು ಹೊಸ ಓದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಳೆದ ಶತಮಾನದಲ್ಲಿ ಪ್ರಾರಂಭವಾಗಿ ಇನ್ನೂ ಗಾಢವಾಗಿಯೇ ಬೆಳೆಯುತ್ತಿರುವ ಪೂರ್ವ-ಪಶ್ಚಿಮಗಳ ಪ್ರಕ್ರಿಯೆಯ ಸ್ವರೂಪ ಎಷ್ಟು ಕ್ಲಿಷ್ಟ ಹಾಗೂ ಸಂಕೀರ್ಣವಾಗಿದೆಯೆಂದರೆ, ಅದನ್ನು ಯಾವ ರೀತಿಯಿಂದ ವರ್ಣಿಸಿದರೂ ಅದು ಅಪೂರ್ಣವೆಂದೇ ಎನಿಸುವ ಸಂಭವವಿದೆ.ಅದನ್ನು ಸಾಂಸ್ಕೃತಿಕ ವಿನಿಮಯವೆಂದು ನೋಡಿದವರಿದ್ದಾರೆ, ಅಸಮ ಸಂಘರ್ಷವೆಂದು ನೋಡಿದವರೂ ಇದ್ದಾರೆ. ಕೆಲವರಿಗೆ ಈ ಮುಖಾಮುಖಿ ಭಾರತವನ್ನು ಆಧುನಿಕತೆಯತ್ತ ಕರೆದೊಯ್ದು ಪ್ರಗತಿಗೆ ಕಾರಣವಾಗಿದೆಯೆಂದೆನಿಸಿದರೆ, ಬೇರೆಯವರಿಗೆ ಇದು ಸ್ವಸಂಸ್ಕೃತಿಯ ವಿನಾಶಕ್ಕೆ ಹಾದಿಯಾಗಿದೆ ಎಂದೆನಿಸಿದೆ.

 

ಈ ಪ್ರಕ್ರಿಯೆಯಲ್ಲಿ ಸಿಲುಕಿಕೊಂಡ ಎಲ್ಲ ಪ್ರಜ್ಞಾವಂತರೂ ಒಂದಿಲ್ಲೊಂದು ರೀತಿಯಲ್ಲಿ ಈ ದ್ವಂದ್ವವನ್ನು ಅನುಭವಿಸಿದ್ದಾರೆ ಹಾಗೂ ಅನುಭವಿಸುತ್ತಲೇ ಇದ್ದಾರೆ. ಆದರೆ, ಎಲ್ಲರೂ ವಿ.ಸೀ.ಯವರಂತೆ ಅಥವಾ ಅನಂತಮೂರ್ತಿಯವರಂತೆ ಅದರ ಬಗ್ಗೆ ಗಂಭೀರವಾಗಿ ಅಥವಾ ಪ್ರಜ್ಞಾಪೂರ್ವಕವಾಗಿ ಚಿಂತಿಸಿದ್ದಾರೆ ಎಂದು ಹೇಳಲಾಗುವುದಿಲ್ಲ...ವಿ.ಸೀ.ಯವರ ಆಸ್ಥೆಗಳ ಆಳ, ಹರವು, ವೈವಿಧ್ಯಗಳು ಅಗಾಧವಾಗಿದ್ದವು. ಚಿತ್ರಕಲೆ, ಸಂಗೀತ, ಶಿಲ್ಪ, ಸಾಹಿತ್ಯ, ಜ್ಞಾನ-ವಿಜ್ಞಾನ ಎಲ್ಲವೂ ಅವರ ಆಸ್ಥೆಯ ವಿಷಯಗಳಾಗಿದ್ದವು. ಹೀಗಾಗಿ ಅವರ ಬರಹಗಳಲ್ಲಿಯೂ ಆಶ್ಚರ್ಯಕರವಾದ ವೈವಿಧ್ಯ ಕಂಡು ಬರುತ್ತದೆ.

`ವಿ.ಸೀ. ಅವರ ಬೆಲೆಬಾಳುವ ಬರಹಗಳು~ ಕೃತಿ, ಬೆಂಗಳೂರಿನ `ವಸಂತ ಪ್ರಕಾಶನ~ದ `ಬೆಲೆಬಾಳುವ ಬರಹಗಳು~ ಗ್ರಂಥಮಾಲಿಕೆಯಡಿ ಪ್ರಕಟಗೊಳ್ಳುತ್ತಿದೆ. ಕನ್ನಡಕ್ಕೆ ವಿ.ಸೀ. ಅವರು ನೀಡಿದ ಮಹತ್ವದ ಕೊಡುಗೆಯನ್ನು ಕುರಿತು ಕೃತಿಯ ಸಂಪಾದಕರಾದ ಹಿರಿಯ ವಿಮರ್ಶಕ ಜಿ.ಎಸ್. ಆಮೂರ ದೀರ್ಘ ಪ್ರಸ್ತಾವನೆ ಬರೆದಿದ್ದಾರೆ. ವಿ.ಸೀ. ಅವರನ್ನು ಹೊಸ ಬೆಳಕಿನಲ್ಲಿ ಕಾಣಿಸುವ ಆ ಪ್ರಸ್ತಾವನೆಯ ಆಯ್ದ ಭಾಗಗಳು ಇಲ್ಲಿವೆ.

ಕಾವ್ಯ, ನಾಟಕ, ಪ್ರಬಂಧ, ವ್ಯಕ್ತಿಚಿತ್ರಗಳು, ವಿಮರ್ಶೆ, ಶಾಸ್ತ್ರ, ಅನುವಾದ ಈ ಎಲ್ಲ ಪ್ರಕಾರಗಳಲ್ಲಿಯೂ ಅವರ ಸಾಹಿತ್ಯ ಕೃಷಿ ಇದೆ. ಗದ್ಯ-ಪದ್ಯಗಳೆರಡರಲ್ಲೂ ಅವರು ತಮ್ಮ ಅಭಿವ್ಯಕ್ತಿಯ ಮಾಧ್ಯಮಗಳನ್ನು ಕಂಡುಕೊಂಡರು. ಸಂಗೀತದಲ್ಲಿಯೂ ಅವರಿಗೆ ಆಳವಾದ ಅಭಿರುಚಿ-ಜ್ಞಾನಗಳಿದ್ದವು... “ಒಂದು ಕಲಾಕೃತಿಯ ಆಳಕ್ಕಿಳಿದಾಗ ನಮಗೆ ಕಾಣುವ ಗುಣ ಕೃತಿಕಾರನ ಪ್ರಜ್ಞೆಯ ಗುಣ” ಎಂಬ ಹೆನ್ರಿ ಜೇಮ್ಸನ ಮಾತು ವಿ.ಸೀ.ಯವರಿಗೂ ಒಪ್ಪಿತವಾಗುವಂಥದೇ. ಇದನ್ನೇ ಅವರು ಬೇರೆ ಮಾತುಗಳಲ್ಲಿ ಹೇಳಿದ್ದಾರೆ!

 

“ಬಹುಮಟ್ಟಿಗೆ ಸಾಹಿತ್ಯವೆಂಬುದರಲ್ಲಿ ಕಾಣುವುದು ಸಾಹಿತಿಯ ಜೀವಗುಣ, ನೋಟ, ನಿಲವು, ಉಸಿರು”. ವಿ.ಸೀ.ಯವರು ಕವಿಯಾಗಿ, ಪ್ರಬಂಧಕಾರರಾಗಿ, ವಿಮರ್ಶಕರಾಗಿ ನಮ್ಮನ್ನು ಪ್ರಭಾವಿಸುವುದು ಅವರ ವಿಶಿಷ್ಟ ಪ್ರಜ್ಞೆಯ ಮೂಲಕ. ಸ್ವತಃ ಅವರೇ ಈ ಪ್ರಜ್ಞೆಯ ಸ್ವರೂಪವನ್ನು ಗುರುತಿಸಲು ಯತ್ನಿಸಿದ್ದಾರೆ.ಅವರು ಹೇಳುವಂತೆ ಅದರ ಮುಖ್ಯ ಲಕ್ಷಣ ಜಿಜ್ಞಾಸೆ... ವಿ.ಸೀ.ಯವರದು, ಡಿವಿಜಿಯವರಲ್ಲಿದ್ದಂತೆ - ಸಂಸ್ಕಾರಪಕ್ಷ. ವಿ.ಸೀ.ಯವರ ಮಾನವತಾವಾದ ಅವರ ಉದಾರ ಜೀವನದೃಷ್ಟಿಯ ಫಲವೇ. ಅವರ ಮಾರ್ಗವನ್ನು ಸ್ಥೂಲವಾಗಿ  Secular-rationalist ಎಂದು ಕರೆಯಬಹುದು. “ಮತ, ನೀತಿ, ಕಲೆ, ಶಾಸ್ತ್ರ, ವಿಜ್ಞಾನ, ಸಾಹಿತ್ಯ, ಸಂಸ್ಕೃತಿ-ಎಲ್ಲವೂ ಮಾನವಕೃತ. ಮಾನವರಿಗಾಗಿ ಆದವು”. ಇದು ಅವರ ಪ್ರಾತಿನಿಧಿಕ ಹೇಳಿಕೆಗಳಲ್ಲೊಂದು...ತಮ್ಮ ಸಮಕಾಲೀನರಂತೆ ವಿ.ಸೀ. ಕೂಡ ನಾಡು-ನುಡಿ, ಗಂಡು-ಹೆಣ್ಣುಗಳ ಸಂಬಂಧ, ಪ್ರಕೃತಿ ಸೌಂದರ್ಯ, ಸಮಷ್ಟಿ ಜೀವನ, ಮಾನವೀಯ ಮೌಲ್ಯಗಳು- ಇಂಥ ವಸ್ತುಗಳನ್ನೇ ತಮ್ಮ ಕವಿತೆಗಳಿಗಾಗಿ ಆಯ್ದುಕೊಂಡರು ಮತ್ತು ಯಶಸ್ಸು - ಜನಪ್ರಿಯತೆಗಳನ್ನು ಗಳಿಸಿದರು.

 

`ಕಸ್ಮೈದೇವಾಯ~, `ಮೃಗಶಾಲೆಯ ಸಿಂಹಗಳು~, `ಹರಸು ತಾಯಿ~, `ಮನೆ ತುಂಬಿಸುವುದು~, `ಅಭೀಃ~, `ಗಾಂಧಿ~- ಇಂಥ ಕವಿತೆಗಳಲ್ಲಿ ವಿ.ಸೀ.ಯವರ `ವಾಣಿ~ಯನ್ನು ಸಹಜವಾಗಿ ಗುರುತಿಸಬಹುದು. ಈ ಕವಿತೆಗಳ ಗೇಯತೆ, ಭಾವನಾವೀನ್ಯ, ಉಕ್ತಿಚಾತುರ್ಯಗಳಿಗಾಗಿ ಅವುಗಳನ್ನು ಮತ್ತೆ ಮತ್ತೆ ಓದಬಹುದು, ಒಂದು ಸೂಕ್ಷ್ಮ, ಸುಸಂಸ್ಕೃತ, ಪ್ರಬುದ್ಧ ಪ್ರಜ್ಞೆಯ ಸಹವಾಸದಲ್ಲಿ ಸಂತೋಷಪಡಬಹುದು...

 

`ಒಲವು~ ವಿ.ಸೀ.ಯವರ ಮೊದಲ ಕವಿತೆಯಾದರೂ ಅವರ ಮೊದಲ ಕೃತಿ 1927ರಲ್ಲಿ ಪ್ರಕಟವಾದ ಪಂಪಾಯಾತ್ರೆ. ಹಲವಾರು ಮುದ್ರಣಗಳನ್ನು ಕಂಡ ಈ ಕೃತಿ ತನ್ನ ಪ್ರಕಾರದಲ್ಲಿ ಅಭಿಜಾತ ಕೃತಿಯ ಗೌರವವನ್ನು ಪಡೆದಿದೆ... ಈ ಕೃತಿಯ ಯಶಸ್ಸಿಗೆ ಒಂದಕ್ಕೊಂದು ಸಂಬಂಧಿಸಿದ ಎರಡು ಕಾರಣಗಳಿವೆ.

ಒಂದು ವಿ.ಸೀ.ಯವರ ವ್ಯಕ್ತಿತ್ವದ ಆಕರ್ಷಣೆ. ಇನ್ನೊಂದು ಅದರ ಶೈಲಿಯ ಸೊಗಸು ಹಾಗೂ ವೈವಿಧ್ಯ. ಇಲ್ಲಿ ಕಂಡುಬರುವ ಹಾಗೆ ವಿ.ಸೀ.ಯವರ ವ್ಯಕ್ತಿತ್ವ ಸಮೃದ್ಧವಾದುದು. ಹಾಸ್ಯ-ಭಾವುಕತೆ, ಚಿಂತನಶೀಲತೆ-ಕನಸುಗಾರಿಕೆ, ಲೌಕಿಕ ಜ್ಞಾನ- ವಿದಗ್ಧತೆ - ಇಂಥ ಒಂದಕ್ಕೊಂದು ವಿರುದ್ಧವಾದ ಗುಣಗಳಿಂದಾಗಿ ಅವರ ವ್ಯಕ್ತಿತ್ವಕ್ಕೆ ಸಂಕೀರ್ಣತೆ ಬಂದಿದೆ.ಪಂಪಾಯಾತ್ರೆಯಲ್ಲಿ ಹೆಜ್ಜೆ ಹೆಜ್ಜೆಗೂ ವಿ.ಸೀ.ಯವರ ಜಾಗೃತ ಕಲಾಪ್ರಜ್ಞೆಯ ಅನುಭವವಾಗುತ್ತದೆ... (ಈ ಕೃತಿಯಲ್ಲಿ) ಹಿರಿಯರು, ಗೆಳೆಯರು, ಮಹನೀಯರು ಕೃತಿಗಳಲ್ಲಿ ಬರುವ ವ್ಯಕ್ತಿಚಿತ್ರಗಳ ಉಗಮವನ್ನು ಗುರುತಿಸಬಹುದು.

 

ಈ ಚಿತ್ರಗಳ ಬಗ್ಗೆ ವಿ.ಸೀ.ಯವರೇ ಹೇಳಿರುವ ವಿಮರ್ಶೆಯ ಮಾತನ್ನು ಗಮನಿಸುವುದು ಒಳ್ಳೆಯದು. “ಲಿಟ್ಟನ್ ಸ್ಟ್ರಾಚಿ, ಎಮಿಲ್ ಲುಡ್ವಿಗ್, ಆಂದ್ರೆ ಮಾಲ್ರೂಸ್, ಎ.ಜಿ. ಗಾರ್ಡಿನರ್, ಕೇನ್ಸ್ ಮುಂತಾದವರ ಉಜ್ವಲ ಜೀವನಚಿತ್ರಗಳ ರಂಜನೆ, ಚಾತುರ್ಯ, ವಿದ್ಯುಲ್ಲೇಖನ ಇಲ್ಲಿಲ್ಲ.ಒಂದೊಂದು ಬದುಕಿಗೆ ಸಂಬಂಧಿಸಿದ ಲಕ್ಷಣ, ಸಂಗತಿಗಳೆಲ್ಲ ತಿಳಿದಿದ್ದು ಮೂರು ನಾಲ್ಕು ಭಾಗಗಳಲ್ಲಿ ವಿಸ್ತರಣೆ ಶಕ್ಯವಾಗುವ ಸನ್ನಿವೇಶಗಳಲ್ಲಿ ಅಂಥ ಚರಿತ್ರೆಯ ಲೇಖನಕ್ಕೆ ಅಂಶಲಕ್ಷಣಗಳ ಆಯ್ಕೆ ವಿಲಾಸ ಶಕ್ಯ; ಇನ್ನು ಕೆಲವರು ಗುಣಗಳನ್ನು ಮಾತ್ರ ಇಲ್ಲಿ ತಿಳಿಸುತ್ತಿದೆ, ಇದರಲ್ಲಿ ಲೋಪದೋಷಗಳ ಪರೀಕ್ಷಣ, ಅವರ ವ್ಯಕ್ತಿ ಚಾರಿತ್ರಗಳ ನಿಷ್ಕರ್ಷೆ ಕಾಣಿಸಿದರಾಗಿತ್ತು- ಇದು ಸಾಹಿತ್ಯಕೃತಿಯಾಗಬೇಕಾದರೆ ಎಂದುದುಂಟು”...ವಿ.ಸೀ.ಯವರ ವ್ಯಾಸಂಗದ ವಿಷಯಗಳು ಅರ್ಥಶಾಸ್ತ್ರ, ಸಮಾಜಶಾಸ್ತ್ರ ಹಾಗೂ ತತ್ವಜ್ಞಾನ. ಆದರೂ ಅವರ ಮನಸ್ಸು ಸಾಹಿತ್ಯ, ಸಂಗೀತಗಳತ್ತ ಒಲಿಯಿತು. `ನನ್ನ ಜೀವನದರ್ಶನ~ ಎಂಬ ಪ್ರಬಂಧದಲ್ಲಿ ಈ ಪ್ರವೃತ್ತಿಯ ಕಾರಣಗಳನ್ನು ವಿವೇಚಿಸುತ್ತ ಇವುಗಳ ವೈದೃಶ್ಯದ ಬಗ್ಗೆ ತುಂಬ ಮಾರ್ಮಿಕವಾದ ಮಾತು ಹೇಳಿದ್ದಾರೆ: “ಶಾಸ್ತ್ರಗಳದು ಸಾಧನಕಾಂಡ. ಅವು ಕಲ್ಪಗಳು, ಆಗಮಗಳು. ಪ್ರಯೋಜನಗಳಿಗೆ ದುಡಿವ ಅಂಗಗಳು. ಸಾಹಿತ್ಯ, ಸಂಗೀತ ಹಾಗಲ್ಲ.ಇವುಗಳಲ್ಲಿನ ಸ್ವಾತಂತ್ರ್ಯ, ಧೀರತೆ, ಅನಂತಾವಕಾಶ, ನಿರ್ಭೀತಿ, ಆಳ, ಉನ್ನತಿ, ವಿಸ್ತಾರ, ಸೂಕ್ಷ್ಮಗಳು, ಎಲ್ಲಕ್ಕೂ ಮೇಲಾಗಿ ಮಾನವತೆ ಇನ್ನೆಲ್ಲೂ ನನಗೆ ಕಾಣವು. ಇಲ್ಲಿನ ಮನಸ್ಸು ಆಡುವ ರೀತಿಯೇ ಸೊಗಸು. ಇಲ್ಲಿನ ಅಂತಃಕರಣ ಪ್ರವೃತ್ತಿ ಬೇರೆಲ್ಲಕ್ಕೂ ತಳಹದಿ; ಜೀವರಸ; ಫಲದಾನ. ಇಲ್ಲಿಲ್ಲದ ದಿವ್ಯತೆ ಬೇರೆಡೆ ಕಾಣದು”.

 

ವಿ.ಸೀ.ಯವರು ಲೋಕದ ಬದುಕನ್ನು ನಂಬಿದರು ಹಾಗೂ ಆ ಬದುಕಿನ ಸಾರ, ಸೌಂದರ್ಯಗಳನ್ನು ಸಾಹಿತ್ಯ, ಸಂಗೀತಗಳಲ್ಲಿ ಕಂಡರು. ಇಹದ ಬದುಕಿನ ಯಾವ ಅಂಗವೂ ಅವರಿಗೆ ನಿಸ್ಸಾರವಾಗಿ ಕಾಣಲಿಲ್ಲ. ಬೆಳುದಿಂಗಳು (1959) ಹಾಗೂ ಸೀಕರಣೆ (1970) ಈ ಎರಡು ಸಂಕಲನಗಳಲ್ಲಿ ಸಂಗ್ರಹಿತವಾದ ಅವರ ಲಲಿತ ಪ್ರಬಂಧಗಳು ಈ ಮಾತಿನ ಸ್ಪಷ್ಟತೆಗೆ ಉತ್ತಮ ಉದಾಹರಣೆಗಳಾಗಿವೆ.

 

ಬೇಂದ್ರೆಯವರಿಗೆ ಚಿಟಗುಬ್ಬಿಯೂ ಕಾವ್ಯದ ವಿಷಯವಾದಂತೆ ವಿ.ಸೀ.ಯವರಿಗೆ `ದೋಸೆ~, `ಕೋಳಿ~, `ಬದನೆಕಾಯಿ~ಗಳೂ ಕಲ್ಪನಾವಿಲಾಸದ ವಸ್ತುಗಳಾಗಿವೆ. ಮೈಸೂರು ರುಮಾಲು, ಅಜ್ಜಿಯ ಅಡಿಗೆ, ಮದುವೆ- ಇಂಥ ವಿವರಗಳಲ್ಲಿ ಅವರು ಒಂದು ಸಂಸ್ಕೃತಿಯ ಹೊಳಪುಗಳನ್ನೇ ಕಂಡಿದ್ದಾರೆ... ವಿ.ಸೀ.ಯವರು ನಾಟಕ ಪ್ರಕಾರದಿಂದಲೂ ಆಕರ್ಷಿತರಾದರು...

 

ಆದರೆ, ಮೂಲತಃ ವಿ.ಸೀ.ಯವರದು ನಾಟ್ಯಪ್ರಜ್ಞೆಯಲ್ಲ. ತಾವು ಆಯ್ದುಕೊಂಡ ಮೂಲದ ಆಶಯವನ್ನು ಪ್ರಕಟಿಸುವುದು ಅವರ ಮುಖ್ಯ ಉದ್ದೇಶವಾಗಿರುತ್ತಿತ್ತು. ಇದೂ ಅಲ್ಲದೆ, ನಾಟಕದ ತಂತ್ರ ಹಾಗೂ ಭಾಷೆಗಳ ಮೇಲೆ ಅವರಿಗೆ ಪ್ರಭುತ್ವವಿರಲಿಲ್ಲ.

 

ಒಂದು ಉದಾಹರಣೆಯಿಂದ ಈ ಮಾತನ್ನು ಸ್ಪಷ್ಟಗೊಳಿಸಬಹುದು. ಮ್ಯಾಥ್ಯೂ ಆರ್ನಲ್ಡ್‌ನ `ಸೊಹ್ರಾಬ್ ಅಂಡ್ ರುಸ್ತುಂ~ ಎಂಬ ಕವನವನ್ನಾಧರಿಸಿದ ಅದೇ ಹೆಸರಿನ ನಾಟಕವನ್ನು ಮೆಚ್ಚಿದ ಎಚ್.ಕೆ. ರಂಗನಾಥ ಅವರು ಅದನ್ನು `ವಿ.ಸೀ.ಯವರ ರಂಗಕೌಶಲದ ಪ್ರತಿನಿಧಿ ಕೃತಿ~ ಎಂದಿದ್ದಾರೆ. ಸೊಹ್ರಾಬ್‌ನ ತಾಯಿಯಾಗಿ ತಹಮೀನಳನ್ನು ಕಲ್ಪಿಸಿ ನಾಟಕದಲ್ಲಿ ತರುವ ಮೂಲಕ ವಿ.ಸೀ.ಯವರು ಪ್ರಯೋಗಶೀಲತೆಯನ್ನು ತೋರಿದ್ದು ನಿಜ.

 

ಇದರಿಂದಾಗಿ ಸಂಪೂರ್ಣ ದುರಂತವಾಗಬಹುದಾಗಿದ್ದ ನಾಟಕದಲ್ಲಿ ಸೊಹ್ರಾಬ್‌ನ ಸಾವಿನಿಂದಾಗಿ ರುಸ್ತುಂ-ತಹಮೀನರನ್ನು ಮತ್ತೆ ಒಟ್ಟುಗೂಡಿಸುವ ಮೂಲಕ ಬೇರೆ ರೀತಿಯ ಕೊನೆ ಬರುತ್ತದೆ. ಆದರೆ ವಿ.ಸೀ.ಯವರ ಭಾಷೆ ಈ ಮಹತ್ವದ ತಿರುವನ್ನು ಹಿಡಿಯುವಷ್ಟು ಸಮರ್ಥವಾಗಿಲ್ಲ... ಷೇಕ್ಸ್‌ಪಿಯರ್ ವಿ.ಸೀ.ಯವರ ಮೆಚ್ಚಿನ ನಾಟಕಕಾರನಾಗಿದ್ದ. ಅವನ ಪ್ರಭಾವವನ್ನೂ ಅಲ್ಲಲ್ಲಿ ಗುರುತಿಸಬಹುದು.ಉದಾಹರಣೆಗೆ, ಅಶ್ವತ್ಥಾಮ ದುರ್ಯೋಧನನನ್ನು ಕುರಿತು ಹೇಳುವ ಈ ಮಾತುಗಳು: “ಒಂದು ನಾಯಿ, ಒಂದು ಮೊಲ, ಒಂದು ಇಲಿ ಜೀವಿಸಿರಬಹುದಂತೆ! ನೀನು ಇಲ್ಲವಾಗಬಹುದೆ!”. ಕಾರ್ಡೀಲಿಯಾ ಸತ್ತಾಗ ಲಿಯರ್ ಹೇಳುವ ಮಾತುಗಳ ಪ್ರತಿಧ್ವನಿ ಇಲ್ಲಿ ಸ್ಪಷ್ಟವಾಗಿ ಕೇಳಬರುತ್ತದೆ.ನಾಟ್ಯತಂತ್ರದಲ್ಲಿಯೂ ಸೀಮಿತವಾಗಿ ವಿ.ಸೀ.ಯವರು ಪ್ರಯೋಗ ಮಾಡಿದರು. ಚ್ಯವನದಲ್ಲಿ ಫ್ಲ್ಯಾಶ್ ಬ್ಯಾಕ್ ದೃಶ್ಯ ಹಾಗೂ ಪಟ್ಟಬಂಧದಲ್ಲಿ ಸಂಸ್ಕೃತ ಮೂಲದ ಪಂಕ್ತಿಗಳ ಹಿನ್ನೆಲೆ. ಆದರೆ, ಕನ್ನಡ ರಂಗಭೂಮಿಯಲ್ಲಿ ಭದ್ರ ಸ್ಥಾನ ದೊರಕಿಸಲು ಇಷ್ಟು ಸಾಲದು....

ಕನ್ನಡ ವಿಮರ್ಶೆಗೆ ವಿ.ಸೀ.ಯವರ ಕೊಡುಗೆ ದೊಡ್ಡದು. ಐದು ಸಂಪುಟಗಳಲ್ಲಿ ಸಂಗ್ರಹಿತವಾದ ಈ ಕೊಡುಗೆಯ ಯಥಾರ್ಥ ಗ್ರಹಿಕೆ ನಡೆದಿಲ್ಲವಷ್ಟೇ ಅಲ್ಲದೆ ಅದನ್ನು ನಿರ್ಲಕ್ಷಿಸಲಾಗಿದೆ. ಶತಮಾನದ ಸಾಹಿತ್ಯ ವಿಮರ್ಶೆ (2001) ಹಾಗೂ ಸುವರ್ಣ ಸಾಹಿತ್ಯ ವಿಮರ್ಶೆ (2006) ಇವೆರಡೂ ಸಂಕಲನಗಳಲ್ಲಿ ವಿ.ಸೀ.ಯವರಿಗೆ ಸ್ಥಾನ ದೊರಕಿಲ್ಲ. ಇದು ಅನ್ಯಾಯದ ಪರಮಾವಧಿ.ಯಾಕೆಂದರೆ, ತೀ.ನಂ. ಶ್ರೀಕಂಠಯ್ಯನವರಂತೆ ವಿ.ಸೀ.ಯವರಿಗೆ ಕಾವ್ಯ ಮೀಮಾಂಸೆ ಹಾಗೂ ಸಾಹಿತ್ಯ ವಿಮರ್ಶೆ- ಈ ಎರಡೂ ಕ್ಷೇತ್ರಗಳಲ್ಲಿಯೂ ಪರಿಣತಿ ಇತ್ತು. ಕಲೆ, ಕಲಾನುಭವ, ಸಾಹಿತ್ಯ, ಸಾಹಿತ್ಯ ವಿಮರ್ಶೆ, ಸಂಸ್ಕೃತಿ, ಸಂಪ್ರದಾಯ- ಇಂಥ ಮೂಲಭೂತ ಸಮಸ್ಯೆಗಳನ್ನು ಕುರಿತು ವಿ.ಸೀ.ಯವರು ಮಹತ್ವದ ಪ್ರಶ್ನೆಗಳನ್ನೆತ್ತಿಕೊಂಡು ಜಾಗತಿಕ ಸಂದರ್ಭದಲ್ಲಿ ಅವುಗಳಿಗೆ ಉತ್ತರಗಳನ್ನು ಕಂಡುಹಿಡಿಯಲು ಪ್ರಯತ್ನಿಸಿದರು.

 

ಇಂಥ ಪ್ರಯತ್ನಗಳು ಕನ್ನಡದಲ್ಲಿ ಎಷ್ಟು ಅಪರೂಪವಾಗಿ ನಡೆದಿವೆಯೆನ್ನುವುದರ ಅರಿವಿದ್ದವರಿಗೆ ಅವುಗಳ ಮೌಲಿಕತೆಯ ಬಗ್ಗೆ ಹೆಚ್ಚು ಹೇಳಬೇಕಾದ ಆವಶ್ಯಕತೆಯಿಲ್ಲ.ವಿ.ಸೀ.ಯವರು ಪಾಶ್ಚಾತ್ಯ ಸಾಹಿತ್ಯ ಹಾಗೂ ತಾತ್ವಿಕ ಚಿಂತನೆಗಳನ್ನು ಆಳವಾಗಿ ಅಭ್ಯಸಿಸಿದ್ದರು. ಕ್ರೋಚೆ, ಹರ್ಬರ್ಟ್ ರೀಡ್, ಟಿ.ಎಸ್. ಎಲಿಯಟ್ ಮೊದಲಾದವರ ವಿಚಾರಗಳಿಂದ ಅವರು ಸಾಕಷ್ಟು ಪ್ರಭಾವಿತರಾಗಿದ್ದರು.ಆದರೆ, “ಸಾಹಿತ್ಯದ ಉತ್ಪತ್ತಿ ಹಾಗೂ ಸ್ವರೂಪಗಳ ಬಗ್ಗೆ ವಿ.ಸೀ.ಯವರ ಅಭಿಪ್ರಾಯಗಳಿಲ್ಲ” ಎಂದು ಹೇಳುವುದು ಅವಸರದ ನಿರ್ಣಯವಾಗುತ್ತದೆ (ಕುರ್ತಕೋಟಿ, ಯುಗಧರ್ಮ ಮತ್ತು ಸಾಹಿತ್ಯ, 1962: 298-300). ವಿ.ಸೀ.ಯವರು ಭಾರತೀಯ ಕಾವ್ಯ ಮೀಮಾಂಸೆಯನ್ನು ಎಂದೂ ಅಲಕ್ಷಿಸಲಿಲ್ಲ. ಆದರೆ ಭಾರತೀಯ ಕಾವ್ಯಮೀಮಾಂಸೆಯಲ್ಲಿ ಕೊರತೆಗಳೆಂದು ತಮಗೆ ತೋರಿದ ವಿಷಯಗಳಲ್ಲಿ ಪಾಶ್ಚಾತ್ಯ ಚಿಂತನೆಯಿಂದ ಲಾಭ ಪಡೆಯಲು ಅವರು ಹಿಂಜರಿಯಲಿಲ್ಲ.ರಸತತ್ವ, ಪ್ರತಿಭೆ, ಸಹೃದಯ ಕಲ್ಪನೆ ಇಂಥ ವಿಷಯಗಳಲ್ಲಿ ಭಾರತೀಯ ಲಾಕ್ಷಣಿಕರ ಕೊಡುಗೆ ಮಹತ್ತರವಾಗಿತ್ತೆನ್ನುವುದನ್ನು ಅವರು ಗುರುತಿಸಿದರು. ಆದರೆ, ಸೃಜನ ಕ್ರಿಯೆಯ ಸ್ವರೂಪ, ಮೌಲ್ಯಮಾಪನ ಇಂಥ ಕ್ಷೇತ್ರಗಳಲ್ಲಿ ಪಾಶ್ಚಾತ್ಯ ಚಿಂತನೆಯ ಮಾರ್ಗದರ್ಶನ ಅವರಿಗೆ ಅವಶ್ಯವೆನಿಸಿತು.

 

ಇಂಥ ವಿಷಯಗಳಲ್ಲಿ ವಿ.ಸೀ.ಯವರ ಒಲವು ತೌಲನಿಕತೆಗಿಂತ ಹೆಚ್ಚಾಗಿ ಸಮಗ್ರತೆಯತ್ತ ಒಲಿದಿತ್ತು ಎನ್ನುವುದು ಗಮನಾರ್ಹವಾಗಿದೆ. ಯಾಕೆಂದರೆ, ಸಮಗ್ರತೆ ವಿ.ಸೀ.ಯವರ ಕಲಾಚಿಂತನೆಯ ಮುಖ್ಯ ಗುರಿ ಹಾಗೂ ಪ್ರಮುಖ ಕಾಣಿಕೆ. ಅವರ ಯುಗವೇ ಸಮನ್ವಯ ಯುಗವಾಗಿತ್ತು.ಸಾಹಿತ್ಯ ವಿಮರ್ಶೆ ನಮಗೆ ಹೊಸತು ಎನ್ನುವ ಮಾತನ್ನು ವಿ.ಸೀ.ಯವರು ತಮ್ಮ ಬರೆಹಗಳಲ್ಲಿ ಮತ್ತೆ ಮತ್ತೆ ಹೇಳಿದ್ದಾರೆ: “ಯಾವುದನ್ನು ಪಾಶ್ಚಿಮಾತ್ಯರು ಸಾಹಿತ್ಯ ವಿಮರ್ಶೆ ಎಂದು ಕರೆದು ದೊಡ್ಡ ಪ್ರಮಾಣದಲ್ಲಿ ಮೀಮಾಂಸೆ, ಆಸ್ವಾದನೆ ಬೆಳೆಸಿದ್ದಾರೋ... ಆ ಬಗೆಯ A Literary Criticism ನಮ್ಮಲ್ಲಿ ಬೆಳೆದಿಲ್ಲ” (ವಿಮರ್ಶೆ ಸಂಪುಟ 5, ಸಾಹಿತ್ಯತತ್ವ, ಕಲಾಮೀಮಾಂಸೆ, 2004: 87).ವಿಮರ್ಶೆಯ ಸ್ವರೂಪ ಹಾಗೂ ಮಿತಿಗಳ ಬಗ್ಗೆ ಅವರ ನಿಲುವು ಹೆಚ್ಚು ಕಡಿಮೆ ಎಲಿಯಟ್‌ನ ವಿಚಾರಗಳನ್ನೇ ಅವಲಂಬಿಸಿತ್ತು. `ಸಾಹಿತ್ಯ ವಿಮರ್ಶೆಯಲ್ಲಿ ಸರ್ವ ಪ್ರಾಧಾನ್ಯವಿರುವುದು ಕೃತಿಗೆ, ಅದರ ಗುಣಚರ್ವಣಕ್ಕೆ~, `ಅರ್ಥ ಮೊದಲು, ಬೆಲೆ ಆಮೇಲೆ~ ಎಂದು ವಿ.ಸೀ.ಯವರು ಹೇಳಿರುವುದು ತರ್ಕಸಮ್ಮತವೇ ಆಗಿದೆ.ಆದರೆ ಸಮಸ್ಯೆಗಳಿರುವುದು `ಕೃತಿಯ ಅರ್ಥ ಎಂದರೇನು?~ ಎನ್ನುವ ಪ್ರಶ್ನೆಯಲ್ಲಿ. ಆದರೆ ಈ ಪ್ರಶ್ನೆ ವಿ.ಸೀ.ಯವರನ್ನು ಹೆಚ್ಚಾಗಿ ಕಾಡಲಿಲ್ಲ. ವಿಮರ್ಶೆಯ ಒಂದು ಭಾಗ ವ್ಯಾಖ್ಯಾನ, ಇನ್ನೊಂದು ಭಾಗ ಮೌಲ್ಯಮಾಪನ ಎನ್ನುವುದನ್ನು ವಿ.ಸೀ. ಗುರುತಿಸಿದರು. ವ್ಯಾಖ್ಯಾನದ ಮಿತಿಯನ್ನು ಅವರು ಅರಿತಿದ್ದರು.`ಸಂಪ್ರದಾಯ~ ಎಂಬ ಪದವನ್ನು ವಿ.ಸೀ.ಯವರು ಬಳಸುವ ರೀತಿಯಲ್ಲಿ ಅದಕ್ಕೂ `ಸಂಸ್ಕೃತಿ~ಗೂ ವಿಶೇಷ ಅಂತರವಿಲ್ಲ. `ಆಯಾ ಕಾಲದಲ್ಲಿ ಗ್ರಾಹ್ಯ, ಅಗ್ರಾಹ್ಯವೆಂಬುದರ ಪರಿಸರ~ ಎಂದು ಅವರು ಸಂಪ್ರದಾಯ ಪದವನ್ನು ವ್ಯಾಖ್ಯಾನಿಸಿದರು. ಇದರ ರೂಪಕಾಂಗಗಳು ಜೀವನ ಮತ್ತು ಚರಿತ್ರೆ. ಈ ಮಾತು ಸಾಹಿತ್ಯ ಸಂಪ್ರದಾಯಕ್ಕೂ ಅನ್ವಯಿಸುವಂಥದು.

 

`ಭಾರತೀಯ ಸಂಪ್ರದಾಯವೊಂದಿದೆಯೇ?~ ಎನ್ನುವ ಪ್ರಶ್ನೆಯನ್ನೆತ್ತಿಕೊಂಡು ಅವರು `ಇದೆ, ಇಲ್ಲ~ ಎಂಬ ಎರಡೂ ಉತ್ತರ ಸಾಧ್ಯವಿದೆ ಎಂದು ಹೇಳಿದರು. ಇದಕ್ಕೆ ಅವರು ಕೊಡುವ ಕಾರಣವೆಂದರೆ “ಅದರ ಬಹ್ವಂಶ ಹಿಂದೂ ಅಥವಾ ಸನಾತನ-ವೈದಿಕ; ಶ್ರೌತ, ಸ್ಮಾರ್ತ.ಆದರೆ ಭಾರತದ ಹಲವಾರು ಪಂಥಗಳು ವೇದವನ್ನೂ ಸ್ಮೃತಿಗಳನ್ನೂ ಒಪ್ಪವು”. (ವಿಮರ್ಶೆ ಸಂಪುಟ 5, 2004, 192). ಭಾರತೀಯ ಸಂಸ್ಕೃತಿ-ಸಂಪ್ರದಾಯಗಳನ್ನು ಅವರು ವೈದಿಕ ಸಂಸ್ಕೃತಿ-ಸಂಪ್ರದಾಯಗಳೊಡನೆ ಸಮೀಕರಿಸದಿರುವುದು ಕ್ರಾಂತಿಕಾರಕ ವಿಚಾರವಾಗಿತ್ತು.`ಭಾರತೀಯ ಸಾಹಿತ್ಯ~ ಎಂಬ ಕಲ್ಪನೆಯ ವಿಷಯದಲ್ಲಿಯೇ ವಿ.ಸೀ.ಯವರಿಗೆ ಬಲವಾದ ಸಂಶಯಗಳಿದ್ದವು: “40-50 ಕೋಟಿ ಜನವುಳ್ಳ 15-16 ಭಾಷೆಗಳಲ್ಲಿ ಬರೆದ ಸಾಹಿತ್ಯವೆಲ್ಲ ಒಂದೇ ರೀತಿಯಾಗಿದೆ ಎಂಬುದು ಐಕ್ಯತೆಯ ಲಕ್ಷಣವೋ ವಿಶಿಷ್ಟ ವೀರ್ಯ, ಚೈತನ್ಯ, ಸಮಷ್ಟಿ, ಸ್ವಾತಂತ್ರ್ಯಗಳ ಅಥವಾ ದಾರಿದ್ರ್ಯದ, ಬಿಕ್ಕನಾಸಿತನದ ನಿರ್ದೇಶನವೊ ನಮ್ಮ ಜನ ಪರಿಶೀಲಿಸಬೇಕಾದದ್ದು” ಎಂಬ ಅವರ ಹೇಳಿಕೆ ಅವರ ಕಾಲದ ಅರಿವನ್ನು ಮೀರಿದಂಥದು.ಆರು ದಶಕಗಳ ತಮ್ಮ ಸಾಹಿತ್ಯ ಜೀವನದಲ್ಲಿ ವಿ.ಸೀ.ಯವರು ಸಾವಿರ ವರ್ಷಗಳ ಇತಿಹಾಸವುಳ್ಳ ಕನ್ನಡ ಸಾಹಿತ್ಯ ಪರಂಪರೆಯ ವಿಮರ್ಶೆಯನ್ನು ಕೈಗೊಂಡು ಮಹತ್ವದ ಕೃತಿಗಳನ್ನು ನೀಡಿದರು. ಐಬಿಎಚ್ ಪ್ರಕಟಣ ಸಂಸ್ಥೆಗಾಗಿ ಅವರು ಸಂಪಾದಿಸಿದ `ಕವಿ ಕಾವ್ಯ ಪರಂಪರೆ~ ಕವಿರಾಜಮಾರ್ಗದಿಂದ ಮುದ್ದಣನವರೆಗಿನ ಕನ್ನಡ ಸಾಹಿತ್ಯವನ್ನು ಒಳಗೊಳ್ಳುತ್ತದೆ.

 

ಈ ಸಂಪುಟಗಳಿಗಾಗಿ ಅವರು ಅನುಸರಿಸಿದ ವಿಧಾನ ಸಂಪೂರ್ಣವಾಗಿ ಹೊಸತಾಗಿತ್ತು. ಪ್ರತಿಯೊಂದು ಕೃತಿಯ ಬಗೆಗೂ ಅವರು ವಿದ್ವಾಂಸರಿಂದ ವಿಸ್ತೃತ ಲೇಖನಗಳನ್ನು ಬರೆಯಿಸಿದರಲ್ಲದೆ ಅವುಗಳಿಗೆ ತಮ್ಮ ಪ್ರತಿಕ್ರಿಯೆಗಳನ್ನೂ ದಾಖಲಿಸಿದರು...ಮುದ್ದಣನ ನಂತರದ ಸಾಹಿತ್ಯವನ್ನೂ ವಿ.ಸೀ.ಯವರು ಆಗಾಗ ವಿಮರ್ಶಿಸುತ್ತಲೇ ಬಂದರು. ಸಾಹಿತ್ಯಾಲೋಕನ (2003)ದಲ್ಲಿ ಹೊಸಗನ್ನಡಕ್ಕೆ ಸಂಬಂಧಿಸಿದಂತೆ 70ಕ್ಕೂ ಹೆಚ್ಚು ಲೇಖನಗಳಿವೆ.ಪ್ರಾಚೀನ ಸಾಹಿತ್ಯ ಹಾಗೂ ವರ್ತಮಾನದ ಸಾಹಿತ್ಯ ಇವುಗಳ ವಿಮರ್ಶೆಯ ವಿಧಾನಗಳಲ್ಲಿ ವಿ.ಸೀ. ಅಂತರ ಕಲ್ಪಿಸುತ್ತಾರೆ: “(ಪ್ರಾಚೀನ) ಗ್ರಂಥಗಳ ವಿಮರ್ಶೆಯ ಸಮಯದಲ್ಲಿ ಆ ಕಾಲದ ರಸಿಕರ, ವಿದ್ವಜ್ಜನರ ದೃಷ್ಟಿ, ರೀತಿ, ಅಭಿರುಚಿಗಳು ಯಾವ ರೀತಿಯವಾಗಿದ್ದವು ಎಂಬುದನ್ನೂ ಮನಸ್ಸಿನಲ್ಲಿಟ್ಟುಕೊಂಡು ಅದರ ಪರೀಕ್ಷಣವನ್ನು ನಡೆಸಬೇಕು.

 

ಈಚಿನ ವಿಮರ್ಶೆಗಾರರ ಮೌಲ್ಯಗಳನ್ನೂ ತೂಕಗಳನ್ನೂ ಆ ಕಾರ್ಯಕ್ಕೆ ಪ್ರಯೋಗಿಸಿ ಅವುಗಳ ಯೋಗ್ಯತೆಗಳನ್ನು ನಿರ್ಣಯಿಸುವುದು ಅನ್ಯಾಯವಾಗಬಲ್ಲದು”. ಆದರೆ, ಈ ವಾದವನ್ನು ಒಪ್ಪುವುದು ಕಠಿಣ.ಯಾಕೆಂದರೆ, ಪ್ರಾಚೀನ ಸಾಹಿತ್ಯ ವರ್ತಮಾನಕ್ಕೆ ಪ್ರಸ್ತುತವಾಗಬೇಕಾದರೆ, ಅದನ್ನು ಇಂದಿನ ಮೌಲ್ಯ, ವ್ಯಾಖ್ಯಾನ ಪದ್ಧತಿಗಳಿಂದಲೇ ವಿಮರ್ಶಿಸಬೇಕಾಗುತ್ತದೆ. ಸ್ವತಃ ವಿ.ಸೀ.ಯವರೇ ರಾಮಾಯಣ, ಮಹಾಭಾರತಗಳಂಥ ಮಹಾಕಾವ್ಯಗಳ ಬಗ್ಗೆ ಬರೆಯುವಾಗ ಈ ಕ್ರಮವನ್ನು ಅನುಸರಿಸಲಿಲ್ಲ.

 

“ನಮ್ಮ ಸಾಹಿತ್ಯ ನಮ್ಮ ಕಾಲದ ಅರ್ಥವನ್ನು ನಿವೇದಿಸಲಿ, ಬೆಳೆಸಲಿ. ನಮ್ಮ ವಿಮರ್ಶೆ ನಮ್ಮ ಕಾಲದ ಬೆಲೆಗಳನ್ನು ರೂಢಿಸಿ, ಶುಚಿಗೊಳಿಸಿ ಸ್ಥಾಪಿಸಲಿ” ಎಂಬ ಅವರ ಮಾತು ಎಲ್ಲ ಕಾಲದ ಸಾಹಿತ್ಯಕ್ಕೂ ಅನ್ವಯವಾಗಬೇಕು. ವರ್ತಮಾನದ ಕಾಲದ ಕೃತಿಗಳ ಬಗ್ಗೆ ನಿರ್ಣಾಯಕ ವಿಮರ್ಶೆ ಸುಲಭವಲ್ಲ ಎಂಬ ಅವರ ಮಾತಿನಲ್ಲಿ ತಥ್ಯವಿದೆ.

 

ಆದರೆ ಇದು ಕಾವ್ಯಾವಲೋಕನ, ಪರಿಚಯಾತ್ಮಕ ಲೇಖನಗಳಿಗೆ ಸೀಮಿತವಾದರೆ ಲೇಸು ಎಂದು ಹೇಳಿದರೆ ವಿಮರ್ಶಕನಿಗೆ ಸಲ್ಲದ ರಿಯಾಯತಿಯನ್ನು ತೋರಿಸಿದಂತಾಗುತ್ತದೆಯೇನೋ.ಅವರೇ ಸೂಚಿಸುವಂತೆ ನಿಜವಾಗಿಯೂ ಹೊಸ ಕೃತಿಯೊಂದು ಹೊರಬಂದಾಗ ಅದು ವಿಮರ್ಶಕನಿಗೆ ಸವಾಲಾಗಬಲ್ಲುದು. ಆದರೆ ಕನ್ನಡ ವಿಮರ್ಶೆ ಇಂಥ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಿದುದರ ನಿದರ್ಶನಗಳು ಸಾಕಷ್ಟು ಪ್ರಮಾಣದಲ್ಲಿವೆ.

 

ಸಾಹಿತ್ಯಾಲೋಕನದಲ್ಲಿಯೇ ಇಂಥ ನಿದರ್ಶನಗಳನ್ನು ತೋರಿಸಬಹುದು... ವಿ.ಸೀ.ಯವರು ನಮ್ಮ ಯುಗದ ಅತ್ಯಂತ ಧೀಮಂತ, ಬಹುಶ್ರುತ ಹಾಗೂ ಪ್ರಜ್ಞಾವಂತ ಲೇಖಕರಲ್ಲಿ ಒಬ್ಬರಾಗಿದ್ದರು. ಕನ್ನಡಕ್ಕೆ ಅವರಿಂದಾದ ಸೇವೆ ಅಷ್ಟಿಷ್ಟಲ್ಲ. ಆದರೂ ಪರಂಪರೆಯಲ್ಲಿ ಅವರ ಸ್ಥಾನ ಅನಿರ್ದಿಷ್ಟವಾಗಿಯೇ ಉಳಿದಿದೆ.ಇದಕ್ಕೆ ಕಾರಣಗಳನ್ನು ಶೋಧಿಸುವಲ್ಲಿ ನನ್ನ ಶಕ್ತಿಯನ್ನು ವಿನಿಯೋಗಿಸುವ ಬದಲು ಇಂದಿಗೂ ಪ್ರಸ್ತುತವೆನಿಸುವ ಅವರ ಬರಹಗಳನ್ನು ಸಂಕಲಿಸಿ ಓದುಗರನ್ನು ಪ್ರಭಾವಿಸಲೆತ್ನಿಸುವುದು ನನಗೆ ಸೂಕ್ತವಾಗಿ ಕಂಡಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.