ಗುರುವಾರ , ಮಾರ್ಚ್ 4, 2021
30 °C

ಬಹೂಪಯೋಗಿ ಬಟಾಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಹೂಪಯೋಗಿ ಬಟಾಣಿ

ನಮ್ಮ ದೈನಂದಿನ ಆಹಾರದಲ್ಲಿ ಮೊಳಕೆ ಬರಿಸಿದ ಒಂದು ಹಿಡಿ ಹಸಿರು ಬಟಾಣಿ ಕಾಳುಗಳನ್ನು ಸೇರಿಸಿಕೊಳ್ಳುವುದರಿಂದ ಅತ್ಯಧಿಕವಾಗಿ ಪ್ರೊಟೀನ್(5. 42 ಗ್ರಾಂ) ದೇಹಕ್ಕೆ ಲಭಿಸುತ್ತದೆ. ರೋಗ ನಿರೋಧಕ ಶಕ್ತಿಯನ್ನು ವರ್ಧಿಸಬಲ್ಲ ಬಿ1, 2, 3, 6, 9 ಜೀವಸತ್ವಗಳಿರುವ ಅದು ದಿನವೂ ನಮ್ಮ ದೇಹವನ್ನು ಸೇರುವುದರಿಂದ 56 ವಿಧದ ಬ್ಯಾಕ್ಟೀರಿಯಾಗಳ ಸೋಂಕಿನ ವಿರುದ್ಧ ಸೆಣಸಲು ಸಮರ್ಥರಾಗುತ್ತೇವೆ ಎನ್ನುತ್ತಾರೆ ಆಹಾರ ತಜ್ಞರು. ಶಿಲಾಯುಗದಿಂದಲೂ ಮಾನವ ಅದನ್ನು ಆಹಾರವಾಗಿ ಬಳಸುತ್ತಿದ್ದುದಕ್ಕೆ ಪುರಾವೆಗಳಿವೆ. ಕ್ರಿಸ್ತಪೂರ್ವ 1700 ವರ್ಷಗಳ ಹಿಂದೆಯೇ ಗಂಗಾನದಿಯ ಜಲಾನಯನ ಪ್ರದೇಶದಲ್ಲಿ ಭಾರತೀಯರು ಅದರ ಕೃಷಿ ಮಾಡಿ ಆಹಾರಕ್ಕೆ ಬಳಸುತ್ತಿದ್ದರೆಂದೂ ಹೇಳಲಾಗುತ್ತಿದೆ.ಬಟಾಣಿ ಕಾಳುಗಳಲ್ಲಿ 81 ಕ್ಯಾಲೊರಿಗಳಿದ್ದು ಅದನ್ನು ಶಕ್ತಿದಾಯಕವೆಂದು ಸಾಬೀತುಪಡಿಸಿವೆ. ಆದರೆ ಅದರಿಂದಾಗಿ ದೇಹದ ತೂಕ ಏರುವುದಿಲ್ಲ. ಕೊಲೆಸ್ಟ್ರಾಲನ್ನು ನಿವಾರಿಸಬೇಕೆನ್ನುವವರಿಗೆ ಆಹಾರದಲ್ಲಿ ಸೇರುವ ಹಸಿ ಬಟಾಣಿ ಸಹಕರಿಸುತ್ತದೆ. ಕಾರ್ಬೊಹೈಡ್ರೇಟ್ಸ್ 14.50 ಗ್ರಾಂ, ಸಕ್ಕರೆ 5.7 ಗ್ರಾಂ, ಅದರಿಂದ ಸಿಗುತ್ತದೆ.ಮೇದಸ್ಸು, ನಾರು, ಸುಣ್ಣ, ಕಬ್ಬಿಣ, ಮೆಗ್ನೆಷಿಯಂ, ಮ್ಯಾಂಗನೀಸ್, ರಂಜಕ, ಪೊಟಾಷಿಯಂ, ಸೋಡಿಯಂ, ಸತು ಮುಂತಾದ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ನಿತ್ಯವೂ ದೇಹಕ್ಕೆ ಅಗತ್ಯವಾದ ಸಿ ಜೀವಸತ್ವದಲ್ಲಿ ಶೇ. 67ರಷ್ಟು ಕೊಡಬಲ್ಲ ಬೇಳೆಕಾಳು ಇನ್ನೊಂದಿಲ್ಲ. ದೇಹದ ಹಾನಿಕಾರಕ ಅಂಶಗಳನ್ನು ತ್ಯಾಜ್ಯವಾಗಿ ಹೊರದೂಡಲು ಅದು ಸಶಕ್ತವಾಗಿದೆ.ಪೋಲಿಕ್ ಆಮ್ಲವೂ ಶರೀರಕ್ಕೆ ಬೇಕಾದುದೇ. ಒಂದು ಹಿಡಿ ಬಟಾಣಿ ಆಹಾರವಾದರೆ ಶೇ. 16ರಷ್ಟು ಪೋಲಿಕ್ ಆಮ್ಲವನ್ನು ಪಡೆಯಬಹುದು. ಇದು ದೇಹದ ಡಿಎನ್‌ಎ ಸಂಶ್ಲೇಷಣೆಗೆ ಅಗತ್ಯವಾದುದು. ಗರ್ಭಿಣಿಯರು ದಿನವೂ ಬಟಾಣಿಯನ್ನು ಮೊಳಕೆ ಬರಿಸಿ ನಿಯಮಿತವಾಗಿ ತಿನ್ನುವುದರಿಂದ ಗರ್ಭಸ್ಥ ಶಿಶುಗಳ ನರವ್ಯೂಹ ನಳಿಕೆಗಳ ದೋಷ ನಿವಾರಣೆಗೆ ಸಹಕರಿಸುತ್ತದೆ. ಸಾಮಾನ್ಯವಾಗಿ ಗರ್ಭಿಣಿಯರನ್ನು ಕಾಡುವ ಮಲಬದ್ಧತೆ, ಅರುಚಿಗಳು ಬರುವುದೇ ಇಲ್ಲ.* ನಿಶಕ್ತಿಯಿಂದ ಬಳಲುವವರು ಮೊಳಕೆ ಬರಿಸಿದ ಹಸಿರು ಬಟಾಣಿ ಕಾಳುಗಳೊಂದಿಗೆ ನೆನೆಸಿ ಸಿಪ್ಪೆ ತೆಗೆದ ಬಾದಾಮಿ, ದಾಳಿಂಬೆಯ ಎಸಳುಗಳು, ಉಪ್ಪು, ಕಾಳುಮೆಣಸಿನ ಹುಡಿಗಳನ್ನು ಬೆರೆಸಿ ಬೆಳಗಿನ ಮೊದಲ ಆಹಾರವಾಗಿ ಸೇವಿಸುವುದು ಬೇಗನೆ ಶಕ್ತಿ ಮತ್ತು ಚೈತನ್ಯವನ್ನು ತುಂಬುತ್ತದೆ.* ಮೂತ್ರಪಿಂಡದ ತೊಂದರೆ ಮತ್ತು ರಕ್ತಹೀನತೆಯಿರುವವರು ಒಣಗಿದ ಬಟಾಣಿ ಕಾಳುಗಳಿಂದ ತಯಾರಿಸಿದ ಸೂಪ್ ಸೇವಿಸುವುದರಿಂದ ಸಮಸ್ಯೆಯ ನಿವಾರಣೆಗೆ ಸಾಕಷ್ಟು ನೆರವಾಗುತ್ತದೆ.* ಬಟಾಣಿ ಗಿಡದ ಎಳೆಯ ಚಿಗುರುಗಳನ್ನು ಆವಿಯಲ್ಲಿ ಬೇಯಿಸಿ ಊಟಕ್ಕೆ ಬಳಸುವುದರಿಂದ ಕಣ್ಣಿನ ದೋಷಗಳು, ಇರುಳು ಕುರುಡುತನ ನಿವಾರಣೆಗೆ ನೆರವಾಗುತ್ತದೆ.* ಉರಿಮೂತ್ರ, ಸರಿಯಾಗಿ ಮೂತ್ರ ವಿಸರ್ಜನೆಯಾಗದಿರುವುದು ಮುಂತಾದ ದೋಷಗಳ ಪರಿಹಾರಕ್ಕೆ ಒಣ ಬಟಾಣಿಯನ್ನು ಹುರಿದು ನುಣ್ಣಗೆ ಹುಡಿ ಮಾಡಿ ಕಷಾಯ ತಯಾರಿಸಿ ಹಾಲು ಮತ್ತು ಕಲ್ಲು ಸಕ್ಕರೆ ಸೇರಿಸಿ ಕುಡಿಯುವುದರಿಂದ ಪ್ರಯೋಜನವಿದೆ.* ಮೊಡವೆ ಮತ್ತಿತರ ಚರ್ಮದ ತೊಂದರೆಗಳಿಂದ ಪಾರಾಗಲು ಒಣ ಬಟಾಣಿಯ ಕಾಳು ಸಾಧಕವಾಗಿದೆ. ಅದನ್ನು ನುಣ್ಣಗೆ ಚೂರ್ಣ ಮಾಡಿ ಹಾಲಿನ ಕೆನೆಯಲ್ಲಿ ಬೆರೆಸಿ ಲೇಪಿಸುವುದರಿಂದ ಮೊಡವೆ, ಕಜ್ಜಿ ಮುಂತಾದ ಸಮಸ್ಯೆಗಳು ಶಮನವಾಗುತ್ತವೆ. ಸೂರ್ಯನ ಬಿಸಿಲಿನಿಂದಾಗಿ ಕಪ್ಪಾದ ಚರ್ಮ ಮತ್ತು ಕಣ್ಣುಗಳ ಬ್ಲಾಕ್‌ ಸರ್ಕಲ್‌ ನಿವಾರಣೆಗೆ ಮೊಸರು, ಅರಶಿನದ ಹುಡಿಗಳೊಂದಿಗೆ ಸಮಪಾಲು ಈ ಚೂರ್ಣವನ್ನು ಬೆರೆಸಿ ಲೇಪಿಸುವುದರಿಂದ ಕಾಂತಿಯುಕ್ತವಾದ ಚರ್ಮವನ್ನು ಹೊಂದಬಹುದು.* ನಿತ್ಯವೂ ಬಟಾಣಿ ಉಪಯೋಗಿಸುವುದರಿಂದ ಗರ್ಭಕೋಶ, ಶ್ವಾಸಕೋಶ ಮತ್ತು ಬಾಯಿಯ ಕುಹರದ ಕ್ಯಾನ್ಸರ್ ರೋಗದ ಜೀವಕೋಶಗಳ ಬೆಳವಣಿಗೆಯನ್ನು ಪರಿಣಾಮಕಾರಿಯಾಗಿ ತಡೆಯುತ್ತದೆ.* ಗರ್ಭಿಣಿಯರ ನಿಶಕ್ತಿ ನಿವಾರಣೆಗೆ ಮೊಳಕೆ ಬಂದ ಬಟಾಣಿ ಕಾಳುಗಳನ್ನು ನೀರು ಸೇರಿಸಿ ಮಿಕ್ಸಿಯಲ್ಲಿ ಅರೆದು ಸೋಸಿ ಜೇನುತುಪ್ಪ ಮತ್ತು ನಿಂಬೆರಸ ಬೆರೆಸಿ ಕುಡಿಯುವುದು ಶರೀರಕ್ಕೆ ಪುನಶ್ಚೇತನ ನೀಡುತ್ತದೆ.* ಮಕ್ಕಳಿಗೆ ಬೆಳಗಿನ ಉಪಾಹಾರಕ್ಕೆ ಬಟಾಣಿ ಕಾಳುಗಳನ್ನು ಮೊಳಕೆ ಬರಿಸಿ ಕೊಡುವುದು ಮೂಳೆ ಮತ್ತು ಹಲ್ಲುಗಳ ಬೆಳವಣಿಗೆಗೆ ನೆರವಾಗುತ್ತದೆ. ಬಟಾಣಿಯಲ್ಲಿರುವ ಸುಣ್ಣದ ಅಂಶ ಎಲುಬಿನ ನ್ಯೂನತೆಗಳನ್ನು ಸರಿಪಡಿಸುತ್ತದೆ.* ಬಟಾಣಿಯಲ್ಲಿರುವ ‘ಕೆ’ ಜೀವಸತ್ವದ ಪರಿಣಾಮವಾಗಿ ಹಿರಿಯರಿಗೂ ಮೂಳೆಗಳಿಗೆ ಸಂಬಂಧಿಸಿದ ನೋವು ಶಮನವಾಗುವುದು. ಮೆದುಳಿನ ನರಕೋಶಗಳಿಗೆ ಹಾನಿಯಾಗಿದ್ದರೆ ಅದು ಸರಿಪಡಿಸುತ್ತದೆ. ಅಲ್ಜೈಮರ್ಸ್ ರೋಗ ಬಾಧೆಯಿರುವವರಿಗೆ ಇದರ ಆಹಾರ ಅತ್ಯಂತ ಉಪಯುಕ್ತವಾಗಿದೆ.* ಚಳಿಗಾಲದಲ್ಲಿ ಬಟಾಣಿ ಸೇರಿರುವ ಆಹಾರಗಳನ್ನು ಹೆಚ್ಚು ತಿನ್ನುವುದರಿಂದ ಚರ್ಮ ಬಿರಿಯುವುದು, ರಕ್ತಹೀನತೆಯಂತಹ ದೋಷಗಳು ದೂರವಾಗುತ್ತವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.