ಭಾನುವಾರ, ಮೇ 16, 2021
22 °C
ನಗರ ಸಂಚಾರ

ಬಾಲಮಂದಿರದ ಮಕ್ಕಳಿಗೆ ವಿಶಿಷ್ಟ ತರಬೇತಿ

ಸಿದ್ದಯ್ಯ ಹಿರೇಮಠ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಲಮಂದಿರದ ಮಕ್ಕಳಿಗೆ ವಿಶಿಷ್ಟ ತರಬೇತಿ

ಬಳ್ಳಾರಿ: ಅಲ್ಲಿರುವ ನೂರಾರು ಮಕ್ಕಳಲ್ಲಿ ಅನೇಕರು ಅನಾಥರು. ಇನ್ನು ಕೆಲವರು ಬಡತನದ ಹಿನ್ನೆಲೆಯವರು. ಮತ್ತೆ ಕೆಲವರು ತಮಗರಿವಿಲ್ಲದಂತೆಯೇ ಅಪರಾಧ ಚಟುವಟಿಕೆಗಳಲ್ಲಿ ಭಾಗವಹಿಸಿದವರು. ಅಂಥ ಮಕ್ಕಳಿಗೆ ಶಿಕ್ಷಣ ನೀಡಿ, ಉತ್ತಮ  ಭವಿಷ್ಯ ರೂಪಿಸಲೆಂದೇ ಇರುವ ಬಾಲಮಂದಿರದಲ್ಲಿ 10 ದಿನಗಳ ಕಾಲ ವಿಶಿಷ್ಟ ತರಬೇತಿ ನೀಡಲಾಯಿತು.ಪ್ರತಿಭೆ ಎಲ್ಲ ಮಕ್ಕಳಲ್ಲೂ ಇರುತ್ತದೆ. ಆದರೆ, ಆ ಪ್ರತಿಭೆಯನ್ನು ಗುರುತಿಸಿ, ಸೂಕ್ತ ಪ್ರೋತ್ಸಾಹ ನೀಡುವ ಮೂಲಕ ಉತ್ತಮ ವೇದಿಕೆ ಒದಗಿಸುವುದು ಪ್ರತಿಯೊಬ್ಬರ ಕರ್ತವ್ಯ. ಈ ಹಿನ್ನೆಲೆಯಲ್ಲೇ ಸರ್ಕಾರಿ ಬಾಲಮಂದಿರದಲ್ಲಿನ ಬಾಲಕಿಯರು ಮತ್ತು ಬಾಲಕರಿಗೆ ರಾಜ್ಯ ಬಾಲಭವನ ಸೊಸೈಟಿ ಹಾಗೂ ಶಿಶು ಅಬಿವೃದ್ಧಿ ಯೋಜನೆ ಅಡಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸತತ 10 ದಿನಗಳ ಕಾಲ ವಿಶೇಷ ಬೇಸಿಗೆ ಶಿಬಿರ ಏರ್ಪಡಿಸಿ ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸಿತು.ಉತ್ತಮ ಸ್ಥಿತಿಯಲ್ಲಿರುವ ಪಾಲಕರು, ಕಲಿಕೆಗೆ ಅಗತ್ಯವಿರುವ ಎಲ್ಲ ಸೌಲಭ್ಯ ಇದ್ದೂ ಕೆಲವು ಮಕ್ಕಳು ಓದಿನಲ್ಲೂ, ಪಠ್ಯೇತರ ಚಟುವಟಿಕೆಯಲ್ಲೂ ಹಿಂದಿರುತ್ತಾರೆ. ಪಾಲಕರ ನಿರ್ಲಕ್ಷ್ಯ ಹಾಗೂ ಪ್ರೋತ್ಸಾಹದ ಕೊರತೆ ಅದಕ್ಕೆ ಕಾರಣ. ಆದರೆ, ಪಾಲಕರೇ ಇಲ್ಲದ, ಇದ್ದರೂ ಬಡತನದ ಬೇಗೆಯಲ್ಲಿ ನರಳುತ್ತಿರುವುದರಿಂದ ಇಂತಹ ಮಕ್ಕಳ ಪ್ರತಿಭೆಯನ್ನು ಪೋಷಿಸುವ ಕೆಲಸ ಆಗದೆ ಅನೇಕ ಮಕ್ಕಳ ಭವಿಷ್ಯ ಮಸಕಾಗುತ್ತದೆ. ಹಾಗಾಗದಿರಲಿ ಎಂಬ ಕಾರಣದಿಂದಲೇ ಇಂತಹ ಶಿಬಿರ ಏರ್ಪಡಿಸಿ, ಮಕ್ಕಳಿಗೆ ಸೂಕ್ತ ತರಬೇತಿ ನೀಡಲಾಯಿತು.ನಗರದ ಮಹರ್ಷಿ ವಾಲ್ಮೀಕಿ ವೃತ್ತದ ಬಳಿಯಿರುವ ಸರ್ಕಾರಿ ಬಾಲಕಿಯರ ಬಾಲಮಂದಿರ, ಕಂಟೋನ್‌ಮೆಂಟ್ ಪ್ರದೇಶದಲ್ಲಿರುವ ಬಾಲಕರ ಬಾಲಮಂದಿರದಲ್ಲಿ ಅಭ್ಯಾಸ ಮಾಡುತ್ತಿರುವ ಆಯ್ದ ತಲಾ 25 ಜನ ವಿದ್ಯಾರ್ಥಿಗಳಿಗೆ ರಂಗ ತರಬೇತಿ, ಚಿತ್ರಕಲೆ, ಕರಕುಶಲ ಕಲೆ, ಯೋಗ, ಪರಿಸರ ವೀಕ್ಷಣೆ, ಸಮೂಹ ನೃತ್ಯ, ಜನಪದ ನೃತ್ಯ, ಸಮೂಹ ಗಾಯನ ಕುರಿತು ಸತತ 10 ದಿನ ತರಬೇತಿ ನೀಡಲಾಯಿತು.ಜಾತಿ, ಮತ, ಪಂಥಗಳ ಬೇಧವಿಲ್ಲದೆ ಅಭ್ಯಾಸ ಮಾಡುವ ಅನಾಥ ಹಾಗೂ ಬಡ ಮಕ್ಕಳು ಬಾಲಪರಾಧಿಗಳು ವಿಶೇಷ ತರಬೇತುದಾರರಿಂದ ದೇಸೀ ಸಂಸ್ಕೃತಿ, ಪರಂಪರೆ, ನಟನೆ, ವಸ್ತ್ರವಿನ್ಯಾಸ, ಭಾವನೆಗಳ ಅಭಿವ್ಯಕ್ತಿ, ವಾಕ್ಚಾತುರ್ಯ ಕುರಿತು ಮಾಹಿತಿ ಪಡೆದರಲ್ಲದೆ, ಕಬಡ್ಡಿ, ಚಿಣ್ಣಿ-ದಾಂಡು, ಲಗೋರಿ, ಕಣ್ಣಾಮುಚ್ಚಾಲೆ ಆಟವನ್ನೂ ಆಡಿ ನಲಿದರು.ಚಿತ್ರಕಲೆ, ಕರಕುಶಲ ತರಬೇತಿ ಮೂಲಕ ಜೇಡಿಮಣ್ಣಿನ ಕಲಾಕೃತಿ ತಯಾರಿಸುವುದು, ಮಣ್ಣಿಗೆ ವಿವಿಧ ರೂಪ ನೀಡುವುದು, ಕಾಗದದಲ್ಲಿ ವಿವಿಧ ಆಕಾರದ ಕಲಾಕೃತಿ ತಯಾರಿಸುವುದು, ವಚನ ಸಾಹಿತ್ಯ ಹಾಗೂ ವಚನ ಗಾಯನ, ತತ್ವಪದ, ಭಾವಗೀತೆ, ಕವಿಗಳ ಉಕ್ತಿ ಕುರಿತು ಶಿಬಿರದಲ್ಲಿ ತರಬೇತಿ ನೀಡಲಾಯಿತು.ಸಮಾಜದಲ್ಲಿ ನಿರ್ಲಕ್ಷಿತ ಮಕ್ಕಳಲ್ಲಿ ಉತ್ತಮ ಹವ್ಯಾಸ ರೂಢಿಸುವುದಲ್ಲದೆ, ಭಾವನಾತ್ಮಕ ಚಿಂತನೆ, ನೈತಿಕತೆ ಅಳವಡಿಕೆ ಕುರಿತು ಮಕ್ಕಳಿಗೆ ರಂಗ ತರಬೇತಿ ನೀಡುವ ಮೂಲಕ ಹೇಳಿಕೊಡಲಾಯಿತು ಎಂದು ರಂಗ ನಿರ್ದೇಶಕ ಅಣ್ಣಾಜಿ ಕೃಷ್ಣಾರೆಡ್ಡಿ `ಪ್ರಜಾವಾಣಿ' ಗೆ ತಿಳಿಸಿದರು.ಸಮಾಜದ ಮುಖ್ಯವಾಹಿನಿಯಲ್ಲಿರುವ ಕುಟುಂಬಗಳ ಮಕ್ಕಳಿಗೆ ನಿರಂತರವಾಗಿ ಇಂತಹ ತರಬೇತಿಗಳು ಶಾಲೆಗಳಲ್ಲೇ ಲಭಿಸುತ್ತವೆ. ಆದರೆ, ಮುಖ್ಯವಾಹಿನಿಯಿಂದ ಹೊರಗುಳಿದಿರುವ ಮಕ್ಕಳನ್ನು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸುವ ಈ ಪ್ರಕ್ರಿಯೆಯು ರಂತರವಾಗಿ ನಡೆದಲ್ಲಿ ನಿರ್ಲಕ್ಷಿತ ಮಕ್ಕಳೂ ಎಲ್ಲರಂತೆ ಸಾಧನೆ ಮಾಡಲು ನೆರವಾಗುತ್ತದೆ ಎಂದು ಚಿತ್ರ ಕಲಾವಿದ, ಸಂಪನ್ಮೂಲ ವ್ಯಕ್ತಿ ಮಂಜುನಾಥ ಗೋವಿಂದವಾಡ, ಟಿ.ವೆಂಕಪ್ಪ ಹೇಳಿದರು.ವಿಶೇಷ ಮಕ್ಕಳಲ್ಲಿ ಹುದುಗಿರುವ ಪ್ರತಿಭೆಯನ್ನು ಗುರುತಿಸಲು ಈ ರೀತಿಯ ತರಬೇತಿ ಶಿಬಿರಗಳನ್ನು ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಹಮ್ಮಿಕೊಳ್ಳಲಾಗಿತ್ತು. ಬೇಸಿಗೆಯ ಜರಯಲ್ಲಿ ಆಸಕ್ತ ಮಕ್ಕಳು ಲವಲವಿಕೆಯಿಂದ ವಿಶೇಷ ಕಾರ್ಯ ಚಟುವಟಿಕೆಯಲ್ಲಿ ತೊಡಗುವ ಮೂಲಕ ತರಬೇತಿಯನ್ನು ಆಸ್ವಾದಿಸಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಬಿ.ಎಸ್. ಕಲಾದಗಿ, ಶಿಶು ಅಭಿವೃದ್ಧಿ ಅಧಿಕಾರಿ ಕೆ.ಜಿ. ಕೃಷ್ಣಮ್ಮ, ಬಾಲಕಿಯರ ಬಾಲಮಂದಿರದ ಅಧೀಕ್ಷಕಿ ಕಲಾವತಿ ವಿವರಿಸಿದರು.ತರಬೇತಿ ನಂತರ ಮಕ್ಕಳು `ಕಿಸಾ ಗೌತಮಿ' ಹಾಗೂ `ಸಾವಿಲ್ಲದ ಸಂಪತ್ತು' ನಾಟಕ ಪ್ರದರ್ಶಿಸಿ ಗಮನ ಸೆಳೆದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.