ಮಂಗಳವಾರ, ಮೇ 24, 2022
24 °C

ಬಿಜೆಪಿ ಜನಪರ ದೂರದೃಷ್ಟಿಯ ಸರ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುನಗುಂದ: ಕಳೆದ ಅರವತ್ತು ವರ್ಷಗಳಲ್ಲಿ ಮಾಡದ ಅಭಿವೃದ್ಧಿ ಹಾಗೂ ಆಡಳಿತ ಸಾಧನೆಯನ್ನು ಬಿಜೆಪಿ ಸರ್ಕಾರ ಕೇವಲ ನಾಲ್ಕು ವರ್ಷಗಳಲ್ಲಿ ಮಾಡಿ ಜನಬೆಂಬಲವನ್ನು ಹೊಂದಿದೆ. ಜನರು ಅಭಿವೃದ್ಧಿಯನ್ನು ಬಯಸುವುದರೊಂದಿಗೆ ಅದರ ಸರ್ಕಾರಿ ಸೌಲಭ್ಯಗಳು ಮತ್ತು ಅನುದಾನವನ್ನು ಸದೂಪಯೋಗ ಮಾಡಿಕೊಳ್ಳಬೇಕು ಎಂದು ಸಚಿವ ಗೋವಿಂದ ಕಾರಜೋಳ ಹೇಳಿದರು.ಅವರು ನಗರದ ಬಸ್ ನಿಲ್ದಾಣ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ನಗರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಿಲಾನ್ಯಾಸ ಹಾಗೂ ವಿವಿಧ ಕಟ್ಟಡಗಳ ಉದ್ಘಾಟನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಸಧ್ಯದ ದೂರದೃಷ್ಟಿಯ ಬಿಜೆಪಿ ಸರ್ಕಾರ ಮತ್ತು ಹಿಂದಿದ್ದ ಇತರ ಸರ್ಕಾರಗಳ ಅಭಿವೃದ್ಧಿ ಮತ್ತು ಆಡಳಿತವನ್ನು ಜನರು ತುಲನಾತ್ಮಕ ಪರಾಮರ್ಶಿಸಬೇಕು. ರೂ.500 ಕೋಟಿ ಅನುದಾನದ ಮರೊಳ ಏತ ನೀರಾವರಿ ಹಾಗೂ ಕೋಟ್ಯಾಂತರ ಅನುದಾನವನ್ನು ಸದ್ಬಳಿಕೆ ಮಾಡಿದ ಶಾಸಕ ದೊಡ್ಡನಗೌಡರಿಂದ ಮತಕ್ಷೇತ್ರದ ಜನತೆ ಹೆಚ್ಚಿನದನ್ನು ಪಡೆಯಿರಿ ಎಂದು ಸಲಹೆ ನೀಡಿದರು.ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಮಲ್ಲಿಕಾರ್ಜುನ ಸಾಹುಕಾರ, ವಾಯುವ್ಯ ಸಾರಿಗೆ ವಿಭಾಗ ಕಳೆದ ನಾಲ್ಕು ವರ್ಷಗಳಲ್ಲಿ ಗಮನಾರ್ಹ ಸಾಧನೆ ಮಾಡಿದೆ. ದಕ್ಷತೆ, ಕಾರ್ಮಿಕರ ಕಲ್ಯಾಣ ಮತ್ತು ಹಾನಿಯ ಕಡಿತದೊಂದಿಗೆ ಆಧುನಿಕತೆಯ ಸ್ಪರ್ಷವನ್ನು ಪಡೆದಿದೆ ಎಂದರು.ಸಂಸದ ಪಿ.ಸಿ.ಗದ್ದಿಗೌಡರ, ಅಭಿವೃದ್ಧಿಯ ಮನ್ವಂತರವನ್ನು ತಂದ ಬಿಜೆಪಿ ಸರ್ಕಾರ ಜನರ ಆಶಯಗಳಿಗೆ ಸದಾ ಸ್ಪಂದಿಸಿದೆ. ಬಹುನಿರೀಕ್ಷಿತ ಕುಡಚಿ-ರಾಯಚೂರು ಮತ್ತು ಆಲಮಟ್ಟಿ-ಕೊಪ್ಪಳ ರೈಲು ಮಾರ್ಗದ ಸಮೀಕ್ಷಾ ಕಾರ್ಯ ಪ್ರಗತಿಯಲ್ಲಿದೆ. ಬರುವ ದಿನಗಳಲ್ಲಿ ಜನರಿಗೆ ಉಪಯೋಗವಾಗಲು ಸಂಬಂಧಿಸಿದ ಸಚಿವರಿಗೆ ಒತ್ತಾಯಿಸಲಾಗುವುದು. ಅದರಂತೆ ಹೆದ್ದಾರಿ ವಿಸ್ತರಣೆಯಿಂದಾಗುವ ತೊಂದರೆ ನೀಗಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.ಅಧ್ಯಕ್ಷತೆ ವಹಿಸಿದ್ದ ಶಾಸಕ ದೊಡ್ಡನಗೌಡ ಪಾಟೀಲ, ತಮ್ಮ ಅವಧಿಯಲ್ಲಿ ಮತಕ್ಷೇತ್ರದ ಗಮನಾರ್ಹ ಅಭಿವೃದ್ಧಿಯಾಗಿದೆ. ಜನರ ಮೂಲ ಸೌಲಭ್ಯಗಳ ನೀಡಿಕೆ ಮತ್ತು ಅನುದಾನದ ಸದ್ಬಳಿಕೆಯಾಗಿದೆ ಎನ್ನುತ್ತ ತಮ್ಮ ಸಾಧನೆಯ ಪಟ್ಟಿ ಮಾಡಿದರು. ಕಾರ್ಯಕ್ರಮಕ್ಕೂ ಮುನ್ನ ರೂ. 2 ಕೋಟಿ ಅನುದಾನದ ಬಸ್ ನಿಲ್ದಾಣ, ಒಳಚರಂಡಿ ಯೋಜನೆ, ಕೃಷಿ ಇಲಾಖೆ ಕಚೇರಿ ಮತ್ತು ಕಾಲೇಜು ವಿದ್ಯಾರ್ಥಿ ವಸತಿ ನಿಲಯ ಕಟ್ಟಡಕ್ಕೆ ಅಡಿಗಲ್ಲು ಮತ್ತು ಪಿ.ಡಬ್ಲ್ಯುಡಿ ಕಚೇರಿ, ನಿರೀಕ್ಷಣಾ ಮಂದಿರ, ತೋಟಗಾರಿಕೆ ಸಹಾಯಕ ನಿರ್ದೇಶಕರ ಕಚೇರಿ, ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವಸತಿ ನಿಲಯ, ಬಸ್‌ಶೆಲ್ಟರ್, ಪಟ್ಟಣ ಪಂಚಾಯತ ಸಂತೆ ಪ್ರಾಂಗಣ  ಮತ್ತು ವಾಣಿಜ್ಯ ಮಳಿಗೆಗಳ ಸಂಕೀರ್ಣ ಉದ್ಘಾಟಿಸಲಾಯಿತು.ತಾ.ಪಂ. ಅಧ್ಯಕ್ಷೆ ಶರಣಮ್ಮ ಮಾಟೂರ, ಪ.ಪಂ. ಉಪಾಧ್ಯಕ್ಷೆ ಅಕ್ಕಮಹಾದೇವಿ ಹಂಡಿ, ಜಿ.ಪಂ. ಸದಸ್ಯ ಈರಣ್ಣ ಬಂಡಿ, ವಾಯುವ್ಯ ಕೆಎಸ್‌ಆರ್‌ಟಿಸಿ ಎಂಡಿ ಹೇಮರಾಜ್, ಗುತ್ತಿಗೆದಾರ ಎಸ್.ಆರ್. ನವಲಿಹಿರೇಮಠ, ಪ್ರಗತಿಪರ ರೈತ ಜಿ.ಜಿ. ಪಾಟೀಲ, ಪ.ಪಂ. ಸದಸ್ಯ  ಉಪಸ್ಥಿತರಿದ್ದರು. ಪ.ಪಂ. ಅಧ್ಯಕ್ಷ ಬಸಪ್ಪ ಆಲೂರ ಸ್ವಾಗತಿಸಿದರು. ಮಹಾಂತೇಶ ತೆಗ್ಗಿನಮಠ ವಂದಿಸಿದರು. ನಾಗರಾಜ ನಾಡಗೌಡ ನಿರೂಪಿಸಿದರು. ಶೃತಿ ಅಂಗಡಿ ಪ್ರಾರ್ಥನೆ ಹಾಗೂ ವಿಜಯ ಗದ್ದನಕೇರಿ ರೈತಗೀತೆ ಹಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.