ಮಂಗಳವಾರ, ಮೇ 17, 2022
24 °C

ಬೀಜ ಸ್ವಾವಲಂಬನೆಯಿಂದ ಪ್ರಗತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುರಪುರ: ಉತ್ತಮ ಗುಣಮಟ್ಟದ ಬೀಜಗಳನ್ನು ಉತ್ಪಾದಿಸುವುದನ್ನು ಕಲಿತುಕೊಳ್ಳಬೇಕು. ಬೀಜಗಳ ಬಗ್ಗೆ ಇನ್ನೊಬ್ಬರ ಮೇಲೆ ಅವಲಂಬಿತರಾಗಿರಬಾರದು. ತಮ್ಮ ಜಮೀನಿನಲ್ಲೆ ಸ್ವತಃ ಬೀಜೋತ್ಪಾದನೆ ಮಾಡಿಕೊಳ್ಳಲು ಕೃಷಿ ಇಲಾಖೆ ಅಗತ್ಯ ಮಾಹಿತಿ ನೀಡುತ್ತದೆ. ಬೀಜ ಸ್ವಾವಲಂಬನೆಯಿಂದ ರೈತರ ಪ್ರಗತಿ ಆಗುತ್ತದೆ ಎಂದು ರಾಯಚೂರು ಕೃಷಿ ವಿಶ್ವವಿದ್ಯಾಲಯದ ಬೀಜ ವಿಜ್ಞಾನ ಮತ್ತು ತಾಂತ್ರಿಕತೆ ವಿಭಾಗದ ಮುಖ್ಯಸ್ಥ ಡಾ. ಎಸ್. ಎನ್. ವಾಸುದೇವನ್ ರೈತರಿಗೆ ಸಲಹೆ ನೀಡಿದರು.ಕೃಷಿ ವಿಶ್ವವಿದ್ಯಾಲಯ ರಾಯಚೂರು, ಕೃಷಿ ಸಂಶೋಧನಾ ಕೇಂದ್ರ ಕವಡಿಮಟ್ಟಿಯಲ್ಲಿ `ಬೀಜ ಮೇಳ-2011~ರ ಅಂಗವಾಗಿ ಹತ್ತಿ ಮತ್ತು ತೊಗರಿ ಬೆಳೆಯ ಸಮಗ್ರ ಬೇಸಾಯ ಪದ್ಧತಿಯ ಬಗ್ಗೆ ರೈತರಿಗೆ ಏರ್ಪಡಿಸಿದ್ದ ತರಬೇತಿ ಶಿಬಿರದಲ್ಲಿ ಅವರು ಮಾತನಾಡಿದರು.ಶಿಬಿರ ಉದ್ಘಾಟಿಸಿದ ಪ್ರಗತಿಪರ ರೈತ ವಿರೂಪಾಕ್ಷಪ್ಪಗೌಡ ಜಾಲಹಳ್ಳಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಸಾವಯವ ಕೃಷಿ ಅಳವಡಿಸಿಕೊಳ್ಳುವುದು ಉತ್ತಮ. ಸಾವಯವ ಕೃಷಿಯಲ್ಲಿ ತಾವು ಉತ್ತಮ ಸಾಧನೆ ಮಾಡಿರುವುದಾಗಿ ಹೇಳಿಕೊಂಡ ಅವರು ಈ ಪದ್ಧತಿಯಿಂದ ಖರ್ಚು ಕಡಿಮೆಯಾಗುವುದಲ್ಲದೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ನುಡಿದರು.ಅಧ್ಯಕ್ಷತೆ ವಹಿಸಿದ್ದ ಕೃಷಿ ವಿಶ್ವವಿದ್ಯಾಲಯ ರಾಯಚೂರಿನ ಮುಖ್ಯ ಕೃಷಿ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ. ಐ. ಶಂಕರೇಗೌಡ, ಕೃಷಿ ವಿಶ್ವವಿದ್ಯಾಲಯಗಳು ಮತ್ತು ಕೃಷಿ ಶಂಶೋಧನಾ ಕೇಂದ್ರಗಳು ರೈತರಿಗೆ ಉಪಯುಕ್ತ ಮಾಹಿತಿ ನೀಡುತ್ತಿವೆ. ರೈತರು ಕೇಂದ್ರಗಳಿಗೆ ಭೇಟಿ ನೀಡಿ ತಮ್ಮ ಸಮಸ್ಯೆಗಳನ್ನು ಅಲ್ಲಿನ ವಿಜ್ಞಾನಿಗಳೊಂದಿಗೆ ಚರ್ಚಿಸಿ ಕೃಷಿಯಲ್ಲಿ ಗಣನೀಯ ಸಾಧನೆ ಮಾಡಬೇಕೆಂದು ಕರೆ ನೀಡಿದರು.ಸಾಯವಯ ಕೃಷಿಕ ಚನ್ನಮಲ್ಲಪ್ಪ ಪಾಟೀಲ ರೊಟ್ನಡಗಿ ಮಾತನಾಡಿದರು. ಸಸ್ಯರೋಗ ತಜ್ಞ ಪಿ. ಪಾಲಯ್ಯ ಹತ್ತಿ ಮತ್ತು ತೊಗರಿ ಬೆಳೆಗಳಲ್ಲಿ ಸಮಗ್ರ ರೋಗ ನಿಯಂತ್ರಣ ಮತ್ತು ರೋಗ ನಿರ್ವಹಣಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಬೇಸಾಯ ತಜ್ಞೆ ಬಿ. ಎನ್. ಶ್ವೇತಾ ಸಮಗ್ರ ಬೇಸಾಯ ಪದ್ಧತಿಯ ಬಗ್ಗೆ ವಿವರಿಸಿದರು.ಸಮಗ್ರ ಕೀಟ ಹತೋಟಿಯ ಬಗ್ಗೆ ಮಾಹಿತಿ ನೀಡಿದ ಸಸ್ಯ ಕೀಟ ತಜ್ಞ ರಾಘವೇಂದ್ರ ಎಲಿಗಾರ್, ಸಮಗ್ರ ಕೃಷಿ ಯೋಜನೆಯಡಿಯಲ್ಲಿ ಜೋಳ ಮತ್ತು ಶೇಂಗಾ ಬೆಳೆಯ ಪ್ರಾತ್ಯಕ್ಷಿಕೆಗೆ ರೈತರಿಗೆ ಬೇಕಾಗುವ ಪರಿಕರಗಳನ್ನು ಕೇಂದ್ರವು ಒದಗಿಸುತ್ತದೆ ಎಂದು ತಿಳಿಸಿದರು.ಕೇಂದ್ರದ ಮುಖ್ಯಸ್ಥ ಡಾ. ವೈ. ಪಂಪಣ್ಣ ಸ್ವಾಗತಿಸಿದರು. ಕ್ಷೇತ್ರ ಅಧೀಕ್ಷಕಿ ಟಿ. ಎಂ. ಸೌಮ್ಯ ನಿರೂಪಿಸಿ ವಂದಿಸಿದರು.ಸುತ್ತಮುತ್ತಲಿನ ಗ್ರಾಮಗಳಾದ ಸುಗೂರ, ಕವಡಿಮಟ್ಟಿ, ಕರ್ನಾಳ, ಶೆಳ್ಳಗಿ, ಮುಷ್ಠಳ್ಳಿ ಇತರ ಗ್ರಾಮಗಳಿಂದ ನೂರಾರು ರೈತರು ಆಗಮಿಸಿ ತರಬೇತಿಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.