ಸೋಮವಾರ, ಜೂನ್ 21, 2021
29 °C

ಬೆಂಕಿಯಿಂದ ಕಾಡು ಕಾಪಾಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೇಸಿಗೆ ಆರಂಭವಾಗುತ್ತಲೇ ಕಾಳ್ಗಿಚ್ಚು ತನ್ನ ಕೆನ್ನಾಲಿಗೆ ಚಾಚಿ, ಅಮೂಲ್ಯ ಅರಣ್ಯ ಸಂಪತ್ತನ್ನು  ನಾಶಗೊಳಿಸಿದೆ.  ನಾಗರ­ಹೊಳೆ, ಬಂಡೀಪುರ ರಾಷ್ಟ್ರೀಯ ಉದ್ಯಾನ ಹಾಗೂ ಬಿಳಿಗಿರಿರಂಗನ ಬೆಟ್ಟ ಹುಲಿ ಅಭಯಾರಣ್ಯ ವ್ಯಾಪ್ತಿಯಲ್ಲಿ 750 ಹೆಕ್ಟೇರ್‌ಗೂ ಹೆಚ್ಚು ಅರಣ್ಯ ಕಾಳ್ಗಿಚ್ಚಿ­-ನಿಂದ ಸುಟ್ಟು ಬೂದಿಯಾಗಿರುವುದು ಆತಂಕದ ಸಂಗತಿ.ಬೆಲೆ­ಬಾಳುವ ಮರಗಿಡಗಳು ಭಸ್ಮವಾಗಿವೆ. ಅಮೂಲ್ಯ ಪ್ರಾಣಿ–ಪಕ್ಷಿಗಳು ಜೀವ ತೆತ್ತಿವೆ. ಈ ಹಾನಿ ತುಂಬಲಾಗದ್ದು. ಕಾಳ್ಗಿಚ್ಚಿಗೆ  ಕಾರಣಗಳು ಹಲವಾರು. ಅರಣ್ಯ­ದಲ್ಲಿಯೇ ವಸತಿ ಪ್ರದೇಶಗಳಿರುವುದರಿಂದ ಒಣ ಎಲೆಗಳಿಗೆ ಆಕಸ್ಮಿಕ­ವಾಗಿ ತಗಲುವ ಬೆಂಕಿ ಕಾಳ್ಗಿಚ್ಚಾಗಿ ವ್ಯಾಪಿಸುವ ಸಾಧ್ಯತೆ ಇದೆ.ಅರಣ್ಯ ಸಿಬ್ಬಂದಿಯ ಮೇಲಿನ ಸಿಟ್ಟಿಗೆ ಇಲ್ಲವೇ ದುರುದ್ದೇಶದಿಂದ ಬೆಂಕಿ ಹಚ್ಚುವ ಕಿಡಿಗೇಡಿ­ಗಳೂ ಇಲ್ಲದೇ ಇಲ್ಲ. ಕಾಡಲ್ಲಿ ರಾತ್ರಿ ಹೊತ್ತು ಸಾಗುವವರು ಸಹಜವಾಗಿ ಸೇದಿ ಬಿಸಾಡುವ ಬೀಡಿ, ಸಿಗರೇಟು ತುಂಡುಗಳೂ ಬೆಂಕಿಯ ಅನಾಹುತಕ್ಕೆ ಎಡೆಮಾಡಿಕೊಡಬಲ್ಲವು.  ರಾಜ್ಯದಲ್ಲಿ ಅರಣ್ಯ ಪ್ರದೇಶ, ಬೇರೆ ಬೇರೆ ಕಾರಣಗಳಿಂದ ಕ್ರಮೇಣ ಕಡಿಮೆ ಆಗುತ್ತಿದೆ.ಇರುವ ಅರಣ್ಯವನ್ನು ಕಳ್ಳ ಬೇಟೆಗಾರರು, ಮರಗಳ್ಳರು ಮತ್ತು ಅತಿಕ್ರಮಣಕಾರರಿಂದ ರಕ್ಷಿಸಲು ಅಗತ್ಯ ಇರುವಷ್ಟು ಕಾವಲು ಸಿಬ್ಬಂದಿ ಇಲ್ಲ. ಕಾಳ್ಗಿಚ್ಚಿನಂತಹ ಅವಘಡಗಳ ನಿಯಂತ್ರಣ ಸಂದರ್ಭದಲ್ಲಿ ಸಿಬ್ಬಂದಿಯ ಕೊರತೆ ಇಲಾಖೆಗೆ ಅನುಭವಕ್ಕೆ ಬರುತ್ತದೆ. ಅದರಿಂದ ಪಾರಾದ ಬಳಿಕ ಸಿಬ್ಬಂದಿ ನೇಮಕದ ಪ್ರಶ್ನೆ ಮರೆತೇ ಹೋಗುತ್ತದೆ.ಕಾಳ್ಗಿಚ್ಚು ಪಿಡುಗಾಗಿ ಪರಿಣಮಿಸಿದೆ.  ಬೇಸಿಗೆ ಎದುರಾಗುತ್ತಲೇ ಎಲ್ಲೋ ಒಂದು ಕಡೆ ಕಾಡಿಗೆ ಬೆಂಕಿ ಬಿದ್ದೇ ಬೀಳುತ್ತದೆ ಎನ್ನುವ ಮಟ್ಟಿಗೆ ಅದು ಮರುಕಳಿಸುತ್ತಲೇ ಇದೆ. ಬೆಂಕಿ ಬಿದ್ದಾಗ, ಅರಣ್ಯ ಇಲಾಖೆಯು ಕಾಡಂಚಿನ ಜನ­ರತ್ತಲೋ ಬುಡಕಟ್ಟು ಸಮುದಾಯಗಳ ಕಡೆಗೋ ಬೆರಳು ತೋರಿ­ಸುತ್ತದೆ. ತನಿಖೆ, ವರದಿ ಅಂತ ರೂಢಿಗತ ಕಸರತ್ತೂ  ನಡೆಯುತ್ತದೆ. ಆದರೆ ಬೆಂಕಿ ಅನಾಹುತ ತಪ್ಪಿಸಲು ನಡೆದಿರುವ ಪ್ರಯತ್ನಗಳು ಪರಿಣಾಮಕಾರಿ ಆಗಿಲ್ಲ ಎಂಬುದಕ್ಕೆ ಪದೇ ಪದೇ ಮರುಕಳಿಸುವ ಕಾಳ್ಗಿಚ್ಚು ಪ್ರಕರಣಗಳೇ ನಿದರ್ಶನ.ಸಿಬ್ಬಂದಿ ಮೇಲಿನ ಸಿಟ್ಟಿನಿಂದಲೋ ಅಥವಾ ಯಾರದೋ ಚಿತಾ­ವಣೆಯಿಂದ  ಕಾಡಿಗೆ ಬೆಂಕಿ ಹಚ್ಚುವುದು ದುಷ್ಟತನ ಮಾತ್ರವಲ್ಲ, ಅಕ್ಷಮ್ಯ. ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಕಾಡಂಚಿನ ಜನರು, ಏನೇ ಸಮಸ್ಯೆ­ಗಳಿದ್ದರೂ ಇಲಾಖೆಯ ಗಮನಕ್ಕೆ ತಂದು ಮಾತುಕತೆ ಮೂಲಕ ಬಗೆ­ಹರಿಸಿಕೊಳ್ಳಬೇಕೇ ಹೊರತು ಬೆಂಕಿ ಹಚ್ಚುವುದನ್ನು ಪರಿಹಾರ ಅಂತ ಭಾವಿಸ­ಬಾರದು.ಅರಣ್ಯ ಪ್ರದೇಶದ ವ್ಯಾಪ್ತಿಯ ಹಳ್ಳಿಗಳ ಜನರ ತೊಂದರೆಗಳನ್ನು ಬಗೆ­ಹರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಕಾಳ್ಗಿಚ್ಚಿಗೆ ಕಾರಣವಾದ ಸಂಗತಿ­ಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಪರಿಹಾರೋಪಾಯಗಳನ್ನು ರೂಪಿಸಿ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು. ಅರಣ್ಯ ಸಂರಕ್ಷಣೆಯ ಮಹತ್ವ­ವನ್ನು ಜನಸಾಮಾನ್ಯರಿಗೆ ಮನದಟ್ಟು ಮಾಡಿಕೊಡಬೇಕು. ಕಾಳ್ಗಿಚ್ಚಿ­ನಂಥ ಬೇಸಿಗೆ ಉಪಟಳವನ್ನು ಎದುರಿಸಲು ಜನರ ಸಹಕಾರ ಅಗತ್ಯ. ಈ ನಿಟ್ಟಿನಲ್ಲಿ ಸ್ಥಳೀಯರ ವಿಶ್ವಾಸ ಗಳಿಸುವ ಪ್ರಯತ್ನಗಳೂ ಆಗಬೇಕು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.