ಗುರುವಾರ , ಆಗಸ್ಟ್ 5, 2021
23 °C

ಬೆಲೆಯ ನಾಗಾಲೋಟ ಈರುಳ್ಳಿ ರಫ್ತು ನಿಷೇಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ):  ದೇಶದ ಎಲ್ಲೆಡೆ ಈರುಳ್ಳಿ ಬೆಲೆ ನಾಗಾಲೋಟದಲ್ಲಿ ಏರುತ್ತಿರುವ ಹಿನ್ನೆಲೆಯಲ್ಲಿ ಜನವರಿ 15 ರವರೆಗೆ ರಫ್ತು ನಿಷೇಧಿಸಿ  ಕೇಂದ್ರ ಸರ್ಕಾರವು ಸೋಮವಾರ ನಿರ್ಧಾರ ಕೈಗೊಂಡಿದೆ. ಈರುಳ್ಳಿ ಬೆಲೆಯು  ಪ್ರತಿ ಕೆಜಿಗೆ ರೂ. 60 ರಿಂದ ರೂ 80ರವರೆಗೆ ಏರಿಕೆ ಯಾ ಗುತ್ತಿರುವ ಕಳವಳಕಾರಿ ವಿದ್ಯಮಾನವು ದೇಶದಾದ್ಯಂತ ಕಂಡುಬಂದಿರುವ ಕಾರಣಕ್ಕೆ ಆತಂಕಗೊಂಡಿರುವ ಕೇಂದ್ರ ಸರ್ಕಾರ ತುರ್ತು ಸಭೆ ಕರೆದು ಈರುಳ್ಳಿಯ ಲಭ್ಯತೆ, ಬೆಲೆ ಮಟ್ಟ ಮತ್ತು ರಫ್ತು ಪರಿಸ್ಥಿತಿ ಪರಾಮರ್ಶಿಸಿತು.

 

ಪೂರೈಕೆ ಪರಿಸ್ಥಿತಿ ಸುಧಾರಿಸುವವರೆಗೆ  ಈರುಳ್ಳಿ ರಫ್ತುದಾರರಿಗೆ ಹೊಸ ಅನುಮತಿ ನೀಡಬಾರದು ಎಂದು  ಕೃಷಿ ಉತ್ಪನ್ನಗಳ ಬೆಲೆ ನಿಯಂತ್ರಣ ಸಂಸ್ಥೆಯಾಗಿರುವ ಭಾರತೀಯ ಕೃಷಿ ಸಹಕಾರಿ ಮತ್ತು ಮಾರಾಟ ಒಕ್ಕೂಟಕ್ಕೆ  (ನಾಫೆಡ್) ಸರ್ಕಾರ   ನಿರ್ದೇಶನ ನೀಡಿದೆ. ಈಗಾಗಲೇ ‘ನಾಫೆಡ್’ ಸೇರಿದಂತೆ ಇತರ 12 ಸಂಸ್ಥೆಗಳಿಂದ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ಪಡೆದಿರುವ ರಫ್ತುದಾರರೂ ಈರುಳ್ಳಿ ರಫ್ತು ಮಾಡದಂತೆಯೂ ಕೇಂದ್ರ ಸರ್ಕಾರ ನಿರ್ಬಂಧ ವಿಧಿಸಲಿದೆ. ಈರುಳ್ಳಿ ರಫ್ತು ನಿರ್ಬಂಧಿಸುವ ಕಾರಣಕ್ಕೆ ಕನಿಷ್ಠ ರಫ್ತು ಬೆಲೆಯನ್ನು ಎರಡು ಪಟ್ಟುಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಹೆಚ್ಚಿಸಿದೆ. ಪ್ರತಿ ಟನ್‌ಗೆ  525 ಡಾಲರ್‌ಗಳಿಂದ 1,200 ಡಾಲರ್‌ಗಳಿಗೆ (ಅಂದಾಜು ರೂ 60,000ಕ್ಕೆ) ಏರಿಸಿದೆ. ಈ ಬೆಲೆ ಮಟ್ಟಕ್ಕಿಂತ ಕಡಿಮೆ ಬೆಲೆಗೆ ಈರುಳ್ಳಿ  ರಫ್ತು ಮಾಡುವಂತಿಲ್ಲ.  ‘ನಾಫೆಡ್’ನ ತುರ್ತು ಸಭೆಯಲ್ಲಿ ಈರುಳ್ಳಿ ಲಭ್ಯತೆ ಮತ್ತು ರಫ್ತು ವಹಿವಾಟಿನ ಬಗ್ಗೆ ಚರ್ಚೆ ನಡೆಸಲಾಯಿತು. ಬೆಲೆ ಏರಿಕೆಗೆ ಕಡಿವಾಣ ವಿಧಿಸಲು ರಫ್ತು ನಿಷೇಧಿಸಬೇಕೆ ಅಥವಾ ಕನಿಷ್ಠ ರಫ್ತು ಬೆಲೆ (ಎಂಇಪಿ) ಹೆಚ್ಚಿಸಬೇಕೆ ಎನ್ನುವುದನ್ನು ಇದಕ್ಕೂ ಮೊದಲು ಸಭೆಯಲ್ಲಿ ಪರಾಮರ್ಶಿಸಲಾಯಿತು.ದೇಶಿ ಮಾರುಕಟ್ಟೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಈರುಳ್ಳಿ ಲಭ್ಯವಾಗಿರಬೇಕು ಎನ್ನುವ ಕಾರಣಕ್ಕೆ ‘ನಾಫೆಡ್’, ಇದಕ್ಕೂ ಮೊದಲೇ  ನವೆಂಬರ್ 15ರಂದು ಈರುಳ್ಳಿ ರಫ್ತಿನ ಬೆಲೆಯನ್ನು ಪ್ರತಿ ಟನ್‌ಗೆ 525 ಡಾಲರ್‌ಗಳಿಗೆ (ಅಂದಾಜು ರೂ 26,250) ಹೆಚ್ಚಿಸಿತ್ತು. ಈ ಕ್ರಮವು ರಫ್ತು ನಿರ್ಬಂಧಕ್ಕೆ ಹೆಚ್ಚು ಪ್ರಯೋಜನಕಾರಿ ಆಗಿರಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.