ಸೋಮವಾರ, ಜೂನ್ 21, 2021
26 °C

ಬೋಗಿ-ನಮ್ಮ ಜೀವನದ ಪಯಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಮಾರ‌್ಗೋಸ ಮಹಲ್~ನ ಅಭೂತಪೂರ್ವ ಯಶಸ್ಸಿನ ನಂತರ ನಿರ್ದೇಶಕ ಪಿ.ಡಿ. ಸತೀಶ್ ಚಂದ್ರ, ಬರಹಗಾರ ಚಂದನ್ ಶಂಕರ್ ಮತ್ತು ತಂಡದಿಂದ ಮತ್ತೊಂದು ಹೊಸ ಪ್ರಯತ್ನ ಸಿದ್ಧವಾಗಿದೆ.



ಈ ಬಾರಿ ಕೂಡ ಹೊಸತನ ಹಾಗೂ ವಿಭಿನ್ನತೆಯನ್ನು ಹೊರಹೊಮ್ಮಿಸುವ ತವಕದಲ್ಲಿದೆ ಪ್ರದರ್ಶನ ಕಲಾ ಸಂಸ್ಥೆ (ಪ್ರ.ಕ.ಸಂ). ಶನಿವಾರ ಮತ್ತು ಭಾನುವಾರ ಪ್ರದರ್ಶನಗೊಳ್ಳಲಿರುವ ನಾಟಕದ ಹೆಸರು `ಬೋಗಿ~-ನಮ್ಮ ಜೀವನದ ಪಯಣ.



ಪ್ರ.ಕ.ಸಂ ಪ್ರದರ್ಶಿಸಿರುವ ಈವರೆಗಿನ 7 ನಾಟಕಗಳು ಮನೋರಂಜನೆಯ ಅಡಿಪಾಯದ ಮೇಲೆ ಹೊರಬಂದವು. ಈ ಎಲ್ಲಾ ನಾಟಕಗಳಲ್ಲೂ ಹೊಸತನವಿತ್ತು. ಜತೆಗೆ ಹೊಸ ಪ್ರತಿಭೆಗಳನ್ನು ಕನ್ನಡ ರಂಗಭೂಮಿಗೆ ಪರಿಚಯಿಸಲಾಗಿತ್ತು.

 

`ಬೋಗಿ~ ಕೂಡ ಈ ಪ್ರತೀತಿಯನ್ನು ಉಳಿಸಿಕೊಳ್ಳಲಿದ್ದು ರಂಗಾಸಕ್ತರ ಮನಸ್ಸು ಮುಟ್ಟಲಿದೆ.



ಬೋಗಿ ನಾಟಕದಲ್ಲಿ ಹಲವು ವಿಶೇಷತೆಗಳಿವೆ. ನಾಟಕದಲ್ಲಿ ಆರು ವಿಶೇಷ ಪಾತ್ರಗಳಿದ್ದು, ಈ ಆರು ಪಾತ್ರಗಳನ್ನು ರಂಗಭೂಮಿಯ ಹಿರಿಯ ಹಾಗೂ ಅನುಭವಿ ನಟ ಸಿಹಿಕಹಿ ಚಂದ್ರು ನಿರ್ವಹಿಸುತ್ತಿದ್ದಾರೆ.



ಈ ಆರು ಪಾತ್ರಗಳು ವಾರದ ಆರು ದಿನಗಳನ್ನು ಪ್ರತಿನಿಧಿಸಲಿವೆ (ಸೋಮವಾರದಿಂದ ಶನಿವಾರ). ಒತ್ತಡದ ಜೀವನದಲ್ಲಿ ಮನುಷ್ಯ ನೆಮ್ಮದಿ ಕಳೆದುಕೊಳ್ಳುತ್ತಿದ್ದಾನೆ. ವಾರಾಂತ್ಯವನ್ನು (ಭಾನುವಾರ) ಆರಾಮವಾಗಿ ಕಳೆಯುವ ಬದಲು ಮತ್ತಷ್ಟು ಒತ್ತಡಕ್ಕೆ ಬೀಳುತ್ತಿದ್ದಾನೆ ಎಂಬುದು ನಾಟಕದ ತಿರುಳು.



ಇದೇ ಮೊದಲ ಬಾರಿಗೆ ಸ್ಟೇಜಿನ ಮೇಲೆ ಒಂದು ಟೈಮರ್ ಇರಿಸಲಾಗಿದ್ದು ನಡೆಯುವ ಎಲ್ಲ ದೃಶ್ಯಗಳು ನೇರಪ್ರಸಾರದಂತೆ ಮೂಡಿ ಬರಲಿವೆ. ಪ್ರೇಕ್ಷಕರಿಗೆ ಇದು ನೈಜ ಅನುಭವ ನೀಡಲಿದೆ. ತಂಡ ರಂಗ ಸಜ್ಜಿಕೆಗೆ ಸಾಕಷ್ಟು ಒತ್ತು ನೀಡಿದೆ.

 

ಹಾಗಾಗಿ ರೈಲ್ವೆ ಅಧಿಕಾರಿಗಳಿಂದ ಹಲವು ವಿಷಯಗಳನ್ನು ಸಂಗ್ರಹಿಸಿ ನಿಜವಾದ ಬೋಗಿಯ ಅಳತೆಯನ್ನು ರಂಗದ ಮೇಲೆ ರೂಪಿಸಲು ಸಜ್ಜಾಗಿದೆ. ಈ ನಾಟಕದಲ್ಲಿ ಬರುವ ಪಾತ್ರಗಳು ಸಾಮಾನ್ಯ ಮನುಷ್ಯನ ಜೀವನಕ್ಕೂ ಹೆಚ್ಚು ಸಾಮ್ಯತೆ ಹೊಂದಿದೆ ಎಂಬುದು ತಂಡದ ಭರವಸೆ.



ಪಿ.ಡಿ.ಸತೀಶ್ ಚಂದ್ರ ಕನ್ನಡ ರಂಗಭೂಮಿಯ ಏಳಿಗೆಗಾಗಿ ಶ್ರಮಿಸುತ್ತಿರುವ ರಂಗಕರ್ಮಿ. ತಾವು ಪಟ್ಟ ಕಷ್ಟಗಳನ್ನು ಇಂದಿನ ಯುವಕ-ಯುವತಿಯರು ಅನುಭವಿಸಬಾರದು, ಅವರ ಕ್ರಿಯಾಶೀಲತೆಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ದೊರಕಿಸಬೇಕೆಂದು ಬಯಕೆಯಿಂದ ಪ್ರ.ಕ.ಸಂ ಎಂಬ ಸಂಸ್ಥೆಯ ಮೂಲಕ ದುಡಿಯುತ್ತಿದ್ದಾರೆ.



ಕೆಂಗಲ್ ಹನುಮಂತಯ್ಯ ಕಲಾಸೌಧದ ನಿರ್ದೇಶಕರಾಗಿ ಯುವ ಹಾಗೂ ಉತ್ಸಾಹಿ ಕಲೆಗಾರರ ಉದ್ಧಾರಕ್ಕಾಗಿ ಹಲವಾರು ಯೋಜನೆ ರೂಪಿಸಿದ್ದಾರೆ.



ಸ್ಥಳ: ಕೆ.ಎಚ್.ಕಲಾಸೌಧ, ರಾಮಾಂಜನೇಯ ದೇವಸ್ಥಾನದ ಆವರಣ, ಹನುಮಂತನಗರ. ಮಾಹಿತಿಗೆ: 99002 21232. ಶನಿವಾರ ಸಂಜೆ 7.30. ಭಾನುವಾರ ಸಂಜೆ 5 ಮತ್ತು 7.30. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.