ಮಂಗಳವಾರ, ಸೆಪ್ಟೆಂಬರ್ 22, 2020
26 °C

ಭವಿಷ್ಯದ ಪರೀಕ್ಷೆಗೆ ಆನ್‌ಲೈನ್ ರಕ್ಷೆ

ಸುರೇಖಾ ಹೆಗಡೆ Updated:

ಅಕ್ಷರ ಗಾತ್ರ : | |

ಭವಿಷ್ಯದ ಪರೀಕ್ಷೆಗೆ ಆನ್‌ಲೈನ್ ರಕ್ಷೆ

ಕೊನೆ ಕ್ಷಣಗಳಲ್ಲಿ ಪ್ರಶ್ನೆ ಪತ್ರಿಕೆ ಬಹಿರಂಗ, ಉಪನ್ಯಾಸಕರುಗಳ ಮುಷ್ಕರ, ಸಮರ್ಪಕ ಮೌಲ್ಯಮಾಪನ ಇವೆಲ್ಲ ವಿದ್ಯಾರ್ಥಿಗಳಲ್ಲಿ ಹಾಗೂ ಪೋಷಕರಲ್ಲಿ ಆತಂಕ ಎಬ್ಬಿಸುತ್ತಲೇ ಇವೆ. ಬದುಕಿನ ಬಗ್ಗೆ ಸಾವಿರಾರು ಕನಸು ಹೊತ್ತ ಕಂಗಳಿಗೆ ಮುಂದಿನ ಜೀವನದ ಬಗ್ಗೆ ಭರವಸೆ ಮರೆಮಾಚಿದ ಅನುಭವ ಆಗಿರಲೂಬಹುದು.



ಈ ಎಲ್ಲ ಸಮಸ್ಯೆಗಳಿಗೆ ಪರಿಹಾರವೇ ಇಲ್ಲವೇ? ಈ ಗೊಂದಲ, ಆತಂಕದಲ್ಲೇ ಇನ್ನೂ ಎಷ್ಟು ದಿನ ಪರದಾಡಬೇಕು? ಶೈಕ್ಷಣಿಕ ಬದುಕಿನ ಇಂಥ ಮುಳ್ಳುಗಳು ಮುಂದಿನ ಜೀವನವನ್ನೇ ತಿಂದು ಹಾಕಿದರೆ ಎಂಬೆಲ್ಲ ಚಿಂತೆಗಳು ವಿದ್ಯಾರ್ಥಿಗಳಿಂದ ಹಿಡಿದು ಪೋಷಕರ ಚಿತ್ತವನ್ನೂ ಕಲಕುತ್ತಿವೆ.



ಹೀಗಾಗಿ ಈ ಎಲ್ಲ ಸಮಸ್ಯೆಗಳನ್ನು ತಕ್ಕಮಟ್ಟಿಗೆ ಪರಿಹರಿಸಲು ಮೆರಿಟ್ ಟ್ರ್ಯಾಕ್ ಸಂಸ್ಥೆ ವಿನೂತನ ರೀತಿಯ ಪರೀಕ್ಷಾ ಮಾದರಿಯನ್ನು ಅಭಿವೃದ್ಧಿಪಡಿಸಿದೆ.ಈಗಾಗಲೇ ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಳವಡಿಸಿಕೊಳ್ಳಲಾಗಿರುವ ಆನ್‌ಲೈನ್ ಮಾದರಿ ಇಂದಿನ ಎಲ್ಲಾ ಸಮಸ್ಯೆಗಳಿಗೆ ಪರಿಹಾರ.

 

ಸಂಪ್ರದಾಯದ ರೀತಿಯಲ್ಲಿ ನಡೆದುಕೊಂಡು ಬಂದಿರುವ ಪರೀಕ್ಷಾ ವಿಧಾನಗಳನ್ನು ಒಮ್ಮೆಲೇ ಬದಲಾಯಿಸುವುದು ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಕಷ್ಟವಾಗಲೂಬಹುದು. ಹೀಗಾಗಿ ನೂತನ ಪರೀಕ್ಷಾ ವಿಧಾನವನ್ನು ಹಂತ ಹಂತವಾಗಿ ಅಳವಡಿಸಿಕೊಂಡರೆ ಇನ್ನು ಮೂರ್ನಾಲ್ಕು ವರ್ಷಗಳಲ್ಲಿ ಯಶಸ್ಸು ಕಾಣುವುದು ಖಂಡಿತ ಎನ್ನುವುದು ಮೆರಿಟ್ ಟ್ರ್ಯಾಕ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಸಹ ಸಂಸ್ಥಾಪಕ ಮುರಳೀಧರ ಅವರ ಅಭಿಪ್ರಾಯ. ಅವರು ಹೊಸ ವಿಧಾನದ ಬಗ್ಗೆ ವಿವರಿಸುವುದು ಹೀಗೆ.



ಆನ್‌ಲೈನ್ ಮೌಲ್ಯಮಾಪನ

ಈಗ ಮೌಲ್ಯಮಾಪಕರೆಲ್ಲ ಒಂದೆಡೆ ಕುಳಿತು ಉತ್ತರ ಪತ್ರಿಕೆ ನೋಡುವ ಪದ್ಧತಿಯಿದೆ. ಒಂದೇ ಪತ್ರಿಕೆಯನ್ನು ಎರಡು ಮೂರು ಶಿಕ್ಷಕರು ನೋಡಿ ನಂತರದಲ್ಲಿ ಒಟ್ಟು ಅಂಕಗಳನ್ನು ಲೆಕ್ಕಹಾಕುವ ಪ್ರಕ್ರಿಯೆಯಿಂದ ಹಣ, ಸಮಯ ಎರಡೂ ವ್ಯಯವಾಗುವುದಲ್ಲದೆ ಅಂಕಗಳ ಒಟ್ಟು ಮೊತ್ತದ ಎಣಿಕೆ  ತಪ್ಪಾಗಿದೆ ಎಂಬ ದೂರುಗಳ ಸರಮಾಲೆ ಮುಂದುವರಿಯುತ್ತದೆ.

ಈ ಎಲ್ಲಾ ಸಮಸ್ಯೆಗೆ ಆನ್‌ಸ್ಕ್ರೀನ್ ಮಾರ್ಕಿಂಗ್ ಸಿಸ್ಟಂನಲ್ಲಿ ಉತ್ತರವಿದೆ. ಇದರಲ್ಲಿ-

  

ಸ್ಕ್ಯಾನ್ ಮಾಡಿದ ಉತ್ತರ ಪತ್ರಿಕೆಯ ಮೌಲ್ಯಮಾಪನ ಕಂಪ್ಯೂಟರ್‌ನಲ್ಲಿಯೇ ನಡೆಯುತ್ತದೆ.



 ಮೌಲ್ಯಮಾಪಕರು ಉತ್ತರದ ಮುಂದಿರುವ ಬಾಕ್ಸ್‌ನಲ್ಲಿ ಅಂಕ ನೀಡಬೇಕು.



ಮೊದಲೇ ಉತ್ತರ ಪತ್ರಿಕೆಯ ಎಲ್ಲಾ ಪುಟಗಳ ವಿವರವನ್ನು ಕಂಪ್ಯೂಟರ್‌ನಲ್ಲಿ ದಾಖಲಿಸಲಾಗುತ್ತದೆ. ಹೀಗಾಗಿ ಪ್ರಶ್ನೆ ಹಾಗೂ ಪುಟಗಳು ಮೌಲ್ಯಮಾಪನವಾಗದೇ ಉಳಿಯುವ ಸಾಧ್ಯತೆ ಇಲ್ಲ. ಇದರಿಂದ ಮೌಲ್ಯಮಾಪನ ಪ್ರಕ್ರಿಯೆ ವೇಗಗೊಳ್ಳುತ್ತದೆ.



ಆಟೊ ಟ್ಯಾಬ್ಯುಲೇಷನ್‌ನಿಂದಾಗಿ ಅಂಕ ಲೆಕ್ಕ ಹಾಕುವ ಹಾಗೂ ಮರು ಲೆಕ್ಕಹಾಕುವ ಶ್ರಮದಿಂದ ಮುಕ್ತಿ.



ಆನ್‌ಲೈನ್ ಮಾದರಿ ಅಳವಡಿಕೆಯಿಂದ ವಿದ್ಯಾರ್ಥಿಗಳು ಕೂಡಾ ತಮ್ಮ ಉತ್ತರ ಪತ್ರಿಕೆಯ ಪ್ರತಿ ನೋಡಬಹುದು.



ಮೌಲ್ಯಮಾಪನ ಮುಗಿದ ಒಂದೇ ದಿನದಲ್ಲಿ ಫಲಿತಾಂಶ ಪ್ರಕಟಿಸುವುದು ಸಾಧ್ಯ.



ಇದರ ಇನ್ನೊಂದು ಲಾಭವೆಂದರೆ ಮೌಲ್ಯಮಾಪಕರು ತಾವಿರುವ ಸ್ಥಳದಿಂದಲೇ ಮೌಲ್ಯಮಾಪನ ಮಾಡುವ ಅವಕಾಶವೂ ಇದೆ.



ಸಂಕ್ಷಿಪ್ತ ಹಾಗೂ ವಿವರಣಾತ್ಮಕ ಮಾದರಿಯ ಪ್ರಶ್ನೆಪತ್ರಿಕೆ ಅಳವಡಿಕೆಯಿಂದ ಅನೇಕ ಲಾಭ ಇದೆ. ಹಾಗೆಯೇ ಪರೀಕ್ಷಾ ವಿಧಾನವನ್ನು ಒಮ್ಮೆಲೇ ಬಹು ಆಯ್ಕೆ ಪ್ರಶ್ನಾವಳಿ ಮಾದರಿಗೆ ಬದಲಾಯಿಸುವ ಬದಲು ಗುಜರಾತ್ ಹಾಗೂ ಇತರ ರಾಜ್ಯಗಳು ಅಳವಡಿಸಿಕೊಳ್ಳಲು ಮುಂದಾಗಿರುವ ಸಂಕ್ಷಿಪ್ತ ಹಾಗೂ ವಿವರಣಾತ್ಮಕ ಮಾದರಿ ಅನುಸರಿಸುವುದು ಸೂಕ್ತ.

 

ಇದು ಪರೀಕ್ಷಾ ವಿಧಾನ ಬದಲಾಯಿಸುವ ಉತ್ತಮ ಹಂತವಾಗಬಲ್ಲುದು. ಗೇಟ್ ಪರೀಕ್ಷೆಯಲ್ಲೂ ಈ ವಿಧಾನ ಅಳವಡಿಸಿಕೊಂಡಿದ್ದು ಇನ್ನು ಎರಡು ಮೂರು ವರ್ಷಗಳಲ್ಲಿ ಆನ್‌ಲೈನ್ ಪರೀಕ್ಷೆ ಮಾತ್ರ ಇರುತ್ತದೆ.



ಸ್ಥಳದಲ್ಲೇ ಪ್ರಶ್ನೆಪತ್ರಿಕೆ ಮುದ್ರಣ

ಈಗಿನ ಪರೀಕ್ಷಾ ಮಾದರಿಯಲ್ಲಿ ಪ್ರಶ್ನೆ ಪತ್ರಿಕೆಗಳು ಯಾವಾಗಲೋ ತಯಾರಾಗಿರುತ್ತವೆ. ಅವನ್ನು ಆಯಾ ಪರೀಕ್ಷಾ ಕೇಂದ್ರಗಳಿಗೆ 15 ರಿಂದ 20 ದಿನ ಮೊದಲೇ ಕಳಿಸಲಾಗುತ್ತದೆ. ಅದನ್ನು ಖಜಾನೆಯಲ್ಲಿ ಇಟ್ಟು ಸಂಪೂರ್ಣ ಭದ್ರತೆ ಒದಗಿಸಲಾಗುತ್ತದೆ.



ಆದರೆ ಪ್ರಶ್ನೆ ಪತ್ರಿಕೆ ಕದಿಯುವ ಮನಸ್ಥಿತಿಯವನಿಗೆ ಇದ್ಯಾವುದೂ ಅಡ್ಡಿಯಾಗಲಾರದು ಎಂಬುದು ಇತ್ತೀಚೆಗೆ ನಡೆದ ಘಟನೆಗಳಿಂದಲೇ ಸಾಬೀತಾಗಿದೆ. ಹೀಗಾಗಿ ಆಯಾ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಿಂತ 10 ರಿಂದ 15 ನಿಮಿಷ ಮೊದಲು ಪ್ರಶ್ನೆ ಪತ್ರಿಕೆ ಮುದ್ರಣ ಮಾಡುವ ವ್ಯವಸ್ಥೆ ಅಳವಡಿಸಿಕೊಳ್ಳಬಹುದು. ಜವಾಹರ್ ಲಾಲ್ ನೆಹರು ತಾಂತ್ರಿಕ ವಿವಿ ಹಾಗೂ ಗುಜರಾತ್ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಈ ಮಾದರಿ ಈಗಾಗಲೇ ಯಶಸ್ವಿಯಾಗಿವೆ.



ವರ್ಷ ಪೂರ್ತಿ ಓದದೆ ಕೊನೆ ಘಳಿಗೆಯಲ್ಲಿ ತಮ್ಮ ಬದಲು ಇನ್ನೊಬ್ಬರನ್ನು ಪರೀಕ್ಷೆ ಬರೆಯಲು ಕಳುಹಿಸುವವರ ಸಂಖ್ಯೆಯೇನೂ ಕಡಿಮೆ ಇಲ್ಲ. ಅದೂ ಅಲ್ಲದೆ ಪರೀಕ್ಷಾ ಕೇಂದ್ರಗಳಲ್ಲಿ ಎಷ್ಟೇ ಬಿಗಿ ಭದ್ರತೆ ಇದ್ದರೂ ಬದಲಾದ ಚಹರೆ ಗುರುತಿಸುವುದು ಮೇಲ್ವಿಚಾರಕರಿಗೆ ಸಾಧ್ಯವಾಗದೇ ಹೋಗಬಹುದು.

 

ಹೀಗಾಗಿ ಜೈವಿಕ ಮಾಪನ ದೃಢೀಕರಣ ಉತ್ತಮ ಸೇವೆ ಆಗಬಲ್ಲುದು. ಪ್ರತಿ ವಿದ್ಯಾರ್ಥಿಯ ಬೆರಳಚ್ಚು ಹಾಗೂ ಮುಖ ಚಿತ್ರವನ್ನು ಈ ಸಾಧನ ಸೆರೆ ಹಿಡಿಯುತ್ತದೆ. ಪರೀಕ್ಷಾ ಕೇಂದ್ರಗಳಲ್ಲೂ ಇದನ್ನು ಬಳಸುವುದರಿಂದ ತಪ್ಪಿತಸ್ಥರನ್ನು ಬಹು ಬೇಗನೇ ಗುರುತಿಸಬಹುದು. ಪರೀಕ್ಷೆ ಪ್ರಾರಂಭವಾಗುವುದಕ್ಕಿಂತ ಆರು ತಿಂಗಳು ಮೊದಲು ವಿದ್ಯಾರ್ಥಿಗಳ ಗುರುತು ಸೆರೆ ಹಿಡಿಯುವ ಕಾರ್ಯ ಪ್ರಾರಂಭಿಸಿದರೆ ಸಾಕು.



ಆನ್‌ಲೈನ್ ಪರೀಕ್ಷಾ ವಿಧಾನ

ಈ ಎಲ್ಲಾ ಹಂತಗಳು ಮುಗಿದು ಸಂಪೂರ್ಣವಾಗಿ ಆನ್‌ಲೈನ್ ಮಾದರಿಯನ್ನು ಕರ್ನಾಟಕದಲ್ಲಿ ಅಳವಡಿಸಿಕೊಳ್ಳಲು 4-5 ವರ್ಷ  ಬೇಕು. ಕಂಪ್ಯೂಟರ್‌ನಲ್ಲಿ ಮೌಲ್ಯಮಾಪನ ಹಾಗೂ ವಿದ್ಯಾರ್ಥಿಗಳಿಗೆ ಒಂದು ವರ್ಷ ಟ್ರಯಲ್ ಕೇಂದ್ರಗಳಲ್ಲಿ ತರಬೇತಿ ನೀಡಿದರೆ ಸಾಕು.

 

ಅದೂ ಅಲ್ಲದೆ ಬಹು ಆಯ್ಕೆ ಪ್ರಶ್ನೆ ಪತ್ರಿಕೆಗಳು ವಿದ್ಯಾರ್ಥಿಯ ಬೌದ್ಧಿಕ ಮಟ್ಟವನ್ನು ಅಳೆಯುವಲ್ಲಿ ನಿಖರತೆ ಒದಗಿಸಿಕೊಡುತ್ತದೆ ಎಂಬುದು ಸಾಬೀತಾಗಿವೆ. ಹಲವಾರು ಸ್ಪರ್ಧಾತ್ಮಕ ಪರೀಕ್ಷಾ ಮಂಡಳಿಗಳು ಈ ರೀತಿಯಲ್ಲೇ ಪರೀಕ್ಷೆ ನಡೆಸುತ್ತಿರುವುದು ಇಂಥ ವಾದಗಳಿಗೆ ಪುಷ್ಟಿ ನೀಡುತ್ತವೆ.



ಆನ್‌ಲೈನ್ ಪರೀಕ್ಷೆಯ ಲಾಭ

ಇದರಿಂದ ಪ್ರಶ್ನೆ ಪತ್ರಿಕೆಗೆ, ವಿದ್ಯಾರ್ಥಿಗಳಿಗೆ ಭದ್ರತೆ ಸಿಗುತ್ತದೆ.



ಪರೀಕ್ಷೆಯಲ್ಲಿ ಗೌಪ್ಯತೆ ಕಾಪಾಡುವ ಎಲ್ಲಾ ಮಾದರಿ ಇದರಲ್ಲಿ ಅಡಕವಾಗಿರುವುದರಿಂದ ನಿಖರತೆ ಹಾಗೂ ಪರೀಕ್ಷಾ ವ್ಯವಸ್ಥೆಯ ಮೇಲೆ ನಿಯಂತ್ರಣ ಬರುತ್ತದೆ.



ಆನ್‌ಲೈನ್ ಮೌಲ್ಯಮಾಪನ, ಅಂಕ ಲೆಕ್ಕಾಚಾರ ಎಲ್ಲವೂ ಗಣಕೀಕೃತವಾದ್ದರಿಂದ ಕಾರ್ಯನಿರ್ವಹಣೆ ಅತ್ಯಂತ ಸುಲಭ.



ಆನ್‌ಲೈನ್‌ನಲ್ಲೇ ಎಲ್ಲಾ ಚಟುವಟಿಕೆ ನಡೆಯುವುದರಿಂದ ಅತ್ಯಂತ ವೇಗದ ಪರೀಕ್ಷಾ ಪದ್ಧತಿ ಇದಾಗಲಿದೆ.



ಪ್ರಶ್ನೆ ಬ್ಯಾಂಕ್ ಮೂಲಕ ಪ್ರಶ್ನೆ ಪತ್ರಿಕೆ ತಯಾರಾಗುವುದರಿಂದ ಪರೀಕ್ಷೆ ವ್ಯವಸ್ಥಿತವಾಗುತ್ತದೆ.



ಎಲ್ಲಾ ಸಲಹೆ ಸೂಚನೆಗಳು ಕಂಪ್ಯೂಟರ್ ಸ್ಕ್ರೀನ್‌ನಲ್ಲಿರುತ್ತವೆ.



ಫಲಿತಾಂಶವನ್ನು ಬೇಗ ಪ್ರಕಟಿಸಬಹುದು.




ಹೊರಗುತ್ತಿಗೆ ನೀಡುವುದು

ವೃತ್ತಿಪರ ಪರೀಕ್ಷಾ ಮಂಡಳಿಗಳು ಪರೀಕ್ಷೆಗೆ ಸಂಬಂಧಿಸಿದ ಕಾರ್ಯಯೋಜನೆ ಬಗ್ಗೆ ಸಂಪೂರ್ಣ ಅನುಭವ ಹೊಂದಿರುವುದರಿಂದ ಅವುಗಳಿಗೆ ಹೊರಗುತ್ತಿಗೆ ನೀಡುವುದೂ ಈ ಮಾದರಿಯ ಪರೀಕ್ಷೆಗಳ ಯಶಸ್ಸಿಗೆ ಕಾರಣವಾಗಬಹುದು.

 

ವಿದ್ಯಾರ್ಥಿಗಳ ನೋಂದಣಿ ದಾಖಲೆಯಿಂದ ಹಿಡಿದು ಫಲಿತಾಂಶ ಪ್ರಕಟಿಸುವವರೆಗಿನ ಸಂಪೂರ್ಣ ಜವಾಬ್ದಾರಿಯನ್ನು ಈ ಕೇಂದ್ರಗಳೇ ನಡೆಸುತ್ತವೆ. ಅಲ್ಲದೆ ಮೇಲೆ ಪ್ರಸ್ತಾಪಿಸಲಾಗಿರುವ ಎಲ್ಲಾ ಹಂತಗಳನ್ನು ಇವೇ ನಿರ್ವಹಿಸಲಿದ್ದು, ಪರೀಕ್ಷಾ ಗುಣಮಟ್ಟದಲ್ಲಿ ಪ್ರಗತಿ ಉಂಟಾಗುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.