ಶುಕ್ರವಾರ, ಜನವರಿ 24, 2020
21 °C

ಭಾರತ ಕ್ಲೀನ್ ಬೌಲ್ಡ್!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತದ ಕ್ರಿಕೆಟ್ ದಾರಿ ತಪ್ಪಿದೆಯೇ? ಹಣದಾಹಿ ಮಂಡಳಿ ಹಾಗೂ ಆಟಗಾರರು ತಾವೇ ನಿರ್ಮಿಸಿಕೊಂಡ ಸ್ವೇಚ್ಛಾಚಾರದ ಅಂಕಣದಲ್ಲಿ ಕ್ಲೀನ್ ಬೌಲ್ಡ್ ಆಗಿದ್ದಾರೆಯೇ?ಆಸ್ಟ್ರೇಲಿಯದಲ್ಲಿ ಭಾರತ ಕ್ರಿಕೆಟ್ ತಂಡ ಆಡುತ್ತಿರುವ ರೀತಿ ನೋಡಿದಾಗ ಹೌದು ಎಂದೆನಿಸುತ್ತದೆ. ಆಟದಲ್ಲಿ ಸೋಲು ಗೆಲುವು ಇದ್ದೇ ಇರುತ್ತದಾದರೂ ಸೋಲುವ ರೀತಿಯ ಬಗ್ಗೆ ಯೋಚನೆ ಮಾಡಬೇಕಾಗುತ್ತದೆ.

ಬಹಳ ಹಿಂದೇನೂ ಅಲ್ಲ. ಕೇವಲ ಎಂಟು ತಿಂಗಳುಗಳ ಹಿಂದೆ, ವಿಶ್ವಕಪ್ ಟೂರ್ನಿ ಗೆದ್ದ ಭಾರತ ತಂಡ ದಿಢೀರನೆ ಏಕಪಕ್ಷೀಯವಾಗಿ ಶರಣಾಗುವುದು ಒಪ್ಪುವ ಮಾತಲ್ಲ.ಏನಾಯಿತು ದೋನಿ ಪಡೆಗೆ? ಇಡೀ ದೇಶ ಇವರನ್ನೆಲ್ಲ ದೇವರಂತೆ ನೋಡುತ್ತಿರುವಾಗ, ಅವರಿಗೆ ಬೇರೆ ಯಾವ ಕ್ರೀಡಾಪಟುವಿಗೂ ಸಿಗದಷ್ಟು ಹಣ, ಸೌಲಭ್ಯ, ಮರ್ಯಾದೆ, ಪ್ರಚಾರ ಸಿಗುತ್ತಿರುವುದಾಗ ದೋನಿ ಪಡೆಯ ಅಸಹನೀಯ ಸೋಲು ಕ್ರಿಕೆಟ್‌ಗೆ ಪೆಟ್ಟು ಬಿದ್ದಿರುವ ಸೂಚನೆಯಾಗುತ್ತದೆ.ಇದಕ್ಕೆ ಬರೀ ಆಟಗಾರರನ್ನು ಅದರಲ್ಲೂ ಹತ್ತಾರು ವರ್ಷಗಳಿಂದ ಭಾರತದ ಕೀರ್ತಿ ಪತಾಕೆಯನ್ನು ಎತ್ತಿಹಿಡಿದಂಥ ಹಿರಿಯ ಆಟಗಾರರನ್ನು ದೂಷಿಸುವಂತಿಲ್ಲ. ಇಡೀ ತಂಡ ಆಸ್ಟ್ರೇಲಿಯ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸಂಪೂರ್ಣ ವಿಫಲವಾದಾಗ ಕ್ರಿಕೆಟ್ ವ್ಯವಸ್ಥೆಯಲ್ಲಿನ ದೋಷಗಳು ಎದ್ದು ಕಾಣತೊಡಗುತ್ತವೆ.

ಹಿರಿಯ ಆಟಗಾರರ ಜೊತೆ ಕಿರಿಯ ಆಟಗಾರರು ಇನ್ನೂ ಕೆಳಮಟ್ಟದ ಆಟ ಆಡುತ್ತಿರುವ ರೀತಿ ನೋಡಿದಾಗ ಇದಕ್ಕೆ ಬರೀ ಐಪಿಎಲ್ ಎಂಬ ಚುಟುಕು ಕ್ರಿಕೆಟ್ ಮಾತ್ರ ಕಾರಣ ಎಂದೆನಿಸುವುದಿಲ್ಲ.

ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಆಟಗಾರರ ಆಟದ ಕೌಶಲದ ಜೊತೆ ಅವರ ಮನೋಭಾವವನ್ನೇ ಬದಲಿಸಿಬಿಟ್ಟದ್ದು ನಿಜ. ಇದಕ್ಕೆ ಅವರಷ್ಟೇ ಕಾರಣರಲ್ಲ. ದೇಶದ ಅತ್ಯಂತ ಶ್ರೀಮಂತ ಕ್ರೀಡಾ ಮಂಡಳಿ ಎನಿಸಿಕೊಂಡ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಕಾರ್ಯ  ವೈಖರಿ, ಬೊಕ್ಕಸ ತುಂಬುವ ಬಗ್ಗೆ  ಅವರಿಗಿರುವ ವ್ಯಾಮೋಹ ಹಾಗೂ ಯಾರ ನಿಯಂತ್ರಣಕ್ಕೂ ತಾವು ಬಗ್ಗುವುದಿಲ್ಲ ಎಂಬ ದುರಹಂಕಾರ ಆಟದ ಮೇಲೆ ಪರಿಣಾಮ ಬೀರಿದೆ.ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯಲ್ಲಿ ಕುರ್ಚಿ ಹಿಡಿದು ಕುಳಿತವರು ಸರ್ಕಾರವನ್ನೇ ಧಿಕ್ಕರಿಸುವಷ್ಟು ಹಣ ಮತ್ತು ರಾಜಕೀಯ ಬಲ ಹೊಂದಿದ್ದಾರೆ.

ಕ್ರೀಡಾ ಸಚಿವಾಲಯ ಜಾರಿಗೆ ತರಲು ಯತ್ನಿಸುತ್ತಿರುವ ರಾಷ್ಟ್ರೀಯ ಕ್ರೀಡಾ ನೀತಿಗೆ ಒಳಪಡಲು ಕ್ರಿಕೆಟ್ ಮಂಡಳಿ ಸಿದ್ಧವಿಲ್ಲ. ಇದು ಅವರ ನಿರಂಕುಶ ಅಧಿಕಾರಕ್ಕೆ ಅಡ್ಡಿಯಾಗುವುದೆಂಬ ಭೀತಿ ಅವರಲ್ಲಿದೆ. ಹಣಕಾಸಿನ ವ್ಯವಹಾರದಲ್ಲಿ ಯಾರೂ ತಮ್ಮನ್ನು ಪ್ರಶ್ನಿಸುವಂತಿಲ್ಲ ಎಂಬ ಧೋರಣೆಯನ್ನು ಕ್ರಿಕೆಟ್ ಮಂಡಳಿ ಹಲವು ವರ್ಷಗಳಿಂದ ಹೊಂದಿದೆ.

 ಸಾವಿರಾರು ಕೋಟಿ ರೂಪಾಯಿಗಳ ವ್ಯವಹಾರ ಹೊಂದಿರುವ ಕ್ರಿಕೆಟ್ ಉದ್ಯಮ ಆಟಗಾರರನ್ನು ಹಾಗೂ ಹಣ ಕೊಟ್ಟು ನೋಡುವ ಪ್ರೇಕ್ಷಕರನ್ನು ಚಿನ್ನದ ಮೊಟ್ಟೆ ಇಡುವ ಕೋಳಿ ಎಂದೇ ಭಾವಿಸಿದೆ. ಐಪಿಎಲ್‌ನಲ್ಲಿ ಆಟಗಾರರನ್ನು ಖರೀದಿಸುವ ಕೋಟ್ಯಧೀಶರು ಅವರನ್ನು ತಮ್ಮ ಗುಲಾಮರಂತೆಯೇ ನಡೆಸಿಕೊಳ್ಳುತ್ತಿರುವುದು ಬಹಿರಂಗವಾಗಿಯೇ ಕಂಡುಬರುತ್ತದೆ.

ಆದರೆ ಇಲ್ಲಿ ಆಟಗಾರರು, ಅಧಿಕಾರಿಗಳು, ವೀಕ್ಷಕ ವಿವರಣೆಗಾರರು, ರಾಜಕಾರಣಿಗಳು ಹಾಗೂ ಮಾಧ್ಯಮದವರಿಗೂ ಸಾಕಷ್ಟು ಲಾಭ ಇರುವುದರಿಂದ ಯಾರೂ ಕ್ರಿಕೆಟ್‌ಗೆ ಬೀಳುತ್ತಿರುವ ಪೆಟ್ಟಿನ ಬಗ್ಗೆ ಮಾತನಾಡುವುದಿಲ್ಲ.

ಈ ಹಣದ ವರ್ತುಲದಲ್ಲಿ ಸಿಕ್ಕಿಕೊಂಡಿರುವ ಕ್ರಿಕೆಟ್ ಮಂಡಳಿ ತನ್ನದೇ ಆದ ದೇಶೀಯ ಟೂರ್ನಿಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಇದರಿಂದ ಬೇರುಮಟ್ಟದಲ್ಲೇ ಕ್ರಿಕೆಟ್ ಸೊರಗುತ್ತಿದೆ.ನಿಗದಿಯ ಓವರುಗಳ ಕ್ರಿಕೆಟ್ ಆರಂಭವಾದಾಗ ಅದನ್ನು ಪೈಜಾಮ ಕ್ರಿಕೆಟ್ ಎಂದೇ ಎಲ್ಲರೂ ಟೀಕಿಸಿದರು. ಆದರೆ ಅದು ಕ್ರಿಕೆಟ್‌ನಲ್ಲಿ ಕೆಲವು ಸ್ವಾಗತಾರ್ಹ ಬದಲಾವಣೆಗಳನ್ನು ತಂದಿತು. ನೀರಸವಾಗಿದ್ದ ಟೆಸ್ಟ್ ಕ್ರಿಕೆಟ್‌ನಲ್ಲೂ ಬದಲಾವಣೆಗಳಿಗೆ ದಾರಿಯಾಯಿತು.ಆದರೆ ಬಿಕಿನಿಯಂತಾದ ಟ್ವೆಂಟಿ-20 ಕ್ರಿಕೆಟ್ ಗಳಿಸಿದ ದಿಢೀರ್ ಜನಪ್ರಿಯತೆ ಹಣ ಮಾಡುವ ದಂಧೆಯಾಗಿ ಬಿಟ್ಟಿತು.  ಟೆಸ್ಟ್ ಕ್ರಿಕೆಟ್‌ನಲ್ಲಿಯ ಸೊಗಸು ಯಾರಿಗೂ ಬೇಕೇ ಆಗಿಲ್ಲ ಎನ್ನುವಷ್ಟರ ಮಟ್ಟಿಗೆ ಭಾರತದಲ್ಲಿ ಚುಟುಕು ಕ್ರಿಕೆಟ್ ತಳವೂರಿಬಿಟ್ಟಿತು.

20 ಓವರು ಅಥವಾ ಹೆಚ್ಚೆಂದರೆ 50 ಓವರುಗಳಿಗಿಂತ ಹೆಚ್ಚು ಆಡಬೇಕೆನ್ನುವ ಮನೋಭಾವ ಆಟಗಾರರಿಂದ ಕಣ್ಮರೆಯಾಗತೊಡಗಿತು.

ಭಾರತ ಟೆಸ್ಟ್‌ನಲ್ಲಿ ಗಳಿಸಿದ್ದ ಅಗ್ರಸ್ಥಾನವನ್ನು ಕಳೆದುಕೊಳ್ಳಲು ಈ ಅಂಶವೇ ಕಾರಣವಾಯಿತು. ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ವಿ.ವಿ.ಎಸ್. ಲಕ್ಷ್ಮಣ್, ವೀರೇಂದ್ರ ಸೆಹ್ವಾಗ್ ಟೆಸ್ಟ್‌ನಲ್ಲಿ ಆಡಲು ಬೇಕಾದ ತಾಳ್ಮೆ, ಕೌಶಲ ಹಾಗೂ ದೈಹಿಕ ಅರ್ಹತೆ ಬೆಳೆಸಿಕೊಂಡಿದ್ದರಿಂದಲೇ ಅವರು ಎಲ್ಲ ಮಾದರಿಯ ಆಟಗಳಲ್ಲಿ ಮಿಂಚಿದರು. ಆದರೆ ಇಂದಿನ ಆಟಗಾರರಿಗೆ ಅದು ಸಾಧ್ಯವಾಗುತ್ತಿಲ್ಲ.ಸಚಿನ್, ರಾಹುಲ್, ಲಕ್ಷ್ಮಣ್, ಸೆಹ್ವಾಗ್ ಇನ್ನೆಷ್ಟು ವರ್ಷ ಆಡಲು ಸಾಧ್ಯ? ಅವರಿಗೂ ವಯಸ್ಸಾಯಿತು. ಇವರ ಸ್ಥಾನಗಳನ್ನು ತುಂಬಬಲ್ಲ ಆಟಗಾರರನ್ನು ರೂಪಿಸಲು ಮಂಡಳಿ ವ್ಯವಸ್ಥೆ ಮಾಡಬೇಕು.

ಕ್ರಿಕೆಟ್ ಅಡಿಪಾಯವೇ ಸಡಿಲವಾದರೆ ಅದರ ಮೇಲೆ ಬಲಿಷ್ಠ ತಂಡವನ್ನು ಕಟ್ಟಲು ಸಾಧ್ಯವಿಲ್ಲ. ಕ್ರಿಕೆಟ್ ಮಂಡಳಿ ಅಧಿಕಾರಿಗಳು ಇದರ ಬಗ್ಗೆ ಯೋಚಿಸಲು ಇದು ಸಕಾಲ. ಇಲ್ಲದಿದ್ದರೆ ಚಿನ್ನದ ಮೊಟ್ಟೆ ಇಡುವ ಕೋಳಿ ಸತ್ತು ಹೋಗುತ್ತದೆ. 

ಪ್ರತಿಕ್ರಿಯಿಸಿ (+)