ಮಂಗಳವಾರ, ಮೇ 17, 2022
23 °C

ಭುವನೇಶ್ವರಿ ಜಾತ್ರೆಯಲ್ಲಿ ಸರಸ್ವತಿ ಆರಾಧನೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭುವನೇಶ್ವರಿ ಜಾತ್ರೆಯಲ್ಲಿ ಸರಸ್ವತಿ ಆರಾಧನೆ!

ಬೆಂಗಳೂರು: ಕನ್ನಡ ತಾಯಿ ‘ಭುವನೇಶ್ವರಿ’ಯ ಜಾತ್ರೆಯಲ್ಲಿ ಶನಿವಾರ ಕಂಡುಬಂದಿದ್ದು ‘ಸರಸ್ವತಿ’ಯ ಆರಾಧನೆ! ‘ನಾಡಪ್ರಭು ಕೆಂಪೇಗೌಡ ಮಹಾಮಂಟಪ’ದಲ್ಲಿ ದಿನವಿಡೀ ಸಾಹಿತ್ಯ ಗೋಷ್ಠಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದರೆ ಮಹಾಮಂಟಪದ ಎದುರಿಗೆ ಇರುವ ಪುಸ್ತಕ ಮಳಿಗೆಗಳಲ್ಲಿ ವ್ಯಾಪಾರ ಹೊತ್ತು ಕಳೆದಂತೆ ಚುರುಕು ಪಡೆಯುತ್ತಿತ್ತು.77ನೇ ಸಾಹಿತ್ಯ ಸಮ್ಮೇಳನದ ಮೊದಲನೆಯ ದಿನವಾದ ಶುಕ್ರವಾರ ಕೂಡ ಪುಸ್ತಕಗಳ ಮಾರಾಟ ನಗಣ್ಯವಾಗೇನೂ ಇರಲಿಲ್ಲ. ಆದರೂ ಶನಿವಾರ ಮಾರಾಟದ ತೀವ್ರತೆ ಶುಕ್ರವಾರಕ್ಕಿಂತ ಹೆಚ್ಚಾಗಿತ್ತು. ಮಧ್ಯಾಹ್ನ 12 ಗಂಟೆಯ ನಂತರವಂತೂ ಪುಸ್ತಕ ಮಳಿಗೆಗಳಲ್ಲಿ ಕಾಲಿಡಲು ಸಾಧ್ಯವಾಗದಷ್ಟು ಜನಸಂದಣಿ ಇತ್ತು.ಕನ್ನಡದ ಖ್ಯಾತ ಸಾಹಿತಿಗಳಾದ ಪೂರ್ಣಚಂದ್ರ ತೇಜಸ್ವಿ, ಶಿವರಾಮ ಕಾರಂತ, ಎಸ್.ಎಲ್. ಭೈರಪ್ಪ, ಯು.ಆರ್. ಅನಂತಮೂರ್ತಿ, ಕುವೆಂಪು ಅವರ ಸಾಹಿತ್ಯ ಕೃತಿಗಳು ಯಾವುದೇ ಸಾಹಿತ್ಯ ಸಮ್ಮೇಳನಗಳಲ್ಲಿ ಭರದಿಂದ ಮಾರಾಟವಾಗುವುದು ಸಾಮಾನ್ಯ. ಆದರೆ ಬೆಂಗಳೂರಿನ ಸಾಹಿತ್ಯ ಸಮ್ಮೇಳನದಲ್ಲಿ ಖ್ಯಾತ ಸಾಹಿತಿಗಳ ಸೃಜನಶೀಲ ಕೃತಿಗಳಲ್ಲದೆ, ‘ಸೃಜನೇತರ’ ಪ್ರಕಾರಕ್ಕೆ ಸೇರಿದ ಅನೇಕ ಕೃತಿಗಳು ಭರದಿಂದ ಮಾರಾಟ ಕಂಡವು.‘ಪ್ರಜಾವಾಣಿ’ಯ ಜೊತೆ ಮಾತನಾಡಿದ ಅಭಿನವ ಪ್ರಕಾಶನದ ಪಿ. ಚಂದ್ರಿಕಾ, ‘ಸೃಜನಶೀಲ ಕೃತಿಗಳಿಗಿಂತ ಚಿಂತನ ಪುಸ್ತಕಗಳು, ವಿವಿಧ ಕ್ಷೇತ್ರಗಳ ಶಾಸ್ತ್ರೀಯ ಪುಸ್ತಕಗಳಿಗೆ ಬೇಡಿಕೆ ಹೆಚ್ಚಾಗಿದೆ. ನಿನ್ನೆಗಿಂತ (ಶುಕ್ರವಾರ) ಇವತ್ತು (ಶನಿವಾರ) ಪುಸ್ತಕ ಮಾರಾಟದ ಭರಾಟೆ ಹೆಚ್ಚಿದೆ’ ಎಂದು ತಿಳಿಸಿದರು.ಪ್ರೊ.ಷ.ಶೆಟ್ಟರ್ ಅವರು ಬರೆದಿರುವ ‘ಶಂಗಂ ತಮಿಳಗಂ’ ಮತ್ತು ‘ಸೋಮನಾಥಪುರ’ ಕೃತಿಗಳು ಅಭಿನವ ಪುಸ್ತಕ ಮಳಿಗೆಯಲ್ಲಿ ಭರದಿಂದ ಮಾರಾಟವಾಗುತ್ತಿವೆ. ‘ಸೋತವರ ಚರಿತ್ರೆ ಹೇಳುವ ಬೆಂಕಿಯ ನೆನಪು (ಎಡ್ವರ್ಡೋ ಗೆಲಿಲಿಯೊ ಬರೆದದ್ದು) ಪುಸ್ತಕ ಕೂಡ ನಮ್ಮಲ್ಲಿ ಒಳ್ಳೆಯ ಮಾರಾಟ ಕಾಣುತ್ತಿದೆ’ ಎಂದು ಚಂದ್ರಿಕಾ ಅವರು ಮಾಹಿತಿ ನೀಡಿದರು.ಇನ್ನು ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಪುಸ್ತಕ ಮಳಿಗೆಯಲ್ಲಂತೂ ಜನ, ಜನ, ಜನ! ನಾಡಿನ ಸರಸ್ವತಿ ಆರಾಧಕರೆಲ್ಲ ಒಂದೇ ಕಡೆ ಬಂದು ಸೇರಿದಂತೆ. ಕನ್ನಡ ವಿ.ವಿ. ತನ್ನ ಎಲ್ಲ ಪ್ರಕಟಣೆಗಳಿಗೆ ಶೇ 50ರಷ್ಟು ರಿಯಾಯಿತಿ ಘೋಷಿಸಿರುವ ಹಿನ್ನೆಲೆಯಲ್ಲಿ ಅಲ್ಲಿ ಪುಸ್ತಕ ಖರೀದಿಸಲು ಜನ ಮುಗಿಬೀಳುತ್ತಿದ್ದರು.ಶುಕ್ರವಾರವಷ್ಟೇ ಬಿಡುಗಡೆಯಾದ ‘ಕನ್ನಡ ವಿ.ವಿ. ಚರಿತ್ರೆ ಸಂಪುಟ’ ಪುಸ್ತಕಗಳನ್ನೂ ಜನ ಆಸಕ್ತಿಯಿಂದ ವಿಚಾರಿಸುತ್ತಿದ್ದರು.

ಮೊದಲು ಓದು: ಈಗಾಗಲೇ ಓದುಗರ ಪ್ರಶಂಸೆಗೆ ಪಾತ್ರವಾಗಿರುವ ಹೆಗ್ಗೋಡಿನ ಅಕ್ಷರ ಪ್ರಕಾಶನ ಪ್ರಕಟಿಸಿರುವ ‘ಮೊದಲ ಓದು’ ಪುಸ್ತಕ ಮಾಲೆಯ ಪ್ರಕಟಣೆಗಳು ಇಲ್ಲಿಯೂ ಬಹುಬೇಡಿಕೆ ಗಿಟ್ಟಿಸಿಕೊಂಡಿವೆ.‘ಮೊದಲ ಓದು ಪುಸ್ತಕ ಮಾಲೆಯಲ್ಲಿ ಈವರೆಗೆ 49 ಪುಸ್ತಕಗಳು ಪ್ರಕಟವಾಗಿವೆ. ನವೀನ ವಿನ್ಯಾಸದ ಈ ಪುಸ್ತಕಗಳಿಗೆ ಇಲ್ಲಿ ಸಾಕಷ್ಟು ಬೇಡಿಕೆ ಇದೆ. ನಮ್ಮಲ್ಲಿ ಇವತ್ತು ಅತ್ಯಂತ ವೇಗವಾಗಿ ಖರ್ಚಾಗುತ್ತಿರುವ ಪುಸ್ತಕಗಳೂ ಅವೇ’ ಎನ್ನುತ್ತಾರೆ ಅಕ್ಷರ ಪ್ರಕಾಶನದ ಪುಸ್ತಕ ಮಳಿಗೆಯ ಮೇಲ್ವಿಚಾರಕ ಎ. ರಮೇಶ. ಇದಲ್ಲದೆ, ವೈದೇಹಿ ಕಥಾ ಸಂಕಲನಗಳಿಗೂ ಬಹಳ ಬೇಡಿಕೆ ಇದೆ ಎಂದು ಹೇಳುತ್ತಾರೆ.‘ನವೀನ ಮಾದರಿ, ಆಕರ್ಷಕ ಪುಟವಿನ್ಯಾಸದ ‘ಮೊದಲ ಓದು’ ಮಾಲಿಕೆಯ ಪುಸ್ತಕಗಳು ಸಾಹಿತ್ಯವನ್ನು ಓದಿರದ ನನ್ನಂಥವರ ಪಾಲಿಗೆ ಪರಮಾಪ್ತ’ ಎನ್ನುತ್ತಾರೆ ಬೆಂಗಳೂರಿನ ಸಾಫ್ಟ್‌ವೇರ್ ತಂತ್ರಜ್ಞ ವಿಶ್ವಾಸ್.ಯುವಜನತೆಯೇ ಹೆಚ್ಚು: ಸಾಹಿತ್ಯ ಸಮ್ಮೇಳನದ ಪುಸ್ತಕ ಮಳಿಗೆಯಲ್ಲಿ ಒಂದು ಸುತ್ತು ಹಾಕಿದಾಗ ಯುವಕರೇ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದರು. ಹಾಗೆಯೇ ಪುಸ್ತಕ ಖರೀದಿಯಲ್ಲೂ ಯುವಕರು ಹಿಂದೆ ಬಿದ್ದಿಲ್ಲ.‘ಎಲ್ಲ ವಯೋಮಾನದವರು ಪುಸ್ತಕ ಖರೀದಿಯಲ್ಲಿ ತೊಡಗಿದ್ದಾರೆ. ಇದರಲ್ಲಿ ಯುವಜನತೆಯ ಪಾಲು ಸ್ವಲ್ಪ ಹೆಚ್ಚಾಗಿಯೇ ಇದೆ. ಕಳೆದ ಸಾಹಿತ್ಯ ಸಮ್ಮೇಳನಕ್ಕಿಂತ ಹೆಚ್ಚಿನ ಪ್ರತಿಕ್ರಿಯೆ ಈ ಬಾರಿ ದೊರೆತಿದೆ’ ಎನ್ನುತ್ತಾರೆ ಛಂದ ಪುಸ್ತಕ ಪ್ರಕಾಶನದ ವಸುಧೇಂದ್ರ.ಹುಬ್ಬಳ್ಳಿಯಿಂದ ಬಂದಿರುವ ಸಾಹಿತ್ಯ ಪ್ರಕಾಶನದ ಮಳಿಗೆಯಲ್ಲೂ ಪುಸ್ತಕ ಮಾರಾಟ ಜೋರಾಗಿಯೇ ಸಾಗಿದೆ. ಶುಕ್ರವಾರ ಒಂದು ಲಕ್ಷ ರೂಪಾಯಿ ಮೊತ್ತದ ಪುಸ್ತಕ ಮಾರಾಟವಾಗಿವೆ ಎನ್ನುತ್ತಾರೆ ಸಾಹಿತ್ಯ ಪ್ರಕಾಶನದ ಉದ್ವತ್. ‘ಪುಸ್ತಕ ಮಳಿಗೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಸರಿಯಾಗಿ ಮಾಡಬೇಕಿತ್ತು. ಇಲ್ಲಿ ಖರೀದಿಸಲೂ ನೀರು ಸಿಗುತ್ತಿಲ್ಲ’ ಎನ್ನುವುದು ಅವರ ದೂರು.ಗೋರಖ್‌ಪುರದ ಗೀತಾ ಪ್ರೆಸ್‌ನವರ ಮಳಿಗೆಯಲ್ಲೂ ಒಂದೇ ಮಾತು. ಕಳೆದ ಬಾರಿಗಿಂತ ಈ ಬಾರಿ ಪುಸ್ತಕಗಳಿಗೆ ಬೇಡಿಕೆ ಹೆಚ್ಚು.’ ಇಲ್ಲಿ ಕೂಡ ಖರೀದಿಸಿದ ಪುಸ್ತಕಗಳಿಗೆ ರಿಯಾಯಿತಿ ಇದೆ. 77ನೇ ಸಾಹಿತ್ಯ ಸಮ್ಮೇಳನದ ಕೊನೆಯ ದಿನವಾದ ಭಾನುವಾರ ಪುಸ್ತಕ ಮಾರಾಟ ಇನ್ನೂ ಹೆಚ್ಚಾಗುವ ನಿರೀಕ್ಷೆ ಪುಸ್ತಕ ವ್ಯಾಪಾರಿಗಳದ್ದು.

 

 

 

ಸಾಹಿತ್ಯ ಸಮ್ಮೇಳನದ ಒಟ್ಟು 379 ಮಳಿಗೆಗಳ ಪೈಕಿ ಯಾವುದು ಎಲ್ಲಿದೆ ಎಂದು ಗುರುತಿಸಲು ಸಾರ್ವಜನಿಕರು ಸ್ವಲ್ಪ ಮಟ್ಟಿಗೆ ಗೊಂದಲ ಅನುಭವಿಸಿದರು.‘ಇಷ್ಟು ದೊಡ್ಡ ಪುಸ್ತಕ ಪ್ರದರ್ಶನದಲ್ಲಿ ನಮಗೆ ಬೇಕಾದ ಮಳಿಗೆಗೆ ತೆರಳಬೇಕೆಂದರೆ ಇಡೀ ಪುಸ್ತಕ ಪ್ರದರ್ಶನ ಕೇಂದ್ರವನ್ನು ಒಂದು ಸುತ್ತು ಸುತ್ತಿ ಬರಬೇಕು. ಈ ಜನಜಂಗುಳಿಯಲ್ಲಿ ಅದೊಂದು ಹರಸಾಹಸವೇ ಸರಿ. ಆಯೋಜಕರು ಇಲ್ಲಿ ಒಂದು ಪುಟ್ಟ ನಕಾಶೆಯನ್ನು ಹಾಕಬೇಕಿತ್ತು’ ಎಂದು ತುಮಕೂರಿನಿಂದ ಬಂದಿದ್ದ ಪ್ರಕಾಶ್ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.