ಸೋಮವಾರ, ಏಪ್ರಿಲ್ 12, 2021
25 °C

ಭೂಸುಧಾರಣಾ ಕಾಯ್ದೆ ತಿದ್ದುಪಡಿಗೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಹಾಗೂ ಬಹುರಾಷ್ಟ್ರೀಯ ಕಂಪೆನಿಗಳನ್ನು ಕೃಷಿ ಆಧಾರಿತ ಕೈಗಾರಿಕೆಗಳು ಎಂದು ಪರಿಗಣಿಸುವುದನ್ನು ವಿರೋಧಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಶನಿವಾರ ಕಾಯ್ದೆಯ ಕರಡು ಪ್ರತಿ ಸುಡುವ ಮೂಲಕ ಪ್ರತಿಭಟನೆ ನಡೆಸಿದರು.ರಾಜ್ಯ ಸರ್ಕಾರ ಕೃಷಿಕ ಎಂಬ ಪದದ ವ್ಯಾಖ್ಯಾನ ಬದಲಾವಣೆ ಮಾಡಿ ಕೃಷಿ ಆಧಾರಿತ ಕೈಗಾರಿಕೆಗಳಾದ ಅಕ್ಕಿ ಗಿರಣಿಗಳು, ಮದ್ಯಸಾರ ತಯಾರಿಕೆ ಘಟಕಗಳು, ಬೇಳೆಕಾಳು ಗಿರಣಿಗಳು, ಕ್ರಿಮಿನಾಶಕ, ರಸಗೊಬ್ಬರ ತಯಾರಿಕೆ ಮಾಡುವ ಬಹುರಾಷ್ಟ್ರೀಯ ಕಂಪೆನಿಗಳನ್ನು ರೈತರೆಂದು ಪರಿಗಣಿಸಲು ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ರಾಜ್ಯದಲ್ಲಿ ಕೃಷಿ ಬಿಕ್ಕಟ್ಟು ಇರುವಾಗಲೇ ಕೃಷಿಕರು ಸಂಕಷ್ಟದಲ್ಲಿ ಇದ್ದಾರೆ. ಅನೇಕ ರೈತರು ಆರ್ಥಿಕ ನಷ್ಟಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅದನ್ನು ತಡೆಯಲು ಯಾವುದೇ ಕಾರ್ಯಕ್ರಮ ರೂಪಿಸದ ಸರ್ಕಾರ, ರೈತರಿಗೆ ಸಿಗುವ ಅಲ್ಪಸ್ವಲ್ಪ ಸೌಲಭ್ಯಗಳನ್ನು ಕಂಪೆನಿಗಳಿಗೆ ಪರೋಕ್ಷವಾಗಿ ನೀಡಲು ಮುಂದಾಗಿದೆ ಎಂದು ಆರೋಪಿಸಿದರು.ಬಿಜೆಪಿ ಸರ್ಕಾರದ ಕೆಲ ಸಚಿವರೇ ರಾಜ್ಯದಲ್ಲಿ ಅಗ್ಗದ ದರಕ್ಕೆ ಭೂಮಿ ಪಡೆದು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ನಿರತರಾಗಿದ್ದಾರೆ. ಕೆಲವರು ಭೂಹಗರಣದಲ್ಲಿ ಸಿಲುಕಿ ಅಧಿಕಾರ ಕಳೆದುಕೊಂಡು ಜೈಲೂ ಸೇರಿದ್ದಾರೆ. ರಾಜ್ಯದ ಜಲಾಶಯಗಳಲ್ಲಿ ನೀರಿಲ್ಲ. ಮಳೆ ವಿಳಂಬದಿಂದ ರೈತರು ಕಂಗಾಲಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಅಧಿಕಾರಕ್ಕಾಗಿ ಕಿತ್ತಾಡುತ್ತಿದ್ದಾರೆ ಎಂದು ದೂರಿದರು.ಬಿಜೆಪಿ ಅಧಿಕಾರಕ್ಕೆ ಬಂದ ನಂತರ `ವಿಜನ್-2020~ ರೂಪಿಸಿದ ಕಾರ್ಯಕ್ರಮದಲ್ಲಿ ಈಗಿರುವ ರೈತರ ಸಂಖ್ಯೆ ಶೇ 64ರಿಂದ 35ಕ್ಕೆ ಇಳಿಸಲು ಉದ್ದೇಶಿಸಿದೆ. ಅಂದರೆ, ಸರ್ಕಾರ ಶೇ 29ರಷ್ಟು ಸಣ್ಣ, ಅತಿಸಣ್ಣ ರೈತರನ್ನು ಭೂಮಿಯಿಂದ ಹೊರಹಾಕಲು ಮುಂದಾಗಿದೆ. ಇಂತಹ ಧೋರಣೆ ಬದಲಾಗಬೇಕು ಎಂದು ಆಗ್ರಹಿಸಿದರು.

ಸಂಘದ ಅಧ್ಯಕ್ಷ ಮಾರುತಿ  ಮಾನ್ಪಡೆ, ಸಿಐಟಿಯು ಜಿಲ್ಲಾ ಸಂಚಾಲಕ  ಕೆ.ಎಲ್. ಭಟ್, ವೆಂಕಟೇಶ್, ಓಬಳೇಶ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.