ಶುಕ್ರವಾರ, ಮೇ 14, 2021
32 °C

ಭೂ ಮಂಜೂರಾತಿಯಲ್ಲಿ ಜಗನ್‌ಗೆ ಲಾಭ: ಸಿಬಿಐ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್:  ವೈ.ಎಸ್.ರಾಜಶೇಖರ ರೆಡ್ಡಿ ಅವರು ಆಂಧ್ರದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕಾರ್ಪೊರೇಟ್ ಕಂಪೆನಿಗಳೊಂದಿಗೆ ಕೆಲವು ನಿಯಮಬಾಹಿರ ಒಪ್ಪಂದಗಳನ್ನು ಮಾಡಿಕೊಂಡಿದ್ದರ ಹಿಂದೆ, ಜಗನ್ ಮೋಹನ ರೆಡ್ಡಿ ಅವರು ಸ್ವಂತ ಲಾಭಕ್ಕಾಗಿ ತಂದೆಯ ಮೇಲೆ ಪ್ರಭಾವ ಬೀರಿದ್ದರು ಎಂದು ಸಿಬಿಐ ಆಪಾದಿಸಿದೆ.

ವಿಶೇಷವಾಗಿ ಉದ್ಯಮಿಗಳಿಗಾಗಿ ಭೂಮಿ ಮಂಜೂರು ಮಾಡಿರುವ ಪ್ರಕರಣಗಳಲ್ಲಿ ಜಗನ್ (ಪ್ರಸ್ತುತ ಕಡಪಾ ಸಂಸದ) ಅವರು ತಮ್ಮ ತಂದೆ ರಾಜಶೇಖರ ರೆಡ್ಡಿ ಅವರ ಅಧಿಕಾರ ಹಾಗೂ ಮುಖ್ಯಮಂತ್ರಿ ಕಚೇರಿಯನ್ನು ದುರುಪಯೋಗ ಮಾಡಿಕೊಂಡಿರುವ ಬಗ್ಗೆ ಸಿಬಿಐ ಶನಿವಾರ ಸಲ್ಲಿಸಿದ 68 ಪುಟಗಳ ಆರೋಪಪಟ್ಟಿಯಲ್ಲಿ ವಿವರಿಸಿದೆ.

ನಿಶ್ಚಿತ ಕೆಲಸಕ್ಕಾಗಿ ಮಗ ತಮ್ಮ ಮೇಲೆ ಒತ್ತಡ ಹಾಕಿದ್ದರಿಂದಾಗಿ ರಾಜಶೇಖರ ರೆಡ್ಡಿ ಅವರು ಇದೀಗ ಎಮ್ಮಾರ್ ಪ್ರಕರಣದಲ್ಲಿ ಸಿಲುಕಿ ಜೈಲಿನಲ್ಲಿರುವ ಐಎಎಸ್ ಅಧಿಕಾರಿ ಬಿ.ಪಿ.ಆಚಾರ್ಯ ಅವರನ್ನು ತಮ್ಮ ಕೆಲಸಕ್ಕಾಗಿ ಬಳಸಿಕೊಂಡರು. ಒಟ್ಟಾರೆ ಇದರಿಂದ ಆಂಧ್ರಪ್ರದೇಶದ ಬೊಕ್ಕಸಕ್ಕೆ ತೀವ್ರ ಹಾನಿಯಾಗಿದೆ ಎಂದು ಸಿಬಿಐ ತಿಳಿಸಿದೆ.

ತಾವು ಪ್ರಭಾವ ಬೀರಿ ಕಂಪೆನಿಗಳಿಗೆ ಅನುಕೂಲ ಮಾಡಿಕೊಟ್ಟದ್ದಕ್ಕೆ ಪ್ರತಿಯಾಗಿ ಆ ಸಂಸ್ಥೆಗಳಿಂದ ಜಗನ್ ತಮ್ಮ ಒಡೆತನದ ಕಂಪೆನಿಗಳಲ್ಲಿ ನಿಧಿ ಹೂಡಿಕೆ ಮಾಡಿಸಿಕೊಂಡಿದ್ದಾರೆ.

ಅಲ್ಲದೇ ತಮ್ಮ ಒಡೆತನದ ಜಗತಿ ಪಬ್ಲಿಕೇಷನ್ ಕಂಪೆನಿಯನ್ನು ದೀರ್ಘ ಕಾಲದಿಂದಲೂ ಇರುವ ಕಂಪೆನಿ ಎಂಬಂತೆ ಬಿಂಬಿಸುವ ದಾಖಲೆಗಳನ್ನು ನಕಲಿಯಾಗಿ ಸೃಷ್ಟಿಸಿ, ಅದನ್ನು 3050 ಕೋಟಿ ರೂಪಾಯಿ ಮೌಲ್ಯದ ಬೃಹತ್ ಕಂಪೆನಿ ಎಂಬಂತೆ ತೋರಿಸಿಕೊಂಡಿದ್ದಾರೆ ಎನ್ನಲಾಗಿದೆ.

ಎಪಿಐಐಸಿ ಹಸಿರು ಕೈಗಾರಿಕಾ ಪಾರ್ಕ್‌ನಲ್ಲಿ ಅರಬಿಂದೊ ಮತ್ತು ಹೆಟೆರೊ ಸಂಸ್ಥೆಗಳಿಗೆ ಪ್ರತಿ ಎಕರೆಗೆ 7 ಲಕ್ಷ ರೂಪಾಯಿ ದರದಲ್ಲಿ 150 ಎಕರೆ ಜಮೀನನ್ನು ಹೇಗೆ ನೀಡಲಾಯಿತು, ಅದರಲ್ಲಿ ಬಿ.ಪಿ.ಆಚಾರ್ಯ ಪಾತ್ರವೇನು ಇತ್ಯಾದಿಗಳ ಬಗ್ಗೆ ಸಿಬಿಐ ವಿವರಿಸಿದೆ.

ಟ್ರೈಡೆಂಟ್ ಲೈಫ್ ಸೈನ್ಸಸ್ ಲಿಮಿಟೆಡ್ ಕಂಪೆನಿಗೆ ಮಾಡಿದ ಭೂ ಮಂಜೂರಾತಿ ಮತ್ತಿತರ ಸಂಗತಿಗಳ ಬಗೆಗಿನ ಪ್ರಸ್ತಾಪವನ್ನೂ ಈ ಆರೋಪ ಪಟ್ಟಿ ಒಳಗೊಂಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.