ಶನಿವಾರ, ಮೇ 28, 2022
27 °C

ಮಡಿಕೇರಿ ನಗರಕ್ಕೆ ಮಿನಿ ಬಸ್ ಸೇವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ಕೊಡಗು ಜಿಲ್ಲಾ ಕೇಂದ್ರವಾದ ಮಡಿಕೇರಿ ಅಭಿವೃದ್ಧಿ ಹೊಂದುತ್ತಿರುವ ಹಿನ್ನೆಲೆಯಲ್ಲಿ ನಗರದೊಳಗೆ ಮಿನಿ ಬಸ್ ಸೌಲಭ್ಯ ಕಲ್ಪಿಸಲು ಪ್ರಯತ್ನ ನಡೆಸಲಾಗುವುದು ಎಂದು ಮೈಸೂರು ವಿಭಾಗದ ಉಪ ಸಾರಿಗೆ ಆಯುಕ್ತ ಸಿ.ಪಿ. ನಾರಾಯಣ ಸ್ವಾಮಿ ಭರವಸೆ ನೀಡಿದ್ದಾರೆ.ನಗರದ ಪ್ರಾದೇಶಿಕ ಸಾರಿಗೆ ಇಲಾಖೆ ಆವರಣದಲ್ಲಿರುವ ಜನರಲ್ ತಿಮ್ಮಯ್ಯ ಸ್ಮಾರಕ ಭವನದ ತಾತ್ಕಾಲಿಕ ಕಚೇರಿಯಲ್ಲಿ ಗುರುವಾರ ನಡೆದ ಸಾರಿಗೆ ಅದಾಲತ್‌ನ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಮಡಿಕೇರಿ ನಗರ ವಿಸ್ತಾರವಾಗಿ ಬೆಳೆಯುತ್ತಿರುವುದರಿಂದ ಇಲ್ಲಿನ ಬಡ ಕೂಲಿ ಕಾರ್ಮಿಕರು ಮತ್ತು ಶಾಲಾ ಮಕ್ಕಳಿಗೆ ಅನುಕೂಲವಾಗಲು ನಗರ ಬಸ್ ಸೇವೆಯ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಮಡಿಕೇರಿ ನಗರದಲ್ಲಿ ಯಾವ ಯಾವ ಮಾರ್ಗಗಳಲ್ಲಿ ಮಿನಿ ಬಸ್ ಸೌಲಭ್ಯ ಕಲ್ಪಿಸಬಹುದು ಎಂಬ ಪ್ರಸ್ತಾವನೆಯನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸಲ್ಲಿಸುವಂತೆ ಅವರು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕರಿಗೆ ನಿರ್ದೇಶನ ನೀಡಿದರು.ಮಡಿಕೇರಿಗೆ ನಗರಕ್ಕೆ ಸಾರಿಗೆ ಸೌಲಭ್ಯ ಕಲ್ಪಿಸಬೇಕು ಎಂಬುದು ಸುಮಾರು 10 ವರ್ಷಗಳ ಹಿಂದಿನ ಬೇಡಿಕೆ. ಈ ಬೇಡಿಕೆಯನ್ನು ಈಡೇರಿಸಲು ಈಗಲಾದರೂ ಪ್ರಯತ್ನಿಸಬೇಕು ಎಂದು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಜಿ. ಚಿದ್ವಿಲಾಸ್ ಮನವಿ ಮಾಡಿದರು.ಸ್ಟೋನ್ ಹಿಲ್, ಗಾಲ್ಫ್ ಮೈದಾನ, ಅಬ್ಬಿ ಫಾಲ್ಸ್, ಸಂಪಿಗೆ ಕಟ್ಟೆ, ಗದ್ದಿಗೆ, ದೇಚೂರು, ರಾಜ ರಾಜೇಶ್ವರಿ ದೇವಸ್ಥಾನ ಮತ್ತಿತರ ಕಡೆ ಮಿನಿ ಬಸ್ ಸೌಲಭ್ಯ ಕಲ್ಪಿಸುವ ಅಗತ್ಯವಿದೆ ಎಂದು ಅವರು ಸಲಹೆ ಮಾಡಿದರು.ಜಿಲ್ಲೆಯಲ್ಲಿ ಸರ್ಕಾರಿ ಅಥವಾ ಖಾಸಗಿ ಬಸ್‌ಗಳನ್ನು ಪರವಾನಗಿ ಇಲ್ಲದೆ ಓಡಿಸಬಾರದು. ಅಂತಹ ಬಸ್‌ಗಳು ಓಡಾಡುವುದು ಕಂಡು ಬಂದಲ್ಲಿ ಮೊಕದ್ದಮೆ ದಾಖಲಿಸಲಾಗುವುದು. ಈ ಬಗ್ಗೆ ಇಂದಿನಿಂದಲೇ ಕಠಿಣ ಕ್ರಮ ವಹಿಸಬೇಕು ಎಂದು ಉಪ ಸಾರಿಗೆ ಆಯುಕ್ತರು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.ಕೊಡಗು ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ ಹಾಗೂ ಕಾರ್ಯದರ್ಶಿ ನಂದ ಮಾತನಾಡಿ, ಜಿಲ್ಲೆಯಲ್ಲಿ ಪರವಾನಗಿಯಿಲ್ಲದೆ ಕೆಎಸ್‌ಆರ್‌ಟಿಸಿ ಬಸ್‌ಗಳು ಓಡಾಡುತ್ತಿದ್ದು, ಇಂತಹ ಬಸ್‌ಗಳನ್ನು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿದರು.ಜಿಲ್ಲೆಯಲ್ಲಿ ಅಗತ್ಯವಿರುವ ಗ್ರಾಮ ಗಳಿಗೆ ತಾತ್ಕಾಲಿಕವಾಗಿ ಪರವಾನಗಿ ಪಡೆದಾದರೂ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಓಡಿಸಬೇಕು. ಅದನ್ನು ಬಿಟ್ಟು ಪರವಾನಗಿ ಪಡೆಯದೆ ಬಸ್ ಓಡಿಸುವುದು ಸರಿಯಲ್ಲ ಎಂದು ಉಪ ಸಾರಿಗೆ ಆಯುಕ್ತರು ಆಕ್ಷೇಪಿಸಿದರು.ಸಭೆಯ ಪ್ರಾರಂಭದಲ್ಲಿ ಕೊಡ್ಲಿ ಪೇಟೆ ಚೇಂಬರ್ ಆಫ್ ಕಾಮರ್ಸ್‌ನ ಗಿರೀಶ್ ಮಾತನಾಡಿ, ಕೊಡ್ಲಿಪೇಟೆ ಮಾರ್ಗದಲ್ಲಿ ಮಡಿಕೇರಿ ಹಾಗೂ ಅರಕಲಗೂಡು ಮತ್ತಿತರ ಕಡೆಗಳಿಗೆ ಬಸ್ ಸಂಪರ್ಕವಿಲ್ಲದೆ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿದೆ. ಈ ಸಂಬಂಧ ಹಲವು ಬಾರಿ ಅಧಿಕಾರಿಗಳ ಗಮನಸೆಳೆದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿ ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಸಾರಿಗೆ ಉಪ ಆಯುಕ್ತ ನಾರಾಯಣ ಸ್ವಾಮಿ, ತಕ್ಷಣವೇ ಬಸ್ ಸಂಪರ್ಕ ಕಲ್ಪಿಸು ವಂತೆ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ರಿಗೆ ಆದೇಶಿಸಿದರು.ಕೆಎಸ್‌ಆರ್‌ಟಿಸಿ ಬಸ್ ಚಾಲಕರು ನಿಲುಗಡೆ ಇಲ್ಲದ ಸ್ಥಳಗಳಲ್ಲಿ ಬಸ್‌ಗಳನ್ನು ನಿಲ್ಲಿಸುತ್ತಿದ್ದು, ಈ ಬಗ್ಗೆ ಕ್ರಮ ವಹಿಸಬೇಕು ಎಂದು ಆಟೋ ಚಾಲಕರ ಸಂಘದ ಪದಾಧಿಕಾರಿಗಳು ಸಭೆಯಲ್ಲಿ ಪ್ರಸ್ತಾಪಿಸಿದರು. ಈ ಬಗ್ಗೆ ಗಮನಹರಿಸುವಂತೆ ಉಪ ಆಯು ಕ್ತರು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ರಿಗೆ ಸೂಚಿಸಿದರು.ಮಡಿಕೇರಿ ನಗರದಲ್ಲಿ ಸಂತೆ ದಿನ ಮಾರುಕಟ್ಟೆ ರಸ್ತೆಯಲ್ಲಿ ಆಟೋ ಮತ್ತಿತರ ವಾಹನಗಳು ಸಾಲುಗಟ್ಟಿ ನಿಲ್ಲುವುದರಿಂದ ಸಂಚಾರಕ್ಕೆ ವ್ಯತ್ಯಯ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸುಗಮ ವಾಹನ ಸಂಚಾರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವ ಜನಿಕರು ಪೊಲೀಸ್ ಅಧಿಕಾರಿಗಳನ್ನು ಕೋರಿದರು.ಸಭೆಯಲ್ಲಿ ಆಟೋ ಮತ್ತು ಟ್ಯಾಕ್ಸಿ ಮಾಲೀಕರು, ವಿವಿಧ ಸಂಘ- ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿ ಸಾರಿಗೆ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದರು. ಪ್ರಾದೇಶಿಕ ಸಾರಿಗೆ ಅಧಿಕಾರಿ ಮೊಹಮದ್ ಹಬೀಬುಲ್ಲಾ ಖಾನ್, ಡಿವೈಎಸ್‌ಪಿ ಜೆ.ಡಿ. ಪ್ರಕಾಶ್, ಜಿ.ಪಂ. ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮಹದೇವಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.