ಗುರುವಾರ , ಮೇ 28, 2020
27 °C

ಮನ ಗೆದ್ದ ನರ್ತಕರು

ಡಾ. ಎಂ. ಸೂರ್ಯ ಪ್ರಸಾದ್ Updated:

ಅಕ್ಷರ ಗಾತ್ರ : | |

ವಿಶೇಷವಾಗಿ ಹೆಣ್ಣಿಗೇ ಹೊಂದುವ ಮತ್ತು ಆಕರ್ಷಕವಾಗಿರುವ ನೃತ್ಯ ಕಲೆಯಲ್ಲಿ ಪುರುಷರು ಕೂಡ ಪರಿಣತಿ ಸಾಧಿಸಿಕೊಂಡು ಅಷ್ಟೇ ಮನಮೋಹಕ ಪ್ರದರ್ಶನಗಳನ್ನು ನೀಡಬಲ್ಲರು ಎಂಬುದಕ್ಕೆ ನಮ್ಮ ರಾಜ್ಯದಲ್ಲಿ ಅನೇಕ ಉದಾಹರಣೆಗಳಿವೆ. ಮುಂಚೂಣಿಯಲ್ಲಿರುವ ಅಂತಹ ಕೆಲವು ಕಲಾವಿದರು ಸ್ವಯಂ ಪ್ರದರ್ಶಕ ಕಲಾವಿದರು, ಬೋಧಕರು ಹಾಗೂ ಉತ್ತಮ ಸಂಘಟಕರಾಗಿಯೂ ತಮ್ಮ ಅಸ್ತಿತ್ವವನ್ನು ಗಟ್ಟಿಗೊಳಿಸಿಕೊಳ್ಳುತ್ತಿದ್ದಾರೆ.ನೃತ್ಯ ಇತಿಹಾಸ ತಜ್ಞ ಆಶಿಷ್ ಮೋಹನ್ ಖೋಕರ್ ಈಗಾಗಲೇ ಸಾಕಷ್ಟು ಹೆಸರು ಮಾಡಿರುವ ನರ್ತಕರನ್ನು ಕುರಿತಾಗಿ ‘ಅಟೆಂಡಾನ್ಸ್’ ಎಂಬ ಕೃತಿಯನ್ನು ಈ ಬಾರಿ ಪ್ರಕಟಿಸಿದ್ದಾರೆ. ಹಾಗೆಯೇ ಕಳೆದ ಆರು ತಿಂಗಳಿಂದ ಅಲಯನ್ಸ್ ಫ್ರಾನ್ಸೆ ಸಭಾಂಗಣದಲ್ಲಿ ಡಾನ್ಸ್‌ಡಿಸ್ಕೋರ್ಸ್ ಎಂಬ ಹೆಸರಿನಲ್ಲಿ ಕಾರ್ಯಕ್ರಮ ನಡೆಸಿ ಪುರುಷ ನೃತ್ಯ ಕಲಾವಿದರ ಬಗೆಗೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದಾರೆ. ಅದಕ್ಕೆ ಕಿರೀಟವಿಟ್ಟಂತೆ ಈ ಸಲದಿಂದ ಉತ್ಕೃಷ್ಟ ನರ್ತಕರಿಗೆ ಎರಡು ಪ್ರಶಸ್ತಿ ಆರಂಭಿಸಲಾಗಿದೆ.ರಾಮ್‌ಗೋಪಾಲ್ ಪ್ರಶಸ್ತಿಗೆ ನುರಿತ ನರ್ತಕ, ಬಹುಮುಖೀ ಕಲಾವಿದ ಸತ್ಯನಾರಾಯಣರಾಜು ಪಾತ್ರರಾದರೆ ಮೋಹನ್ ಖೋಕರ್ ಪ್ರಶಸ್ತಿಗೆ ಮತ್ತೊಬ್ಬ ಯುವ ನರ್ತಕ ಪಿ. ಪ್ರವೀಣ್‌ಕುಮಾರ್ ಆಯ್ಕೆಯಾಗಿದ್ದರು.ಅಲಯನ್ಸ್ ಫ್ರಾನ್ಸೆ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಗುರು ಡಾ. ಮಾಯಾರಾವ್ ಮತ್ತು ನಿವೃತ್ತ ಐಎಎಸ್ ಅಧಿಕಾರಿ ಚಿರಂಜೀವಿಸಿಂಗ್, ಇವರಿಬ್ಬರಿಗೂ ಪ್ರಶಸ್ತಿ ಪ್ರದಾನ ಮಾಡಿದರು. ಇದಕ್ಕೂ ಮುನ್ನ ನಾಡಿನ ಶ್ರೇಷ್ಠ ಹನ್ನೆರಡು ನರ್ತಕರು ಭರತನಾಟ್ಯ, ಕೂಚಿಪುಡಿ, ಕಥಕ್, ಸಮಕಾಲೀನ ನೃತ್ಯ ಮತ್ತು ಒಡಿಸ್ಸಿ ನೃತ್ಯಗಳನ್ನು ಸೊಗಸಾಗಿ ಪ್ರದರ್ಶಿಸಿ ತುಂಬಿದ್ದ ರಸಿಕರ ಮಾನ್ಯತೆಗೊಳಗಾದರು. ನಿರೂಪಿಸಿದ ಒಂದೊಂದೇ ರಚನೆಯಲ್ಲೇ ಮಿಂಚಿದರು. ನೃತ್ಯದ ಮೇಲೆ ಅವರಿಗಿರುವ ಆಸ್ಥೆ, ಅಕ್ಕರೆ, ಉತ್ಸಾಹ ಮತ್ತು ಕಾಳಜಿಗಳು ನೃತ್ಯ ಪ್ರೇಮಿಗಳನ್ನು ರಸಾನಂದದಲ್ಲಿ ಮುಳುಗಿಸಿದವು. ಅವರು ಉಪಯೋಗಿಸಿದ ಧ್ವನಿ ಮುದ್ರಿತ ಸಂಗೀತ ಸಹಕಾರ ಉಪಯುಕ್ತವಾಗಿತ್ತು.ಕಾರ್ಯಕ್ರಮದ ಸಾಂಪ್ರದಾಯಿಕ ಆರಂಭ ಅನಿಲ್ ಅಯ್ಯರ್ ಅವರ ಭರತನಾಟ್ಯದಿಂದ. ನಟರಾಜನನ್ನು ಕುರಿತಾದ ಕನ್ನಡ ರಚನೆಯ ಮೂಲಕ ಅವರು ಆನಂದ ತಾಂಡವೇಶ್ವರನ ಕಂಡರು. ನಾಟ್ಯ ದೇವತೆಯ ರೂಪ ಗುಣಗಳನ್ನು ಪ್ರಬಲ ಚಲನೆಗಳೊಂದಿಗೆ ಸುಂದರವಾಗಿ ಚಿತ್ರಿಸಿದರು. ಸ್ವೀಕೃತ್ ಅವರ ಕಥಕ್‌ನಲ್ಲಿ ಆ ನೃತ್ಯದ ತಾಂತ್ರಿಕ ಅಂಶಗಳು ಬೆಳಗಿದವು. ತತ್ಕಾರ್, ಚಕ್ಕರ್, ತಿಹಾಯಿಗಳ ಮಂಡನೆಗಳಲ್ಲಿ ಅಭಿನಂದನಾರ್ಹ ಖಚಿತತೆ ಕಾಣ ಬಂದಿತು. ಕೂಚಿಪುಡಿ ನಾಟ್ಯದ ರಭಸ, ಲಯ ಲಾಸ್ಯಗಳು ಗುರುರಾಜ್ ಅವರ ಸಂಧ್ಯಾ ತಾಂಡವದ ನಿರೂಪಣೆಯಲ್ಲಿ ತುಂಬಿ ಬಂದವು. ವೇದಿಕೆಯನ್ನು ವಿವಿಧ ಮಾದರಿಗಳಲ್ಲಿ ಅವರ ನೃತ್ಯವು ಆವರಿಸಿತು.‘ಪ್ರದೋಷ ಸಮಯದಿ’ ರಚನೆಯ ಮೂಲಕ ಶಿವನ ಹಿರಿಮೆಯನ್ನು ಪಾರ್ಶ್ವನಾಥ ಉಪಾಧ್ಯ ಅವರು ತಮ್ಮ ಅಭಿನಯ, ನೃತ್ಯ ಮತ್ತು ನೃತ್ತಗಳ ಮೂಲಕ ಸೆರೆ ಹಿಡಿದರು. ಬಿಕ್ಕಟ್ಟಾದ ಜತಿಗಳು ಮತ್ತು ಅಡುವುಗಳನ್ನು ಸುಗಮವಾಗಿ ಮೂಡಿಸಿದರು. ತುಷಾರ್ ಭಟ್ ಅವರ ಅಭಿನಯ ಕೌಶಲ್ಯ ಶಿವನನ್ನು ಸ್ತುತಿಸುವ ಜಟಾಕಟಾಂಕ ರಚನೆಯ ಮೂಲಕ ಕಲಾತ್ಮಕವಾಗಿ ಪ್ರಕಟಗೊಂಡಿತು. ಸ್ಲೈಡ್‌ಗಳು, ಅಂಗ ಉಪಾಂಗಗಳ ಮೇಲೆ ಅಪಾರವಾದ ಪ್ರಭುತ್ವ, ಲೀಲಾಜಾಲವಾಗಿ ತೆರೆದುಕೊಂಡ ದೈಹಿಕ ಭಾಷೆ ಮುಂತಾದ ವಿಶೇಷತೆಗಳಿಂದ ಜನಾರ್ದನರಾಜ ಅರಸ್ ಅವರ ಸಮಕಾಲೀನ ನೃತ್ಯ ಪ್ರೇಕ್ಷಕರನ್ನು ಬೆರಗುಗೊಳಿಸಿತು. ಶಿವನನ್ನು ಸಮಕಾಲೀನ ಮಾಧ್ಯಮದಲ್ಲಿ ಅವರು ಬಣ್ಣಿಸಿದ ಪರಿ ರೋಚಕವೆನಿಸಿತು.

ಪ್ರಶಸ್ತಿ ವಿಜೇತ ಪ್ರವೀಣ್ ಕುಮಾರ್ ಅತ್ಯಂತ ಸರಳ ಮತ್ತು ಸರಸಮಯ ಅಭಿನಯದಲ್ಲಿ ದಾಸರ ‘ಮನೆಯೊಳಗಾಡೋ ಗೋವಿಂದ’ನನ್ನು ಆತ್ಮೀಯವಾಗಿ ಚಿತ್ರಿಸಿದರು. ರಾಧಾ ಮಾಧವರ ಪ್ರಸಂಗಾಭಿನಯದಲ್ಲಿ ಮೈಸೂರು ನಾಗರಾಜ್ ಅವರ ಕಥಕ್ ಪ್ರಶಂಸನೀಯವಾಗಿತ್ತು. ‘ಉತ್‌ಪ್ಲವನಗಳು, ಚಾರಿಗಳು’ ಶೇಷಾದ್ರಿ ಅಯ್ಯಂಗಾರ್ ಅವರ ದೇಶ್ ತಿಲ್ಲಾನದಲ್ಲಿ ಸೊಗಸಾಗಿ ಮೈ ತಳೆದವು. ನೃತ್ಯದಾನಂದದ ಸವಿಯನ್ನು ಅವರು ಉಣಬಡಿಸಿದರು. ಕಥಕ್ ನೃತ್ಯದ ಕಲಾತ್ಮಕತೆ, ಸೌಂದರ್, ಲಯದ ಹಿಡಿತ, ಅಭಿನಯ ಶ್ರೇಷ್ಠತೆ ಇತ್ಯಾದಿಗಳಿಂದ ಮುರಳಿ ಮೋಹನ್ ನೋಡುಗರು ಮೋಹಿಸುವಂತೆ ಮಾಡಿದರು.ಒಡಿಸ್ಸಿ ನೃತ್ಯದ ನಯ ನಾಜೂಕಿನ ಬಾಗು ಬಳುಕುಗಳು, ವಿಳಂಬ ಗತಿಯ ಸೊಬಗು, ಅಭಿನಯ ಪ್ರೌಢಿಮೆಗಳಿಂದ ಆಕರ್ಷಕವಾಗಿದ್ದ ಉದಯಕುಮಾರ್ ಶೆಟ್ಟಿ ಅವರ ಒಡಿಸ್ಸಿ ಪ್ರದರ್ಶನ ಇಷ್ಟವಾಯಿತು.ಸತ್ಯನಾರಾಯಣರಾಜು ಅವರು ‘ನಾಗೇಂದ್ರ ಹಾರಾಯ’ ಕೃತಿಯನ್ನು ತಲ್ಲೆನತೆಯಿಂದ ಅಭಿನಯಿಸುವುದರ ಮೂಲಕ ತಮ್ಮ ಎಂದಿನ ಪಕ್ವ ನೃತ್ಯ ಪರಿಣತಿಯನ್ನು ಪರಿಚಯಿಸಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.