ಶುಕ್ರವಾರ, ಜನವರಿ 24, 2020
18 °C

ಮರುಭೂಮಿ ಸೋಜಿಗದ ಸಪ್ತ ಪ್ರಶ್ನೆಗಳು...

ಎನ್. ವಾಸುದೇವ್ Updated:

ಅಕ್ಷರ ಗಾತ್ರ : | |

1. ಮರುಭೂಮಿ ಎಂದರೇನು?

ವರ್ಷಕ್ಕೆ ಸರಾಸರಿ 25 ಸೆಂ.ಮೀಗಿಂತ ಕಡಿಮೆ ಮಳೆ ಬೀಳುವ ಭೂಪ್ರದೇಶವೇ ಮರುಭೂಮಿ. ಹಾಗೆಂದರೆ ಜಲದ ಅಭಾವವೇ ಮರುಭೂಮಿಗಳ ನಿರ್ಣಾಯಕ ಲಕ್ಷಣ ಎಂಬುದು ಸ್ಪಷ್ಟ ತಾನೇ? ಆದ್ದರಿಂದಲೇ ಅಡವಿಗಳ ಬೆಳವಣಿಗೆಗೆ, ಶಾಶ್ವತ ನಿಬಿಡ ಸಸ್ಯಾಚ್ಛಾದನೆಗೆ ಮರುಭೂಮಿಗಳ ನೀರಸ ನೆಲ ಅಪ್ರಶಸ್ತ. ಆದರೂ ವಿಶಿಷ್ಟ ಜೀವಾವಾರವಾಗಿರುವುದು ಮರುಭೂಮಿಯ ಮಹಾನ್ ಸೋಜಿಗದ ಗುಣ.

2. ಮರುಭೂಮಿಗಳಲ್ಲೂ ಭಿನ್ನ ವಿಧಗಳಿವೆಯೇ?

ಹೌದು. ಮರುಭೂಮಿಗಳಲ್ಲಿ 2 ಮುಖ್ಯ ವಿಧಗಳಿವೆ: `ಬಿಸಿ ಮರುಭೂಮಿ ಮತ್ತು ಶೀತಲ ಮರುಭೂಮಿ~. ಇವಲ್ಲದೆ 3ನೇ ವಿಶೇಷ ವಿಧ ಕೂಡ ಇದೆ: `ಇಡ್ಯಾಫಿಕ್ ಮರುಭೂಮಿ~. ಹೆಸರುಗಳೇ ಸೂಚಿಸುವಂತೆ ಬಿಸಿ ಮರುಭೂಮಿಗಳಲ್ಲಿ ಕುದಿವ ತಾಪದ ಪರಿಸರ- ಹಗಲಲ್ಲಿ ಮಾತ್ರ. ಇರುಳು ಮುಸುಕಿದೊಡನೆ ಮೈಕೊರೆವ ಚಳಿ. ಈ ಬಗೆಯ ತದ್ವಿರುದ್ಧ ತಾಪ ವೈಪರೀತ್ಯಗಳ ಹಗಲು-ಇರುಳು ಎಲ್ಲ ಬಿಸಿ ಮರುಭೂಮಿಗಳ ಸಾಮಾನ್ಯ ಲಕ್ಷಣ. ಸಹರಾ (ಚಿತ್ರ-2), ಗೋಬಿ (ಚಿತ್ರ-4) ಥಾರ್ (ಚಿತ್ರ-5), ಅಟಕಾಮ (ಚಿತ್ರ-7), ಡೆತ್ ವ್ಯಾಲೀ (ಚಿತ್ರ-8), ದಿ ಗ್ರೇಟ್ ಸ್ಯಾಂಡೀ ಡೆಸರ್ಟ್ (ಚಿತ್ರ-11) ಕಲಹಾರೀ, ನಾಮಿಬ್ ಇತ್ಯಾದಿ ಬಿಸಿ ಮರುಭೂಮಿಗಳಿಗೆ ಉದಾಹರಣೆಗಳು. ಶೀತಲ ಮರುಭೂಮಿಗಳಲ್ಲಿ (ಚಿತ್ರ-10) ಸದಾಕಾಲ ವಿಪರೀತ ಚಳಿ, ಹಿಮಪಾತ. ಗ್ರೀನ್‌ಲ್ಯಾಂಡ್, ಇಡೀ ಅಂಟಾರ್ಕ್ಟಿಕಾ ಇತ್ಯಾದಿ ಶೀತಲ ಮರುಭೂಮಿಗಳು. `ಇಡ್ಯಾಫಿಕ್ ಮರುಭೂಮಿ~ ಎಂಬ ಪ್ರದೇಶಗಳಲ್ಲಿ ಧಾರಾಳ ಮಳೆ ಬಂದರೂ ಸಸ್ಯಾಚ್ಫಾದನೆ ಇಲ್ಲ. ಏಕೆಂದರೆ ಅಲ್ಲಿ ಮಣ್ಣಿನ ಪದರವಿಲ್ಲ. ಇದ್ದರೂ ಅದೆಲ್ಲ ನಿಸ್ಸಾರ, ನೀರಸ, ಬರೀ ಬಂಜರು (ಚಿತ್ರ-6).

3. ಧರೆಯಲ್ಲಿ ಮರುಭೂಮಿಗಳ ವಿಸ್ತಾರ ಎಷ್ಟಿದೆ?

ಧರೆಯ ಬಿಸಿ ಮರುಭೂಮಿಗಳ ನೆಲೆ ಮತ್ತು ವಿಸ್ತಾರಗಳನ್ನು ಚಿತ್ರ-1ರಲ್ಲಿ ಗಮನಿಸಿ (ಭೂಪಟದ ಹಳದಿ ಬಣ್ಣದ ಪ್ರದೇಶಗಳು). ಬಿಸಿ ಮರುಭೂಮಿ ಮತ್ತು ಶೀತಲ ಮರುಭೂಮಿಗಳ ಒಟ್ಟು ವಿಸ್ತಾರ ಇಡೀ ಭೂ ನೆಲದ ವಿಸ್ತಾರದ ಶೇ.14ರಷ್ಟಿದೆ. ಇಡ್ಯಾಫಿಕ್ ಮರುಭೂಮಿಗಳ ವಿಸ್ತೀರ್ಣ ಭೂ ನೆಲದ ಶತಾಂಶ 20ರಷ್ಟಿದೆ. ವಿಶೇಷ ಎಂದರೆ ಭೂ ನೆಲಾವಾರದ ಮೇಲಿನ ಮಾನವನ ದುರಾಕ್ರಮಣಗಳಿಂದಾಗಿ ಇಡ್ಯಾಫಿಕ್ ಮರುಭೂಮಿ ವಿಸ್ತಾರ ದಿನೇ ದಿನೇ ಹೆಚ್ಚುತ್ತಿದೆ.

4. ಮರುಭೂಮಿಗಳೆಲ್ಲ `ಮರಳು ಕಾಡು~ಗಳೇ?

ಖಂಡಿತ ಅಲ್ಲ. ಅದೊಂದು ತಪ್ಪು ಕಲ್ಪನೆ. `ಕಲಹಾರೀ~ಯಂಥ ಕೆಲವೇ ಮರುಭೂಮಿಗಳು ಸಂಪೂರ್ಣ ಮರಳುಗಾಡುಗಳಾಗಿವೆ. ಇತರ ಮರುಭೂಮಿಗಳಲ್ಲಿ ಮರಳ ಹಾಸು ಅಲ್ಪಸ್ವಲ್ಪ ಪ್ರದೇಶಗಳನ್ನಷ್ಟೇ ಆವರಿಸಿದೆ. ಉದಾ: ಸಹರಾ ಮರುಭೂಮಿಯಲ್ಲಿ ಶೇಕಡ 16ರಷ್ಟು ಭಾಗ ಮಾತ್ರ ಮರಳಿದೆ; `ಡೆತ್ ವ್ಯಾಲೀ~ಯಲ್ಲಿ ಮರಳು ಹರಡಿರುವುದು ಶೇಕಡ 1ರಷ್ಟು ಪ್ರದೇಶದಲ್ಲಿ ಮಾತ್ರ.ಉಳಿದ ನೆಲವೆಲ್ಲ ಕಲ್ಲು-ಗುಂಡುಗಳಿಂದ, ಬೋಳು ಗುಡ್ಡಬೆಟ್ಟಗಳಿಂದ, ಚಿತ್ರ-ವಿಚಿತ್ರ ಬಂಡೆ ಆಕೃತಿಗಳಿಂದ (ಚಿತ್ರ-9) ಅಲಂಕೃತ. ಇನ್ನು ಶೀತಲ ಮರುಭೂಮಿಗಳಲ್ಲಿ ಮರಳೆಲ್ಲಿ? ಇಡ್ಯಾಫಿಕ್‌ನಲ್ಲಂತೂ ಮಣ್ಣೂ ಇಲ್ಲ, ಮರಳೂ ಇಲ್ಲ; ಅದು ಬಂಡೆಯಂತೆ ಗಟ್ಟಿಯಾದ ನುರುಜು ತುಂಬಿದ ನೆಲ.5. ಮರುಭೂಮಿಗಳಲ್ಲಿ ಬಂಡೆ ಶಿಲ್ಪಗಳು ಹೇಗೆ?

ಬಿಸಿ ಮರುಭೂಮಿಗಳಲ್ಲಿನ ಬಂಡೆ ಶಿಲ್ಪಗಳೆಲ್ಲ ನಿಸರ್ಗ ನಿರ್ಮಿತ, ವಿಸ್ಮಯಭರಿತ, ಅತ್ಯದ್ಭುತ (ಚಿತ್ರ-9). ತ್ರಿವಿಧ ಪ್ರಧಾನ ವಿಚ್ಛಿದ್ರಕ ನಿಸರ್ಗ ಶಕ್ತಿಗಳು ಮರುಭೂಮಿಗಳಲ್ಲಿ ಶಿಲಾ ಶಿಲ್ಪಗಳ ನಿರ್ಮಾಣಕ್ಕೆ ಕಾರಣವಾಗಿವೆ. ಬಿಸಿ ಮರುಭೂಮಿಗಳಲ್ಲಿ ಹಗಲು-ಇರುಳುಗಳಲ್ಲಿನ ಅತ್ಯಧಿಕ ತಾವಾಂತರದಿಂದಾಗಿ ಬಂಡೆಗಳು ಪ್ರತಿದಿನ ಹಿಗ್ಗಿ-ಕುಗ್ಗಿ, ಬಿರಿದು, ಸೀಳಾಗಿ ಬಗೆ ಬಗೆಯ ಆಕಾರ ತಳೆಯುತ್ತವೆ.ಹಾಗೆಯೇ ಅಲ್ಲಿ ಬೀಸುವ ಭಾರೀ ವೇಗದ ಬಲಿಷ್ಠ ಗಾಳಿಯಲ್ಲಿ ಹೇರಳ ಮರಳಿನ ಕಣಗಳೂ ಬೆರೆತು ಹಾರಿ ಬಂಡೆಗಳ ಮೇಲ್ಮೈ ಅನ್ನು `ಮರಳು ಕಾಗದ~ದಂತೆ ಉಜ್ಜುತ್ತವೆ. ವಿಸ್ಮಯದ ಬಂಡೆ ಆಕೃತಿಗಳನ್ನು ಕಡೆಯುತ್ತವೆ. ಪ್ರಾಚೀನ ಕಾಲದಲ್ಲಿ ಪ್ರವಹಿಸುತ್ತಿದ್ದ ಹಾಗೂ ಈಗಲೂ ಹರಿಯುತ್ತಿರುವ ನದಿಗಳ ಜಲ ಪ್ರವಾಹಗಳು ಕೂಡ ಈಗಿನ ಮರುಭೂಮಿಗಳಲ್ಲಿ ಅತ್ಯದ್ಭುತ ಕಲಾತ್ಮಕ ಶಿಲಾಶಿಲ್ಪಗಳನ್ನೂ, ಕೊರಕಲುಗಳನ್ನೂ ನಿರ್ಮಿಸಿವೆ.

6.ಮರುಭೂಮಿಗಳಲ್ಲೂ ಜೀವಜಾಲ ಇದೆಯೇ?

ಖಂಡಿತ. ಶೀತಲ ಮರುಭೂಮಿಗಳಿಗಿಂತ ಹೆಚ್ಚು ನಿಬಿಡ ವೈವಿಧ್ಯಮಯ ಜೀವಜಾಲ ಬಿಸಿ ಮರುಭೂಮಿಗಳಲ್ಲಿದೆ. ಬರಡು ನೆಲದ, ತೀವ್ರ ಜಲಾಭಾವದ, ತಾಪದ ಅತೀವ ಏಳುಬೀಳುಗಳ ಪರಿಸರಕ್ಕೇ ಹೊಂದಿಕೊಂಡ ಸಸ್ಯಪ್ರಭೇದಗಳು ಪ್ರಾಣಿ ಪ್ರಭೇದಗಳು ಅಲ್ಲೆಲ್ಲ ನೆಮ್ಮದಿಯಾಗಿ ನೆಲಸಿವೆ (ಚಿತ್ರ 2, 3, 5, 12). ವಿವಿಧ ಕುರುಚಲು ಗಿಡ, ಕಳ್ಳಿ-ಕತ್ತಾಳೆ, ತಾಳೆ ಪ್ರಭೇದ, ಕೀಟ ಸರೀಸೃಪ ಹಕ್ಕಿ ಸ್ತನಿ ಪ್ರಭೇದಗಳೂ ಈ ಮರುಭೂಮಿಗಳಲ್ಲಿವೆ. ವಿಸ್ಮಯ ಏನೆಂದರೆ `ಡೆತ್ ವ್ಯಾಲೀ~ಯಂಥ ಘೋರ ಮರುಭೂಮಿಗಳಲ್ಲಿ, ಅಲ್ಲಿನ ಕೆಲವೇ ಶಾಶ್ವತ ನೀರಿನ ಹೊಂಡಗಳಲ್ಲಿ ಸಾವಿರಾರು ವರ್ಷಗಳಿಂದ ಬಾಳುತ್ತ ಬಂದಿರುವ ಮತ್ಸ್ಯಗಳೂ ಇವೆ!

7. ವಿಶ್ವದಾಖಲೆಯ ಮರುಭೂಮಿಗಳು ಯಾವುವು?

ಕೆಲವು ವಿಶಿಷ್ಟ ಮರುಭೂಮಿಗಳ ವಿಶ್ವದಾಖಲೆಗಳು:

ಅತ್ಯಂತ ವಿಸ್ತಾರ ಬಿಸಿ ಮರುಭೂಮಿ: ಆಫ್ರಿಕ ಖಂಡದ ಉತ್ತರಾರ್ಧದ ಬಹುಭಾಗವನ್ನು ಆವರಿಸಿರುವ `ಸಹರಾ~ ಮರುಭೂಮಿಯ ವಿಸ್ತೀರ್ಣ 84 ದಶಲಕ್ಷ ಚದರ ಕಿಲೋಮೀಟರ್!

ಅತ್ಯಂತ ಬಿಸಿಯ ಮರುಭೂಮಿ: ಲಿಬಿಯಾ ದೇಶದಲ್ಲಿ ಹರಡಿರುವ ಸಹರಾ ಮರುಭೂಮಿಯಲ್ಲಿ ಮಧ್ಯಾಹ್ನದಲ್ಲಿ ನೆರಳಿನ ಸ್ಥಳಗಳಲ್ಲೇ 58 ಡಿಗ್ರಿ ಸೆಲ್ಷಿಯಸ್ ಉಷ್ಣತೆ ದಾಖಲಾಗಿದೆ!ಅತ್ಯಂತ ವಿಸ್ತಾರ ಶೀತಲ ಮರುಭೂಮಿ: `ಅಂಟಾರ್ಕ್ಟಿಕಾ~. ಇಡೀ ಭೂಖಂಡವೇ ಆಗಿರುವ, ಶಾಶ್ಚತ ಹಿಮಲೋಕ ಆಗಿರುವ ಈ ಶೀತಲ ಮರುಭೂಮಿಯ ವಿಸ್ತಾರ 70 ದಶಲಕ್ಷ ಚದರ ಕಿ.ಮೀ. ಇಲ್ಲಿನ ಗರಿಷ್ಠ ತಾಪಮಾನ ಶೂನ್ಯಕ್ಕಿಂತ 15 ಡಿಗ್ರಿ ಕಡಿಮೆ! ಕನಿಷ್ಟ ಉಷ್ಣತೆಯಂತೂ ಶೂನ್ಯಕ್ಕಿಂತ 70 ಡಿಗ್ರಿ ಕಡಿಮೆ!.ಬರೀ ಮರಳು ತುಂಬಿದ ಮರುಭೂಮಿ: `ಕಲಹಾರೀ~. ಆಫ್ರಿಕ ಖಂಡದ ದಕ್ಷಿಣ ಭಾಗದಲ್ಲಿ ಹರಡಿರುವ ಈ ಮರುಭೂಮಿ ಬಹುಪಾಲು ಸಂಪೂರ್ಣವಾಗಿ ಮರಳಿನಿಂದ ಆವರಿಸಲ್ಪಟ್ಟಿದೆ.

ಅತ್ಯಂತ ಶುಷ್ಕ ಮರುಭೂಮಿ: `ಅಟಕಾಮ~. ದಕ್ಷಿಣ ಅಮೆರಿಕ ಖಂಡದ ಪಶ್ಚಿಮ ಕರಾವಳಿಯ ಈ ಮರುಭೂಮಿಯ ಕೆಲ ಪ್ರದೇಶಗಳಲ್ಲಿ ಒಂದು ಹನಿ ಮಳೆಯೂ ಬೀಳದೆ 400 ವರ್ಷ ಕಳೆದಿವೆ!

 -

ಪ್ರತಿಕ್ರಿಯಿಸಿ (+)