ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲಯಾಳಂ ಸಿನಿಮಾ ಆದ್ಯನ ಸ್ಮರಣೆ

ಚಿತ್ರ ಪಟ
Last Updated 16 ನವೆಂಬರ್ 2013, 19:30 IST
ಅಕ್ಷರ ಗಾತ್ರ

ನವೆಂಬರ್ ೭,೧೯೨೮. ಸ್ಥಳ: ತಿರುವನಂತಪುರದ ಕ್ಯಾಪಿಟಲ್ ಚಿತ್ರಮಂದಿರ. ಅಲ್ಲಿದ್ದವರಿಗೆ ಕೇರಳದಲ್ಲೇ ತಯಾರಾದ ಮೊದಲ ಸಿನಿಮಾ ನೋಡುವ ಕುತೂಹಲ. ಒಬ್ಬೊಬ್ಬರಾಗಿ ಚಿತ್ರಮಂದಿರದತ್ತ ಬರುತ್ತಿದ್ದಾರೆ. ಹೀಗೆ ಬಂದವರಲ್ಲಿ ಒಬ್ಬ ಯುವತಿ ಇನ್ನೇನು ಚಿತ್ರಮಂದಿರದೊಳಕ್ಕೆ ಹೋಗಬೇಕು. ಅದೇ ಸಮಯಕ್ಕೆ ಅಲ್ಲಿಗೆ ಬಂದ ಗಣ್ಯನೊಬ್ಬ ಅವಳನ್ನು ತಡೆದ. ಕೆಳಜಾತಿಯ ಹೆಂಗಸು ಚಿತ್ರ ಮಂದಿರದೊಳಕ್ಕೆ ಹೋಗುವುದಕ್ಕೆ ಅವಕಾಶ ಕೊಡುವುದಿಲ್ಲ ಎಂದು ಕೂಗಾಡಿದ. ಅವಳನ್ನು ಒಳಕ್ಕೆ ಬಿಡುವುದಾದರೆ ತಾನು ಸಿನಿಮಾ ನೋಡುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ. ಅತಿಥಿಗಳ ಸ್ವಾಗತಕ್ಕೆ ಖುದ್ದಾಗಿ ನಿಂತಿದ್ದ ನಿರ್ದೇಶಕನಿಗೆ ಇರುಸುಮುರುಸು. ಗಣ್ಯನನ್ನು ಎದುರುಹಾಕಿಕೊಳ್ಳುವಂತಿಲ್ಲ. ಯುವತಿಗೆ ಕೈ ಮುಗಿದು ಪರಿಸ್ಥಿತಿಯ ಸೂಕ್ಷ್ಮ ವಿವರಿಸಿದ. ಆಕೆ ಚಿತ್ರಮಂದಿರದ ಹೊರಗೆ ಉಳಿದಳು!

ಸಿನಿಮಾ ಶುರುವಾಯಿತು. ಅದರ ನಾಯಕಿ ಸಂಪ್ರದಾಯವಾದಿ ನಾಯರ್ ಗೃಹಿಣಿ. ಸಿನಿಮಾ ನೋಡಲು ಪ್ರವೇಶ ಸಿಗದೆ ಹೊರಗೇ ಉಳಿದ ಕೆಳಜಾತಿಯ ಯುವತಿಯೇ ತೆರೆಯ ಮೇಲೆ ಕಾಣುತ್ತಿದ್ದಾಳೆ! ಸಂಪ್ರದಾಯವಾದಿ ನಾಯರ್ ಗೃಹಿಣಿಯಾಗಿ ಅವಳನ್ನು ನೋಡಲು ಅನೇಕರಿಗೆ ಇಷ್ಟವಿಲ್ಲ. ಗದ್ದಲ ಶುರು ಮಾಡಿದರು. ಪ್ರದರ್ಶನ ನಿಲ್ಲಿಸುವಂತೆ ಒತ್ತಾಯಿಸಿದರು. ತೆರೆಯತ್ತ ಕಲ್ಲು ತೂರಿದರು. ಕೊನೆಗೂ ಪ್ರದರ್ಶನ ಸ್ಥಗಿತಗೊಂಡಿತು. ಅಷ್ಟಕ್ಕೇ ಸುಮ್ಮನಾಗಲಿಲ್ಲ. ಚಿತ್ರಮಂದಿರದಿಂದ ಹೊರಬಂದ ಜನರು ಅಲ್ಲಿಯೇ ಇದ್ದ ನಾಯಕಿಯ ಮೇಲೆ ಹಲ್ಲೆಗೆ ಮುಂದಾದರು. ಉದ್ರಿಕ್ತ ಜನರನ್ನು ಕಂಡು ಹೆದರಿದ ಆಕೆ ತನ್ನ ಗುಡಿಸಲ ಕಡೆಗೆ ಓಡಿದಳು. ಹಿಂಬಾಲಿಸಿದ ಜನ ಗುಡಿಸಲಿಗೆ ಬೆಂಕಿ ಹಚ್ಚಿದರು. ಅವಳಿಗೆ ತಕ್ಕ ಶಾಸ್ತಿ ಆಯಿತೆಂದು ಕೇಕೆಹಾಕಿ ನಕ್ಕರು. ಅವಳು ಸತ್ತೇ ಹೋದಳೆಂದು ಭಾವಿಸಿದರು. ಅವಳು ಸಾಯಲಿಲ್ಲ. ಹಿಂಬಾಗಿಲಿನಿಂದ ಹೊರಕ್ಕೆ ಓಡಿ ಕತ್ತಲಲ್ಲಿ ಕಣ್ಮರೆಯಾದಳು.

ಇದು ಕೇರಳದ ಮೊದಲ ಮೂಕಿ ಸಿನಿಮಾ ‘ವಿಗತಕುಮಾರನ್’ ಬಿಡುಗಡೆಯ ದಿನ ನಡೆದ ಘಟನೆ. ಸಿನಿಮಾ ನಾಯಕಿಯ ಹೆಸರು
ಪಿ.ಕೆ. ರೋಸಿ. ಚಿತ್ರದ ನಿರ್ದೇಶಕರು ಜೆ.ಸಿ. ಡ್ಯಾನಿಯಲ್. ಅವರ ಪೂರ್ಣ ಹೆಸರು ಜೋಸೆಫ್ ಚೆಲ್ಲಯ್ಯ ಡ್ಯಾನಿಯಲ್ ನಾಡಾರ್. ತಮಿಳುನಾಡು ಮೂಲದವರು. ‘ವಿಗತಕುಮಾರನ್’ ಸಿನಿಮಾದ ಕಥೆಯನ್ನು ಅವರೇ ಬರೆದು, ನಾಯಕನಾಗಿ ನಟಿಸಿದ್ದರು. ಛಾಯಾಗ್ರಹಣವೂ ಅವರದೇ. ಸಿನಿಮಾಕ್ಕೆ ದುಡ್ಡು ಹಾಕಿದವರೂ ಅವರೇ. ಸಿನಿಮಾ ನಿರ್ಮಿಸಲು ತಮ್ಮ ಭೂಮಿ ಮಾರಾಟ ಮಾಡಿ ಬಂದ ಹಣದಿಂದ ತಿರುವನಂತಪುರದಲ್ಲಿ ‘ದಿ ಟ್ರಾವಂಕೂರ್ ನ್ಯಾಷನಲ್ ಪಿಕ್ಚರ್ಸ್‌’ ಹೆಸರಿನ ಸ್ಟುಡಿಯೊ ತೆರೆದಿದ್ದರು. ಸಿನಿಮಾ ನಿರ್ಮಾಣದ ತಂತ್ರಗಳನ್ನು ಅಭ್ಯಾಸ ಮಾಡಿದ್ದರು. ಭಾರತೀಯ ಸಿನಿಮಾ ಪಿತಾಮಹ ದುಂಡಿರಾಜ್ ಫಾಳ್ಕೆ ಹಾಗೂ ಇತರರನ್ನು ಖುದ್ದು ಭೇಟಿ ಮಾಡಿ ಅವರ ಅನುಭವಗಳನ್ನು ತಿಳಿದುಕೊಂಡು ‘ವಿಗತಕುಮಾರನ್’ ನಿರ್ಮಾಣಕ್ಕೆ ಕೈಹಾಕಿದ್ದರು.

ಆಗ ಕೇರಳ ರಂಗಭೂಮಿಯಲ್ಲಿ ಸ್ತ್ರೀ ಪಾತ್ರಗಳನ್ನು ಪುರುಷರೇ ಮಾಡುತ್ತಿದ್ದರು. ಡ್ಯಾನಿಯಲ್, ತಮ್ಮ ಚಿತ್ರದ ನಾಯಕಿ ಪಾತ್ರವನ್ನು ಮಹಿಳೆಯಿಂದ ಮಾಡಿಸಲು ನಿರ್ಧರಿಸಿದ್ದರು. ಅವಳನ್ನು ಹುಡುಕಲು ಅವರು ಪಟ್ಟಪಾಡು ಅಷ್ಟಿಷ್ಟಲ್ಲ. ಆಗ ಕಣ್ಣಿಗೆ ಬಿದ್ದವಳು ಪಿ.ಕೆ. ರೋಸಿ. ಕೆಳಜಾತಿಯ ಕೃಷಿ ಕಾರ್ಮಿಕನ ಮಗಳು. ಅವಳೇ ತಮ್ಮ ಚಿತ್ರದ ನಾಯಕಿ ಎಂದು ಡ್ಯಾನಿಯಲ್ ನಿರ್ಧರಿಸಿದರು. ನಾಯರ್ ಗೃಹಿಣಿಯ ಉಡುಪು, ಒಡವೆಗಳನ್ನು ಅವಳಿಗೆ ಹಾಕಿಸಿ ಕ್ಯಾಮೆರಾ ಕಣ್ಣಿಂದ ನೋಡಿದರು. ಪಾತ್ರಕ್ಕೆ ಅವಳೇ ಸೂಕ್ತ ಅನ್ನಿಸಿತು. ಕ್ಯಾಮೆರಾ ಮುಂದೆ ಹೇಗೆ ನಟಿಸಬೇಕು ಎಂಬುದನ್ನು ಹೇಳಿಕೊಟ್ಟರು. ಈ ಕೆಲಸದಲ್ಲಿ ಡ್ಯಾನಿಯಲ್ ಪತ್ನಿ ಜೆನೆಟ್ ಗಂಡನಿಗೆ ಸಹಕಾರ ನೀಡಿದರು. ರೋಸಿ ಪಾತ್ರಕ್ಕೆ ಜೀವ ತುಂಬಿ ನಟಿಸಿದಳು. ಬಿಡುಗಡೆಯ ದಿನ ಆದ ರಾದ್ಧಾಂತದಿಂದ ಡ್ಯಾನಿಯಲ್ ಆಘಾತಗೊಂಡಿದ್ದರು. ರೋಸಿ ಜಾತಿವಾದಿಗಳಿಂದ ತಪ್ಪಿಸಿಕೊಂಡಿದ್ದಳು. ಮುಂದೇನಾಯಿತು ಎಂಬುದು ಗೊತ್ತೇ ಆಗಲಿಲ್ಲ.

‘ವಿಗತಕುಮಾರನ್’ ಅಲೆಪ್ಪಿಯಲ್ಲಿ ಪ್ರದರ್ಶನ ಕಂಡಿತು. ಜನ ನೋಡಿ ಅಚ್ಚರಿಪಟ್ಟರು. ಆದರೆ ಪ್ರತಿರೋಧ ವ್ಯಕ್ತಪಡಿಸಲಿಲ್ಲ. ನಂತರ ತ್ರಿಚೂರು, ತಲಚೇರಿ, ನಾಗರಕೋಯಿಲ್ ಮತ್ತಿತರ ಕಡೆ ಪ್ರದರ್ಶನವಾಯಿತು. ಡ್ಯಾನಿಯಲ್ ಚಿತ್ರಕ್ಕೆ ಹಾಕಿದ ಹಣದ ಅರ್ಧದಷ್ಟೂ ಕೈಗೆ ಬರಲಿಲ್ಲ. ಕೊನೆಗೆ ಸ್ಟುಡಿಯೊ ಮುಚ್ಚಿದರು. ಜೀವನ ನಿರ್ವಹಣೆಗಾಗಿ ತಮಿಳುನಾಡಿಗೆ ಹೋದರು. ಅಲ್ಲಿ ದಂತ ವೈದ್ಯರಾಗಿ ಕೆಲವರ್ಷ ದುಡಿದರು. ಆದರೆ ಸಿನಿಮಾ ಕನಸು ಕಾಣುವುದನ್ನು ಬಿಡಲಿಲ್ಲ. ‘ವಿಗತಕುಮಾರನ್’ ಚಿತ್ರದ ನೆಗೆಟಿವ್‌ಗೆ ಡ್ಯಾನಿಯಲ್ ಅವರ ಮಗನೊಬ್ಬ ಬೆಂಕಿ ಹಚ್ಚಿ ಸುಟ್ಟುಹಾಕಿದ. ಸಿನಿಮಾ ಮಾಡಿದ್ದಕ್ಕೆ ಸಾಕ್ಷಿಯೂ ಇಲ್ಲವಾಯಿತು. ಡ್ಯಾನಿಯಲ್ ಉತ್ಸಾಹ ಕಳೆದುಕೊಂಡರು. ಕೇರಳದ ಸಿನಿಮಾ ಪಿತಾಮಹ ಕಳೆದೇ ಹೋದರು.

ಇತ್ತ ಕೇರಳದಲ್ಲಿ ಸಿನಿಮಾ ನಿರ್ಮಾಣ ಮುಂದುವರಿದಿತ್ತು. ‘ವಿಗತಕುಮಾರನ್’ ನಂತರ ‘ಮಾರ್ತಾಂಡ ವರ್ಮಾ’ ನಿರ್ಮಾಣವಾಯಿತು. ಸಿ.ವಿ. ರಾಮನ್ ಪಿಳ್ಳೈ ಅವರ ಕಾದಂಬರಿ ಆಧರಿಸಿದ ಈ ಸಿನಿಮಾದ ನಿರ್ದೇಶಕರು ಆರ್. ಸುಂದರರಾಜ್. ಮಾರ್ತಾಂಡ ವರ್ಮಾ ಪ್ರದರ್ಶನವಾದದ್ದು ಕೇವಲ ನಾಲ್ಕು ದಿನ. ಕಾಪಿರೈಟ್ ಸಮಸ್ಯೆಯಿಂದಾಗಿ ಅದನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಕೋರ್ಟ್ ಆದೇಶ ನೀಡಿತು. ಅದರ ಪ್ರತಿ ಈಗ ಪುಣೆಯ ಸಿನಿಮಾ ಆರ್ಕೈವ್ಸ್‌ನಲ್ಲಿದೆ. ‘ಮಾರ್ತಾಂಡ ವರ್ಮಾ’ ಚಿತ್ರವನ್ನು ಸರ್ಕಾರ ಕೇರಳ ರಾಜ್ಯದ ಮೊದಲ ಸಿನಿಮಾ ಎಂದು ಪರಿಗಣಿಸಿತ್ತು. ಜನ ಮರೆತಿದ್ದ ಜೆ.ಸಿ. ಡ್ಯಾನಿಯಲ್ ಹಾಗೂ ‘ವಿಗತಕುಮಾರನ್’ ಸಿನಿಮಾ ಕುರಿತು ಮತ್ತೆ ಗಮನ ಸೆಳೆದವರು ಮಲಯಾಳಂ ಪತ್ರಕರ್ತ ಚೆಲಂಗಾಟ್ ಗೋಪಾಲಕೃಷ್ಣನ್.

‘ವಿಗತಕುಮಾರ್’ ಚಿತ್ರದ ಬಿಡುಗಡೆ ಸಮಯದಲ್ಲಿ ಪ್ರಕಟಿಸಿದ್ದ ಕೆಲವು ಕರಪತ್ರಗಳು ಹಾಗೂ ಒಂದು ಸ್ಥಿರಚಿತ್ರ ಹಿಡಿದುಕೊಂಡು ಓಡಾಡಿ ಕೊನೆಗೂ ಡ್ಯಾನಿಯಲ್ ಅವರನ್ನು ಪತ್ತೆ  ಹಚ್ಚಿದರು. ವೃದ್ಧಾಪ್ಯ ಹಾಗೂ ಅನಾರೋಗ್ಯದಿಂದ ಬಳಲುತ್ತಿದ್ದ ಡ್ಯಾನಿಯಲ್‌ಅವರನ್ನು ಭೇಟಿಯಾಗಿ ಮಾತುಕತೆ ನಡೆಸುವುದೂ ಗೋಪಾಲಕೃಷ್ಣನ್‌ರಿಗೆ ಪ್ರಯಾಸವೆನಿಸಿತು. ಅವರ ಸಿನಿಮಾ ನಿರ್ಮಾಣದ ಸಾಹಸ ಕುರಿತು ತಮ್ಮ ಪತ್ರಿಕೆಯಲ್ಲಿ ಬರೆದರು. ಡ್ಯಾನಿಯಲ್ ಅವರೇ ಕೇರಳ ಸಿನಿಮಾದ ಆದ್ಯ ಎಂದು ಪ್ರತಿಪಾದಿಸಿದರು. ಸರ್ಕಾರ ಅದನ್ನು ಒಪ್ಪಿಕೊಳ್ಳಲಿಲ್ಲ. ಸಾಕ್ಷಿ ಏನಿದೆ ಎಂದು ಕೇಳಿತು. ಡ್ಯಾನಿಯಲ್ ಮಲಯಾಳಿ ಅಲ್ಲ. ಅವರು ಕೇರಳದವರೂ ಅಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ವಾದಿಸಿದರು.

ಗೋಪಾಲಕೃಷ್ಣನ್ ಪಟ್ಟು ಬಿಡಲಿಲ್ಲ. ಡ್ಯಾನಿಯಲ್ ಬ್ರಾಹ್ಮಣನಲ್ಲ ಎನ್ನುವ ಕಾರಣಕ್ಕೆ ಅವರನ್ನು ಸಿನಿಮಾ ಪಿತಾಮಹನೆಂದು ಒಪ್ಪಿಕೊಳ್ಳಲು ಹಿಂಜರಿಯುತ್ತೀರಿ ಎಂದು ಹಿರಿಯ ಅಧಿಕಾರಿಗೆ ನೇರವಾಗಿ ಹೇಳಿದರು. ಡ್ಯಾನಿಯಲ್‌ಅವರಿಗೆ ಕಲಾವಿದರಿಗೆ ನೀಡುವ ಗೌರವ ಮಾಸಾಶನ ಕೊಡಬೇಕೆಂದು ಒತ್ತಾಯಿಸಿದರು. ಕೊನೆಗೂ ಸರ್ಕಾರ ಡ್ಯಾನಿಯಲ್‌ಅವರನ್ನು ಮಲಯಾಳಂ ಸಿನಿಮಾ ಪಿತಾಮಹನೆಂದು ಒಪ್ಪಿಕೊಂಡಿತು. ಆದರೆ ಆ ವೇಳೆಗೆ ಅವರು ಬದುಕಿರಲಿಲ್ಲ. ೧೯೯೨ರಲ್ಲಿ ಕೇರಳ ಸರ್ಕಾರ ಅವರ ಹೆಸರಿನಲ್ಲಿ ಉತ್ತಮ ಸಿನಿಮಾಕ್ಕೆ ಪಶಸ್ತಿ ನೀಡುವುದಾಗಿ ಪ್ರಕಟಿಸಿತು. ಆ ಮೂಲಕ ಡ್ಯಾನಿಯಲ್ ಅವರ ಹೆಸರು ಉಳಿಯಿತು. ಅವರ ಸಾಧನೆಗೆ ಮನ್ನಣೆ ಸಿಕ್ಕಿತು.

ಮೇಲಿನ ಎಲ್ಲಾ ಸಂಗತಿಗಳು ಜೆ.ಸಿ. ಡ್ಯಾನಿಯಲ್‌ ಅವರನ್ನು ಕುರಿತ ಮಲಯಾಳಂ ಸಿನಿಮಾ ‘ಸೆಲ್ಯುಲಾಯ್ಡ್’ನಲ್ಲಿವೆ. ೧೨೯ ನಿಮಿಷಗಳ ಈ ಸಿನಿಮಾ ಇದೇ ವರ್ಷ ಬಿಡುಗಡೆಯಾಯಿತು. ಕಮಾಲ್ (ಕಮಾಲುದ್ದೀನ್ ಅಹಮದ್) ಅದರ ನಿರ್ದೇಶಕರು. ‘ಸೆಲ್ಯುಲಾಯ್ಡ್’ ಈ ವರ್ಷ ತೆರೆಕಂಡ ಅತ್ಯುತ್ತಮ ಮಲಯಾಳಂ ಸಿನಿಮಾ ಎಂಬ ಮನ್ನಣೆ ಗಳಿಸಿ ಏಳು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಡ್ಯಾನಿಯಲ್ ಆಗಿ ಪೃಥ್ವಿರಾಜ್ ನಟಿಸಿ ಪಾತ್ರಕ್ಕೆ ಜೀವತುಂಬಿದ್ದಾರೆ. ಪಿ.ಕೆ. ರೋಸಿಯಾಗಿ ಚಾಂದಿನಿ ನಟಿಸಿದ್ದಾರೆ. ಡ್ಯಾನಿಯಲ್ ಪತ್ನಿಯಾಗಿ ಮಮತಾ ಮೋಹನ್‌ದಾಸ್, ಪತ್ರಕರ್ತ ಗೋಪಾಲಕೃಷ್ಣನ್ ಪಾತ್ರದಲ್ಲಿ ಶ್ರೀನಿವಾಸನ್ ನಟಿಸಿದ್ದಾರೆ.

ಏಳೆಂಟು ದಶಕಗಳ ಹಿಂದಿನ ಪರಿಸರ ಸೃಷ್ಟಿಸಿ ಡ್ಯಾನಿಯಲ್‌ ಸಾಧನೆಯನ್ನು ತೆರೆಯ ಮೇಲೆ ಕಟ್ಟಿಕೊಡುವ ಪ್ರಯತ್ನ ದೊಡ್ಡ ಸವಾಲಿನದು. ಮಲಯಾಳಂ ಸಿನಿಮಾ ಪ್ರವರ್ತಕನ ಜೀವನ ಹಾಗೂ ಸಾಧನೆ ಪೇಕ್ಷಕರ ಪ್ರಶಂಸೆಗೆ ಪಾತ್ರವಾಗುತ್ತದೆ. ಉತ್ಪ್ರೇಕ್ಷೆಯ ದೃಶ್ಯಗಳಿಲ್ಲದ ‘ಸೆಲ್ಯುಲಾಯ್ಡ್’ ಮಲಯಾಳಂ ಸಿನಿಮಾ ಪ್ರೇಕ್ಷಕರಿಗಷ್ಟೇ ಅಲ್ಲದೆ ಭಾರತೀಯ ಸಿನಿಮಾ ಹೇಗೆ ವಿಕಾಸಗೊಳ್ಳುತ್ತ ಹೋಯಿತು ಎಂಬುದನ್ನು ಅಧ್ಯಯನ ಮಾಡುವ ಮನಸ್ಸುಗಳಿಗೂ ಇಷ್ಟವಾಗುತ್ತದೆ.

ಪಿ.ಕೆ. ರೋಸಿ ಕೊನೆಗೂ ಅಜ್ಞಾತರಾಗಿ ಉಳಿದುಬಿಟ್ಟರೆಂಬುದು ವಿಷಾದನೀಯ ಸಂಗತಿ. ಜಾತಿವಾದಿಗಳಿಂದ ತಪ್ಪಿಸಿಕೊಳ್ಳಲು ತಮಿಳುನಾಡಿಗೆ ಓಡಿಹೋಗಿ, ಅಲ್ಲಿ ಲಾರಿ ಚಾಲಕನೊಬ್ಬನನ್ನು ಮದುವೆಯಾಗಿ  ಜೀವನ ಸಾಗಿಸಿದರು ಎಂಬ ಮಾಹಿತಿಯಷ್ಟೇ ಸಿಕ್ಕಿದೆ. ಮಲಯಾಳಂ ಸಿನಿಮಾದ ಮೊದಲ ನಾಯಕಿ ಕೊನೆಗೂ ಅಜ್ಞಾತರಾಗಿಯೇ ಉಳಿದದ್ದು ನಮ್ಮ ಸಾಮಾಜಿಕ ವ್ಯವಸ್ಥೆಯ ದುರಂತ.

ಭಾರತೀಯ ಸಿನಿಮಾ ಪಿತಾಮಹ ದುಂಡಿರಾಜ್ ಗೋವಿಂದ ಫಾಲ್ಕೆ ಅವರ ಸಿನಿಮಾ ಸಾಧನೆ ಪರಿಚಯಿಸುವ ಮರಾಠಿ ಚಿತ್ರ ‘ಹರಿಶ್ಚಂದ್ರಾಚಿ ಫ್ಯಾಕ್ಟರಿ’ ೨೦೧೦ರಲ್ಲಿ ತೆರೆಕಂಡಿತ್ತು. ಭಾರತೀಯ ಸಿನಿಮಾಕ್ಕೆ ನೂರು ವರ್ಷಗಳು ತುಂಬಿವೆ. ದೇಶದ ವಿವಿಧ ಭಾಷೆಗಳಲ್ಲಿ ಸಿನಿಮಾ ನಿರ್ಮಿಸಿದ ಮಹನೀಯರ ಸಾಧನೆಗಳನ್ನು ಅಕ್ಷರಗಳಲ್ಲಿ ದಾಖಲಿಸುವ ಪ್ರಯತ್ನವಷ್ಟೇ ಆಗಿದೆ. ಎಲ್ಲ ಭಾಷೆಗಳ ಆದ್ಯರ ಕುರಿತು ಸಿನಿಮಾ ಮಾಡಲು ಸಾಧ್ಯವಿದೆ ಎಂಬುದನ್ನು ಮರಾಠಿ ಹಾಗೂ ಮಲಯಾಳಂ ಸಿನಿಮಾ ಮಂದಿ ತೋರಿಸಿಕೊಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT