ಶನಿವಾರ, ಜನವರಿ 18, 2020
20 °C

ಮಹಿಳಾ ಸಬಲೀಕರಣ: ಬಜೆಟ್‌ನಲ್ಲಿ ಅಳವಡಿಕೆಗೆ ಚಿಂತನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಮಹಿಳಾ ಸಬಲೀಕರಣಕ್ಕೆ ಪೂರಕವಾದ ಮಾರ್ಗೋಪಾಯಗಳ ಕುರಿತು ಮಹಿಳಾ ಸಂಘಟನೆಗಳು ಚರ್ಚೆ ನಡೆಸಿ ಒಂದು ಯೋಜಿತ ನಿರ್ಧಾರವನ್ನು ರೂಪಿಸಬೇಕು. ಈ ನಿರ್ಧಾರದ ಅಂಶಗಳನ್ನು ಬಜೆಟ್‌ನಲ್ಲಿ ಅಳವಡಿಕೆಗೆ ಚಿಂತಿಸಲಾಗುವುದು~ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಭರವಸೆ ನೀಡಿದರು.ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು ನಗರದ ಮಿಥಿಕ್ ಸೊಸೈಟಿಯಲ್ಲಿ ಸೋಮವಾರ ಆಯೋಜಿಸಿದ್ದ `ಮಹಿಳಾ ಆರ್ಥಿಕ ಸಬಲೀಕರಣ~ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.`ಹದಿನಾಲ್ಕು ಜಿಲ್ಲೆಗಳಲ್ಲಿರುವ 23 ಸಾವಿರ ದೇವದಾಸಿಯರನ್ನು ಈಗಾಗಲೇ ನಿಗಮವು ಗುರುತಿಸಿದ್ದು, ಸರ್ಕಾರ ಅವರಿಗೆ ಮಾಸಾಶನ ನೀಡುವ ಸಲುವಾಗಿ 6 ಕೋಟಿ ರೂಪಾಯಿ ಅನುದಾನವನ್ನು ಬಜೆಟ್‌ನಲ್ಲಿ ಕಾಯ್ದಿರಿಸಲಾಗಿದೆ~ ಎಂದು ಹೇಳಿದರು.`ಸರ್ಕಾರಿ ಇಲಾಖೆಗಳಲ್ಲೂ ಮಹಿಳಾ ಮೀಸಲಾತಿಗಾಗಿ ಸ್ತ್ರೀಶಕ್ತಿ ಸಂಘಟನೆಗಳು ಹೋರಾಡಬೇಕಿದೆ. ಮಧ್ಯಮ ಮತ್ತು ಉನ್ನತ ವರ್ಗಗಳಲ್ಲಿರುವ ಮಹಿಳೆಯರು ಸಾಕಷ್ಟು ಮಟ್ಟಿಗೆ ಸಬಲರಾಗಿದ್ದಾರೆ. ಸರ್ಕಾರದ ಮಹಿಳಾ ಪರ ಯೋಜನೆಗಳೆಲ್ಲವೂ ತಳ ಸಮುದಾಯದ ಮಹಿಳೆಯರಿಗೆ ತಲುಪಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರಿ ನೌಕರರು ಕಾರ್ಯನಿರ್ವಹಿಸಬೇಕಿದೆ~ ಎಂದು ಹೇಳಿದರು.ಬಿಜೆಪಿ ರಾಷ್ಟ್ರೀಯ ವಕ್ತಾರರಾದ ನಿರ್ಮಲಾ ಸೀತಾರಾಮನ್ ಮಾತನಾಡಿ, `ರಾಜ್ಯದ ಒಟ್ಟು 33 ಸರ್ಕಾರಿ ಇಲಾಖೆಗಳಲ್ಲಿ ಮಹಿಳೆಯರಿಗೆ ವಿಶೇಷ ಅನುದಾನ ಒದಗಿಸಬೇಕು ಮತ್ತು ಈವರೆಗೆ ಬಿಡುಗಡೆಯಾದ ಅನುದಾನವು ಮಹಿಳೆಯರ ಕಲ್ಯಾಣಕ್ಕೆ ವಿನಿಯೋಗವಾಗಿರುವ ಬಗ್ಗೆ ಸರ್ಕಾರ ಕೂಲಕಂಷವಾಗಿ ಪರಿಶೀಲಿಸಬೇಕು~ ಎಂದು ಹೇಳಿದರು.`ಕೇಂದ್ರ ಸರ್ಕಾರವು ಮಹಿಳಾಪರ ಯೋಜನೆಗಳಿಗೆ ಬಿಡುಗಡೆಗೊಳಿಸುವ ಅನುದಾನವು ಗ್ರಾಮೀಣ ಭಾಗದಲ್ಲಿ ಕಟ್ಟಕಡೆಯ ಮಹಿಳೆಗೆ ತಲುಪಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹೆಚ್ಚಿನ ನಿಗಾವಹಿಸಬೇಕು~ ಎಂದು ಸಲಹೆ ನೀಡಿದರು.ವಿಧಾನ ಪರಿಷತ್ತಿನ ಉಪಸಭಾಪತಿ ವಿಮಲಾಗೌಡ ಮಾತನಾಡಿ,  `ಬಜೆಟ್ ಪೂರ್ವಭಾವಿ ಸಭೆಯಲ್ಲಿ ಮಹಿಳೆಯರಿಗೆ ಆಹ್ವಾನ ನೀಡುವ ಪರಿಪಾಠವನ್ನು ಬಿಜೆಪಿ ಸರ್ಕಾರ ಮುಂದುವರಿಸಬೇಕಿದೆ. ಚರ್ಚೆಯಲ್ಲಿ ಹೊರಬೀಳುವ ನಿರ್ಧಾರಗಳನ್ನು ಅನುಷ್ಠಾನ ಗೊಳಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಬೇಕು~ ಎಂದು ಕಿವಿಮಾತು ಹೇಳಿದರು.ಶಾಸಕರಾದ ಕಲ್ಪನಾ ಎಂ.ಎಸ್.ಸಿದ್ದರಾಜು,  ಎಂ. ಸತೀಶ್ ರೆಡ್ಡಿ, ನಿಗಮದ ಅಧ್ಯಕ್ಷೆ ಸರೋಜಿನಿ ಭಾರದ್ವಾಜ್ ಇತರರು ಉಪಸ್ಥಿತರಿದ್ದರು.ದೌರ್ಜನ್ಯಗಳಿಗೆ ತುಂಡುಡುಗೆಗಳೇ ಕಾರಣ: ವಿಮಲಾಗೌಡ

`ಮಹಿಳೆಯರ ಮೇಲೆ ನಡೆಯುತ್ತಿರುವ ಬಹುತೇಕ ದೌರ್ಜನ್ಯಗಳಿಗೆ ಅವರು ಧರಿಸುತ್ತಿರುವ ತುಂಡುಡುಗೆಗಳೇ ಕಾರಣ~ ಎಂದು  ವಿಧಾನ ಪರಿಷತ್ತಿನ ಉಪಸಭಾಪತಿ ವಿಮಲಾಗೌಡ ಅಭಿಪ್ರಾಯಪಟ್ಟರು.`ಸಮಾಜದಲ್ಲಿ ಮಹಿಳೆಯರು ಗೌರವಯುತವಾಗಿ ಬದುಕಲು ತುಂಡುಡುಗೆ ಧರಿಸುವುದನ್ನು ನಿಲ್ಲಿಸಬೇಕು. ಈ ದಿಸೆಯಲ್ಲಿ ವಸ್ತ್ರಸಂಹಿತೆ ಜಾರಿಯಾದರೆ ಒಳ್ಳೆಯದು~ ಎಂದರು.`ಭಾರತೀಯ ಸಂಸ್ಕೃತಿಯಂತೆ ಮಹಿಳೆಯರು ನಡೆದುಕೊಂಡರೆ ಆಕೆಯ ಚಾರಿತ್ರ್ಯಕ್ಕೆ ಯಾವುದೇ ಹಾನಿ ಉಂಟಾಗುವುದಿಲ್ಲ.  ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ವಸ್ತ್ರಗಳು ಮಹಿಳೆಗೆ ಹೆಚ್ಚು ಗೌರವ ನೀಡುತ್ತವೆ~ ಎಂದರು.

 

ಪ್ರತಿಕ್ರಿಯಿಸಿ (+)