ಶನಿವಾರ, ಮೇ 15, 2021
23 °C

ಮಾಧವನ್ ನಾಯರ್ ಗೆ ವಿದ್ಯಾರ್ಥಿಗಳಿಂದ ಪ್ರಶ್ನೆಗಳ ಸುರಿಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಭ್ರಷ್ಟಾಚಾರ ನಿರ್ಮೂಲನೆ ಹೇಗೆ? ಕೋಟ್ಯಂತರ ರೂಪಾಯಿ ವಿನಿಯೋಗಿಸಿ ನಡೆಸುವ ಆವಿಷ್ಕಾರ, ಸಂಶೋಧನೆಗಳು ಜನರಿಗೆ ನಿಜವಾದ ಅರ್ಥದಲ್ಲಿ ಪ್ರಯೋಜನಕ್ಕೆ ಬಂದಿವೆಯೇ? ಮೂಲ ವಿಜ್ಞಾನದತ್ತ ಆಸಕ್ತಿ ಬೆಳೆಸಿಕೊಳ್ಳುವುದು ಹೇಗೆ? ಶಿಕ್ಷಕಿತರೇ ಭಯೋತ್ಪಾದನೆಯಲ್ಲಿ ತೊಡಗಿಕೊಳ್ಳುವುದೇಕೆ? ಪ್ರತಿ ಭಾಪಲಾಯನಕ್ಕೆ ತಡೆ ಇಲ್ಲವೇ?... -ಹೀಗೆ ವಿದ್ಯಾರ್ಥಿಗಳಿಂದ ಪುಂಖಾನು ಪುಂಖವಾಗಿ ತೂರಿಬರುತ್ತಿದ್ದ ಹತ್ತಾರು ಪ್ರಶ್ನೆಗಳಿಗೆ ಅಷ್ಟೇ ಸಮಾಧಾನದ ಉತ್ತರ ನೀಡಿದ್ದು, ಪ್ರಸಿದ್ಧ ಬಾಹ್ಯಾಕಾಶ ವಿಜ್ಞಾನಿ ಡಾ.ಜಿ. ಮಾಧವನ್ ನಾಯರ್.ಭ್ರಷ್ಟಾಚಾರ ನಿರ್ಮೂಲನೆ ಮನೆಯಿಂದಲೇ ಆರಂಭವಾಗಬೇಕು. ಅತಿ ಆಸೆ ಪಡದೆ ಇದ್ದ ಅನುಕೂಲತೆಗಳಲ್ಲೇ ಜೀವನ ಸಾಗಿಸಬೇಕು. ಸ್ವಾರ್ಥ, ಲಾಭದ ಆಸೆ ಆರಂಭವಾಗುತ್ತಿದ್ದಂತೆ ಭ್ರಷ್ಟಾಚಾರವೂ ಬೆನ್ನೇರಿ ಬರುತ್ತದೆ. ಹಾಗಾಗಿ, ಅತಿ ಆಸೆಗೆ ಕಡಿವಾಣ ಹಾಕಿ ಎಂದು ನಾಯರ್, ವಿದ್ಯಾರ್ಥಿಗಳಿಗೆ ಸಲಹೆ ಮಾಡಿದರು.ಭಯೋತ್ಪಾದನೆ ಹುಟ್ಟಿಗೆ ಹಲವು ಕಾರಣಗಳಿವೆ. ಶಿಕ್ಷಕಿತರೇ ಹೆಚ್ಚಾಗಿ ಭಯೋತ್ಪಾದನಾ ಕೃತ್ಯಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ ಎನ್ನುವುದು ಅಷ್ಟು ಸರಿಯಾದ ವಿಶ್ಲೇಷಣೆ ಅಲ್ಲ. ಮೂಲ ಶಿಕ್ಷಣದ ಜತೆ ಧಾರ್ಮಿಕ ಪ್ರಲೋಬನೆಗಳು ಭಯೋತ್ಪಾದನೆಗೆ ಪ್ರಚೋದನೆ ನೀಡುತ್ತಿರುವ ಅಂಶಗಳಾಗಿವೆ. ಶಿಕ್ಷಣದ ಮೂಲಕವೇ ಇದನ್ನು ತಡೆಗಟ್ಟಲು ಸಾಧ್ಯವಿದೆ ಎಂದರು.ವಿಜ್ಞಾನ ಎನ್ನುವುದು ಎರಡು ಅಲಗಿನ ಕತ್ತಿಯಂತೆ; ಅದನ್ನು ಅಭಿವೃದ್ಧಿಗೂ ಹಾಗೂ ವಿನಾಶಕ್ಕೂ ಬಳಸಬಹುದು. ಜವಾಬ್ದಾರಿಯಿಂದ ಬಳಸುವ ವಿವೇಕ ನಮಗೆ ಬೇಕು ಎಂದು ಹೇಳಿದರು.ಆವಿಷ್ಕಾರಗಳು, ಸಂಶೋಧನೆಗಳು ನಿಜವಾಗಿಯೂ  ಈಗ  ಪ್ರಯೋಜನಕ್ಕೆ  ಬರುತ್ತಿವೆ.  ಸರ್ಕಾರ  ಇವುಗಳಿಗೆ  ಖರ್ಚು ಮಾಡಿದ  ಹಣದ  ಹತ್ತರಪಟ್ಟು  ಹೆಚ್ಚಿಗೆ ಉಪಯೋಗಕ್ಕೆ ಬರುತ್ತಿವೆ ಎಂದು ಉದಾಹರಣೆ ಸಹಿತ ವಿವರಿಸಿದರು.ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಸಾಧನೆ ಉತ್ತಮವಾಗಿದ್ದರೂ ಇಲ್ಲಿ ಬಾಹ್ಯಾಕಾಶ ಅಧ್ಯಯನಕ್ಕೆ ಉತ್ತಮ ಶಿಕ್ಷಣ ಸಂಸ್ಥೆಗಳಿಲ್ಲ ಎಂಬ ವಿದ್ಯಾರ್ಥಿನಿಯ ಪ್ರಶ್ನೆಗೆ ಪ್ರತಿಕ್ರಿಯಿಸಿದ ನಾಯರ್, ಎಂಜಿನಿಯರಿಂಗ್ ಕಾಲೇಜುಗಳಂತೆ ಇವುಗಳನ್ನು ಎಲ್ಲೆಂದರಲ್ಲಿ ತೆರೆಯಲು ಸಾಧ್ಯವಿಲ್ಲ. ಇವುಗಳಿಗೆ ಉತ್ತಮ ಶಿಕ್ಷಕರು ಹಾಗೂ ಆಸಕ್ತಿ ಇರುವ ವಿದ್ಯಾರ್ಥಿಗಳ ಅವಶ್ಯಕತೆ ಇದೆ. ಪುಣೆ, ಹೈದರಬಾದಿನಲ್ಲಿ ಬಾಹ್ಯಾಕಾಶ ವಿಭಾಗದ ಅಧ್ಯಯನದ ಸಂಸ್ಥೆಗಳಿವೆ ಎಂದರು.ಇದು ಮುಕ್ತವಾದ ಪ್ರಪಂಚ. ಪ್ರತಿಭೆಗಳನ್ನು ಹಿಡಿದಿಟ್ಟುಕೊಳ್ಳಲು ಯಾರಿಗೂ ಅಧಿಕಾರ ಇಲ್ಲ. ಉತ್ತಮ ಹಣ ಗಳಿಕೆ ಸೇರಿದಂತೆ ಕೆಲವೊಂದು ಪ್ರಯೋಜನಗಳಿಗಾಗಿ ವಿದೇಶಕ್ಕೆ ಇಂದಿನ ಪ್ರತಿಭೆಗಳು ಹೋಗುತ್ತಿವೆ. ಆದರೆ, ಇಲ್ಲಿರುವ ಪ್ರತಿಭೆಗಳಿಂದಲೇ ಅತ್ಯುತ್ತಮವಾದದ್ದನ್ನು ಸಾಧಿಸಲು ಸಾಧ್ಯವಿದೆ ಎಂದು ಪ್ರತಿಭಾ ಪಲಾಯನದ ಪ್ರಶ್ನೆಗೆ ನಾಯರ್ ಪ್ರತಿಕ್ರಿಯಿಸಿದರು.ಯುವ ವಿದ್ಯಾರ್ಥಿಗಳು ಕನಸು ಕಾಣಿ, ಕಠಿಣ ಶ್ರಮ ಹಾಕಿ, ಬದ್ಧತೆ, ಆತ್ಮವಿಶ್ವಾಸ ಬೆಳೆಸಿಕೊಳ್ಳಿ. ಸೋಲು ಬಂದಾಗ ನಿರಾಶರಾಗಬೇಡಿ, ಸೋಲನ್ನೇ ಗೆಲುವಿನ ಮೆಟ್ಟಿಲನ್ನಾಗಿ ಮಾಡಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಜೆಎನ್‌ಎನ್‌ಸಿಇ, ಡಿವಿಎಸ್, ಅರಬಿಂದೋ ಪಿಯು ಕಾಲೇಜಿನ ವಿದ್ಯಾರ್ಥಿಗಳು  ಪಾಲ್ಗೊಂಡಿದ್ದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.