ಗುರುವಾರ , ಜನವರಿ 30, 2020
19 °C

ಮಾಧ್ಯಮ: ಕನಸು, ವಾಸ್ತವದ ನಡುವೆ...

ಕೋಕಿಲ ಎಂ.ಎಸ್. Updated:

ಅಕ್ಷರ ಗಾತ್ರ : | |

ಹಲವು ದಿನಗಳ ನಂತರ ಮಾಧ್ಯಮದ ಗೆಳೆಯರೊಂದಿಗೆ ಹರಟುತ್ತಿದ್ದೆ. ಕ್ಷೇಮ ಕುಶಲೋಪರಿಯಿಂದ ಶುರುವಾದ ಮಾತು, ಈಗಿನ ಮಾಧ್ಯಮ ವಿದ್ಯಾರ್ಥಿಗಳ ಗುರಿ ಹಾಗೂ ಚುರುಕುತನದಂಥ ಗಂಭೀರ ವಿಷಯದತ್ತ ಹೊರಳಿತು. ನೂರಾರು ಕನಸುಗಳನ್ನು ಹೊತ್ತು ಹೊಸದಾಗಿ ಮಾಧ್ಯಮ ಕ್ಷೇತ್ರಕ್ಕೆ ಕಾಲಿಡುವ ವಿದ್ಯಾರ್ಥಿಗಳಲ್ಲಿ  ಆತ್ಮವಿಶ್ವಾಸ ಹಾಗೂ ನೈಪುಣ್ಯದ ಕೊರತೆಯಿದೆ ಎಂಬುದು ಮಾಧ್ಯಮ ಗೆಳೆಯನ ಅಭಿಪ್ರಾಯ.ಏನೇ ಕೇಳಿದರೂ ಅಥವಾ ಮಾಡಲು ಹೇಳಿದರೂ ‘ನಮ್ಮ ಕಾಲೇಜಿನಲ್ಲಿ ಇದರ ಬಗ್ಗೆ ತಿಳಿಸಿಲ್ಲ’ ಎಂಬ ಉತ್ತರ ಬಿಟ್ಟು ಬೇರೇನೂ ಬರುವುದಿಲ್ಲ ಎನ್ನುವುದು ಅವನ ವಾದ.ನಿಧಾನವಾಗಿ ಯೋಚಿಸಿದಾಗ  ‘ಇದು ನಿಜಕ್ಕೂ ವಾಸ್ತವವಾ’ ಅನ್ನಿಸಿತು. ಇಂದು ಎಲ್ಲರ ಜೀವನದಲ್ಲೂ ಮಾಧ್ಯಮ ಒಂದು ಅವಿಭಾಜ್ಯ ಅಂಗವಾಗಿದೆ. ಅದು ಪತ್ರಿಕೆ ಆಗಿರಬಹುದು, ಟಿ.ವಿ., ಬಾನುಲಿ ಅಥವಾ ಅಂತರ್ಜಾಲ  ಆಗಿರಬಹುದು. ಇವೇ ಸಮುದಾಯದ ಜೊತೆಗಿನ ನಮ್ಮ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವುದು. ಇಂತಹಾ ಮಾಧ್ಯಮದಲ್ಲಿ ಪತ್ರಕರ್ತರಾಗಿಯೋ, ನಿರೂಪಕ/ಕಿಯಾಗಿಯೋ, ತಂತ್ರಜ್ಞರಾಗಿಯೋ, ಸಂವಹನ ಸಂಪರ್ಕಾಧಿಕಾರಿ ಆಗಿಯೋ ಕಾರ್ಯ ನಿರ್ವಹಿಸಬೇಕೆಂಬುದು ಈಗಿನ ಹಲವು ಯುವಕ/ ಯುವತಿಯರ ಕನಸು. ತಮ್ಮ ಕನಸನ್ನು ಸಾಕಾರಗೊಳಿಸಲು ಅವರಿಡುವ ಮೊದಲ ಹೆಜ್ಜೆಯೇ ಪದವಿ ಅಥವಾ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಆರಿಸಿಕೊಳ್ಳುವುದು. ಹೀಗೆ ಕೋರ್ಸ್‌ಗಳಿಗೆ ಸೇರಿದ ಬಹುಪಾಲು ವಿದ್ಯಾರ್ಥಿಗಳ ನಿಲುವಲ್ಲಿ ಗೊಂದಲ ಆರಂಭವಾಗುವುದೇ ಇಲ್ಲಿಂದ.ಕೋರ್ಸ್‌ಗಳಲ್ಲಿನ ಪಠ್ಯಕ್ರಮವು ಮಾಧ್ಯಮದ ಅರ್ಥ, ಅದರ ಆಯಾಮಗಳನ್ನು ಸಂಪೂರ್ಣವಾಗಿ ತಿಳಿಸುತ್ತದೆ. ಆದರೆ ಅದನ್ನು ಮಾಧ್ಯಮದಲ್ಲಿ ತೊಡಗಿಸಿಕೊಂಡಾಗ ಪ್ರಾಯೋಗಿಕವಾಗಿ ಬದಲಿಸಿಕೊಳ್ಳುವಲ್ಲಿ ವಿದ್ಯಾರ್ಥಿಗಳು ವಿಫಲರಾಗುತ್ತಾರೆ. ಬರೀ ಪುಸ್ತಕದ ಬದನೇಕಾಯಿ ಸಾರಿಗೆ ಬಳಸಲು ಹೇಗೆ ಬರುವುದಿಲ್ಲವೋ ಹಾಗೆಯೇ ಮಾಧ್ಯಮದ ಪಠ್ಯಕ್ರಮ ಕೆಲಸಕ್ಕೆ ಸೇರಿದಾಗ ಉಪಯೋಗಕ್ಕೆ ಬರುವುದಿಲ್ಲ ಎನ್ನುತ್ತಾರೆ ಮಾಧ್ಯಮ ತಜ್ಞರು. ಆದರೆ, ನನ್ನ ಅನುಭವದ ಪ್ರಕಾರ, ಮಾಧ್ಯಮದ ಹಲವಾರು ವಲಯಗಳಲ್ಲಿ ಓದಿದ ಪಠ್ಯ­ಕ್ರಮವೇ ಸಹಾಯಕ್ಕೆ ಬರುತ್ತದೆ. ಉದಾಹರಣೆಗೆ ದೃಶ್ಯ ಸಂಕಲನ, ಕ್ಯಾಮೆರಾ ಬಳಕೆ, ಧ್ವನಿ ಸಂಗ್ರಹಣೆ, ಗ್ರಾಫಿಕ್ಸ್ ಮತ್ತು ಬರವಣಿಗೆ (ಆಯಾ ಮಾಧ್ಯಮಗಳ ಸ್ಟೈಲ್ ಶೀಟ್‌ ಹೊರತುಪಡಿಸಿ). ಇನ್ನುಳಿದ ಕೆಲಸಗಳು ಅನುಭವಕ್ಕೆ ಬಂದಾಗ ಮಾತ್ರ ಅದರಲ್ಲಿ ಪರಿಣತಿ ಸಾಧ್ಯ. ಹಾಗಾಗಿ ಓದುವ ಸಮಯದಲ್ಲೇ ಮಾಧ್ಯಮ ಕೆಲಸದ ವಾತಾವರಣ ಅನುಭವಕ್ಕೆ ಬಂದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಉತ್ತಮ ಕೌಶಲ ವೃದ್ಧಿ ಹಾಗೂ ಮಾಧ್ಯಮದಲ್ಲಿ ಯಶಸ್ಸನ್ನು ಗಳಿಸಬೇಕಾದರೆ ಕೆಲವು ಅಂಶಗಳನ್ನು ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಅನುಸರಿಸಬೇಕಾಗುತ್ತದೆ.ವಿದ್ಯಾರ್ಥಿಗಳೂ ಹೊಣೆ

ವಿಷಯದ ಅರ್ಥಗ್ರಹಿಕೆ: ತರಗತಿಗಳಲ್ಲಿ ಹೇಳಿದ ವಿಷಯಗಳನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡು ಅದಕ್ಕೆ ಸಂಬಂಧಪಟ್ಟ ಪುಸ್ತಕಗಳನ್ನು ಅಭ್ಯಸಿಸುವ ಮುಂಖಾಂತರ ಮತ್ತಷ್ಟು ಪುಷ್ಟಿ ನೀಡಬೇಕು. ಅರ್ಥವಾದ ವಿಷಯದ ವಿವಿಧ ಆಯಾ­ಮ­ಗಳನ್ನು ತಿಳಿಯುವ ಪ್ರಯತ್ನ ಮಾಡಬೇಕು. (ಔಟ್ ಆಫ್ ಬಾಕ್ಸ್ ಥಿಂಕಿಂಗ್)ಕಲಿಕಾ ಕೌಶಲ: ಪ್ರತಿಯೊಬ್ಬರ ಕಲಿಕೆ, ಅದರ ಶೈಲಿ ವಿಭಿನ್ನವಾಗಿಯೇ ಇರುತ್ತದೆ. ತಮ್ಮ ಬುದ್ಧಿಯ ಇತಿಮಿತಿಯನ್ನು ಅರ್ಥ ಮಾಡಿಕೊಂಡು ಅದಕ್ಕೆ ಸರಿಹೊಂದುವ ರೀತಿಯಲ್ಲಿ ಕ್ರಮವಾಗಿ ಕಲಿಯುವುದು ಒಳ್ಳೆಯದು. ಕಲಿಯಬೇಕಾದ ವಿಷಯವನ್ನು ನಿರಂತರವಾಗಿ ಅಭ್ಯಾಸ ಮಾಡಿದರೆ ಕಲಿಕೆ ಸರಳವಾಗುವುದಲ್ಲದೆ ಮುಂದುವರಿಯಲು ನೆರವಾಗುತ್ತದೆ.ಪ್ರಾಯೋಗಿಕ  ಕೌಶಲ: ಕಲಿತ ವಿಷಯಗಳನ್ನು ಆದಷ್ಟೂ ಪ್ರಾಯೋಗಿಕವಾಗಿ ಮಾಡಲು ಪ್ರಯತ್ನ ಪಡುವುದು ಒಳ್ಳೆಯದು. ಇದರಿಂದ ಅಭ್ಯಸಿಸಿದ್ದ ಅಂಶಗಳು ಅನು­ಭವಕ್ಕೆ ಬರುತ್ತವೆ. ಮರಳಿ ಮಾಡಿದ ಯತ್ನ ಯಾವತ್ತೂ ಕೈ ಬಿಡುವುದಿಲ್ಲ ಎನ್ನುವಂತೆ, ಶುರುವಿನಲ್ಲಿ ಆಗುವ ನೂರಾರು ತಪ್ಪುಗಳು ಕ್ರಮೇಣ ಬೆರಳೆಣಿಕೆಗೆ ಬಂದು ನಿಲ್ಲುತ್ತವೆ.ಮಾಧ್ಯಮದ ಅಭ್ಯಾಸ: ಮಾಧ್ಯಮ ಯಾವುದೇ ಇರಲಿ, ವಿದ್ಯಾರ್ಥಿಗಳು ಅದರ ನೆರವಿನಿಂದಲೇ ಒಂದು ನಿರ್ದಿಷ್ಟ ಕೌಶಲವನ್ನು ಗಳಿಸಬಹುದು. ಜೊತೆಗೆ ತಮ್ಮ ಜ್ಞಾನವನ್ನು ವರ್ಧಿಸಿಕೊಳ್ಳುವ ಮತ್ತು ರೂಪಿಸಿಕೊಳ್ಳುವ ಹಂತದಲ್ಲಿ ಮಾಧ್ಯಮದ ನೆರವನ್ನು ಪಡೆದುಕೊಳ್ಳುವುದು ಉತ್ತಮ.ಪ್ರಚಲಿತ ವಿದ್ಯಮಾನ: ಮಾಧ್ಯಮ ವಿದ್ಯಾರ್ಥಿಯಾಗಿ ಮೊದಲು ಸಮಾಜದ ಆಗುಹೋಗುಗಳನ್ನು ಚೆನ್ನಾಗಿ ಅರಿತಿರಬೇಕು. ಪ್ರಚಲಿತ ಸುದ್ದಿಗಳು ಹಾಗೂ ಅದರ ಪರಿಣಾಮಗಳನ್ನು ತಿಳಿಯಬೇಕು.ಸಕ್ರಿಯ ಪಾಲ್ಗೊಳ್ಳುವಿಕೆ: ಮಾಧ್ಯಮ ಕುರಿತ ವಿಚಾರ ಸಂಕಿರಣ, ಅಂತರ ಕಾಲೇಜು ಸ್ಪರ್ಧೆಗಳು ಹಾಗೂ ಯಾವುದಾದರೊಂದು ಮಾಧ್ಯಮದಲ್ಲಿ ಕೆಲ ತಿಂಗಳ ಕಾಲ ಇಂಟರ್ನ್‌ಶಿಪ್ ಮಾಡುವುದು ಒಳ್ಳೆಯದು. ಇದರಿಂದ ಮಾಧ್ಯಮದಲ್ಲಿನ ಒತ್ತಡ ಮತ್ತು ಕೆಲಸದ ಸ್ವರೂಪ ಅನುಭವಕ್ಕೆ ಬರುತ್ತದೆ.ಸರಿಯಾದ ಆಯ್ಕೆ: ಮಾಧ್ಯಮ ಕ್ಷೇತ್ರ ನೂರಾರು ದಾರಿಗಳಿಗೆ ನಿಮ್ಮನ್ನು ತೆರೆದುಕೊಳ್ಳುವಂತೆ ಮಾಡುತ್ತದೆ. ಆದರೆ ನಿಮಗೆ ಸೂಕ್ತವಾದ ಹಾದಿಯನ್ನು ಆಯ್ದುಕೊಳ್ಳುವಲ್ಲಿ ಜಾಣತನದಿಂದ ಇರಬೇಕು. ಅದು ನಿಮ್ಮ ವ್ಯಕ್ತಿತ್ವ ಮತ್ತು ಕ್ರಿಯಾಶೀಲತೆಗೆ ಹೊಂದುವಂತೆ ಇರಬೇಕು.ಪೂರ್ವ ಜ್ಞಾನ: ಪ್ರತಿ ವಿದ್ಯಾರ್ಥಿಯ ಕಲಿಕಾ ಸಾಮರ್ಥ್ಯವನ್ನು ಅರಿಯಲು ಒಬ್ಬ ಅಧ್ಯಾಪಕನಿಗೆ ಕನಿಷ್ಠ ನಾಲ್ಕರಿಂದ ಐದು ತರಗತಿಗಳಾದರೂ ಬೇಕು. ಆದರೆ ಈಗಿನ ವಿದ್ಯಾರ್ಥಿಗಳು ಮೊದಲ ತರಗತಿಯಲ್ಲೇ ಅಧ್ಯಾಪಕರ ಜ್ಞಾನದ ಮಟ್ಟವನ್ನು ಊಹಿಸಿಬಿಟ್ಟಿರುತ್ತಾರೆ. ವಿಷಯದ ಬಗೆಗಿನ ತಮ್ಮ ನಿಲುವನ್ನು ಯಾರೇ ಹೇಳಿದರೂ ಬದಲಾಯಿಸುವ ಗೋಜಿಗೆ ಹೋಗುವುದೇ ಇಲ್ಲ. ಇಂತಹಾ ಯೋಚನೆ ಎಷ್ಟು ಸರಿ? ಮರಕ್ಕಿಂತ ಮರ ದೊಡ್ಡದಿರುವಂತೆ, ತಮಗಿರುವ ಜ್ಞಾನಕ್ಕಿಂತ ಮತ್ತೊಬ್ಬರ ಜ್ಞಾನ ಪಕ್ವ ಆಗಿರಬಹುದು. ಆದಷ್ಟೂ ಕೇಳಿಸಿಕೊಳ್ಳುವ ಸೌಜನ್ಯವನ್ನು ಬೆಳೆಸಿಕೊಳ್ಳಬೇಕು.ಕಲಿಕಾ ಸಿದ್ಧತೆ: ಏನೇ ಕಲಿಯಬೇಕಾದರೂ ಮಾನಸಿಕ ಸಿದ್ಧತೆ ಅವಶ್ಯ. ಅಧ್ಯಾಪಕರು ಎಷ್ಟೇ ಚೆನ್ನಾಗಿ ಬೋಧಿಸಿದರೂ ನಿಮ್ಮಲ್ಲಿ ಕಲಿಯುವ ಇಚ್ಛೆ ಇಲ್ಲದಿದ್ದರೆ ಅದು ವ್ಯರ್ಥ. ತನ್ನಲ್ಲಿರುವ ನ್ಯೂನತೆಯನ್ನು ಅಧ್ಯಾಪಕರ ಮೇಲೆ ಹೇರುವುದು ಸರಿಯಲ್ಲ.

ನಿಶ್ಚಿತ ಗುರಿ: ಬಹಳಷ್ಟು ವಿದ್ಯಾರ್ಥಿಗಳಲ್ಲಿ ಕಾಲೇಜಿಗೆ ಸೇರುವಾಗ ಇದ್ದ ಗುರಿ ಕೆಲಸಕ್ಕೆ ಸೇರುವಾಗ ಇರುವುದಿಲ್ಲ. ಮನೆಯ ಪರಿಸ್ಥಿತಿ ಅಥವಾ ಕೆಲಸದ ಅವಶ್ಯಕತೆಗೆ ಕಟ್ಟುಬಿದ್ದು ತಮ್ಮ ಕನಸನ್ನು ಮರೆತು ಸಿಕ್ಕ ಕೆಲಸಕ್ಕೆ ಸೇರುವುದುಂಟು. ಆದರೆ ನಿಶ್ಚಿತ ಗುರಿ ತಲುಪಬೇಕಾದರೆ ಉತ್ತಮ ಕೌಶಲ ಬೆಳೆಸಿಕೊಳ್ಳುವುದು ಅವಶ್ಯಕ. ಎಂಥದ್ದೇ ಪರಿಸ್ಥಿತಿಯಲ್ಲೂ ಮುಂದೆ ಇರುವ ಗುರಿಯ ವಿಷಯದಲ್ಲಿ ಯಾವುದೇ ರಾಜಿ ಆಗಬಾರದು.

ಉಪನ್ಯಾಸಕರ ಬದ್ಧತೆ ಏನು?

ಪಠ್ಯವಸ್ತುವನ್ನು ಮಾತಿನ ಹೊಳೆಯಾಗಿ ಹರಿಸುವವನು ಅಧ್ಯಾಪಕ. ಪ್ರವಚನಕ್ಕಿಂತ ಭಿನ್ನವಾದ ಯಾವ ರೂಪವೂ ಇರದ ಮಾತುಗಾರಿಕೆಯನ್ನು ಆಲಿಸುವುದು ಕೆಲವೊಮ್ಮೆ ವಿದ್ಯಾರ್ಥಿಗಳಿಗೆ ಅನಿವಾರ್ಯ. ಆದರೆ ಇಂತಹಾ ಮಾತುಗಾರಿಕೆಯನ್ನು ಆಲಿಸಿ ಪ್ರಭಾವಕ್ಕೆ ಒಳಗಾಗುವ ರೀತಿಯ ಧ್ವನಿ ಪ್ರಮಾಣ, ಭಾಷಾ ಶೈಲಿ, ವಿಷಯ ನಿರೂಪಣೆ, ಅದರ ಗುಣಮಟ್ಟದಲ್ಲಿ ಬದಲಾವಣೆ ತರುವುದು ಅಗತ್ಯ. ಬೋಧನೆಗೆ ಯಾವುದೇ ಮಿತಿ ಇರಕೂಡದು.

ತರಗತಿಗೆ ಸಿದ್ಧವಾಗುವಾಗ ಶೈಕ್ಷಣಿಕ ಅಂಶಗಳ ಜೊತೆಗೆ ಮಾಧ್ಯಮದ ಇತಿಮಿತಿ, ಕಾರ್ಯ ನಿರ್ಮಾಣ, ರೂಪ, ಅದರ ವಿನ್ಯಾಸ ಕುರಿತ ಮಾಹಿತಿಗಳನ್ನು ಸೇರಿಸುವುದು ಅತಿ ಮುಖ್ಯ. ಸಮೂಹ ಮಾಧ್ಯಮದ ಉದಾಹರಣೆಗಳು ವಿದ್ಯಾರ್ಥಿಗಳ ಆಸಕ್ತಿಯನ್ನು ಉದ್ದೀಪಿಸುತ್ತವೆ. ಕಡಿಮೆ ಅವಧಿಯಲ್ಲಿ ಹೆಚ್ಚಿನ ಕಲಿಕೆ ಸಾಧ್ಯವಾಗುತ್ತದೆ.ತರಗತಿಗಳು ಸಾಧ್ಯವಾದಷ್ಟೂ ಪುಸ್ತಕ ಬೋಧನೆಯ ಜೊತೆಗೆ ಪ್ರಾಯೋಗಿಕವಾಗಿ ಅನುಕೂಲ ಆಗುವಂತೆ ಇರಬೇಕು.

ವಿದ್ಯಾರ್ಥಿಗಳನ್ನು ಆದಷ್ಟೂ ಮಾಧ್ಯಮ ಕಾರ್ಯಾಗಾರಗಳಲ್ಲಿ  ತೊಡಗಿಕೊಳ್ಳುವಂತೆ ಪ್ರೇರೇಪಿಸಬೇಕು.ವಿದ್ಯಾರ್ಥಿಗಳ ಕ್ರಿಯಾಶೀಲತೆಯನ್ನು ಗುರುತಿಸಿ ಉತ್ತೇಜಿಸಬೇಕು. ಪ್ರೋತ್ಸಾಹಿಸುವ ಹೊಣೆ ಪ್ರತಿ ಉಪನ್ಯಾಸಕನ ಮೇಲೂ ಇರುತ್ತದೆ ಎಂಬುದನ್ನು ಮರೆಯಕೂಡದು.ಮಾಧ್ಯಮದ ಅನುಭವ ಇರುವ ಅಧ್ಯಾಪಕರು ಪಠ್ಯಕ್ರಮದ ಜೊತೆಗೆ ಪ್ರಾಯೋಗಿಕವಾಗಿ ಮಾಧ್ಯಮ ಕೆಲಸದ ವಾತಾವರಣವನ್ನು ಕಾಲೇಜಿನಲ್ಲೇ ಸೃಷ್ಟಿಸುವುದು ಒಳ್ಳೆಯದು. ಇದರಿಂದ ವಿದ್ಯಾರ್ಥಿಗಳಿಗೆ ನೇಮಕಾತಿ ಸಮಯದಲ್ಲಿ ಸಹಾಯವಾಗುತ್ತದೆ.ದಿನಗಳೆದಂತೆ ಮಾಧ್ಯಮದ ಸ್ವರೂಪದಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತಲೇ ಇರುತ್ತವೆ. ಹಾಗಾಗಿ ಅಧ್ಯಾಪಕರು ತಮ್ಮನ್ನು ತಾವು ಪುನಃ ನವೀಕರಣಕ್ಕೆ ಒಳಪಡಿಸಿಕೊಳ್ಳಲೇ ಬೇಕು. ಇದರಿಂದ ಗುಣಮಟ್ಟ ಸುಧಾರಣೆ ಆಗುತ್ತದೆ.ಮಾಧ್ಯಮದಲ್ಲಿ ಯಾವುದೇ ಅನುಭವ ಇರದ, ಸ್ನಾತಕೋತ್ತರ ಪದವಿಯನ್ನು ಮುಗಿಸಿ ಅಧ್ಯಾಪಕ ವೃತ್ತಿಗೆ ಬಂದವರು ಬರೀ ಪುಸ್ತಕದ ಜ್ಞಾನವನ್ನು ಪಸರಿಸಿದರೆ ಸಾಲದು. ಒಂದೆರಡು ವರ್ಷ ಮಾಧ್ಯಮ ತರಬೇತಿಯನ್ನು ಪಡೆದರೆ ಅದು ತನ್ನಲ್ಲಿರುವ ಪಠ್ಯದ ಜ್ಞಾನಕ್ಕೆ ಮತ್ತಷ್ಟು ಮೆರುಗನ್ನು ನೀಡುತ್ತದೆ.ಹಿಂದೆ ಪತ್ರಿಕೋದ್ಯಮವನ್ನು ಗಂಭಿರವಾಗಿ ಪರಿಗಣಿಸಿ ವೃತ್ತಿ ಧರ್ಮಕ್ಕೆ ಧಕ್ಕೆಯಾಗದಂತೆ ನಡೆದುಕೊಳ್ಳುತ್ತಿದ್ದರು. ಆದರೆ ಕಾಲ ಬದಲಾದಂತೆ ಈಗಿನ ಬಹಳಷ್ಟು ಯುವಜನರಲ್ಲಿ ಮಾಧ್ಯಮ ಎನ್ನುವುದು ಶೋಕಿ ಅಥವಾ ಹವ್ಯಾಸ ಆಗಿಬಿಟ್ಟಿದೆ. ಕೋರ್ಸ್‌ಗೆ ಸೇರಿದ ನಂತರ ಮಾಡಬೇಕಾದ ಹೋಂವರ್ಕ್‌ನ್ನು ಮರೆತವರಿಗೆ ಕಂಡ ಕನಸೇ ಮುಂದಿನ ಜೀವನವಾಗಿ ಉಳಿದು ಬಿಡುತ್ತದೆ.ತಮ್ಮ ಕನಸಿನ ನಿದ್ರೆಯಿಂದ ಎದ್ದರೆ ತಾನೇ ಅದು ನನಸಾಗುವುದು. ಹಾಗೆಯೇ ಕನಸು ಬರೀ ಮನಸ್ಸಿನಲ್ಲಿ ಇರದೆ ಕಾರ್ಯರೂಪಕ್ಕೆ ಬಂದಾಗ ಮಾತ್ರ ಸಾಕಾರಗೊಳ್ಳಲು ಸಾಧ್ಯ.

ಪ್ರತಿಕ್ರಿಯಿಸಿ (+)