ಗುರುವಾರ , ಮೇ 13, 2021
16 °C

ಮಾಲೂರಿಗೆ ದುಬಾರೆ ಆನೆಗಳ ಪಯಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಶಾಲನಗರ: ಕೋಲಾರದ ಮಾಲೂರು ಹಾಗೂ ಬೆಂಗಳೂರಿನ ಹೊಸಕೋಟೆಗಳಲ್ಲಿ ನಾಲ್ಕು ಜನರ ಸಾವಿಗೆ ಕಾರಣವಾದ ಕಾಡಾನೆಗಳನ್ನು ಮತ್ತೆ ಕಾಡಿಗಟ್ಟಲು ಇಲ್ಲಿನ ದುಬಾರೆ ಸಾಕಾನೆ ಶಿಬಿರದ ವಿಕ್ರಂ ಮತ್ತು ಹರ್ಷ ಆನೆಗಳು ಸೋಮವಾರ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದವು.ದುಬಾರೆ ಶಿಬಿರದಲ್ಲಿ ಆಶ್ರಯ ಪಡೆದಿರುವ ವಿಕ್ರಂ ಮತ್ತು ಹರ್ಷ ಹೆಸರಿನ ಆನೆಗಳನ್ನು ಅರಣ್ಯ ಇಲಾಖೆಯ ಮೇಲಧಿಕಾರಿಗಳ ಆದೇಶದಂತೆ ಲಾರಿ ಮೂಲಕ ಮಾಲೂರಿಗೆ ಕರೆದೊಯ್ಯಲಾಯಿತು. ಆನೆಗಳೊಂದಿಗೆ ಮಾವುತರಾದ ರಾಜಮಣಿ, ಚಂಗಪ್ಪ, ನಾಗರಾಜ, ಚಿಕ್ಕ ಹಾಗೂ ಚಿನ್ನಪ್ಪ ಕೂಡ ತೆರಳಿದರು.`ಮಾಲೂರು ಮತ್ತು ಹೊಸಕೋಟೆಯಲ್ಲಿ ಹಲವು ದಿನಗಳಿಂದ ಕಾಡಾನೆಗಳು ಬೀಡುಬಿಟ್ಟು ಪುಂಡಾಟ ಮಾಡುತ್ತಿವೆ. ಸಾಕಾನೆಗಳನ್ನು ಬಳಸುವುದರಿಂದ ಅವುಗಳನ್ನು ಮತ್ತೆ ಕಾಡಿನತ್ತ ಓಡಿಸಬಹುದು. ಇದಕ್ಕಾಗಿ ವಿವಿಧ ಜಿಲ್ಲೆಗಳಿಂದ ಸಾಕಾನೆಗಳನ್ನು ಕಳಿಸಲಾಗುತ್ತಿದೆ. ಅದರಂತೆ ದುಬಾರೆಯ ಸಾಕಾನೆಗಳನ್ನು ಕಳುಹಿಸಿಕೊಡಲಾಗುತ್ತಿದೆ' ಎಂದು ಜಿಲ್ಲಾ ಅರಣ್ಯಾಧಿಕಾರಿ ಧನಂಜಯ್ ತಿಳಿಸಿದರು.`ವಿಕ್ರಂ ಮತ್ತು ಹರ್ಷ ಆನೆಗಳಿಗೆ ಕೊಡ್ಲಿಪೇಟೆ, ಉಡುಪಿಯಲ್ಲಿನ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಅನುಭವವಿದೆ. ಪ್ರತಿ ಆನೆಯನ್ನು ನಿಯಂತ್ರಿಸಲು ಮಾವುತ, ಕಾವಾಡಿಗಳನ್ನು ಜತೆಗೆ ಕಳುಹಿಸಲಾಗಿದೆ. ಇವರಿಗೆ ಅರಣ್ಯ ಇಲಾಖೆ ಸಿಬ್ಬಂದಿಯೂ ಮಾರ್ಗದರ್ಶನ ನೀಡಲಿದ್ದಾರೆ. ಅಲ್ಲದೇ, ಪಶುವೈದ್ಯ ಉಮಾಶಂಕರ್ ಈಗಾಗಲೇ ಮಾಲೂರು ತಲುಪಿದ್ದಾರೆ' ಎಂದು ವಲಯ ಅರಣ್ಯಾಧಿಕಾರಿ ಅಚ್ಚಪ್ಪ ಹೇಳಿದರು.ಕೆ.ಗುಡಿ ಶಿಬಿರದಿಂದಲೂ ಆನೆಗಳು (ಚಾಮರಾಜನಗರ ವರದಿ):  ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕು ಹಾಗೂ ಹೊಸಕೋಟೆ ತಾಲ್ಲೂಕಿನ ಹಳ್ಳಿಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಅರಣ್ಯದತ್ತ ಓಡಿಸಲು ಜಿಲ್ಲೆಯ ಬಿಳಿಗಿರಿರಂಗನಾಥಸ್ವಾಮಿ ಹುಲಿ ರಕ್ಷಿತಾರಣ್ಯದ ಕೆ. ಗುಡಿ ಶಿಬಿರದಲ್ಲಿರುವ ಆನೆಗಳನ್ನು ಬಳಸಿಕೊಳ್ಳಲು ಅರಣ್ಯ ಇಲಾಖೆ ಮುಂದಾಗಿದೆ.ನಾಡಿನತ್ತ ಬಂದಿರುವ ಆನೆಗಳನ್ನು ಪುನಃ ಕಾಡಿನತ್ತ ಓಡಿಸಲು ಇಲ್ಲಿನ ಶಿಬಿರದ ಗಜೇಂದ್ರ ಹಾಗೂ ಶ್ರೀರಾಮ ಎಂಬ ಆನೆಗಳನ್ನು ಲಾರಿ ಮೂಲಕ ಸೋಮವಾರ ಕಳುಹಿಸಿಕೊಡಲಾಯಿತು. ಆನೆಗಳೊಂದಿಗೆ ಒಬ್ಬರು ವಲಯ ಅರಣ್ಯಾಧಿಕಾರಿ, ಮಾವುತರು, ಕಾವಾಡಿಗರು ತೆರಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.