ಭಾನುವಾರ, ಮೇ 9, 2021
26 °C

ಮಿತ್ರ ಪಕ್ಷಗಳ ಒತ್ತಡಕ್ಕೆ ಮಣಿದ ಕೇಂದ್ರ ಸರ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಸಬ್ಸಿಡಿಯಲ್ಲಿ ನೀಡಲಾಗುವ ಅಡುಗೆ ಅನಿಲ ಪೂರೈಕೆಯನ್ನು ಮಿತಿಗೊಳಿಸುವ ಯುಪಿಎ ಸರ್ಕಾರದ ಉದ್ದೇಶಕ್ಕೆ ಮಿತ್ರ ಪಕ್ಷಗಳಾದ ತೃಣಮೂಲ ಕಾಂಗ್ರೆಸ್ ಹಾಗೂ ಡಿಎಂಕೆ ಅಪಸ್ವರ ತೆಗೆದಿದ್ದು, ಸರ್ಕಾರ ತನ್ನ ನಿರ್ಧಾರದಿಂದ ಸದ್ಯಕ್ಕೆ ಹಿಂದೆ ಸರಿಯುವಂತೆ ಮಾಡಿವೆ.ಸಬ್ಸಿಡಿ ಅಡುಗೆ ಅನಿಲ ಪೂರೈಕೆ ಮಿತಿಗೊಳಿಸುವುದು ಹಾಗೂ ಸಬ್ಸಿಡಿ ಇಲ್ಲದ ಅಡುಗೆ ಅನಿಲಕ್ಕೆ ಬೆಲೆ ಏರಿಕೆ ಮಾಡುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ತೃಣಮೂಲ ಕಾಂಗ್ರೆಸ್ ಅಧ್ಯಕ್ಷೆ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜತೆಗೆ ಪೆಟ್ರೋಲ್ ಬೆಲೆ ಏರಿಕೆಯ ಕ್ರಮವನ್ನೂ ಖಂಡಿಸಿದ್ದಾರೆ.ಇದೆ ನಿಲುವನ್ನು ಯುಪಿಎ ಇತರ ಮಿತ್ರ ಪಕ್ಷಗಳಾದ ಡಿಎಂಕೆ ಮತ್ತು ಎನ್‌ಸಿಪಿಗಳು ಹೊಂದಿವೆ. ಸಬ್ಸಿಡಿ ಅಡುಗೆ ಅನಿಲ ಪೂರೈಕೆ ಮಿತಿಗೊಳಿಸುವ ಯಾವುದೇ ನಿರ್ಧಾರ ಕೈಗೊಳ್ಳದಂತೆ ಸರ್ಕಾರದ ಮೇಲೆ ಒತ್ತಡ ತಂದಿವೆ.ಮಿತ್ರ ಪಕ್ಷಗಳಿಂದ ಪ್ರತಿರೋಧ ವ್ಯಕ್ತವಾದ ಕಾರಣ ಸಬ್ಸಿಡಿ ಅಡುಗೆ ಅನಿಲ ಪೂರೈಕೆ ಮಿತಿಗೊಳಿಸುವ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳಲು ಹಣಕಾಸು ಸಚಿವ ಪ್ರಣವ್ ಮುಖರ್ಜಿ ನೇತೃತ್ವದಲ್ಲಿ ಶುಕ್ರವಾರ ಸಭೆ ನಡೆಸಬೇಕಾಗಿದ್ದ ಉನ್ನತಾಧಿಕಾರ ಸಚಿವರ ಸಭೆಯನ್ನು ಮುಂದಕ್ಕೆ ಹಾಕಲಾಗಿದ್ದು, ಸದ್ಯಕ್ಕೆ ಸಬ್ಸಿಡಿ ಅಡುಗೆ ಅನಿಲ ಪೂರೈಕೆ ಮಿತಿಗೊಳಿಸುವ ಸಾಹಸಕ್ಕೆ ಯುಪಿಎ ಮುಂದಾಗುವುದಿಲ್ಲ ಎನ್ನಲಾಗಿದೆ.ಸಬ್ಸಿಡಿ ಅಡುಗೆ ಅನಿಲ ಪೂರೈಕೆಯನ್ನು ಒಂದು ಕುಟುಂಬಕ್ಕೆ ವರ್ಷಕ್ಕೆ 4ರಿಂದ 6ಕ್ಕೆ ಮಿತಿಗೊಳಿಸುವ ಉದ್ದೇಶವನ್ನು ಸರ್ಕಾರ ಹೊಂದಿತ್ತು. ಇದರಿಂದ ಸರ್ಕಾರಕ್ಕೆ ಸುಮಾರು 12 ಸಾವಿರ ಕೋಟಿ ರೂಪಾಯಿ ಉಳಿತಾಯವಾಗುತ್ತಿತ್ತು.ಒಂದೊಮ್ಮೆ ಸರ್ಕಾರ ಸಬ್ಸಿಡಿ ಅಡುಗೆ ಅನಿಲ ಪೂರೈಕೆಯನ್ನು ಮಿತಿಗೊಳಿಸಿದ್ದರೆ, ರಿಯಾಯ್ತಿಯಲ್ಲದ ಅಡುಗೆ ಅನಿಲದ ಬೆಲೆ ಸಿಲಿಂಡರ್‌ಗೆ ಸುಮಾರು 700 ರೂಪಾಯಿ ಆಗುತ್ತಿತ್ತು. ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಡಿಎಂಕೆ ಮುಖಂಡ ಹಾಗೂ ರಸಗೊಬ್ಬರ ಸಚಿವ ಎಂ.ಕೆ.ಅಳಗಿರಿ ಅವರು ಸಭೆಯಿಂದ ಹೊರಗುಳಿಯಲು ನಿರ್ಧರಿಸಿದ್ದರು. ಆದರೆ ಸಭೆಯಲ್ಲಿ ಪಾಲ್ಗೊಂಡಿದ್ದರೆ, ತಮ್ಮ ಪಕ್ಷದ ನಿಲುವನ್ನು ವ್ಯಕ್ತಪಡಿಸಲು ಅವಕಾಶ ದೊರೆಯುತ್ತಿತ್ತು ಎಂದು ರೈಲ್ವೆ ಸಚಿವ ಹಾಗೂ ತೃಣಮೂಲ ಕಾಂಗ್ರೆಸ್‌ನ ದಿನೇಶ್ ತ್ರಿವೇದಿ ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.