ಭಾನುವಾರ, ಏಪ್ರಿಲ್ 18, 2021
29 °C

ಮುಂದಿನ ಸುತ್ತಿನಲ್ಲಿ ಗೆಲ್ಲಲು ಮೋಸದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಎಎಫ್‌ಪಿ/ಪಿಟಿಐ/ಐಎಎನ್‌ಎಸ್): ಕ್ರೀಡಾ ಮನೋಭಾವಕ್ಕೆ ಧಕ್ಕೆಯಾಗುವ ರೀತಿಯ ಘಟನೆಗಳು ಲಂಡನ್ ಒಲಿಂಪಿಕ್ಸ್‌ನಲ್ಲಿ ಜರುಗಿವೆ. ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಚೀನಾ ಕೂಡ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಡಬಲ್ಸ್‌ನಲ್ಲಿ ಉದ್ದೇಶಪೂರ್ವಕವಾಗಿ ಸೋಲು ಕಂಡಿರುವುದು ಸಾಬೀತಾಗಿದೆ.ಹಾಗಾಗಿ ವಿಶ್ವ ರ‌್ಯಾಂಕ್‌ನಲ್ಲಿ ಮೊದಲ ಸ್ಥಾನದಲ್ಲಿದ್ದ ಈ ದೇಶದ ಇಬ್ಬರು ಆಟಗಾರ್ತಿಯರೂ ಸೇರಿದಂತೆ ನಾಲ್ಕು ತಂಡಗಳನ್ನು ಒಲಿಂಪಿಕ್ಸ್‌ನಿಂದ ಅನರ್ಹಗೊಳಿಸಲಾಗಿದೆ.ಕ್ವಾರ್ಟರ್ ಫೈನಲ್‌ನಲ್ಲಿ ಸುಲಭ ಎದುರಾಳಿ ಸಿಗಲಿ ಎಂಬ ಕಾರಣಕ್ಕೆ ಲೀಗ್ ಹಂತದ ಕೆಲವು ಪಂದ್ಯಗಳಲ್ಲಿ ಉದ್ದೇಶಪೂರ್ವಕವಾಗಿ ಸೋತಿರುವ ಕಾರಣ ಒಲಿಂಪಿಕ್ಸ್ ಸಂಘಟನಾ ಸಮಿತಿ ಈ ಕಠಿಣ ನಿರ್ಧಾರ ತೆಗೆದುಕೊಂಡಿದೆ.ಚೀನಾದ ವಾಂಗ್ ಕ್ಸಿಯೋಲಿ-ಯು ಯಾಂಗ್, ಇಂಡೊನೇಷ್ಯಾದ ಗ್ರೇಸಿಯಾ ಪಾಲಿ-ಮೆಲಿಯಾನ ಜುಹಾರಿ, ದಕ್ಷಿಣ ಕೊರಿಯಾದ ಜಂಗ್ ಕ್ಯೂಂಗ್-ಕಿಮ್ ಹ ನಾ ಹಾಗೂ ಹ ಜಂಗ್ ಎನ್-ಕಿಮ್ ಮಿನ್ ಜಂಗ್ ಅನರ್ಹ ಶಿಕ್ಷೆಗೆ ಒಳಗಾದ ಆಟಗಾರ್ತಿಯರು. `ತಮ್ಮ ಲೀಗ್ ಪಂದ್ಯಗಳ ವೇಳೆ ಗೆಲ್ಲಲು ಪೂರ್ಣ ಪ್ರಮಾಣದ ಪ್ರಯತ್ನ ಹಾಕಿಲ್ಲ~ ಎಂಬ ಕಾರಣ ನೀಡಿ ಈ ಶಿಕ್ಷೆ ವಿಧಿಸಲಾಗಿದೆ. `ಎ~ ಗುಂಪಿನ ಪಂದ್ಯದಲ್ಲಿ ಬಲಿಷ್ಠ ಚೀನಾದ ಆಟಗಾರ್ತಿಯರು ಶ್ರೇಯಾಂಕ ರಹಿತ ಆಟಗಾರ್ತಿಯರಾದ ದಕ್ಷಿಣ ಕೊರಿಯಾದ ಎದುರು ಭಾರಿ ಅಂತರದ ಸೋಲು ಕಂಡಿದ್ದು ಹಲವು ಅನುಮಾನಗಳಿಗೆ ಕಾರಣವಾಯಿತು. ಈ ಸೋಲಿನ ಕಾರಣ ಚೀನಾದ ಆಟಗಾರ್ತಿಯರು ಕ್ವಾರ್ಟರ್ ಫೈನಲ್‌ನಲ್ಲಿ ತಮ್ಮ ದೇಶದ ತಂಡ ಎದುರಾಗುವುದನ್ನು ತಪ್ಪಿಸಿಕೊಂಡಿದ್ದರು. ಈ ಬಗ್ಗೆ ತನಿಖೆ ನಡೆಸಿದಾಗ ನಿಜ ಸಂಗತಿ ಬಯಲಾಯಿತು.ಭಾರತದ ಮನವಿ ತಿರಸ್ಕಾರ: ಇದೇ ರೀತಿಯ ಅನ್ಯಾಯ ತಮಗೂ ಆಗಿದೆ ಎಂದು ಭಾರತ ಕೂಡ ದೂರು ನೀಡಿತ್ತು. ಚೀನಾ ತೈಪೆ ಎದುರು ಜಪಾನ್ ಆಟಗಾರ್ತಿಯರು ಉದ್ದೇಶಪೂರ್ವಕವಾಗಿ ಸೋಲು ಕಂಡಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿತ್ತು. ಆದರೆ  ಭಾರತದ ಮನವಿಯನ್ನು ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ (ಬಿಡಬ್ಲ್ಯುಎಫ್) ತಿರಸ್ಕರಿಸಿದೆ.ಈಗ ಅನರ್ಹಗೊಂಡಿರುವ ಆಟಗಾರ್ತಿಯರು ಭಾರತವಿದ್ದ ಗುಂಪಿನಲ್ಲಿ ಇಲ್ಲ. ಜ್ವಾಲಾ ಗುಟ್ಟಾ ಹಾಗೂ ಅಶ್ವಿನಿ ಪೊನ್ನಪ್ಪ `ಬಿ~ ಗುಂಪಿನಲ್ಲಿ ಆಡಿದ್ದರು. ಅವರು ಎರಡು ಪಂದ್ಯಗಳನ್ನು ಸೋತಿದ್ದರೂ ಪಾಯಿಂಟ್‌ಗಳಲ್ಲಿ ಹಿನ್ನಡೆ ಕಾರಣ ಹೊರಬಿದ್ದಿದ್ದಾರೆ. ಆದರೆ ನಾಲ್ಕು ತಂಡಗಳು ಅನರ್ಹಗೊಂಡಿರುವ ಹಿನ್ನೆಲೆಯಲ್ಲಿ ತಮಗೆ ಅವಕಾಶ ನೀಡುವಂತೆ ಭಾರತ ಮತ್ತೊಂದು ಮನವಿ ಮಾಡಿದೆ. ಇದಕ್ಕೆ ಇನ್ನೂ ಪ್ರತಿಕ್ರಿಯೆ ಬಂದಿಲ್ಲ.ಕ್ರೀಡಾ ಹಿತಾಸಕ್ತಿಗೆ ಧಕ್ಕೆ: ಚೀನಾ ಸೇರಿದಂತೆ ನಾಲ್ಕು ತಂಡಗಳು ಅನುಮಾನಾಸ್ಪದ ರೀತಿಯಲ್ಲಿ ಆಟವಾಡಿದ್ದನ್ನು ಪತ್ತೆ ಮಾಡುವ ಉದ್ದೇಶದಿಂದ ಬಿಡಬ್ಲ್ಯುಎಫ್ ಕೂಡ ತನಿಖೆ ನಡೆಸಿದೆ. ಈ ರೀತಿ ಮಾಡುವ ಮೂಲಕ ಕ್ರೀಡೆಯ ಹಿತಾಸಕ್ತಿಗೆ ಧಕ್ಕೆ ತರಲಾಗಿದೆ ಎಂದು ಅದು ಹೇಳಿದೆ.  `ಎಂಟು ಆಟಗಾರ್ತಿಯರು ತಾವು ಗೆಲ್ಲಲು ಸಾಧ್ಯವಿದ್ದಂಥ ಉತ್ತಮ ಅವಕಾಶಗಳನ್ನು ಎದುರಾಳಿಗಳಿಗೆ ಬಿಟ್ಟುಕೊಟ್ಟಿದ್ದಾರೆ~ ಎಂದು ಬಿಡಬ್ಲ್ಯುಎಫ್ ಅಧಿಕಾರಿಗಳು ದೂರಿದ್ದಾರೆ.ಈ ರೀತಿಯ ಆಟವನ್ನು ಒಪ್ಪಿಕೊಳ್ಳಲು ಅಸಾಧ್ಯ ಎಂದು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ನುಡಿದಿದೆ. `ಇಂತಹ ಪಂದ್ಯಗಳನ್ನು ಏಕೆ ವೀಕ್ಷಿಸಬೇಕು~ ಎಂದು ಸಂಘಟನಾ ಸಮಿತಿ ಅಧ್ಯಕ್ಷ ಸೆಬಾಸ್ಟಿಯನ್ ಕೋ ಆಕ್ರೋಶ ವ್ಯಕ್ತಪಡಿಸಿದ್ದಾರೆ.`ನಾವು ಈಗಾಗಲೇ ಅರ್ಹತೆ ಪಡೆದಿದ್ದೇವೆ. ನಮ್ಮ ಶಕ್ತಿಯನ್ನು ಏಕೆ ವ್ಯರ್ಥ ಮಾಡಬೇಕು~ ಎಂದು ಅಂತಿಮ ಲೀಗ್ ಪಂದ್ಯದ ಬಳಿಕ ಚೀನಾದ ಆಟಗಾರ್ತಿ ಯು ಯಂಗ್ ನುಡಿದಿದ್ದರು. `ಇದು ಅಗ್ರ ಶ್ರೇಯಾಂಕದ ತಂಡ ಆಡುವ ರೀತಿಯಲ್ಲ. ಒಲಿಂಪಿಕ್ಸ್ ಕ್ರೀಡಾ ಮನೋಭಾವಕ್ಕೆ ವಿರುದ್ಧವಾದುದು~ ಂದು ದಕ್ಷಿಣ ಕೊರಿಯಾದ ಮುಖ್ಯ ಕೋಚ್ ಸುಂಗ್ ಹ್ಯಾನ್ ಕೂಕ್ ಹೇಳಿದ್ದರು ಎನ್ನಲಾಗಿದೆ.ಪ್ರೇಕ್ಷಕರಿಗೂ ಅಚ್ಚರಿ: ಪಂದ್ಯದ ವೇಳೆ ಈ ದೇಶದ ಆಟಗಾರ್ತಿಯರು ಸುಖಾಸುಮ್ಮನೇ ಎದುರಾಳಿಗೆ ಪಾಯಿಂಟ್ ಬಿಟ್ಟುಕೊಡುತ್ತಿರುವುದನ್ನು ವೀಕ್ಷಿಸಿದ ಪ್ರೇಕ್ಷಕರು ಕೂಡ ಜೋರಾಗಿ ಕೂಗಿ ಅದನ್ನು ಪ್ರತಿಭಟಿಸಿದರು. ಈ ಆಟಗಾರ್ತಿಯರು ಬೇಕಂತಲೇ ಶಟಲ್‌ಅನ್ನು ನೆಟ್‌ನತ್ತ ಹೊಡೆಯುತ್ತಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.