ಗುರುವಾರ , ಮೇ 19, 2022
22 °C
`ಬ್ಯಾಂಕ್ ಖಾತೆ ಜಪ್ತಿ'ಗೆ ಪತ್ರ

`ಮುಡಾ' ವಂಚನೆ: ಲೆಕ್ಕಾಧಿಕಾರಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ಮುಡಾ ಹಣ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಡಾ ಲೆಕ್ಕಾಧಿಕಾರಿ  ಒಬ್ಬರನ್ನು ಬಂಧಿಸಿದ್ದರೆ,  ಆರೋಪಿಗಳು ಹಣ ವರ್ಗಾವಣೆ ಮಾಡಿರುವ ಅಕೌಂಟ್‌ಗಳನ್ನು ಸೀಜ್ ಮಾಡಲು ಪೊಲೀಸ್ ಇಲಾಖೆ ವಿವಿಧ ಬ್ಯಾಂಕ್‌ಗಳಿಗೆ ಪತ್ರ ಬರೆದಿದೆ.ಮುಡಾದ ಲೆಕ್ಕಾಧಿಕಾರಿ ನಾಗರಾಜು ಎಂಬುವವರನ್ನು ಗುರುವಾರ ತಡರಾತ್ರಿ ಬಂಧಿಸಿರುವ ಪೋಲಿಸರು, ಶುಕ್ರವಾರ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ನ್ಯಾಯಾಧೀಶರು, ನಾಗರಾಜು ಅವರನ್ನು 15 ದಿನಗಳ ಕಾಲ ನ್ಯಾಯಾಂಗ ವಶಕ್ಕೆ ನೀಡಿದ್ದಾರೆ.ಮುಡಾ ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದ ಪ್ರಮುಖ ಆರೋಪಿಗಳು, ಸಂಬಂಧಿಕರು, ವಹಿವಾಟು ಪಾಲುದಾರರು, ಸ್ನೇಹಿತರ ಖಾತೆಗಳಿಗೆ ಹಣವನ್ನು ವರ್ಗಾಯಿಸಿದ್ದಾರೆ.ಅರೋಪಿಗಳ ಖಾತೆಯಿಂದ ಯಾರ, ಯಾರ ಖಾತೆಗೆ ಹಣ ವರ್ಗಾವಣೆಯಾಗಿದೆ ಎಂಬುದನ್ನು ಪತ್ತೆ ಹಚ್ಚಿರುವ ಪೊಲೀಸರು, ಆ ಖಾತೆಗಳನ್ನು `ಸೀಜ್' ಮಾಡಬೇಕು ಎಂದು ಬ್ಯಾಂಕ್ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.ಬಹುತೇಕ ಖಾತೆಗಳಲ್ಲಿ ಕಡಿಮೆ ಹಣವಿದ್ದು, ಆ ಖಾತೆಗಳಿಂದ ಹಣವನ್ನು ಎಲ್ಲಿಗೆ ವರ್ಗಾಯಿಸಲಾಗಿದೆ ಎಂಬುದನ್ನು ಪತ್ತೆ ಹಚ್ಚುವ ಕೆಲಸದಲ್ಲಿ ನಿರತರಾಗಿದ್ದಾರೆ.ಮಹಿಳೆ ಯಾರು: ಮಂಡ್ಯ ಹಾಗೂ ರಾಮನಗರ-ಚನ್ನಪಟ್ಟಣ ಅಭಿವೃದ್ಧಿ ಪ್ರಾಧಿಕಾರ ಆಯುಕ್ತರಿಬ್ಬರಿಗೂ ಮಹಿಳೆಯೊಬ್ಬರು ಆಪ್ತರಾಗಿದ್ದರು ಎನ್ನಲಾಗಿದ್ದು, ಅವರ ಬಗೆಗೆ ಪೊಲೀಸ್ ಇಲಾಖೆಯ ಅಧಿಕಾರಿಗಳು ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎಂದು ವಿಶ್ವಾಸನೀಯ ಮೂಲಗಳು ತಿಳಿಸಿವೆ. ಈಗಾಗಲೇ ಅವರನ್ನು ಪ್ರಾಥಮಿಕ ವಿಚಾರಣೆ ನಡೆಸಿದ್ದು, ಅವಶ್ಯಕತೆ ಬಿದ್ದರೆ ಇನ್ನಷ್ಟು ವಿಚಾರಣೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.ನಿಷ್ಪಕ್ಷಪಾತ ತನಿಖೆಗೆ ಒತ್ತಾಯ: ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿರುವ 5 ಕೋಟಿ ರೂಪಾಯಿಯ ವಂಚನೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಂಡು, ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಸಿಪಿಐ (ಮಾರ್ಕ್ಸ್‌ವಾದ) ಜಿಲ್ಲಾ ಕಾರ್ಯದರ್ಶಿ ಎಂ.ಪುಟ್ಟಮಾದು ಆಗ್ರಹಿಸಿದರು.ಅಲ್ಲದೆ, ಈಗಾಗಲೇ ನಿವೇಶನ ಕೋರಿ ಸಾವಿರಾರು ಮಂದಿ `ಮುಡಾ'ಗೆ ಅರ್ಜಿ ಸಲ್ಲಿಸಿದ್ದಾರೆ. ಅಂತವರಿಗೆ ಆದ್ಯತೆಯ ಮೇರೆಗೆ ನಿವೇಶನ ಒದಗಿಸಲು ಜಿಲ್ಲಾ ಆಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.