ಶನಿವಾರ, ಜನವರಿ 25, 2020
28 °C

ಮೃತ್ಯುಕೂಪ ಮುಳ್ಳೂರು ಘಾಟ್‌ಗೆ ಮುಕ್ತಿ ಎಂದು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮದುರ್ಗ: ಮೃತ್ಯುಕೂಪವಾಗಿರುವ ತಾಲ್ಲೂಕಿನ ಮುಳ್ಳೂರು ಕಣಿವೆಯಲ್ಲಿ ಜೀವ ಕೈಯಲ್ಲಿ ಹಿಡಿದುಕೊಂಡು ಪ್ರಯಾಣಿಸುವಂತಾಗಿದೆ. ಇಲ್ಲಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿರುವುದೇ ಇದಕ್ಕೆ ಕಾರಣ. ಆದರೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳಾಗಲಿ ಅಥವಾ ಜಿಲ್ಲಾಡಳಿತವಾಗಲಿ ಈ ಕಡೆ ಗಮನ ಹರಿಸುತ್ತಿಲ್ಲ. ರಾಜಕೀಯ ಗುದ್ದಾಟದಲ್ಲಿ ಮುಳ್ಳೂರು ಕಣಿವೆಯ ರಸ್ತೆ ಸುಧಾರಣೆಯೂ ನೆನೆಗುದಿಗೆ ಬಿದ್ದಿದೆ. ರಸ್ತೆ ಸುಧಾರಣೆ ಕೆಲಸ ಪೂರ್ಣಗೊಂಡರೆ ಜನ ಬೆಂಬಲ ವ್ಯಕ್ತವಾಗುತ್ತದೆ ಎನ್ನುವ ಲೆಕ್ಕಾಚಾರದಲ್ಲಿ ಒಂದೊಂದು ಬಗೆಯ ಅಡೆತಡೆಗಳು ಎದುರಾಗುತ್ತಿವೆ.ಕಳೆದ ಪುರಸಭೆಯ ಚುನಾವಣೆಗೆ ಮುನ್ನವೇ ಕೇಂದ್ರ ಸರ್ಕಾರದ ಅನುದಾನದಲ್ಲಿ ಪರ್ಯಾಯ ರಸ್ತೆಗೆ ಶಾಸಕ ಅಶೋಕ ಪಟ್ಟಣ, ಸಿದ್ದರಾಮಯ್ಯನವರಿಂದ ಭೂಮಿಪೂಜೆ ನೆರವೇರಿಸಿದರು. ಚುನಾವಣೆಯ ನೀತಿ ಸಂಹಿತೆಯ ನೆಪದಲ್ಲಿ ಕಾರ್ಯ ನೆನೆಗುದಿಗೆ ಬಿದ್ದಿದೆ.

ಹಲವು ಸಾರಿ ಅಪಘಾತಗಳು ಸಂಭವಿಸಿದಾಗಲೂ ತಡೆಗೋಡೆ ನಿರ್ಮಿಸುವ ಕುರಿತು ಜಿಲ್ಲಾಡಳಿತಕ್ಕೆ ಪೊಲೀಸ್ ವರದಿಗಳು ತಿಳಿಸಿದ್ದರೂ ಕೂಡಾ ಯಾವುದೇ ರೀತಿಯ ಕ್ರಮ ಕೈಗೊಳ್ಳದೇ ಇರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.2013ರ ಫೆಬ್ರುವರಿ 3ರಂದು ಮುಳ್ಳೂರು ಕಣಿವೆಯಲ್ಲಿ ಸುಮಾರು 100 ಮೀಟರ್ ಆಳಕ್ಕೆ ಬಸ್ಸೊಂದು ಬಿದ್ದಿತ್ತು. ಬಸ್ಸಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಾಳಾಗಿದ್ದು ವರದಿಯಾಗಿತ್ತು. ಈ ಕುರಿತು ಪೊಲೀಸರು ತಮ್ಮ ವರದಿಯಲ್ಲಿ ಜಿಲ್ಲಾಡಳಿತಕ್ಕೆ ಕಣಿವೆಯಲ್ಲಿ ತಡೆಗೋಡೆ ನಿರ್ಮಿಸುವಂತೆ ತಿಳಿಸಿದ್ದರೂ ಕೂಡಾ ಇತ್ತ ಗಮನ ಹರಿಸದೇ ಇರುವುದು ಜಿಲ್ಲಾಡಳಿತದ ಬೇಜವಾಬ್ದಾರಿಯನ್ನು ಎತ್ತಿ ತೋರಿಸುತ್ತಿದೆ ಎನ್ನುತ್ತಾರೆ ಪ್ರಯಾಣಿಕರು.

ಈಗಲಾದರೂ ಆಡಳಿತ ವರ್ಗ ಎಚ್ಚೆತ್ತುಕೊಂಡು ತಡೆಗೋಡೆ ನಿರ್ಮಿಸಲಿ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.ಕರವೇ ಪ್ರತಿಭಟನೆ

ಬೆಳಗಾವಿ: ರಾಮದುರ್ಗ ತಾಲ್ಲೂಕಿನ ಮುಳ್ಳೂರು ಕಣಿವೆಯಲ್ಲಿ ಶುಕ್ರವಾರ ನಡೆದ ಅಪಘಾತದಲ್ಲಿ ಗಾಯಗೊಂಡ ಮಹಿಳೆಗೆ ಚಿಕಿತ್ಸೆ ನೀಡಲು ವಿಳಂಬವಾಗಿದ್ದರಿಂದ ಆಕೆ ಮೃತಪಟ್ಟಿದಾಳೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಶುಕ್ರವಾರ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತಿಭಟಿಸಿದರು.ಶುಕ್ರವಾರ ಬೆಳಗಿನ ಜಾವ ರಾಮದುರ್ಗ ತಾಲ್ಲೂಕಿನ ಮುಳ್ಳೂರು ಕಣಿವೆಯಿಂದ ಟೆಂಪೋ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಐವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಇಲ್ಲಿನ ಜಿಲ್ಲಾ ಆಸ್ಪತ್ರೆಗೆ ಕರೆ ತರಲಾಗಿತ್ತು.ಆಸ್ಪತ್ರೆಯ ವೈದ್ಯರು ತಕ್ಷಣೇ ಚಿಕಿತ್ಸೆ ನೀಡದೇ ಇರುವುದರಿಂದ ಜತ್ತ ಮೂಲದ ಭಾರತಿ ಚಂದನಶಿವಿ (45) ಕೊನೆಯುಸಿರೆಳೆದರು ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಕರವೇ ಕಾರ್ಯಕರ್ತರು,  ಆಸ್ಪತ್ರೆಗೆ ನುಗ್ಗಿ ವೈದ್ಯರ ಕಾರ್ಯವೈಖರಿಯ ವಿರುದ್ಧ ಘೋಷಣೆ ಕೂಗ ತೊಡಗಿದರು. ಮೇಲಾಧಿಕಾರಿಗಳು ಆಗಮಿಸುವಂತೆ ಪಟ್ಟು ಹಿಡಿದರು.ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ವೈದ್ಯಕೀಯ ಅಧೀಕ್ಷಕ ಎಸ್.ಟಿ. ಕಳಸದ ಅವರನ್ನು ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡರು. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ನಡೆದ ವಾಗ್ವಾದ ನಡೆಯಿತು. ಪ್ರತಿಭಟನಾಕಾರರು ಆಸ್ಪತ್ರೆಯ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಪ್ರತಿಭಟನಾಕಾರರನ್ನು ಕಳಸದ ಅವರು ಸಮಾಧಾನಪಡಿಸಿ, ಪರಿಸ್ಥಿತಿಯನ್ನು ಶಾಂತಗೊಳಿಸಿದರು.ಅಪಘಾತದಲ್ಲಿ ಗಾಯಗೊಂಡಿದ್ದ ಜ್ಯೋತಿ ಸನದಿ (30), ಜ್ಯೋತಿಬಾ ಬಿಲಬಿಲೆ (43), ಶೋಭಾ ಶಿಂಧೆ (26) ಹಾಗೂ ಸುಮಿತ್ ಶಿಂಧೆ (22) ಅವರಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.ಬೈಕ್ ಸವಾರರ ಸಾವು

ಬೆಳಗಾವಿ: ಗೂಡ್ಸ್ ಟೆಂಪೊ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹಲಗಾದ ಹಳೆ ಪಿ.ಬಿ. ರಸ್ತೆಯ ಕೆಳ ಸೇತುವೆ ಬಳಿ ಗುರುವಾರ ತಡರಾತ್ರಿ ನಡೆದಿದೆ.ಹಲಗಾದ ನಿವಾಸಿಯಾಗಿರುವ ಕಟ್ಟಡ ಕಾರ್ಮಿಕ ಅನಿಲ್ ಕುಲಕರ್ಣಿ (30) ಹಾಗೂ ಆತನ ಸಂಬಂಧಿಕರಾದ ಧಾರವಾಡದ ಪ್ರಶಾಂತ ಪರಿಮಳಾಚಾರ್ಯ ಗುಡಿ (25) ಮೃತಪಟ್ಟ ದುರ್ವೈವಿಗಳು. ಅನಿಲ್ ಕುಲಕರ್ಣಿ ಹಾಗೂ ಹಿಂಬದಿ ಸವಾರರಾದ ಪ್ರಶಾಂತ ಬೈಲಹೊಂಗಲದ ನೇಗಿನಹಾಳದಲ್ಲಿರುವ ಸಂಬಂಧಿಕರ ಮನೆಯಿಂದ ತಮ್ಮ ಮನೆಗೆ ಬೈಕ್‌ನಲ್ಲಿ ವಾಪಸ್ಸಾಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಗೂಡ್ಸ್ ಟೆಂಪೊವನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ಚಾಲಕ ಬಾಬಾಜಾನ್ ನಬಿಸಾಬ್ ನದಾಫ್‌ಗಾಗಿ ಶೋಧ ನಡೆಸಿದ್ದಾರೆ. ಬೆಳಗಾವಿ ಉತ್ತರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿಕ್ರಿಯಿಸಿ (+)