ಬುಧವಾರ, ಜೂಲೈ 8, 2020
21 °C

ಮೊಟ್ಟೆಯ ಸುತ್ತ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಮೊ ಟ್ಟೆ ಮೊದಲೋ ಕೋಳಿ ಮೊದಲೋ ಅಥವ ಮೊಟ್ಟೆ ಶಾಖಾಹಾರವೊ ಮಾಂಸಾಹಾರವೊ’ ಎನ್ನುವ ಚರ್ಚೆ ಬಹಳ ಹಿಂದಿನಿಂದಲೂ ಇದೆ. ಈ ಚರ್ಚೆಯ ಆಚೆಗೆ ಮೊಟ್ಟೆಯಲ್ಲಿರುವ ಪೌಷ್ಟಿಕಾಂಶಗಳು ಮನುಷ್ಯನಿಗೆ ಎಷ್ಟು ಉಪಯೋಗ ಅಥವ ಎಷ್ಟು ಹಾನಿಕರ ಎಂಬುದರ ಬಗ್ಗೆ ಒಂದು ನೋಟ.ಪೀಠಿಕೆ: ಅಪೌಷ್ಟಿಕತೆಯಿಂದ ನರಳುತ್ತಿರುವ ದೇಶಗಳಲ್ಲಿ ಭಾರತ ಕೂಡ ಒಂದು. ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಮಕ್ಕಳು, ಗರ್ಭಿಣಿಯರು, ಬಾಣಂತಿಯರು ಮೊಟ್ಟೆ ಸೇವಿಸಬಾರದೆಂಬ ಮೂಢನಂಬಿಕೆಗಳಿಗೆ ಮಾರು ಹೋಗಿ ನೂರಾರು ಕಾಯಿಲೆಗಳಿಂದ ನರಳುತ್ತಿದ್ದಾರೆ. ಆದರೆ ಪ್ರತಿನಿತ್ಯ ಸೊಪ್ಪು, ತರಕಾರಿ, ಕಾಳುಗಳು, ಹಾಲು ಇವುಗಳ ಜೊತೆಗೆ ಮೊಟ್ಟೆ ಸೇವನೆಯೂ ಬಹುಮುಖ್ಯ. ಮಕ್ಕಳಿಂದ ವೃದ್ಧರವರೆಗೆ ಎಲ್ಲರೂ ಸುಲಭವಾಗಿ ಜೀರ್ಣಿಸಿಕೊಳ್ಳಬಲ್ಲ ಏಕೈಕ ಆಹಾರ ಮೊಟ್ಟೆ.ಮೊಟ್ಟೆ ಉತ್ಪಾದನೆಯಲ್ಲಿ ಭಾರತ ಪ್ರಪಂಚದಲ್ಲಿ 5ನೇ ಸ್ಥಾನದಲ್ಲಿದೆ, ಕರ್ನಾಟಕ ಭಾರತದಲ್ಲೇ 6ನೇ ಸ್ಥಾನದಲ್ಲಿದೆ. ಈ ಉದ್ಯಮ ಸುಮಾರು 11 ಲಕ್ಷಕ್ಕೂ ಅಧಿಕ ಜನರಿಗೆ ಉದ್ಯೋಗಾವಕಾಶ ಕಲ್ಪಿಸಿದೆ.ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ನ (ಐ.ಸಿ.ಎಂ.ಆರ್.) ಸಲಹೆಯಂತೆ ಒಬ್ಬ ಆರೋಗ್ಯವಂತ ಮನುಷ್ಯ ಒಂದು ವರ್ಷಕ್ಕೆ 180 ಮೊಟ್ಟೆಗಳನ್ನು ಸೇವಿಸಬಹುದು. ಆದರೆ ಇಂದಿಗೂ ಭಾರತದಲ್ಲಿ  ತಲಾವಾರು ಸೇವನೆ 50ಕ್ಕಿಂತ ಕಡಿಮೆ ಇರುವುದು ವಿಪರ್ಯಾಸ.ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮೊಟ್ಟೆ ಪ್ರೊಟೀನ್ ಅನ್ನು ಸ್ಟಾಂಡರ್ಡ್ ಪ್ರೊಟೀನ್ ಎಂದು ಪರಿಗಣಿಸಿ, ಇತರೆ ಆಹಾರ ಪದಾರ್ಥಗಳಲ್ಲಿರುವ ಪ್ರೊಟೀನ್ ಅನ್ನು ಮೊಟ್ಟೆಯ ಪ್ರೊಟೀನ್‌ಗೆ ಹೋಲಿಸಿ ಅಳೆಯುತ್ತದೆ.ಮೊಟ್ಟೆಯು ಉತ್ತಮ ಗುಣಮಟ್ಟದ ಪ್ರೋಟೀನು, ಮೇದಸ್ಸು/ಕೊಬ್ಬು, ವಿಟಮಿನ್‌ಗಳು ಮತ್ತು ಕೆಲವು ರೋಗನಿರೋಧಕ ಶಕ್ತಿಗಳನ್ನು ಹೊಂದಿದೆ. ಒಟ್ಟಾರೆ ವಿಟಮಿನ್ ‘ಸಿ’ ಅನ್ನು ಹೊರತುಪಡಿಸಿ ಉಳಿದೆಲ್ಲಾ ಪೌಷ್ಟಿಕಾಂಶಗಳನ್ನು ಹೊಂದಿರುವ ಏಕೈಕ ಆಹಾರವೆಂದರೆ ಮೊಟ್ಟೆ. ಹಾಗಾಗಿ ‘ದಿನಕ್ಕೊಂದು ಮೊಟ್ಟೆ ತುಂಬುವುದು ಹೊಟ್ಟೆ’ ಎಂಬ ಮಾತು ಈಗಲೂ ಚಾಲ್ತಿಯಲ್ಲಿದೆ.ಪ್ರೊಟೀನ್:  ಮೊಟ್ಟೆಯಲ್ಲಿರುವ ಪ್ರೊಟೀನಿನ ಹೆಸರು ಆಲ್ಬೂಮಿನ್, ಇದರಲ್ಲಿ ನಮಗೆ ಅವಶ್ಯಕವಿರುವ ಎಲ್ಲಾ ಅಮೈನೋ ಆಮ್ಲಗಳು ಇವೆ. ಸುಲಭವಾಗಿ ಪಚನಗೊಂಡು ರಕ್ತಗತವಾಗುತ್ತದೆ ಹಾಗೂ ಇದರಲ್ಲಿರುವ ಸಸಾರಜನಕ ಶೇ 96 ರಷ್ಟು ದೇಹದ ಎಲ್ಲಾ ಜೀವಕೋಶಗಳಿಗೆ ತಲುಪಿ ಅವುಗಳ ಚಟುವಟಿಕೆಗಳಿಗೆ ಉಪಯೋಗವಾಗುತ್ತದೆ.ಮೊಟ್ಟೆಯಿಂದ ಹೃದಯಾಘಾತ ಅಥವ ರಕ್ತದ ಒತ್ತಡ ಉಂಟಾಗುವುದೆ?

ಒಂದು ಮೊಟ್ಟೆಯ ಸರಾಸರಿ ತೂಕ 60 ಗ್ರಾಂ, ಈ ಪೈಕಿ ಶೇ 11ರಷ್ಟು ಮೇದಸ್ಸು/ಕೊಬ್ಬು ಅಂದರೆ ಕೇವಲ 6.6 ಗ್ರಾಂ. ಸಾಮಾನ್ಯವಾಗಿ ಮೇದಸ್ಸಿನಲ್ಲಿ  ಸ್ಯಾಚುರೇಟೆಡ್ ಕೊಬ್ಬು, ಅನ್‌ಸ್ಯಾಚುರೇಟೆಡ್ ಕೊಬ್ಬು, ಕೊಲೆಸ್ಟೆರಾಲ್, ಟ್ರೈ ಗಿಸ್ಲರೈಡ್ ಮತ್ತು ಬಿಡಿ ಬಿಡಿಯಾದ ಕೊಬ್ಬಿನ ಆಮ್ಲಗಳು ಹೀಗೆ ನಾಲ್ಕಾರು ವಿಧಗಳಿವೆ. ಇವುಗಳಲ್ಲಿ ಸ್ಯಾಚುರೇಟೆಡ್ ಕೊಬ್ಬು ಶರೀರಕ್ಕೆ ಒಳ್ಳೆಯದೆಂತಲೂ, ಉಳಿದೆಲ್ಲಾ ಕೊಬ್ಬುಗಳು ಕೆಟ್ಟ ಕೊಬ್ಬುಗಳೆಂತಲೂ ವೈಜ್ಞಾನಿಕವಾಗಿ ಪರಿಗಣಿಸಲಾಗಿದೆ.ಮೊಟ್ಟೆಯಲ್ಲಿ  ಸ್ಯಾಚುರೇಟೆಡ್ ಕೊಬ್ಬಿಗಿಂಡ್ ಅನ್‌ಸ್ಯಾಚುರೇಟೆಡ್ ಕೊಬ್ಬಿನ ಪ್ರಮಾಣವೇ ಹೆಚ್ಚು. ಅತಿ ಹೆಚ್ಚಾದ ಸ್ಯಾಚುರೇಟೆಡ್ ಕೊಬ್ಬಿನ ಪ್ರಮಾಣ ಹೃದಯಾಘಾತ ಅಥವ ರಕ್ತದ ಒತ್ತಡಕ್ಕೆ ಒಂದು ಕಾರಣ. ಆದರೆ ಹೃದಯಾಘಾತಕ್ಕೆ ಇದಲ್ಲದೆ ನೂರಾರು ಕಾರಣಗಳಿವೆ.

ಕೊಲೆಸ್ಟೆರಾಲ್

 ಒಂದು ಮೊಟ್ಟೆಯಲ್ಲಿರುವುದು ಕೇವಲ 250 ಮಿ.ಗ್ರಾಂ. ಕೊಲೆಸ್ಟೆರಾಲ್. ಅದರೆ ನಮ್ಮ ದೇಹದಲ್ಲಿ  ಪ್ರತಿನಿತ್ಯವೂ ಸುಮಾರು 2000 ಮಿ.ಗ್ರಾಂ.ನಷ್ಟು ಕೊಲೆಸ್ಟೆರಾಲ್ ಬೇರೆ ಬೇರೆ ಮೂಲಗಳಿಂದ ಉತ್ಪತ್ಪಿಯಾಗುತ್ತದೆ. ಈ ರೀತಿ ಉತ್ತತ್ತಿಯಾದ ಕೊಲೆಸ್ಟೆರಾಲ್ ನರಮಂಡಲ, ಮೆದುಳು, ರಕ್ತನಾಳಗಳ ರಚನೆಗೆ ಹಾಗೂ ಕೆಲಸ ನಿರ್ವಹಿಸಲು ಉಪಯೋಗವಾಗುತ್ತದೆ. ಪ್ರಮುಖವಾಗಿ ಸಂತಾನೋತ್ಪತ್ಪಿಗೆ ಅಂದರೆ  ಗಂಡಸು ಮತ್ತು ಹೆಣ್ಣುತನಕ್ಕೆ ಕಾರಣವಾದ ಹಾರ್ಮೋನುಗಳ ಉತ್ಪತ್ಪಿಗೆ ಕೊಲೆಸ್ಟೆರಾಲ್ ಅತ್ಯಗತ್ಯ. ಇಷ್ಟೆಲ್ಲಾ ಅವಶ್ಯಕತೆ ಇದ್ದರೂ ಮೊಟ್ಟೆ ತಿಂದರೆ ಹೇಗೆ ಕೊಲೆಸ್ಟೆರಾಲ್ ಜಾಸ್ತಿಯಾಗುತ್ತದೆ?ಯಾವುದೇ ಮೂಲದಿಂದಾಗಲಿ ನಾವು ಪ್ರತಿನಿತ್ಯ ತಿನ್ನುವ ಕ್ಯಾಲರಿಗಳೆಷ್ಟು ಮತ್ತು ಖರ್ಚು ಮಾಡುವ ಕ್ಯಾಲರಿಗಳೆಷ್ಟು ಎಂಬುದು ಮುಖ್ಯ. ಅತಿಯಾದ ಆಹಾರ ಸೇವನೆಯಿಂದ ಕ್ಯಾಲರಿಗಳು ಹೆಚ್ಚು ಉತ್ತತ್ತಿಯಾಗುತ್ತವೆ. ಈ ರೀತಿ ಹೆಚ್ಚಾದ ಕ್ಯಾಲರಿಗಳ ಸೇವನೆಯಿಂದ  ಸ್ಯಾಚುರೇಟ್ ಕೊಬ್ಬು, ಕೊಲೆಸ್ಟೆರಾಲ್ ಮತ್ತು ಟ್ರೈ ಗಿಸ್ಲರೈಡ್‌ಗಳು ಉತ್ತತ್ತಿಯಾಗಿ ಹೃದಯ, ರಕ್ತನಾಳಗಳು, ಚರ್ಮದ ಒಳಪದರದಲ್ಲಿ ಶೇಖರಣೆಗೊಳ್ಳುತ್ತವೆ. ಇದರಿಂದ ಹೃದಯಾಘಾತ ಅಥವಾ ರಕ್ತದ ಒತ್ತಡ ಏರುವ ಸಾಧ್ಯತೆ ಉಂಟು.

ಬೇಸಿಗೆಯಲ್ಲಿ  ಮೊಟ್ಟೆ ತಿಂದರೆ ಉಷ್ಣ

ಶರೀರದಲ್ಲಿ  ಉಂಟಾಗುವ ಉಷ್ಣಾಂಶವು ಯಾವುದೇ ಆಹಾರ ಪದಾರ್ಥದಲ್ಲಿರುವ ಕಾರ್ಬೊಹೈಡ್ರೇಟ್ ಅಥವ ಶರ್ಕರ ಪಿಷ್ಟಗಳ ಪ್ರಮಾಣಕ್ಕೆ ಅನುಗುಣವಾಗಿರುತ್ತದೆ. ಮೊಟ್ಟೆಯಲ್ಲಿರುವುದು ಕೇವಲ ಶೇಕಡ 1ರಷ್ಟು ಕಾರ್ಬೊಹೈಡ್ರೇಟ್. ಇದು ಅಕ್ಕಿ, ಜೋಳ, ಗೋಧಿಯಲ್ಲಿರುವ ಪ್ರಮಾಣಕ್ಕಿಂತ ಅತಿ ಕಡಿಮೆ. ಈ ಆಹಾರ ಧಾನ್ಯಗಳಲ್ಲಿ ಶೇ 75ರಿಂದ 80 ಕಾರ್ಬೊಹೈಡ್ರೇಟ್ ಇರುತ್ತದೆ. ಅಲ್ಲದೇ ಇವುಗಳನ್ನು ಪ್ರತಿನಿತ್ಯ ನಾವು ತಿನ್ನುವ ಪ್ರಮಾಣ ಮೊಟ್ಟೆಗಿಂತ ಅತಿ ಹೆಚ್ಚು. ಆದುದರಿಂದ ಮೊಟ್ಟೆಯನ್ನು ಯವುದೇ ಕಾಲದಲ್ಲಿ ಬೇಕಾದರೂ ತಿನ್ನಬಹುದು.

ಮೊಟ್ಟೆಯ ಇತರ ಉಪಯೋಗಗಳು

ಕ್ಯಾನ್ಸರ್ ಸಂಶೋಧನೆ, ಸಂಗ್ರಹಿಸಿದ ವೀರ್ಯಾಣುಗಳನ್ನು ಶೇಖರಿಸಲು, ಕಾಂತಿವರ್ಧಕಗಳ ತಯಾರಿಕೆ, ಔಷಧಗಳ ತಯಾರಿಕೆ, ಬೇಕರಿ ತಿನಿಸುಗಳ ತಯಾರಿಕೆ, ಕೆಲವು ಪ್ರಾಣಿ ಆಹಾರಗಳ ತಯಾರಿಕೆ, ಚರ್ಮ ಹದ ಮಾಡಲು ಹೀಗೆ ಹತ್ತು ಹಲವಾರು ಬೇರೆ ಬೇರೆ ಉದ್ಯಮಗಳಲ್ಲಿ ಮೊಟ್ಟೆಯನ್ನು ಉಪಯೋಗಿಸಲಾಗುತ್ತಿದೆ.ಈ ಎಲ್ಲಾ ಕಾರಣಗಳಿಂದ ಮೊಟ್ಟೆಗೆ ಪ್ರಪಂಚದ ಎಲ್ಲೆಡೆ ಹೆಚ್ಚು ಬೇಡಿಕೆಯಿದೆ. 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.