ಬುಧವಾರ, ಏಪ್ರಿಲ್ 21, 2021
31 °C

ಮೋದಿ ಪ್ರಧಾನಿ ಅಭ್ಯರ್ಥಿ-ನಿತೀಶ್ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಎನ್‌ಡಿಎ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸುವುದಿಲ್ಲ ಎಂಬ ಸ್ಪಷ್ಟ ಭರವಸೆ ನೀಡುವಂತೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಬಿಜೆಪಿ ಹೈಕಮಾಂಡ್‌ನ್ನು ಒತ್ತಾಯಿಸಿದ್ದಾರೆ.ಪ್ರಣವ್ ಮುಖರ್ಜಿ ಅವರು ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿ  ನಿತೀಶ್ ಅವರು ಬಿಜೆಪಿ ಅಧ್ಯಕ್ಷ ಗಡ್ಕರಿ ಜತೆ ಮಾತನಾಡಿ ಮೋದಿ ಅವರನ್ನು ಪ್ರಧಾನಿ ಹುದ್ದೆಯ ಅಭ್ಯರ್ಥಿ ಎಂದು ಬಿಂಬಿಸಬಾರದು ಎಂದು ಒತ್ತಾಯಿಸಿದ್ದಾರೆ ಎಂದು ನಿತೀಶ್ ಅವರ ನಿಕಟವರ್ತಿಗಳು ತಿಳಿಸಿದ್ದಾರೆ. ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನಿ ಹುದ್ದೆಯ ಅಭ್ಯರ್ಥಿ ಯಾರು ಎಂಬುದರ ಬಗ್ಗೆ ಬಿಜೆಪಿ ಇದುವರೆಗೆ ಚರ್ಚಿಸಿಲ್ಲ. ಪ್ರಧಾನಿ ಅಭ್ಯರ್ಥಿಯನ್ನು ಎನ್‌ಡಿಎ ಮಿತ್ರ ಪಕ್ಷಗಳ ಜತೆ ಚರ್ಚಿಸಿದ ನಂತರವೇ ಅಂತಿಮಗೊಳಿಸಲಾಗುವುದು ಎಂದು ಗಡ್ಕರಿ ಅವರು ನಿತೀಶ್‌ಗೆ ಭರವಸೆ ನೀಡಿದ್ದಾರೆ ಎನ್ನಲಾಗಿದೆ.ಸಾರ್ವತ್ರಿಕ ಚುನಾವಣೆಗೆ ಇನ್ನು  ಕೇವಲ ಒಂದೂವರೆ ವರ್ಷವಿರುವುದರಿಂದ ಮೋದಿ ಅವರನ್ನು ಬಿಟ್ಟು ಬೇರೆ ಹೆಸರನ್ನು ಅಂತಿಮಗೊಳಿಸಬೇಕು ಎಂದು ನಿತೀಶ್ ಸಲಹೆ ಮಾಡಿದ್ದಾರೆ ಎಂದು ಅವರ ನಿಕಟವರ್ತಿಗಳು ತಿಳಿಸಿದ್ದಾರೆ. 29 ಸಂಸದರನ್ನು ಹೊಂದಿರುವ ಜೆಡಿ (ಯು) ಎನ್‌ಡಿಎನಲ್ಲಿ ಬಿಜೆಪಿ ನಂತರದ ಸ್ಥಾನದಲ್ಲಿದೆ.ಎನ್‌ಡಿಎ ಪ್ರಧಾನಿ ಅಭ್ಯರ್ಥಿಯು ಜಾತ್ಯತೀತ ಮನೋಭಾವದವರಾಗಿರಬೇಕು ಎಂದು ನಿತೀಶ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಿಳಿಸುವ ಮೂಲಕ ಪರೋಕ್ಷವಾಗಿ ಮೋದಿ ಅವರು ಪ್ರಧಾನಿ ಅಭ್ಯರ್ಥಿಯಾಗುವುದಕ್ಕೆ ತಮ್ಮ ವಿರೋಧವಿದೆ ಎಂಬ ಇಂಗಿತ ವ್ಯಕ್ತಪಡಿಸಿದ್ದರು.ಮೋದಿ ಮತ್ತು ನಿತೀಶ್ ಸಂಬಂಧ ಮೊದಲಿನಿಂದಲೂ ಅಷ್ಟಕ್ಕಷ್ಟೇ. ಮುಸ್ಲಿಂ ಸಮುದಾಯದ ಬೆಂಬಲ ಹೊಂದಿರುವ ನಿತೀಶ್ ಅವರು 2005, 2010ರ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಮೋದಿ ಅವರಿಗೆ ಪ್ರಚಾರ ಮಾಡಲು ಅವಕಾಶ ನೀಡಿರಲಿಲ್ಲ.`ಬಿಜೆಪಿ, ಎನ್‌ಡಿಎಯಲ್ಲಿ ಬಿಕ್ಕಟ್ಟಿಲ್ಲ~(ಆಗ್ರಾ ವರದಿ) :
ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿ ಯಾರು ಎಂಬುದರ ಬಗ್ಗೆ ಎನ್‌ಡಿಎ ಮಿತ್ರ ಪಕ್ಷಗಳಲ್ಲಿ ಯಾವುದೇ ಭಿನ್ನಾಭಿಪ್ರಾಯ ಅಥವಾ ಬಿಕ್ಕಟ್ಟು ಉಂಟಾಗಿಲ್ಲ ಎಂದು ಬಿಜೆಪಿ ಸ್ಪಷ್ಟಪಡಿಸಿದೆ.ಮೋದಿ ಮಹತ್ವಾಕಾಂಕ್ಷೆಗೆ ಅಡ್ವಾಣಿಯ `ಓರೆನೋಟ~

ಮುಂದಿನ ಲೋಕಸಭಾ ಚುನಾವಣೆ ನಂತರ ಕಾಂಗ್ರೆಸ್ಸೇತರ, ಬಿಜೆಪಿಯೇತರ ನಾಯಕರೊಬ್ಬರ ನೇತೃತ್ವದಲ್ಲಿ ಸರ್ಕಾರ ರಚನೆ ಆಗಬಹುದು. ಆದರೆ ಆ ಸರ್ಕಾರ ಸ್ಥಿರ ಆಡಳಿತ ನೀಡಲು ವಿಫಲವಾಗಬಹುದು ಎಂದು ಬಿಜೆಪಿ ನಾಯಕ ಎಲ್.ಕೆ. ಅಡ್ವಾಣಿ ಹೇಳಿದ್ದಾರೆ.ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮೋದಿ ಅವರನ್ನು ಎನ್‌ಡಿಎ ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸುವುದಕ್ಕೆ ವಿರೋಧ ವ್ಯಕ್ತಪಡಿಸಿರುವ ಬೆನ್ನಲ್ಲೇ ಅಡ್ವಾಣಿ ಹೀಗೆ ಹೇಳಿದ್ದಾರೆ.ಪ್ರಮುಖ ಪಕ್ಷಗಳಾದ ಕಾಂಗ್ರೆಸ್ ಅಥಬಾ ಬಿಜೆಪಿ ಬೆಂಬಲದಿಂದ ಕಾಂಗ್ರೆಸ್ಸೇತರ ಅಥವಾ ಬಿಜೆಪಿಯೇತರ ವ್ಯಕ್ತಿ ಪ್ರಧಾನಿಯಾಗಿ ನೇಮಕವಾಗಬಹುದು. ಈ ಹಿಂದೆ ಕೂಡ ಇದು ಸಂಭವಿಸಿದೆ ಎಂದು ಅವರು ತಮ್ಮ ಬ್ಲಾಗ್‌ನಲ್ಲಿ ಇತ್ತೀಚೆಗೆ ಬರೆದಿದ್ದಾರೆ.ಈ ಹಿಂದೆ ಚರಣ್ ಸಿಂಗ್, ಚಂದ್ರಶೇಖರ್, ಎಚ್.ಡಿ.ದೇವೇಗೌಡ, ಐ.ಕೆ.ಗುಜ್ರಾಲ್ ಅವರು ಕಾಂಗ್ರೆಸ್ ನೆರವಿನಿಂದ ಹಾಗೂ ವಿ.ಪಿ.ಸಿಂಗ್ ಅವರು ಬಿಜೆಪಿ ಬೆಂಬಲದಿಂದ ಪ್ರಧಾನಿಯಾಗಿದ್ದನ್ನು ಅಡ್ವಾಣಿ ತಮ್ಮ ಅಭಿಪ್ರಾಯಕ್ಕೆ ಪೂರಕವಾಗಿ ಉದಾಹರಿಸಿದ್ದಾರೆ.ಆದರೆ, ಕೇಂದ್ರದಲ್ಲಿ ಕಾಂಗ್ರೆಸ್ ಅಥವಾ ಬಿಜೆಪಿಯ ನಾಯಕ ಪ್ರಧಾನಿಯಾದಾಗ ಮಾತ್ರ ಸ್ಥಿರ ಸರ್ಕಾರ ನೀಡಲು ಸಾಧ್ಯವಾಗಿದೆ ಎಂದೂ ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.25 ವರ್ಷಗಳ ಅನುಭವದಿಂದ ಹೇಳುವುದಾದರೆ, ಕೇಂದ್ರದಲ್ಲಿ ಕಾಂಗ್ರೆಸ್ ಅಥವಾ ಬಿಜೆಪಿ ಬೆಂಬಲವಿಲ್ಲದೆ ಸರ್ಕಾರ ರಚನೆ ಸಾಧ್ಯವಿಲ್ಲ. ಹೀಗಾಗಿ 2014ರ ಚುನಾವಣೆ ನಂತರ ತೃತೀಯ ರಂಗ ಸರ್ಕಾರ ರಚನೆ ಸಾಧ್ಯವಿಲ್ಲ ಎಂದಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.