ಶನಿವಾರ, ಜನವರಿ 18, 2020
19 °C
ಬ್ಲಾಗಿಲನು ತೆರೆದು...

ಯಕ್ಷಸಾಹಿತ್ಯದ ಮಾದರಿಗಳು

–ಸಾಕ್ಷಿ. Updated:

ಅಕ್ಷರ ಗಾತ್ರ : | |

‘ಯಕ್ಷಚಿಂತನ’ (yakshachintana. blogspot.in) ಯಕ್ಷಗಾನ ಕಲೆಯ ವಿರಾಟ್‌ ಸ್ವರೂಪದ ತುಣುಕುಗಳನ್ನು ಕಾಣಿಸುವ ಒಂದು ಬರಹರೂಪಿ ಪ್ರಯತ್ನ. ರಾಜ್‌ಕುಮಾರ್‌ ಅವರ ಈ ಬ್ಲಾಗ್‌ ಯಕ್ಷಗಾನ ಪ್ರಸಂಗಗಳು, ಕಲಾವಿದರ ಪರಿಚಯ ಹಾಗೂ ಪ್ರಸಂಗಗಳ ಕಥನದ ವಿಶ್ಲೇಷಣೆಯನ್ನೂ ನಡೆಸುತ್ತದೆ.ಯಕ್ಷಗಾನದ ಬಗೆಗಿನ ಬ್ಲಾಗಿಗರ ಆಸಕ್ತಿ ಪ್ರತಿಬರಹದಲ್ಲೂ ಸ್ಪಷ್ಟವಾಗಿ ಕಾಣಿಸುತ್ತದೆ. ಯಕ್ಷಕಲೆಯ ಸಹೃದಯಿ ವೀಕ್ಷಕನಾಗಿ ಅದರ ಸಾಧ್ಯತೆಗಳನ್ನು ಹಂಚಿಕೊಳ್ಳಲು ಬಯಸುವ ರಾಜ್‌ಕುಮಾರ್‌ ಅವರಿಗೆ ಒಳ್ಳೆಯ ಭಾಷೆಯೂ ಇರುವುದರಿಂದ ಈ ಬ್ಲಾಗಿನ ಓದು ರುಚಿಕರವಾಗಿದೆ. ಆರಾಧನೆ, ಅಭಿಮಾನ, ಶುಷ್ಕ ಮಾಹಿತಿ ಅಥವಾ ಕಾರ್ಯಕ್ರಮಗಳ ಪಟ್ಟಿಗೆ ಸೀಮಿತವಾದ ಬರವಣಿಗೆ ಇದಾಗಿರದೆ ಒಳನೋಟಗಳನ್ನುಳ್ಳ ಬರಹಗಳು ಇಲ್ಲಿ ಸಂಕಲನಗೊಂಡಿವೆ. ಈ ಬರಹಗಳಿಗೆ ಪ್ರಬಂಧದ ಧಾಟಿಯೂ ಇರುವುದು ಗಮನಾರ್ಹ.ಪುತ್ತಿಗೆ ರಘುರಾಮ ಹೊಳ್ಳ ಅವರಿಗೊಮ್ಮೆ ಸನ್ಮಾನ ನಡೆದಾಗ, ಆ ಕಾರ್ಯಕ್ರಮದ ನೆಪದಲ್ಲಿ ರಾಜ್‌ಕುಮಾರ್‌ ಸೊಗಸಾದ ವ್ಯಕ್ತಿಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ. ‘ಭಾಗವತೋ ಅಭಿನಂದನಮ್’ ಎನ್ನುವ ಆ ಬರಹದ ಒಂದು ತುಣುಕು ನೋಡಿ: ‘‘ಹೊಳ್ಳಣ್ಣ ಯಕ್ಷಗಾನ ಕಂಡ ಅದ್ಭುತ ಭಾಗವತ. ದೈತ್ಯ ಕಂಠದ ದೈತ್ಯ ಪ್ರತಿಭೆಯ ಕಿರು ಶರೀರದ ಭಾಗವತ.

ಹಲವು ಸಲ ರಂಗಸ್ಥಳದ ಸಿಂಹಾಸನದ ಹಿಂದೆ ಇವರು ಕಾಣುವುದೇ ಇಲ್ಲವೇನೋ ಎನ್ನಿಸಿದರೂ ಹೊರಹೊಮ್ಮುವ ಏರು ಶ್ರುತಿಯ ಸ್ವರ ಮಾತ್ರ ಅದ್ಭುತ ಎನಿಸಲ್ಪಡುತ್ತದೆ. ಅದು ಕಂಠದ ಪೂರ್ಣ ಸಾಮರ್ಥ್ಯಕ್ಕೆ ಸವಾಲು ಹಾಕಿದ ಹಾಗಿರುವ ಸ್ವರ. ಇಷ್ಟಾದರೂ ಸಲೀಸಾದ ಮುಖಭಾವ. ಸಹಕಲಾವಿದರನ್ನು ಪ್ರಚೋದಿಸುವ ಹಾವಭಾವ.

ಎಲ್ಲೆಲ್ಲಿಯೋ ನೋಡಿ ಮಾತಾಡಿ ವಾಹನ ಚಲಾಯಿಸಿದರೂ ವಾಹನ ರಸ್ತೆಯಲ್ಲಿ ಸುರಕ್ಷಿತವಾಗಿ ಸಾಗಿದಂತೆ ಇರುವ ಗಾಯನ ಶೈಲಿ ನಿಜಕ್ಕೂ ಅದ್ಭುತ ಪ್ರತಿಭೆ. ತಾಳ ಬಡಿಯದೇ ಇದ್ದರೂ ಶೂನ್ಯವಾಗಿ ಇದ್ದ ತಾಳ ಧುತ್ತನೇ ಪ್ರತ್ಯಕ್ಷವಾದ ಹಾಗೆ ಇರುವ ಲಯಶುದ್ಧಿ. ಇದು ಪ್ರತಿಭೆ ಮಾತ್ರ ಇದ್ದರೆ ಸಾಲದು, ಸಾಧನೆಯೂ ಬೇಕಾಗುತ್ತದೆ. ಈ ಮಟ್ಟಿಗೆ ಹೊಳ್ಳರದ್ದು ಅದ್ವಿತೀಯ ಸಾಧನೆ. ಪದ ಹೇಳುತ್ತಾ ಪಕ್ಕದವರೊಂದಿಗೆ ಕೈಸನ್ನೆ ಕಣ್ಸನ್ನೆಯಲ್ಲಿ ಮಾತನಾಡುತ್ತಾ ನಂತರದ ಚರಣವನ್ನು ಅದೇ ವೇಗದಲ್ಲಿ ಅದೇ ಲಯದಲ್ಲಿ ತೆಗೆಯುತ್ತಾರೆ.

ಅದು ಎಷ್ಟು ಸಲೀಸು...? ಅಚ್ಚರಿಯಾಗದೇ ಇರಲು ಸಾಧ್ಯವೇ?’’. ‘ರಸಿಕ ರತ್ನ ವಿಟ್ಲ ಜೋಷಿ’ ಎನ್ನುವ ಇನ್ನೊಂದು ವ್ಯಕ್ತಿಚಿತ್ರದ ಒಂದು ಭಾಗ ಹೀಗಿದೆ: ‘‘ಅಡುಗೆಯವ ತಾನುಂಡು ಉಳಿದವರಿಗೆ ಬಡಿಸುವಂತಾಗಬಾರದು.. ಅರ್ಥಾತ್ ಹಾಸ್ಯಗಾರನೂ ಹಾಗೆ.. ತನ್ನ ಹಾಸ್ಯಕ್ಕೆ ತಾನು ನಗಬಾರದು. ತನ್ನ ಹಾಸ್ಯಕ್ಕೆ ಸ್ವತಃ ಅವನು ನಕ್ಕರೆ ಅಡುಗೆಯವ ಎಲ್ಲರಿಗಿಂತ ಮೊದಲು ತಾನು ಊಟ ಮಾಡಿ ತೇಗಿದ ಹಾಗೆ ಎಂದೇ ಅರ್ಥ.

ವಿಟ್ಲ ಜೋಷಿಯವರ ಹಾಸ್ಯ ನೋಡುವಾಗ ಈ ಭಾವನೆ ಮೊದಲಿಗೆ ಬರುತ್ತದೆ. ಅವರ ಹಾಸ್ಯ ಪ್ರಸಂಗಕ್ಕೆ ಅವರು ನಕ್ಕಿದ್ದೇ ಇಲ್ಲ... ಬದಲಾಗಿ ಬಿದ್ದು ಬಿದ್ದು ನಗುವ ಪ್ರೇಕ್ಷಕನನ್ನು ಕಂಡು ಮತ್ತೂ ಅವೇಶಭರಿತರಾಗಿ ಇವರೊಳಗಿನ ಹಾಸ್ಯಗಾರ ವಿಜೃಂಭಿಸುತ್ತಿದ್ದ’’. ಹೊಳ್ಳರು ಹಾಗೂ ವಿಟ್ಲ ಜೋಷಿ ಅವರ ಕುರಿತ ಬರಹಗಳು ಉತ್ತಮ ವ್ಯಕ್ತಿಚಿತ್ರ ಬರವಣಿಗೆಯ ಮಾದರಿಗಳೂ ಹೌದು.ಯಕ್ಷಕಥನಗಳ ಬಗ್ಗೆ ಬ್ಲಾಗಿಗರ ಒಳನೋಟಗಳಿಗೆ ಉದಾಹರಣೆಯಾಗಿ ರಾವಣ ಹಾಗೂ ಅಂಬೆಯರ ಕುರಿತ ಬರಹಗಳನ್ನು ನೋಡಬೇಕು. ಹಲವು ಕಂತುಗಳಲ್ಲಿ ಪ್ರಕಟಗೊಂಡಿರುವ ಈ ಬರಹಗಳು ಆಯಾ ಪಾತ್ರಗಳ ಅಂತರಂಗವನ್ನು ಯಕ್ಷಕಥನಗಳ ಹಿನ್ನೆಲೆಯಲ್ಲೇ ವಿಶ್ಲೇಷಿಸುತ್ತವೆ. ವಿವಿಧ ಕಲಾವಿದರ ಮೂಲಕ ರಾವಣ–ಅಂಬೆಯರ ವ್ಯಕ್ತಿತ್ವ ಕಳೆಗಟ್ಟಿರುವುದನ್ನೂ ಬ್ಲಾಗಿಗರು ಗುರ್ತಿಸಿದ್ದಾರೆ. ಹಲವು ಸಂಗತಿಗಳನ್ನು ತಳಕು ಹಾಕಿ ತಮ್ಮದೇ ಆದ ಅನಿಸಿಕೆಯನ್ನು ಅಭಿವ್ಯಕ್ತಿಸುವ ಕ್ರಮ ಕುತೂಹಲಕರವಾಗಿದೆ. ‘ಅಂತರಂಗದ ರಾವಣ’ ಬರಹದ ಕೆಲವು ಸಾಲುಗಳು ಹೀಗಿವೆ:‘‘..... ಬಡಗುತಿಟ್ಟು ಹಿಮ್ಮೇಳದಲ್ಲಿ ಶ್ರೀ ನೆಬ್ಬೂರು ಕಡತೋಕರಂತ ಹಿರಿಯ ಭಾಗವತರು ಇದ್ದರೆ ಮುಮ್ಮೇಳದ ಅರ್ಥ ಧಾರಿಗಳಾಗಿ ಶೇಣಿ ಮೂಡಂಬೈಲು ಮುಂತಾದವರು ಮುಮ್ಮೇಳದ ಅರ್ಥಗಾರಿಕೆಯ ಆಯಾಮವನ್ನು ತೋರಿಸಿಕೊಟ್ಟರು. ಶೇಣಿಯವರ ರಾವಣ ಎಂದರೆ ಅದು ಮಾತಿನಲ್ಲೇ ರಾವಣನ ಅಪರಾವತಾರವನ್ನು ತೋರಿಕೊಡುತ್ತಾರೆ.

ತಾಳ ಮದ್ದಲೆಯಲ್ಲಿ ಹಲವಾರು ಪಾತ್ರಗಳಿಗೆ ತಮ್ಮ ಛಾಪನ್ನು ಒತ್ತಿದರೂ ಶೇಣಿಯವರ ರಾವಣ ಎಂದರೆ ಅದು ಏಕಮೇವಾದ್ವಿತೀಯ ಪಾತ್ರ. ಉಡುಪಿ ಮಠಾಧೀಶರು ಶೇಣಿಯವರಿಗೆ ಹೇಳಿದ್ದರಂತೆ– ‘ನೀವು ರಾವಣನ ಪಾತ್ರ ಮಾಡಬಾರದು’. ಈ ಮಾತು ಪರೋಕ್ಷವಾಗಿ ರಾವಣನ ಪಾತ್ರ ಹೇಗೆ ರಂಗದ ಮೇಲೆ ವಿಜೃಂಭಿಸುತ್ತದೆ ಎಂಬುದಕ್ಕೆ ಉದಾಹರಣೆ.ರಾವಣ ಹತಾಶನಾಗುತ್ತಾನೆ. ತನ್ನದೆಲ್ಲವನ್ನು ಕಳೆದುಕೊಂಡ ದುಗುಡ ಒಂದೆಡೆಯಾದರೆ ಕುಸಿಯುತ್ತಿರುವ ಘನತೆ ಇನ್ನೊಂದೆಡೆ. ಶೇಣಿಯವರು ರಾವಣನ ಅಂತರಂಗವಾಗಿ ವಿಲಪಿಸುತ್ತಾರೆ– ಯಃಕಶ್ಚಿತ್ ಒಬ್ಬ ದೂತ ಲಂಕೆಯ ನಾಯಕ ಏನು ಮಾಡಬೇಕು ಎಂದು ಸಲಹೆ ಕೊಡುವ ಕಾಲಬಂತೆ? ಬಂದರೆ ಅದು ರಾವಣನ ಅರಸೊತ್ತಿಗೆಯಾದೀತೆ, :ಪ್ರಜಾಪ್ರಭುತ್ವವಾದೀತಲ್ಲ?’. ರಾವಣನದ್ದು ಸರ್ವಾಧಿಕಾರ ಎಂದು ಪರೋಕ್ಷದ ಧ್ವನಿ ಇದು’’.‘ಅಂಬಾ ವೃತ್ತಾಂತ’ದ ಬಗ್ಗೆ ಬರೆಯುತ್ತಾ– ‘‘ವಿಚಿತ್ರವೀರ್ಯನನ್ನು ದುರ್ಬಲ ಎಂದು ಸಾಧಿಸಿ ಪರೋಕ್ಷವಾಗಿ ಭೀಷ್ಮನ ಪೌರುಷದತ್ತ ವಾಲುವ ಮನಸ್ಸು. ಪಾತ್ರದ ವ್ಯಕ್ತಿತ್ವದ ಸೂಕ್ಷ್ಮವನ್ನು ಬಹಳ ಸುಂದರವಾಗಿ ಮತ್ತು ಸಾಂಕೇತಿಕವಾಗಿ ಕೋಳ್ಯೂರರು ತೋರಿಸಿ ಕೊಡುತ್ತಾರೆ. ಮುಂದೆ ಇದೇ ಯೋಚನೆ ಹೆಮ್ಮರವಾಗಿ ಬೆಳೆದು ಭೀಷ್ಮನ ಬದುಕಿಗೆ ಪರ್ಯಾಯವಾಗಿ ಸಡ್ಡು ಹೊಡೆಯುತ್ತದೆ.

ಇಂತಹ ವಾದಗಳು ಪರಿಶುದ್ಧ ತಾಳಮದ್ದಲೆಯ ಸಂವಾದವನ್ನು ಬಿಂಬಿಸುತ್ತದೆ. ಇಲ್ಲಿ ಪ್ರತಿಸ್ಪರ್ಧಿಯನ್ನು ಸೋಲಿಸುವ ಪ್ರವೃತ್ತಿಯಿಲ್ಲ, ಬದಲಾಗಿ ಅಂಬೆಯ ವ್ಯಕ್ತಿತ್ವದ ಛಾಪನ್ನು ಒತ್ತುವ ಪ್ರಯತ್ನವಾಗಿರುತ್ತದೆ’’. ಯಕ್ಷಗಾನದ ಆಸಕ್ತರಿಗೆ ಮಾತ್ರವಲ್ಲದೆ ಸಂಸ್ಕೃತಿ ವಿದ್ಯಾರ್ಥಿಗಳ ಪಾಲಿಗೂ ‘ಯಕ್ಷಚಿಂತನ’ ಹಿತಕರ ಅನುಭವ ನೀಡುತ್ತದೆ.

ಪ್ರತಿಕ್ರಿಯಿಸಿ (+)