ಗುರುವಾರ , ಏಪ್ರಿಲ್ 22, 2021
28 °C

ಯಾದಗಿರಿ: ಭೀಮೆಯ ಒಡಲು ಮಲಿನ

ಚಿದಂಬರಪ್ರಸಾದ/ ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ಯಾದಗಿರಿ: ನಗರ  ಹಾಗೂ ದಡದ ಹತ್ತಾರು ಹಳ್ಳಿಗಳ ಜನ, ಜಾನುವಾರುಗಳ ದಾಹ ತೀರಿಸುವ ಭೀಮಾ ನದಿಯ ಒಡಲು ಇದೀಗ ಮಲೀನವಾಗುತ್ತಿದೆ. ಎಲ್ಲೆಂದರಲ್ಲಿ ಕಸದ ರಾಶಿ, ವೈದ್ಯಕೀಯ ತ್ಯಾಜ್ಯಗಳು ಕಾಣುತ್ತಿದ್ದು, ನಗರದ ಚರಂಡಿಯ ನೀರು ಈ ನದಿಗೆ ಸೇರುತ್ತಿರುವುದರಿಂದ ಆತಂಕ ಹೆಚ್ಚಾಗಿದೆ.ನಗರದ ಜನರಿಗೆ ಕಳೆದ ಹಲವಾರು ವರ್ಷಗಳಿಂದ ಭೀಮಾ ನದಿಯ ನೀರನ್ನು ಪೂರೈಕೆ ಮಾಡಲಾಗುತ್ತಿದೆ. ಇಂದಿಗೂ ನಗರದ ಜನರು ಭೀಮಾ ನದಿಯ ನೀರನ್ನೇ ಕುಡಿಯುತ್ತಿದ್ದಾರೆ. ಆದರೆ ಕಳೆದ ಒಂದೆರಡು ವರ್ಷಗಳಿಂದ ಭೀಮಾ ನದಿಯಲ್ಲಿ ರಾಸಾಯನಿಕ ಅಂಶಗಳು, ತ್ಯಾಜ್ಯಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತಿದ್ದು, ನಗರದ ಜನರು ಈ ನೀರನ್ನು ಕುಡಿಯುವುದಕ್ಕೆ ಹಿಂದೇಟು ಹಾಕುವಂತಾಗಿದೆ.ವರ್ಷ ಪೂರ್ತಿ ಕುಡಿಯುವ ನೀರು ಮತ್ತು ಕೃಷಿ ಚಟುವಟಿಕೆಗಳಿಗೆ ನೀರು ಒದಗಿಸುತ್ತಿರುವ ಭೀಮಾ ನದಿ ಒಡಲಲ್ಲಿ ಈಗ ಎಲ್ಲವೂ ಸರಿಯಾಗಿಲ್ಲ ಎಂದು ಹೇಳಲಾಗುತ್ತಿದೆ. ಎಲ್ಲೆಂದರಲ್ಲಿ ತ್ಯಾಜ್ಯವನ್ನು ಎಸೆಯಲಾಗುತ್ತಿದ್ದು, ಇದೇ ನೀರನ್ನು ಕುಡಿಯುವುದಕ್ಕೆ ಬಳಸುತ್ತಿರುವುದರಿಂದ ಹೆಚ್ಚಿನ ಕಾಳಜಿ ವಹಿಸುವುದು ಅವಶ್ಯಕವಾಗಿದೆ ಎಂಬ ಒತ್ತಾಯ ಹೆಚ್ಚಾಗುತ್ತಿವೆ. ನಗರದಿಂದ ಕೇವಲ 3 ಕಿ.ಮೀ. ಅಂತರದಲ್ಲಿರುವ ಭೀಮಾ ನದಿಯಲ್ಲಿ ನಿತ್ಯವೂ ಒಂದಿಲ್ಲೊಂದು ರೀತಿಯ ಪೂಜೆ, ಪುನಸ್ಕಾರಗಳು ನಡೆಯುತ್ತಿದ್ದು, ಇನ್ನೊಂದೆಡೆ ಆಸ್ಪತ್ರೆಗಳಲ್ಲಿನ ವೈದ್ಯಕೀಯ ತ್ಯಾಜ್ಯಗಳನ್ನು ಇಲ್ಲಿಯೇ ಎಸೆಯಲಾಗುತ್ತಿದೆ. ಇನ್ನೊಂದೆಡೆ ನಗರದ ಕೆಸರು ನೀರು ಹಾಗೂ ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ ಬಳಸಿದ ಹೊಲಗಳಿಂದ ಹೊರಬರುವ ನೀರು ಭೀಮಾನದಿಯ ವಿಷಕಾರಕ ಅಂಶಗಳು ಸೇರುತ್ತಿರುವುದು ಈಗಾಗಲೇ ಸ್ಪಷ್ಟವಾಗಿದೆ.ನೀರು ಕಲುಷಿತ:  ಭೀಮಾ ನದಿಯಲ್ಲಿನ ನೀರು ಕಲುಷಿತವಾಗುತ್ತಿರುವುದಕ್ಕೆ ಈಗಾಗಲೇ ಹಲವಾರು ನಿದರ್ಶನಗಳು ಸಿಕ್ಕಿವೆ. ಕಳೆದ ವರ್ಷ ನದಿಯಲ್ಲಿನ ಮೀನುಗಳು ಸತ್ತು, ದಡದಲ್ಲಿ ರಾಶಿಯಾಗಿ ಬಿದ್ದಿದ್ದವು. ಈ ಬಗ್ಗೆ ಪರಿಶೀಲನೆ ಮಾಡಿದ ಸಂದರ್ಭದಲ್ಲಿ ರಾಸಾಯನಿಕ ಮಿಶ್ರಣದಿಂದಲೇ ಈ ಮೀನುಗಳು ಮೃತಪಟ್ಟಿವೆ ಎಂಬುದನ್ನು ಅಧಿಕಾರಿಗಳೇ ಸ್ಪಷ್ಟಪಡಿಸಿದ್ದರು.ಇದೀಗ ಅಪಾಯಕಾರಿ ಔಷಧೀಯ ತಾಜ್ಯ ಎಸೆಯುವುದರಿಂದ ನದಿ ನೀರು ಮತ್ತಷ್ಟು ಕಲುಷಿತವಾಗುತ್ತಿದೆ. ಈ ಹಿಂದೆ ನದಿ ಪಕ್ಕದಲ್ಲಿ ಇಂತಹ ತಾಜ್ಯಗಳನ್ನು ಎಸೆಯುತ್ತಿರುವ ಬಗ್ಗೆ ಪತ್ರಿಕೆಗಳಲ್ಲಿ ವರದಿಗಳೂ ಆಗಿವೆ. ಕೆಲ ದಿನಗಳ ಮಟ್ಟಿಗೆ ಇದನ್ನು ತಡೆಯಲಾಗಿತ್ತಾದರೂ, ಮತ್ತೆ ನಿರಂತರವಾಗಿ ಮುಂದುವರಿದಿದೆ.ವೈದ್ಯಕೀಯ ತ್ಯಾಜ್ಯಗಳ ವಿಲೇವಾರಿಯನ್ನು ಖಾಸಗಿ ಸಂಸ್ಥೆಯಾದ ಪರಿಸರ ಅಸೋಸಿಯೇಟ್ಸ್‌ಗೆ ವಹಿಸಲಾಗಿದ್ದು, ಆದರೂ ಈ ತ್ಯಾಜ್ಯಗಳು ನದಿಯ ಒಡಲಲ್ಲಿ ಬಿದ್ದಿರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಹೀಗಾಗಿ ವೈದ್ಯಕೀಯ ತ್ಯಾಜ್ಯಗಳೆಲ್ಲವೂ ನೀರಿನಲ್ಲಿ ಸೇರುವುದರಿಂದ ರಾಸಾಯನಿಕ ಅಂಶಗಳು ಸೇರಲಿವೆ ಎಂದು ಹೇಳಲಾಗುತ್ತಿದೆ.ಈ ಕುರಿತು ಪ್ರತಿಕ್ರಿಯೆ ನೀಡಿರುವ ನಗರಸಭೆ ಅಧ್ಯಕ್ಷೆ ಲಲಿತಾ ಅನಪೂರ, ಈ ಔಷಧಿ ತ್ಯಾಜ್ಯ ವಿಲೇವಾರಿ ಮಾಡಲು ಖಾಸಗಿ ಸಂಸ್ಥೆಯಾದ ಪರಿಸರ ಅಸೋಸಿಯಟ್ಸ್ ಗೆ ವಹಿಸಲಾಗಿದ್ದು, ಭೀಮಾ ನದಿಯಲ್ಲಿ ಈ ತ್ಯಾಜ್ಯಗಳನ್ನು ಎಸೆಯುತ್ತಿರುವ ಬಗ್ಗೆ ನಮಗೂ ಮಾಹಿತಿ ಬಂದಿದೆ. ಇದನ್ನು ಯಾರು ಹಾಕಿದ್ದಾರೆ ಎಂಬುದರ ಕುರಿತು ವಿವರ ಪಡೆದು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.ಪೂಜೆಯ ತ್ಯಾಜ್ಯ: ಇದೀಗ ಭೀಮಾನದಿಯಲ್ಲಿ ನೀರು ಕಡಿಮೆ ಆಗಿದ್ದು, ಕೆಲದಿನಗಳಿಂದ ಬರಿದಾಗಿರುವ ನದಿ ಪಾತ್ರದಲ್ಲಿ ಮಂಗಳವಾರ ಪೂಜೆ ಮಾಡಲಾಗುತ್ತಿದೆ. ಕೆಲ ಮಹಿಳೆಯರು, ಪುರುಷರು ಇಲ್ಲಿಗೆ ಬಂದು ವಿಶೇಷ ಪೂಜೆ ಸಲ್ಲಿಸುತ್ತಿದ್ದು, ಮಕ್ಕಳಿಗಾಗಿಯೋ ಅಥವಾ ಮಳೆಗಾಗಿಯೋ ಇಂತಹ ಪೂಜೆ ಮಾಡಲಾಗುತ್ತಿದೆ ಎಂದು ಸುತ್ತಲಿನ ಗ್ರಾಮದ ಜನರು ಹೇಳುತ್ತಾರೆ.ಇದು ವಾಮಾಚಾರ ಇರಲು ಸಾಧ್ಯವಿಲ್ಲ. ಹಗಲು ಹೊತ್ತಿನಲ್ಲಿ ಇಂತಹ ಚಟುವಟಿಕೆಗಳನ್ನು ನಡೆಸಲು ಸಾಧ್ಯವಿಲ್ಲ. ಅದೂ ಕೂಡ ನದಿ ಪಾತ್ರದಲ್ಲಿ ಈ ರೀತಿಯ ವಾಮಾಚಾರ, ಮಾಟ ಮಂತ್ರಗಳನ್ನು ಮಾಡುವುದಿಲ್ಲ. ಇದು ಕೇವಲ ಪೂಜೆ ಇರಬಹುದು ಎಂಬ ಸಂಶಯವನ್ನು ಪೊಲೀಸ್ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.ಇದೀಗ ಇಲ್ಲಿ ಪೂಜೆಗೆ ಬಳಸುವ ಕುಂಕುಮ ಮತ್ತಿತರ ವಸ್ತುಗಳನ್ನು ಹಾಕಲಾಗುತ್ತಿದ್ದು, ನದಿಗೆ ನೀರು ಬಂದಲ್ಲಿ ಈ ಎಲ್ಲ ವಸ್ತುಗಳು ನೀರಿನಲ್ಲಿ ಸೇರಲಿದ್ದು, ಇದರಿಂದ ನೀರು ಇನ್ನಷ್ಟು ಕಲುಷಿತವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.ಗೊಬ್ಬರದ ಅಂಶ ಸೇರ್ಪಡೆ: ಒಂದೆಡೆ ನಗರದ ತ್ಯಾಜ್ಯವೂ ಹಳ್ಳದ ಮೂಲಕ ಈ ನದಿಗೆ ಸೇರುತ್ತಿದ್ದು, ಇನ್ನೊಂದೆಡೆ ರಾಸಾಯನಿಕ ಗೊಬ್ಬರ, ಕ್ರಿಮಿನಾಶಕಗಳನ್ನು ಬಳಸುವ ನದಿ ತೀರದ ಜಮೀನುಗಳ ಮಾಲೀಕರು ಇಂತಹ ನೀರನ್ನೇ ನದಿಗೆ ಬಿಡುತ್ತಿದ್ದಾರೆ. ಇದರಿಂದಾಗಿಯೇ ಕಳೆದ ವರ್ಷ ಅನೇಕ ಮೀನುಗಳು ಮೃತಪಟ್ಟಿರುವ ಘಟನೆಯೂ ನಡೆದಿತ್ತು.ಹೀಗಾಗಿ ಒಂದಿಲ್ಲೊಂದು ರೀತಿಯಿಂದ ಜನ,ಜಾನುವಾರುಗಳಿಗೆ ನೀರುಣಿಸುವ ಭೀಮಾ ನದಿಯ ನೀರು ಇದೀಗ ಶುದ್ಧವಾಗಿಲ್ಲ ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿವೆ. ಕೂಡಲೇ ಈ ನದಿ ತೀರದಲ್ಲಿ ಎಚ್ಚರಿಕೆ ವಹಿಸಬೇಕು. ನದಿಯಲ್ಲಿ ಇಂತಹ ತ್ಯಾಜ್ಯಗಳ ವಿಲೇವಾರಿಯನ್ನು ತಡೆಯಬೇಕು. ಇಲ್ಲವಾದಲ್ಲಿ ಮುಂದೊಂದು ದಿನ ಭೀಮಾ ನದಿ ತ್ಯಾಜ್ಯ ಸಂಗ್ರಹಣೆಯ ತಾಣವಾಗಿ ಪರಿವರ್ತನೆ ಆಗಲಿದೆ ಎಂಬ ಆತಂಕವನ್ನು ಜನರು ವ್ಯಕ್ತಪಡಿಸುತ್ತಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.