ಬುಧವಾರ, ಜೂನ್ 16, 2021
23 °C

ಯುಪಿಎಗೆ ನಷ್ಟವಿಲ್ಲ: ಸೋನಿಯಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದಿಂದ ಯುಪಿಎಗೆ ಯಾವುದೇ ನಷ್ಟವಿಲ್ಲ ಎಂದು ಹೇಳಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, `ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡದಿರುವುದು ಹಾಗೂ ಉತ್ತರ ಪ್ರದೇಶದಲ್ಲಿ ಪಕ್ಷದ ಸಂಘಟನೆ ದುರ್ಬಲವಾಗಿರುವುದು ಕಾಂಗ್ರೆಸ್ ಹಿನ್ನಡೆಗೆ ಕಾರಣ~ ಎಂದು ಆತ್ಮಾವಲೋಕನ ಮಾಡಿಕೊಂಡಿದ್ದಾರೆ.ಉತ್ತರ ಪ್ರದೇಶ, ಪಂಜಾಬ್ ಹಾಗೂ ಗೋವಾದಲ್ಲಿ ಪಕ್ಷದ ಸೋಲಿಗೆ ಬೆಲೆ ಏರಿಕೆ ಕೂಡ ಕಾರಣವಿರಬಹುದು. ಕಳಪೆ ಸಾಧನೆಯ ಆಘಾತದಿಂದ ಹೊರಬಂದು ಗುಜರಾತ್, ಹಿಮಾಚಲ ಪ್ರದೇಶ ಹಾಗೂ ಕರ್ನಾಟಕ ರಾಜ್ಯಗಳ ಚುನಾವಣೆಯನ್ನು ಎದುರಿಸುತ್ತೇವೆ ಎಂದು ಬುಧವಾರ ಅವರು ಸುದ್ದಿಗಾರರಿಗೆ ತಿಳಿಸಿದರು.`ಸೋಲೇ ಇರಲಿ, ಗೆಲುವೇ ಇರಲಿ, ಪ್ರತಿ ಚುನಾವಣೆಯೂ ನಮಗೆ ಪಾಠ ಕಲಿಸುತ್ತದೆ~ ಎಂದೂ ಅವರು ಮಾರ್ಮಿಕವಾಗಿ ನುಡಿದರು.ಸೋಲಿಗೆ ನಾಯಕತ್ವದ ಕೊರತೆ ಕಾರಣವೇ ಎಂಬ ಪ್ರಶ್ನೆಗೆ, `ನಾಯಕತ್ವ ಕೊರತೆಗಿಂತ ಪಕ್ಷದಲ್ಲಿ ನಾಯಕರು ತುಂಬಿ ತುಳುಕುತ್ತಿರುವುದು ನಮ್ಮ ಸಮಸ್ಯೆ~ ಎಂದರು.ಅಮೇಥಿ, ರಾಯ್‌ಬರೇಲಿ ಕ್ಷೇತ್ರಗಳ ಫಲಿತಾಂಶ ಉಲ್ಲೇಖಿಸುತ್ತಾ, ಹಿಂದೆ ಕೂಡ ನಾವು ಇಲ್ಲಿ ಇಂಥ ಸೋಲನ್ನು ಕಂಡಿದ್ದೆವು. ಹಾಲಿ ಶಾಸಕರ ಬಗ್ಗೆ ಜನರಿಗೆ ಅಸಮಾಧಾನವಿತ್ತು. ಹೊಸಬರಿಗೆ ಅವಕಾಶ ನೀಡಿದ್ದಾರೆ ಎಂದರು.ಉತ್ತರಾಖಂಡದಲ್ಲಿ ಪಕ್ಷವು ಸರ್ಕಾರ ರಚಿಸುವಷ್ಟು ಸ್ಥಾನಗಳನ್ನು ಪಡೆದುಕೊಂಡಿದೆ. ಸರ್ಕಾರ ರಚಿಸಲು ನಮಗೇ ಆಹ್ವಾನ ನೀಡಬೇಕು ಎಂದರು.ಪಂಜಾಬ್‌ನಲ್ಲಿ ನಾವು ಸರ್ಕಾರ ರಚಿಸುವ ಭರವಸೆ ಇಟ್ಟುಕೊಂಡಿದ್ದೆವು. ಆದರೆ ಪಂಜಾಬ್ ಪೀಪಲ್ಸ್ ಪಾರ್ಟಿ (ಪಿಪಿಪಿ) ನಮಗೆ 23 ಸ್ಥಾನಗಳಲ್ಲಿ ಹೊಡೆತ ನೀಡಿತು. ಗೋವಾದಲ್ಲಿ ಬಹುತೇಕ ಮತದಾರರು ಪಕ್ಷದ ಬಗ್ಗೆ ಅಸಮಾಧಾನಗೊಂಡಿದ್ದರು. ಹಾಗಾಗಿ ಅಲ್ಲಿ ನಮಗೆ ಸೋಲಾಯಿತು ಎಂದು ವಿಶ್ಲೇಷಿಸಿದರು.ಭ್ರಷ್ಟಾಚಾರ ವಿಷಯವು ಚುನಾವಣೆಯಲ್ಲಿ ಪಕ್ಷಕ್ಕೆ ಮುಳುವಾಯಿತೇ ಎಂಬ ಪ್ರಶ್ನೆಗೆ, `ನಾವು ಲೋಕಸಭೆಯಲ್ಲಿ ಲೋಕಪಾಲ್ ಮಸೂದೆ ಅಂಗೀಕರಿಸಿದ್ದೇವೆ. ಆದರೆ ರಾಜ್ಯಸಭೆಯಲ್ಲಿ ಇದಕ್ಕೆ ತಡೆ ನೀಡಿದ್ದು ಯಾರು?~ ಎಂದು ಪ್ರಶ್ನಿಸಿದರು.

`ಪ್ರಧಾನಿ ಬದಲಾವಣೆ ಇಲ್ಲ~

ಚುನಾವಣೆಯಲ್ಲಿ ಪಕ್ಷ ಹಿನ್ನಡೆ ಅನುಭವಿಸಿದ್ದಕ್ಕಾಗಿ ಪ್ರಧಾನಿ ಹುದ್ದೆ ಬದಲಾವಣೆ ಬಗ್ಗೆ ಕೇಳಿಬರುತ್ತಿರುವ ಮಾತುಗಳನ್ನು ಸೋನಿಯಾ ಅಲ್ಲಗಳೆದಿದ್ದಾರೆ. 2014ರ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿ ಯಾರಾಗಬಹುದು ಎಂಬ ಪ್ರಶ್ನೆಗೆ `ಆ ಮಾತು ಈಗ ಯಾಕೆ, ಈಗಿನ್ನೂ ನಾವು 2012ರಲ್ಲಿ ಇದ್ದೇವೆ~ ಎಂದು ಚುಟುಕಾಗಿ ಉತ್ತರಿಸಿದ್ದಾರೆ.ಸಮಾಜವಾದಿ ಪಕ್ಷದಿಂದ ಯುಪಿಎಗೆ ಯಾವುದೇ ಹಾನಿ ಸಾಧ್ಯತೆಯನ್ನೂ ಅವರು ತಳ್ಳಿಹಾಕಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.