ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವತಿ ಆತ್ಮಹತ್ಯೆಗೆ ಮಾನಸಿಕ ಹಿಂಸೆ ಆರೋಪ:ಹರಿಯಾಣ ಸಚಿವರ ವಿರುದ್ಧ ಪ್ರಕರಣ

Last Updated 5 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ವಿಮಾನ ಹಾರಾಟ ಸ್ಥಗಿತಗೊಂಡಿರುವ ವಿಮಾನಯಾನ ಕಂಪೆನಿಯೊಂದರ ಮಾಜಿ ಗಗನಸಖಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು, ಇದಕ್ಕೆ ಈ ಕಂಪೆನಿ ಮಾಲೀಕರಾಗಿರುವ ಹರಿಯಾಣದ ಸಚಿವರೊಬ್ಬರು ಆಕೆಗೆ ಮಾನಸಿಕ ಹಿಂಸೆ ನೀಡುತ್ತಿದ್ದುದು ಕಾರಣ ಎಂಬ ಆಪಾದನೆ ಮೇಲೆ ಸಚಿವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದೆಹಲಿಯ ವಾಯವ್ಯ ಭಾಗದಲ್ಲಿರುವ ಅಶೋಕ್ ವಿಹಾರ್ ಪ್ರದೇಶದಲ್ಲಿನ ತಮ್ಮ ಮನೆಯಲ್ಲಿ ಗೀತಿಕಾ ಶರ್ಮಾ ಎಂಬುವರು ಶನಿವಾರ ರಾತ್ರಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು ಹರಿಯಾಣದ ಗೃಹ ಮತ್ತು ಯುವಜನ ಸೇವೆ ಇಲಾಖೆಗಳ ರಾಜ್ಯ ಖಾತೆ ಸಚಿವ ಸಚಿವ ಗೋಪಾಲ್ ಕಂಡಾ ಅವರ ಎಂಡಿಎಲ್‌ಆರ್ ವಿಮಾನಯಾನ ಕಂಪೆನಿಯಲ್ಲಿ ಗಗನ ಸಖಿಯಾಗಿದ್ದರು.

ಇತ್ತೀಚೆಗಷ್ಟೇ ಉದ್ಯೋಗ ಬಿಟ್ಟಿದ್ದ ಅವರನ್ನು ಪುನಃ ಕೆಲಸಕ್ಕೆ ಬರುವಂತೆ ಸಚಿವ ಗೋಪಾಲ್ ಕಂಡಾ ಒತ್ತಡ ಹಾಕಿ, ಮಾನಸಿಕವಾಗಿ ಹಿಂಸೆ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ.ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ಗೀತಿಕಾ ಶರ್ಮಾ, ತಾವು ಎಂಡಿಎಲ್‌ಆರ್ ಕಂಪೆನಿಯನ್ನು ತೊರೆದ ನಂತರ ಗೋಪಾಲ್ ತಮಗೆ ಮಾನಸಿಕವಾಗಿ ಹಿಂಸೆ ನೀಡತೊಡಗಿದರು. ಮತ್ತೆ ಕೆಲಸಕ್ಕೆ ಬರುವಂತೆ ತೀವ್ರ ಒತ್ತಡ ಹಾಕುತ್ತಿದ್ದರು ಎಂದು ಪತ್ರ ಬರೆದಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

`ಯುವತಿಯ ಆತ್ಮಹತ್ಯೆಗೆ ಸಂಬಂಧಿಸಿದಂತೆ ಹರಿಯಾಣದ ಸಚಿವ ಗೋಪಾಲ್ ಕಂಡಾ ಮತ್ತು ಅವರ ಕಂಪೆನಿಯ ವ್ಯವಸ್ಥಾಪಕ ಅರುಣಾ ಛಡ್ಡಾ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. “ಗೋಪಾಲ್ ವಿಶ್ವಾಸದ್ರೋಹ, ವಂಚನೆ ಮಾಡಿದ್ದಾರೆ” ಎಂದು ಗೀತಿಕಾ ಶರ್ಮಾ ಪತ್ರದಲ್ಲಿ ಬರೆದಿದ್ದಾರೆ.

ಪತ್ರದಲ್ಲಿ ಅರುಣಾ ಛಡ್ಡಾ  ಹೆಸರೂ ಉಲ್ಲೇಖವಾಗಿದೆ. ಆದ್ದರಿಂದ ಸಚಿವ ಗೋಪಾಲ್ ವಿರುದ್ಧ ಆತ್ಮಹತ್ಯೆಗೆ ಪ್ರೇರಣೆ ನೀಡಿದ ಆಪಾದನೆ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ~ ಎಂದು ಪೊಲೀಸ್ ಉಪ ಆಯುಕ್ತ (ಡಿಸಿಪಿ) ಪಿ. ಕರುಣಾಕರನ್ ತಿಳಿಸಿದ್ದಾರೆ.

ಎಂಡಿಎಲ್‌ಆರ್ ಕಂಪೆನಿಯು ವಿಮಾನಯಾನ ಸೇವೆ ಸ್ಥಗಿತಗೊಳಿಸಿದ ನಂತರ ಗೋಪಾಲ್ ಕಂಡಾ, ಗೀತಿಕಾ ಶರ್ಮಾ ಅವರನ್ನು ತಮ್ಮದೇ ಒಡೆತನದ ಬೇರೊಂದು ಕಂಪೆನಿಯ ನಿರ್ದೇಶಕರನ್ನಾಗಿ ನೇಮಿಸಿದ್ದರು. ಆದರೆ, ಗೀತಿಕಾ  ಈ ಪ್ರಸ್ತಾವವನ್ನು ತಿರಸ್ಕರಿಸಿ ರಾಜೀನಾಮೆ ನೀಡಿದ್ದರು.

`ಎಂಡಿಎಲ್‌ಆರ್ ಕಂಪೆನಿ ಬಿಟ್ಟ ಬಳಿಕ ಗೀತಿಕಾ ದುಬೈನಲ್ಲಿ ಇನ್ನೊಂದು ಕಂಪೆನಿಗೆ ಸೇರಿದ್ದರು. ಆದರೆ ಗೋಪಾಲ್, ಗೀತಿಕಾ ಚಾರಿತ್ರ್ಯಕ್ಕೆ ಕಳಂಕ ತರುವಂತಹ ಪತ್ರವನ್ನು ಆ ಕಂಪೆನಿಗೆ ಬರೆದ ಕಾರಣ ಕಂಪೆನಿ ಗೀತಿಕಾಳನ್ನು ಕೆಲಸದಿಂದ ತೆಗೆದುಹಾಕಿತ್ತು~ ಎಂದು ಗೀತಿಕಾ ಅವರ ಸೋದರ ಗೌರವ್ ಶರ್ಮಾ ಆರೋಪಿಸಿದ್ದಾರೆ.

ಚಂಡೀಗಡ ವರದಿ: ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆದುಕೊಳ್ಳುವುದಾಗಿ  ಹರಿಯಾಣ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT