ಭಾನುವಾರ, ಮಾರ್ಚ್ 26, 2023
31 °C

ಯುವಪ್ರತಿಭೆಗಳ ಚಿಮ್ಮುಹಲಗೆ

ಗಿರೀಶ ದೊಡ್ಡಮನಿ Updated:

ಅಕ್ಷರ ಗಾತ್ರ : | |

ಯುವಪ್ರತಿಭೆಗಳ ಚಿಮ್ಮುಹಲಗೆ

ಭಾರತ ಸೀನಿಯರ್ ತಂಡದ ಮೆರಗು ಹೆಚ್ಚಿಸಲು ಸಿದ್ಧವಾಗಿರುವ ಚಿಗುರುಮೀಸೆಯ ಹುಡುಗರು ಈಗ 19 ವರ್ಷದೊಳಗಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ತಮ್ಮ ಸಾಮರ್ಥ್ಯ ಮೆರೆಯುತ್ತಿದ್ದಾರೆ.ಇದರ ಮೇಲೆ ಗಿರೀಶ ದೊಡ್ಡಮನಿ ಬೆಳಕು ಚೆಲ್ಲಿದ್ದಾರೆ.



ಬಿಹಾರ ರಾಜ್ಯ ಕ್ರಿಕೆಟ್ ಸಂಸ್ಥೆಗೆ ಬಿಸಿಸಿಐ ಮಾನ್ಯತೆ ನೀಡಬೇಕೆಂಬ ಕೂಗು ಹಲವು ವರ್ಷಗಳದ್ದು. ಆದರೆ, ಇದುವರೆಗೂ ಆ ಬೇಡಿಕೆ ಈಡೇರಿಲ್ಲ. ಹಾಗೆಂದು ಅಲ್ಲಿಯ ಕ್ರಿಕೆಟ್ ಆಸಕ್ತ ಮಕ್ಕಳು ಕೈಕಟ್ಟಿ ಕುಳಿತಿಲ್ಲ. ಪಕ್ಕದ ಜಾರ್ಖಂಡ್ ರಾಜ್ಯದ ತಂಡಕ್ಕೆ ಆಡುವ ಮೂಲಕ ದೇಶದ ಗಮನ ಸೆಳೆಯುತ್ತಿದ್ದಾರೆ. ಆ ಪೈಕಿ ಇಶಾನ್ ಕಿಶನ್ ಈಗ ಕ್ರಿಕೆಟ್‌ ಪ್ರೇಮಿಗಳಿಗೆ ಪರಿಚಯವಾಗುತ್ತಿರುವ ಹದಿನೆಂಟರ ಹರೆಯದ ಹುಡುಗ.

ಸದ್ಯ ಬಾಂಗ್ಲಾದಲ್ಲಿ ನಡೆಯುತ್ತಿರುವ 19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ತಂಡದ ನಾಯಕರಾಗಿದ್ದಾರೆ. ಎರಡು ತಿಂಗಳ ಹಿಂದೆ ನಡೆದಿದ್ದ ವಿಜಯ ಹಜಾರೆ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ಭಾರತ ಏಕದಿನ ಕ್ರಿಕೆಟ್ ತಂಡದ ನಾಯಕ ಮಹೇಂದ್ರಸಿಂಗ್ ದೋನಿ ಅವರೊಂದಿಗೆ ಜಾರ್ಖಂಡ್ ತಂಡದಲ್ಲಿ ಆಡಿದ್ದರು. ದೋನಿಯಿಂದ ಹಲವು ಸಲಹೆಗಳನ್ನು ಪಡೆದಿದ್ದರು. ಇದೀಗ ಭಾರತ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರು ಕಿಶನ್ ಪ್ರತಿಭೆಗೆ ಸಾಣೆ ಹಿಡಿಯುತ್ತಿದ್ದಾರೆ.



ರಾಷ್ಟ್ರೀಯ ಸೀನಿಯರ್ ತಂಡದ ಆಯ್ಕೆ ಸಮಿತಿಯ ಗಮನ ಸೆಳೆಯುವ ಪ್ರಮುಖ ವೇದಿಕೆ 19 ವರ್ಷದೊಳಗಿನವರ ಕ್ರಿಕೆಟ್ ವಿಭಾಗ. ಈ ತಂಡವನ್ನು ಪ್ರತಿನಿಧಿಸಿ ಒಳ್ಳೆಯ ಸಾಧನೆ ಮಾಡಿದವರು, ಪ್ರಶಸ್ತಿ ಗೆದ್ದ ತಂಡದ ನಾಯಕರಾಗಿದ್ದವರು ಇವತ್ತು ಭಾರತ ಕ್ರಿಕೆಟ್ ತಂಡದ ತಾರೆಗಳಾಗಿ ಮೆರೆದ ಇತಿಹಾಸವಿದೆ. ಆದ್ದರಿಂದ 19 ವರ್ಷದೊಳಗಿನವರ ತಂಡಕ್ಕೆ ಆಡುವುದು ಪ್ರತಿಷ್ಠೆಯ ವಿಷಯವೂ ಹೌದು.



2000ನೇ ಇಸವಿಯಲ್ಲಿ ಭಾರತವು ಟ್ರೋಫಿ ಗೆದ್ದಾಗ ನಾಯಕರಾಗಿದ್ದ ಮೊಹಮ್ಮದ್ ಕೈಫ್ ಸೀನಿಯರ್ ತಂಡದಲ್ಲಿಯೂ ತಮ್ಮ ಪಾರಮ್ಯ ಮೆರೆಯುವ ಅವಕಾಶ ಗಿಟ್ಟಿಸಿದ್ದರು 2008ರಲ್ಲಿ ಜೂನಿಯರ್ ತಂಡವು  ಟ್ರೋಫಿ ಗೆದ್ದು ಬಂದಾಗ ನಾಯಕರಾಗಿದ್ದ ವಿರಾಟ್ ಕೊಹ್ಲಿ ಇವತ್ತು ಭಾರತ ಟೆಸ್ಟ್ ತಂಡದ ನಾಯಕರಾಗಿದ್ದಾರೆ. ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿಯೂ ರನ್‌ಗಳ ಹೊಳೆ ಹರಿಸುತ್ತ ಕ್ರಿಕೆಟ್‌ ಅಭಿಮಾನಿಗಳ ಕಣ್ಮಣಿಯಾಗಿದ್ದಾರೆ. 2014ರಲ್ಲಿ ಟ್ರೋಫಿ ಗೆದ್ದ ನಾಯಕ ಉನ್ಮುಕ್ತ್ ಚಾಂದ್ ಕೂಡ ಭಾರತ ತಂಡದಲ್ಲಿ ಆಡುವ ಅವಕಾಶ ಗಿಟ್ಟಿಸಿದ್ದರು. ಇವರಲ್ಲದೇ ಎಲ್ಲ ದೇಶಗಳ ಬಹಳಷ್ಟು ದಿಗ್ಗಜ ಕ್ರಿಕೆಟಿಗರಿಗೆ 19 ವರ್ಷದೊಳಗಿನವರ ಕ್ರಿಕೆಟ್ ವಿಶ್ವಕಪ್ ‘ಚಿಮ್ಮು ಹಲಗೆಯಾಗಿ’ ಯಾಗಿ ಕೆಲಸ ಮಾಡಿದೆ.



28 ವರ್ಷಗಳ ಇತಿಹಾಸ

ಒಟ್ಟು ನಾಲ್ಕು ವಿಶ್ವಕಪ್ (ಏಕದಿನ) ಟೂರ್ನಿಗಳ ಯಶಸ್ಸಿನಿಂದಾಗಿ ಏಕದಿನ ಕ್ರಿಕೆಟ್ ಮಾದರಿಯು ಜಗತ್ತಿನ ಕ್ರಿಕೆಟ್‌ಪ್ರೇಮಿಗಳ ಮನ ಗೆದ್ದಿದ್ದ ಸಂದರ್ಭ ಅದು. ಆದರೆ, ವಿಶ್ವದ ಬೇರೆ ಬೇರೆ ತಂಡಗಳಲ್ಲಿದ್ದ ಹಲವು ಹಿರಿಯ ಆಟಗಾರರು ವಿದಾಯದಂಚಿನಲ್ಲಿದ್ದರು. ಹೊಸ ಪ್ರತಿಭೆಗಳು  ಹಲವರಿದ್ದರೂ, ಅವರಲ್ಲಿ ಸೋಸಿ ತೆಗೆದು ರಾಷ್ಟ್ರೀಯ ತಂಡಗಳಿಗೆ ಸೇರಿಸಿಕೊಳ್ಳುವ ಸವಾಲು ಇತ್ತು. ಅದಕ್ಕಾಗಿಯೇ 19 ವರ್ಷದೊಳಗಿನ ಪ್ರತಿಭೆಗಳನ್ನು ಆಯ್ಕೆ ಮಾಡಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿತು. 1988ರಲ್ಲಿ ಮೊದಲ ಬಾರಿಗೆ ಯೂತ್ ವಿಶ್ವಕಪ್ ಆರಂಭಿಸಲಾಯಿತು. ಮೊದಲ ಟೂರ್ನಿಯಲ್ಲಿ ಒಟ್ಟು 16 ತಂಡಗಳು ಭಾಗವಹಿಸಿದ್ದವು.



ಭಾರತದ  ಪ್ರವೀಣ ಆಮ್ರೆ, ನರೇಂದ್ರ ಹಿರ್ವಾನಿ, ನಯನ್ ಮೊಂಗಿಯಾ, ವೆಂಕಟಪತಿ ರಾಜು, ಸುಬ್ರತೊ ಬ್ಯಾನರ್ಜಿ, ವೆಸ್ಟ್ ಇಂಡೀಸ್‌ನ ಬ್ರಯನ್ ಲಾರಾ, ಪಾಕಿಸ್ತಾನದ ಅಕೀಬ್ ಜಾವೇದ್, ಶ್ರೀಲಂಕಾದ ಸನತ್ ಜಯಸೂರ್ಯ, ರೊಮೇಶ್ ಕಲುವಿತರಣ ಆಡಿದ್ದರು. ನಂತರ ಅವರೆಲ್ಲರೂ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಾಡಿದ ಸಾಧನೆ ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ದಾಖಲಾಗಿವೆ. ಆದರೆ, ಕಾರಣಾಂತರಗಳಿಂದ ಹತ್ತು ವರ್ಷಗಳವರೆಗೆ ಮತ್ತೊಂದು ಟೂರ್ನಿ ನಡೆಯಲಿಲ್ಲ.



1998ರಲ್ಲಿ ಐಸಿಸಿಯು 19 ವರ್ಷದೊಳಗಿನವರ ಟೂರ್ನಿಗೆ ಮರುಚಾಲನೆ ನೀಡಿತು. ಆ ಟೂರ್ನಿಯಲ್ಲಿ  ಕ್ರಿಸ್ ಗೇಲ್, ರಾಮನರೇಶ್ ಶರವಣ್, ಭಾರತದ ವೀರೇಂದ್ರ ಸೆಹ್ವಾಗ್, ಮೊಹಮ್ಮದ್ ಕೈಫ್. ಹರಭಜನ್ ಸಿಂಗ್, ರಾಜಶೇಖರ್ ಶಾನಭಾಳ್(ಹುಬ್ಬಳ್ಳಿಯವರು) ಆಡಿದ್ದರು.  2000ರಲ್ಲಿ ಯುವರಾಜ್ ಸಿಂಗ್, ಇಂಗ್ಲೆಂಡಿನ ಗ್ರೆಮ್ ಸ್ಮಿತ್, ಪಾಕಿಸ್ತಾನದ ಜಯೀದ್ ಸಯೀದ್,  2002ರಲ್ಲಿ ತಟೆಂದಾ ಟೈಬು (ಜಿಂಬಾಬ್ವೆ), ಕೆಮರೂನ್ ವೈಟ್ ಆಸ್ಟ್ರೇಲಿಯಾ, ಕ್ಷೇವಿಯರ್ ಡೋಹರ್ತಿ, ಪಾರ್ಥೀವ್ ಪಟೇಲ್, ಇರ್ಫಾನ್ ಪಠಾಣ್, ಸ್ಟುವರ್ಟ್ ಬಿನ್ನಿ (ಭಾರತ); 2004ರಲ್ಲಿ ಶಿಖರ್ ಧವನ್, ಬಾಂಗ್ಲಾದ ಎನಾಮುಲ್ ಹಕ್, 2006 ಚೇತೇಶ್ವರ್ ಪೂಜಾರ, ಮೋಯಿಸಸ್ ಹೆನ್ರಿಕ್ಸ್ (ಆಸ್ಟ್ರೇಲಿಯಾ);  2008ರಲ್ಲಿ ಟಿಮ್ ಸೌಥಿ (ಆಸ್ಟ್ರೇಲಿಯ), ತನ್ಮಯ್ ಶ್ರೀವಾಸ್ತವ, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ (ಭಾರತ); 2010 ಕರ್ನಾಟಕದ  ಕೆ.ಎಲ್. ರಾಹುಲ್, ಮಯಂಕ್ ಅಗರವಾಲ್ ಭಾರತ ತಂಡವನ್ನು ಪ್ರತಿನಿಧಿಸಿದ್ದರು. 



2012ರಲ್ಲಿ ಭಾರತದ ಬಾಬಾ ಅಪರಾಜಿತ್, ವಿಜಯ್ ಜೋಲ್, ಬಾಂಗ್ಲಾದ ಅನಾಮುಲ್ ಹಕ್ ಅವರು ಬೆಳಕಿಗೆ ಬಂದರು. 2014ರಲ್ಲಿ ವಿಜಯ್ ಜೋಲ್ ನಾಯಕತ್ವದ ಬಳಗದಲ್ಲಿದ್ದ ಸಂಜು ಸ್ಯಾಮ್ಸನ್, ದೀಪಕ್ ಹೂಡಾ, ಆವೇಶ್ ಖಾನ್ ಈಗ ಐಪಿಎಲ್‌ನಲ್ಲಿ ಛಾಪು ಮೂಡಿಸಿದ್ದಾರೆ. ರಾಷ್ಟ್ರೀಯ ತಂಡದ ಕದ ತಟ್ಟುತ್ತಿದ್ದಾರೆ. 



ಹೆಚ್ಚುತ್ತಿರುವ ಪೈಪೋಟಿ

ಮನರಂಜನೆ, ಆರ್ಥಿಕ ಲಾಭ, ಅಧಿಕಾರ ಸೇರಿದಂತೆ ಹಲವು ಕಾರಣಗಳಿಗಾಗಿ ಇವತ್ತು ಕ್ರಿಕೆಟ್‌ ಜನಪ್ರಿಯತೆ ಹೆಚ್ಚುತ್ತಿದೆ. ಕೆಲವೇ ದೇಶಗಳಿಗೆ ಸೀಮಿತವಾಗಿರುವ ಆಟವನ್ನು ವಿಶ್ವದ ತುಂಬ ಕೊಂಡೊಯ್ಯುವ ಪ್ರಯತ್ನ ನಡೆಯುತ್ತಿದೆ. ಟ್ವೆಂಟಿ–20 ಮಾದರಿಯ ಕ್ರಿಕೆಟ್‌ ಅನ್ನು ಒಲಿಂಪಿಕ್ಸ್‌ಗೆ ಸೇರ್ಪಡೆ ಮಾಡಿಸುವ ಪ್ರಯತ್ನವೂ ನಡೆಯುತ್ತಿದೆ.



ಈ ಎಲ್ಲ ಕಾರಣಗಳಿಂದಾಗಿ ಸ್ಪರ್ಧೆ ಗಗನಮುಖಿಯಾಗಿದೆ. ತಮ್ಮ ತಂಡಗಳನ್ನು ಮತ್ತಷ್ಟು ಮಗದಷ್ಟು ಬಲಿಷ್ಠಗೊಳಿಸುವತ್ತ ಎಲ್ಲ ದೇಶಗಳೂ ಪ್ರತಿನಿತ್ಯ ಸಾಹಸ ಮಾಡುತ್ತಿವೆ. ಅದಕ್ಕಾಗಿ ಹೊಸ ಪ್ರತಿಭೆಗಳ ಹುಡುಕಾಟ ನಿರಂತರವಾಗಿದೆ. ಸದ್ಯ ಬಾಂಗ್ಲಾದೇಶದ ಆತಿಥ್ಯದಲ್ಲಿ ನಡೆಯುತ್ತಿರುವ 19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾಗವಹಿಸಿರುವ ದೇಶಗಳ ಪಟ್ಟಿಯ ಮೇಲೆ ಒಮ್ಮೆ ಕಣ್ಣು ಹಾಯಿಸಿದರೆ, ಎಷ್ಟು ದೇಶಗಳು ಕ್ರಿಕೆಟ್ ಅಂಗಳದಲ್ಲಿ ತಮ್ಮ ಸಾಮರ್ಥ್ಯ ಮೆರೆಯಲು ಸಿದ್ಧವಾಗುತ್ತಿವೆ ಎಂದು ಸ್ಪಷ್ಟವಾಗುತ್ತದೆ.



ಭಾರತದ ಪಕ್ಕದ ಪುಟ್ಟ ರಾಷ್ಟ್ರ ನೇಪಾಳ, ಫಿಜಿ, ಆಫ್ಘಾನಿಸ್ತಾನ, ನಮಿಬಿಯಾ, ಕೆನಡಾ ದೇಶಗಳು ಬಲಿಷ್ಠ ರಾಷ್ಟ್ರಗಳಿಗೆ ಸವಾಲೊಡ್ಡುತ್ತಿವೆ. ಮೊದಲ ಸುತ್ತಿನಲ್ಲಿ ಅನುಭವಿ ನ್ಯೂಜಿಲೆಂಡ್ ತಂಡಕ್ಕೆ ನೇಪಾಳ ತಂಡವು ಸೋಲಿನ ರುಚಿ ತೋರಿಸಿದೆ. ಈ ತಂಡಗಳ ಚಿಗುರುಮೀಸೆಯ ಯುವಕರ ಕಂಗಳಲ್ಲಿ ಕ್ರಿಕೆಟ್ ಜಗತ್ತಿನ ನವತಾರೆಗಳಾಗುವ ಆತ್ಮವಿಶ್ವಾಸದ ಮಿಂಚು ಪ್ರವಹಿಸುತ್ತಿದೆ. ಅದಕ್ಕೆ ತಕ್ಕಂತೆ ಮಾಧ್ಯಮ ಜಗತ್ತು ಕೂಡ ಈಗ ಇವರೆಲ್ಲರ ಹೆಸರುಗಳನ್ನು ಮನೆ ಮಾತಾಗಿಸಲು ಪಣ ತೊಟ್ಟಿದೆ.



19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್‌ನ ನೇರಪ್ರಸಾರವನ್ನು ಲಕ್ಷಾಂತರ ಜನರು ಆಸಕ್ತಿಯಿಂದ ವೀಕ್ಷಿಸುತ್ತಿರುವುದೇ ಇದಕ್ಕೆ ಸಾಕ್ಷಿ. ಮುಂದೊಂದು ದಿನ ಮೈದಾನಗಳೂ ಪ್ರೇಕ್ಷಕರಿಂದ ತುಂಬಿದರೆ ಅಚ್ಚರಿ ಪಡಬೇಕಿಲ್ಲ!



***

ಜೂನಿಯರ್ ಕ್ರಿಕೆಟ್‌ ಸಬಲೀಕರಣದತ್ತ ದ್ರಾವಿಡ್ ಚಿತ್ತ

‘ನಿಯಮ ಬದಲಾವಣೆ, ಆರ್ಥಿಕ ಸಬಲತೆ ಮತ್ತಿತರ ಎಲ್ಲ ಸಾಧನೆಗಳ ಹೊರತಾಗಿಯೂ  ಕ್ರಿಕೆಟ್‌ ನಿತ್ಯನೂತನ ಆಹ್ಲಾದಕತೆಯಿಂದ ಇರಬೇಕಾ ದರೆ, ಜೂನಿಯರ್ ಕ್ರಿಕೆಟ್‌ನತ್ತ ಹೆಚ್ಚು ಗಮನ ನೀಡಬೇಕು. ಜೂನಿ ಯರ್ ವಿಭಾಗದ ಸವಾಲುಗಳನ್ನು ಎದುರಿಸಲು ಸ್ಪಷ್ಟವಾದ ನೀಲನಕ್ಷೆ ಸಿದ್ಧಗೊಳಿಸಬೇಕು’–

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು 19 ವರ್ಷದೊಳಗಿನವರ ತಂಡದ ಕೋಚ್ ರಾಹುಲ್ ದ್ರಾವಿಡ್ ಅವರ ಮಾತುಗಳಿವು. ಮೂರು ತಿಂಗಳ ಹಿಂದೆ ದೆಹಲಿಯಲ್ಲಿ ಮಾಜಿ ನಾಯಕ ಮನ್ಸೂರ್ ಅಲಿ ಖಾನ್ ಪಟೌಡಿ ಅವರ ಸ್ಮರಣಾರ್ಥ ಆಯೋಜಿಸಲಾಗಿದ್ದ ಉಪನ್ಯಾಸ ದಲ್ಲಿ ದ್ರಾವಿಡ್ ಹೇಳಿದ ಮಾತುಗಳಿವು.



ಆ ಮಾತಿಗೆ ತಕ್ಕಂತೆಯೇ ತಮ್ಮ ತಂಡಕ್ಕೆ ಮಾರ್ಗದರ್ಶನ ನೀಡುತ್ತಿ ದ್ದಾರೆ. ರಾಷ್ಟ್ರೀಯ ಸೀನಿಯರ್ ತಂಡದ ಸಾಧನೆಯು ಇವತ್ತು ಮಾಧ್ಯಮಗಳಲ್ಲಿ ರಾರಾಜಿಸುತ್ತದೆ. ಭಾರತ ತಂಡದ ಸಾಧನೆಯಲ್ಲಿ ಪ್ರಮುಖ ಪಾತ್ರವಹಿಸುವ ತಾರೆ ಗಳು ಹುಟ್ಟುವುದು ಜೂನಿಯರ್ ಕ್ರಿಕೆಟ್ ಅಂಗಳದಲ್ಲಿ. ಅದಕ್ಕಾ ಗಿಯೇ ಅವರು ಮಹತ್ವದ ಸಲಹೆ ಗಳನ್ನೂ ನೀಡಿದ್ದರು.



‘ಅನುಭವಿ ಹಿರಿಯರ ಬೌದ್ಧಿಕ ಬಲ ಮತ್ತು ಯುವಜನರ ಹುಮ್ಮಸು ಮೇಳೈಸಬೇಕು. ಬೌಲಿಂಗ್, ಬ್ಯಾಟಿಂಗ್ ಶೈಲಿಗಳನ್ನು ಸುಧಾರಿಸುವತ್ತ ಕೋಚ್‌ಗಳು ಜೂನಿಯರ್ ಆಟಗಾರರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು. ಕ್ಲಬ್‌ಗಳಿಗೆ ಆದಾಯ ತಂದುಕೊ ಡುವ ಜೂನಿಯರ್ ಕ್ರಿಕೆಟ್‌ ಉಳಿ ಸುವ ಜವಾಬ್ದಾರಿಯು ಕೋಚ್‌ಗಳ ದ್ದಾಗಿದೆ. ಪ್ರತಿಭಾ ವಂತರನ್ನು ಗುರುತಿಸಿ ಬೆಳೆಸುವ ಕೈಂಕರ್ಯ ನಿರಂತರವಾಗಬೇಕು’ ಎಂದು ರಾಹುಲ್ ಹೇಳಿದ್ದರು.



ರಾಷ್ಟ್ರೀಯ ತಂಡದ ಭವಿಷ್ಯದ ಆಟಗಾರರೆಂದೇ ಬಿಂಬಿಸಲಾಗುತ್ತಿ ರುವ ಇಶಾನ್ ಕಿಶನ್, ಸರ್ಫರಾಜ್ ಖಾನ್, ಆವೇಶ್ ಖಾನ್, ವಾಷಿಂಗ್ಟನ್ ಸುಂದರ್ ಅವರಿಂದ ರಾಹುಲ್ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ.  ಟೂರ್ನಿಯ ಮೊದಲ ಎರಡು ಪಂದ್ಯಗಳಲ್ಲಿ ಅವರ ನಿರೀಕ್ಷೆ ಹುಸಿಯಾಗಿಲ್ಲ. ಈ ಬಾರಿ ಆಸ್ಟ್ರೇಲಿಯಾ ಭಾಗವಹಿಸು ತ್ತಿಲ್ಲ. ಆದ್ದರಿಂದ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವಾಗಿಯೂ ಭಾರತದ ಯುವಪಡೆ ಕಣಕ್ಕಿಳಿದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.