ಗುರುವಾರ , ಜನವರಿ 30, 2020
19 °C

ಯೋಚನೆಯಿಲ್ಲದ ಯೋಜನೆಗಳು

ಪಾರ್ವತಿ ಪಿಟಗಿ,ಬೆಳಗಾವಿ Updated:

ಅಕ್ಷರ ಗಾತ್ರ : | |

ಸಂಕಪ್ಪ ಒಂದು ಸಣ್ಣ ಗ್ರಾಮದ ಬಡ ಕಾರ್ಮಿಕ. ಆತನ ಹೆಂಡತಿಗೆ ತುರ್ತಾಗಿ ಒಂದು ಶಸ್ತ್ರಚಿಕಿತ್ಸೆ ಮಾಡಿಸಬೇಕಿದೆ. ಆತನ ಹತ್ತಿರ ಹಣವಿಲ್ಲ. ಸದ್ಯ ಇರುವ ಆಸ್ತಿ ಎಂದರೆ ಆ ಗ್ರಾಮದಲ್ಲಿನ ಸಣ್ಣ ಮನೆ. ಊರಿನ  ಸಾಹು­ಕಾರರು ಅಷ್ಟೋ ಇಷ್ಟೋ ಸಾಲ ಕೊಟ್ಟರು. ಸಂಬಂಧಿ­ಗಳೂ ಅಷ್ಟಿಷ್ಟು ಹಣ ಕೊಟ್ಟರು. ಆದರೆ, ಶಸ್ತ್ರಚಿಕಿತ್ಸೆಗೆ ಸುಮಾರು 40 ಸಾವಿರ ರೂಪಾಯಿ ಬೇಕಾಗಿತ್ತು. ಅಷ್ಟು ಹಣವನ್ನು ಸುಮ್ಮನೇ ಆ ಬಡವನಿಗೆ ಯಾರು ಕೊಡಬೇಕು?ಮನೆಯ ಮೇಲೆ ಸಾಲ ತೆಗೆಯುವ ವಿಚಾರ ಮಾಡಿದ. ಅದಕ್ಕಾಗಿ ಗ್ರಾಮ ಪಂಚಾಯಿತಿಗೆ ತನ್ನ ಮನೆಯ ಉತಾರ (ಪಹಣಿ) ತರಲು ಹೋದ. ಆದರೆ ಆ ಉತಾರ ಮಾತ್ರ ಆತನಿಗೆ ಸಿಗಲಿಲ್ಲ. ಬೇಗ ಸಿಗುವ ಸಾಧ್ಯತೆಯೂ ಕಾಣಲಿಲ್ಲ. ಉತಾರ ಸಿಗದೇ ಆತನಿಗೆ ಸಾಲ ದೊರಕುವುದಿಲ್ಲ. ಸಾಲ­ವಿಲ್ಲದೇ ಆತನ ಹೆಂಡತಿ ಶಸ್ತ್ರಚಿಕಿತ್ಸೆಗೆ ಹಣವಿಲ್ಲ. ಹಣವಿಲ್ಲ ಎಂದರೆ ಅವಳಿಗೆ ಉಳಿವಿಲ್ಲ.ಮತ್ತೊಂದು ಗ್ರಾಮದ ಕತೆ ಕೇಳಿ. ರವೀಂದ್ರ ಪಿಯುಸಿ ಓದುತ್ತಿರುವ ವಿದ್ಯಾರ್ಥಿ. ಅವನ ತಂದೆ  ಕಷ್ಟಪಟ್ಟು ಒಂದು ಸಣ್ಣ ಮನೆ ಕಟ್ಟಿದ್ದಾರೆ. ಈ ಹೊಸಮನೆಗೆ ವಿದ್ಯುತ್ ಪಡೆದು­ಕೊಳ್ಳಲು ಮನೆಯ ಉತಾರ ಬೇಕು. ಆದರೆ ಆ ಉತಾರ ಸಿಗುತ್ತಿಲ್ಲ. ಉತಾರ ಸಿಕ್ಕು ವಿದ್ಯುತ್ ಮನೆಗೆ ಬರುವವರೆಗೂ ಆ ವಿದ್ಯಾರ್ಥಿ ಮತ್ತೊಬ್ಬರ ಮನೆಯ ಬೆಳಕನ್ನು ಆಶ್ರಯಿಸಬೇಕು.ಸಮಸ್ಯೆ ಇವೆರಡೇ ಅಲ್ಲ. ಈಗ ಗ್ರಾಮ ಪಂಚಾ­ಯಿತಿಯಲ್ಲಿ ಆಸ್ತಿ ಉತಾರಗಳು ಸಿಗದಿರುವ ಪರಿಣಾಮ ರಾಜ್ಯದ ಉದ್ದಗಲಕ್ಕೂ ನೂರಾರು ಸಮಸ್ಯೆಗಳನ್ನು ಜನತೆಗೆ ತಂದೊಡ್ಡಿವೆ. ಜನರು ಸಾಲ ಪಡೆಯಲು, ನಿವೇಶನ, ಮನೆ ಮಾರಾಟ ಸೇರಿದಂತೆ ಇನ್ನಿತರ ಕೆಲಸಗಳಿಗೆ ಅವಶ್ಯವಾಗಿ ಈ ಉತಾರ ಬೇಕೇಬೇಕು. ಈ ಉತಾರವನ್ನು ಗ್ರಾಮ ಪಂಚಾಯಿತಿಯಲ್ಲಿ ಅಭಿವೃದ್ಧಿ ಅಧಿಕಾರಿಗಳು, ಬರವಣಿಗೆ ಮೂಲಕ ನೀಡುತ್ತಿದ್ದರು. ಆದರೆ ಸರ್ಕಾರ ಈ ವ್ಯವಸ್ಥೆಯನ್ನು ಬದಲಿಸಿ ಆನ್‌ಲೈನ್ ಮೂಲಕ ನೀಡುವ ವ್ಯವಸ್ಥೆಯನ್ನು ಹುಟ್ಟು­ಹಾಕಿದೆ. ಹೊಸ ವ್ಯವಸ್ಥೆ ಇಡೀ ರಾಜ್ಯದ ತುಂಬೆಲ್ಲ ಸಮಸ್ಯೆ ತಂದಿದೆ.ಒಂದೇ ಆಸ್ತಿ ಅಥವಾ ನಿವೇಶನ ಬೇರೆ ಬೇರೆಯವರ ಹೆಸರಿನಲ್ಲಿ ಮಾರಾಟವಾಗುವುದು, ಅನ್ಯಾಯವಾಗಿ ಮತ್ತೊಬ್ಬರ ಆಸ್ತಿಯನ್ನು ತಮ್ಮ ಹೆಸರಿಗೆ  ನೋಂದಾಯಿಸಿಕೊಳ್ಳುವುದು, ಹೀಗೆ ನಿವೇಶನ ಹಾಗೂ ಮನೆಗಳ ದಾಖಲಾತಿಗಳಲ್ಲಿ ನಡೆಯುವ  ಅಕ್ರಮಗಳನ್ನು ತಡೆಗಟ್ಟುವ ಸಲು­ವಾಗಿ ಸರ್ಕಾರ ‘ಇ-–ಸ್ವತ್ತು’ ಎಂಬ ತಂತ್ರಾಂಶ­ವನ್ನು ಜಾರಿಗೆ ತಂದಿದೆ.ಇ-–ಸ್ವತ್ತು ತಂತ್ರಾಂಶದ ಪ್ರಕಾರ, ಮನೆಯ ಜೊತೆಗೆ ಮನೆಯ ಮಾಲೀಕನ ಭಾವಚಿತ್ರವನ್ನು ಜಿಪಿಎಸ್ ಕ್ಯಾಮೆರಾದಲ್ಲಿ ಸೆರೆಹಿಡಿಯ­ಲಾಗು­ತ್ತದೆ. ಇದರಿಂದ ಈ ಜಿಪಿಎಸ್ ಕ್ಯಾಮೆರಾದಲ್ಲಿ ಮನೆಯ ಸ್ಥಳ, ಅಕ್ಷಾಂಶ ರೇಖಾಂಶ ಸೇರಿದಂತೆ ಚೆಕ್‌ಬಂದಿಯ ಸಂಪೂರ್ಣ ಮಾಹಿತಿ ಲಭ್ಯವಾಗು­ತ್ತದೆ. ನಂತರ ಈ ಮಾಹಿತಿಯನ್ನು ಗಣಕೀಕರಿಸ ಲಾಗುತ್ತದೆ. ಹೀಗೆ ಕಂದಾಯ ಇಲಾಖೆ ನೀಡಿದ ದಾಖಲಾತಿಯನ್ನು ಗ್ರಾಮ ಪಂಚಾಯಿತಿ ಆನ್‌ಲೈನ್ ಮುಖಾಂತರ ಸಾರ್ವಜನಿಕರಿಗೆ ಉತಾರ ನೀಡುತ್ತದೆ.ಸರ್ಕಾರದ ಈ ಯೋಜನೆ  ಒಳ್ಳೆಯದೇ. ಆದರೆ, ಇ-–ಸ್ವತ್ತು ತಂತ್ರಾಂಶದ ಕಾರ್ಯ ಸಂಪೂರ್ಣಗೊಂಡು ಇನ್ನೇನು ಆನ್‌ಲೈನ್ ಮುಖಾಂತರವೇ ನಾವು ಉತಾರ ಕೊಡಬಹುದು ಎಂದಾಗಲಷ್ಟೇ ಈಗಿದ್ದ ಕೈಬರಹದ ಉತಾರ ಕೊಡುವುದನ್ನು ನಿಲ್ಲಿಸಬಹುದಿತ್ತಲ್ಲವೇ? ಈಗ ಹೀಗೆ ಕೊಡುವ ಉತಾರಗಳನ್ನು ನಿಲ್ಲಿಸಿರುವು­ದರಿಂದ ಜನತೆ ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ.ಸರ್ಕಾರ ಯಾವುದೇ ಯೋಜನೆಯನ್ನು ರೂಪಿಸಿದರೂ, ಅದು ಕಾರ್ಯರೂಪಕ್ಕೆ ಬರು­ವುದಕ್ಕೆ ಮುನ್ನವೇ ಅದರ ಸಾಧಕಬಾಧಕಗಳನ್ನು ಅರಿಯಬೇಕು, ಯೋಜನೆಯ ಯಶಸ್ಸಿಗೆ ಏನೇನು ಬೇಕು ಎಂಬುದನ್ನೆಲ್ಲ ಅರಿತಿರಬೇಕು.ಸರ್ಕಾರ­ವೇನೋ ಒಳ್ಳೊಳ್ಳೆಯ ಯೋಜನೆಗಳನ್ನು ಹಮ್ಮಿ­ಕೊಳ್ಳು­ತ್ತದೆ. ಆದರೆ ಪ್ರತಿಯೊಂದು ಯೋಜನೆ­ಯಲ್ಲಿಯೂ ಅದು ಎಡವುವುದು ಇಲ್ಲಿಯೇ.  ಸರ್ಕಾರ ಮಾಡುವ ಕೆಲಸ ನೋಡಿ– ಸಾಕಷ್ಟು ದುಡ್ಡು ವಿನಿಯೋಗಿಸಿ ಒಳ್ಳೆಯ ಯೋಜನೆಯನ್ನು ಕೈಗೆತ್ತಿಕೊಳ್ಳುತ್ತದೆ.ಆದರೆ ಆ ಯೋಜನೆಯನ್ನು  ಕಾರ್ಯರೂಪಕ್ಕೆ ತರಲು ಅಗತ್ಯವಾದ ಸಿಬ್ಬಂದಿ­ಯನ್ನೇ ನೇಮಿಸಿಕೊಳ್ಳುವುದಿಲ್ಲ. ಹೋಗಲಿ, ಎಲ್ಲವೂ ಸರಿಯಾಗಿದೆ ಎಂದಮೇಲಾದರೂ ಯೋಜನೆಯನ್ನು ಜಾರಿಗೊಳಿಸಬೇಕು. ಆದೂ ಇಲ್ಲ.ಯೋಜನೆಯನ್ನು ಹಾಕಿಕೊಂಡಿದ್ದಾಗಿದೆ, ಅದು  ಯಶಸ್ಸುಗೊಳ್ಳಲಿ ಬಿಡಲಿ ಊದುವ ಶಂಖ ಊದಿಬಿಟ್ಟರಾಯಿತು ಎಂಬ ಧೋರಣೆ. ಮತ್ತೊಂದು ವಿಚಾರವೆಂದರೆ, ಸರ್ಕಾರ ರೂಪಿ­ಸುವ ಯೋಜನೆಗಳು ಕಾರ್ಯಸಾಧ್ಯ ಮಟ್ಟ­ದಲ್ಲಿರ­ಬೇಕು. ಮತ್ತು ಹೊಸ ಯೋಜನೆಯ ಕೆಲಸಗಳಿಗೆ  ತಕ್ಕಂತೆ ತರಬೇತಿ ಅತೀ ಅವಶ್ಯ.ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ­ಗಳಿಗೆ, ಗ್ರಾಮೀಣ ಜನರಿಗೆ ಉತಾರ ಕೈಬರಹದ ಮೂಲಕ ಕೊಡಲಾಗುವುದಿಲ್ಲ. ಹೀಗೆ ಕೈಬರಹದ ಮುಖಾಂತರ ಉತಾರ ಕೊಡುವುದನ್ನು ಸರ್ಕಾರ ರದ್ದುಪಡಿಸಿದೆ ಎಂದು ತಿಳಿಸಿಹೇಳುವುದೇಒಂದು ದೊಡ್ಡ ಕೆಲಸವಾಗಿದೆ. ಎಷ್ಟು ಹೇಳಿದರೂ ಸಮಸ್ಯೆಯನ್ನು ಅರಿತುಕೊಂಡು ಮುಂದಿನ ಕ್ರಮಕ್ಕೆ ವಿದ್ಯಾವಂತ ಜನತೆ ಕೂಡ ತಯಾರಾಗುತ್ತಿಲ್ಲ.ಈ ಉತಾರ ಕುರಿತಂತೆ ಗ್ರಾಮ ಪಂಚಾಯಿತಿಗೆ  ಸಾರ್ವಜನಿಕರಿಂದ ಬಂದ ಅರ್ಜಿಗಳನ್ನು ಸೇರಿಸಿ ಕಂದಾಯ ಇಲಾಖೆಗೆ ವಿಲೇವಾರಿ ಮಾಡಿ ಅಧಿ­ಕೃತ ದಾಖಲೆ ಮಾಹಿತಿ ನೀಡುವಂತೆ ಕಂದಾಯ ಇಲಾಖೆಗೆ ಸಾಕಷ್ಟು ಸಲ ಮನವಿ ಮಾಡಿ­ಕೊಂಡರೂ ಇಲಾಖೆ ಕಣ್ಣುಮುಚ್ಚಿ ಕುಳಿತು­ಕೊಂಡಿದೆ. ಗ್ರಾಮಾಂತರ ಪ್ರದೇಶದಲ್ಲಿನ ಈ ಸಮಸ್ಯೆಗಳನ್ನು ಕಂದಾಯ ಇಲಾಖೆಯವರೆಗೆ ತಲುಪಿಸದೇ ಇದ್ದಲ್ಲಿ ಇಲಾಖೆ ಇನ್ನೂ ದಿನಗಳನ್ನು ದೂಡುತ್ತಲೇ ಹೋಗುತ್ತದೆ. ಅದಕ್ಕಾಗಿ ಗ್ರಾಮೀಣ ಜನತೆ ಎಚ್ಚೆತ್ತುಕೊಳ್ಳಬೇಕು. ಜಾಗೃತ­ಗೊಂಡು ಕಂದಾಯ ಇಲಾಖೆಗೆ ಬಿಸಿ ತಟ್ಟುವಂತೆ ಮಾಡಬೇಕು.ಈ ಕ್ರಮದಿಂದ ಒಂದು ಕಡೆಯಲ್ಲಿ ಗ್ರಾಮ ಪಂಚಾಯಿತಿಗೆ ಬರುವ ಆದಾಯ ಹೋಯಿತು. ಮತ್ತೊಂದೆಡೆ ಜನರಿಗೆ ಬೇಕಾದ ಉತಾರ ಸಿಗುತ್ತಿಲ್ಲ.  ಅಷ್ಟೇ ಅಲ್ಲ, ಗ್ರಾಮೀಣ ಭಾಗಗಳಲ್ಲಿ ಆಸ್ತಿ ಮಾರಾಟ ಮತ್ತು ಖರೀದಿ ಸ್ಥಗಿತಗೊಂಡಿದ್ದ­ರಿಂದ ನೋಂದಣಿ ಇಲಾಖೆಗೆ ಕೂಡ ಕೋಟ್ಯಂತರ ರೂಪಾಯಿ ನಷ್ಟವಾಗಿದೆ.ಒಟ್ಟಿನಲ್ಲಿ ಗ್ರಾಮ ಪಂಚಾಯಿತಿಗಳಲ್ಲಿ ಆಸ್ತಿ ದಾಖಲಾತಿಯನ್ನು ಕಂಪ್ಯೂಟರ್‌ಗೆ ಅಪ್‌ಲೋಡ್ ಮಾಡಲಾಗದೇ ಈ ಹಿಂದೆ ಕೊಡುತ್ತಿದ್ದ ಕೈಬರಹದ ಉತಾರಗಳನ್ನು ರದ್ದುಪಡಿಸಿ ಸರ್ಕಾರ   ಆದೇಶ ಹೊರಡಿಸಿದ್ದು ಮೂರ್ಖತನದ ಕೆಲಸ. ಇದರಿಂದ ಜನತೆಗೆ ಸಾಕಷ್ಟು ತೊಂದರೆಯಾಗಿದೆ. ಈ ತೊಂದರೆಗಳನ್ನು ನೀಗಿಸಲು ಸರ್ಕಾರ, ಸಂಬಂಧಿಸಿದ ಇಲಾಖೆಗಳು  ಮುಂದಾಗಬೇಕಿದೆ.

ಪ್ರತಿಕ್ರಿಯಿಸಿ (+)