ಸೋಮವಾರ, ಜನವರಿ 27, 2020
21 °C

ರಂಗಭೂಮಿ ಹಳೆ ಬೆಳೆ ಹೊಸ ಕಳೆ

–ಡಿ.ಎಂ.ಕುರ್ಕೆ ಪ್ರಶಾಂತ Updated:

ಅಕ್ಷರ ಗಾತ್ರ : | |

ಬೆಂಗಳೂರಿನ ಸಾಂಸ್ಕೃತಿಕ ಶ್ರೀಮಂತಿಕೆಗೆ ಇಲ್ಲಿನ ರಂಗಭೂಮಿ ಮತ್ತು ರಂಗತಂಡಗಳ ಕಾಣ್ಕೆ ದೊಡ್ಡದು. ರಾಜಧಾನಿಯಲ್ಲಿ ಬದಲಾವಣೆಯ ಸನ್ನಿವೇಶಕ್ಕೆ ತಕ್ಕಂತೆ ರಂಗದ ರೂಪು ರೇಖೆಗಳು ಸಾಗುತ್ತಿವೆ. ಕೂಡು ಕುಟುಂಬಗಳ ವಿಭಜನೆ, ಹೊಸ ಸಂಬಂಧಗಳ ವ್ಯಾಖ್ಯಾನ, ಸಾಮಾಜಿಕ ವ್ಯವಸ್ಥೆಯ ಶಿಥಿಲತೆ, ಹಣದ ಹರಿವಿನ ಹೆಚ್ಚಳ, ರಾಜಕಾರಣದ ಸ್ಥಿತ್ಯಂತರಗಳು, ಬದುಕಿನ ಒತ್ತಡ ಹೀಗೆ ನಾನಾ ಕಾರಣಗಳು ರಂಗದ ಮೇಲೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಪ್ರಭಾವ ಬೀರುತ್ತಿವೆ. ರಂಗ ಸಂವೇದನೆಗಳು ಮತ್ತು ನಾಟಕಗಳೂ ಬದಲಾಗಿವೆ. ಈ ಪರಿವರ್ತನಾ ಪ್ರಕ್ರಿಯೆಯ ಪರಿಣಾಮಗಳನ್ನು ಬಹುತೇಕ ರಂಗ ಕಲಾವಿದರು ಮತ್ತು ನಿರ್ದೇಶಕರು ಗುರ್ತಿಸಿದ್ದಾರೆ.ನಗರದಲ್ಲಿ ರಂಗಮಂದಿರಗಳು ಮತ್ತು ಆಡಿಟೋರಿಯಂಗಳ ಸಂಖ್ಯೆ ಹೆಚ್ಚಾಗಿಯೇ ಇದೆ. ರಂಗಶಂಕರ, ಕೆ.ಎಚ್‍. ಕಲಾಸೌಧ, ಸೇವಾಸದನ, ಎಡಿಎ ರಂಗಮಂದಿರ, ರವೀಂದ್ರ ಕಲಾಕ್ಷೇತ್ರ, ಜ್ಞಾನಜ್ಯೋತಿ ಸಭಾಂಗಣ, ಅಂಬೇಡ್ಕರ್ ಭವನ, ಚೌಡಯ್ಯ ಸ್ಮಾರಕ ಭವನ, ಸುಬ್ಬಣ್ಣ ಆಪ್ತರಂಗ ಮಂದಿರ ಮತ್ತಿತರ 12–13 ಪ್ರಮುಖ ಕಲಾರಾಧನೆಯ ಕೇಂದ್ರಗಳು ಸಿಲಿಕಾನ್ ನಗರಿಯಲ್ಲಿವೆ. ಶಾಲಾ ಕಾಲೇಜುಗಳಲ್ಲಿಯೂ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವೇದಿಕೆಗಳಿವೆ. ನಗರದಲ್ಲಿ ನಟನೆಯ ತರಬೇತಿ ಶಾಲೆಗಳು ಹೆಚ್ಚುತ್ತಿರುವುದರಿಂದ ಕಲಾವಿದರ ಸಂಖ್ಯೆಯೂ ಏರುಮುಖವಾಗುತ್ತಿದೆ. ನೀನಾಸಂ, ಸಾಣೆಹಳ್ಳಿ ಮತ್ತಿತರ ನಗರದ ಹೊರಭಾಗದ ರಂಗ ಶಾಲೆಗಳಿಂದ ತರಬೇತಿ ಪಡೆದ ಕಲಾವಿದರೂ ಪ್ರಮುಖವಾಗಿ ಬೆಂಗಳೂರಿನತ್ತ ನೋಟ ಬೀರಿದ್ದಾರೆ. ಪ್ರತಿ ವರ್ಷ ಸರಾಸರಿ 100 ಕಲಾವಿದರು ರಂಗಶಾಲೆಗಳಿಂದ ಹೊರಬರುತ್ತಿದ್ದಾರೆ ಎನ್ನುವ ಅಂದಾಜಿದೆ. ಆದರೆ  ನಾಟಕವನ್ನು ವೀಕ್ಷಿಸುವ ಅದರದ್ದೇ ಆದ ವರ್ಗವಿದ್ದರೂ ಆ ಸದಭಿರುಚಿಯನ್ನು ಹೆಚ್ಚಿಸುವ ಪ್ರಯತ್ನಕ್ಕೆ ವೇಗ ದೊರೆತಿಲ್ಲ. ಹೊಸ ಪ್ರೇಕ್ಷಕರನ್ನು ಸೃಷ್ಟಿಸುವುದು ನಮ್ಮ ಮುಂದಿರುವ ಸವಾಲು ಎನ್ನುವುದನ್ನು ರಂಗಕರ್ಮಿಗಳು ಒಪ್ಪಿಕೊಳ್ಳುತ್ತಾರೆ.ಸಾಮಾನ್ಯವಾಗಿ ಬಹುತೇಕ ರಂಗ ತಂಡಗಳ ನಾಟಕದ ಟಿಕೆಟ್ ದರ ₨100ರಿಂದ ₨500ರವರೆಗೆ ಇರುತ್ತದೆ. ಟೀವಿಯನ್ನು ಮುಖ್ಯ ಮಾಧ್ಯಮವಾಗಿ ಸ್ವೀಕರಿಸಿರುವ ಒಂದು ದೊಡ್ಡ ವರ್ಗದ ಜನರಿಂದ ನಾಟಕಕ್ಕೆ ಹೆಚ್ಚು ಸ್ಪಂದನ ಸಿಗುತ್ತಿಲ್ಲ. ನಾಟಕದ ವಸ್ತುವಿಷಯಗಳಲ್ಲಿ ಗಮನಾರ್ಹ ಬದಲಾವಣೆಗಳಾಗಿವೆ. ಎರಡು ಮೂರು ದಶಕಗಳ ಹಿಂದಿನ ರಂಗ ಸಂವೇದನೆ ಮತ್ತು ಪ್ರಯೋಗಗಳು ಮಹತ್ವಪೂರ್ಣವಾಗಿ ಬದಲಾಗಿವೆ. ರಾಜಕಾರಣದ ಬಿಕ್ಕಟ್ಟು, ಜನಪರ ಆಲೋಚನೆ ಮತ್ತು ಜಾಗೃತಿಗೆ ಬೆಂಗಳೂರಿನ ರಂಗಭೂಮಿ ಮುಖ್ಯವೇದಿಕೆಯಾಗಿತ್ತು. ಬಿ.ವಿ. ಕಾರಂತ, ಪ್ರಸನ್ನ, ಎಂ.ಎಸ್.ಸತ್ಯು ಮತ್ತಿತರರು ಬೆಂಗಳೂರನ್ನು ಕೇಂದ್ರವಾಗಿಸಿಕೊಂಡು ಜನಪರ ರಂಗ ಚಳವಳಿಯನ್ನು ರೂಪಿಸುತ್ತಿದ್ದರು. ತುರ್ತು ಪರಿಸ್ಥಿತಿಯ ವಿರುದ್ಧ, ರೈತ ಮತ್ತು ಸಮಾಜವಾದಿ, ಅಂದಿನ ವಿಚಾರಗಳನ್ನು ಜನಮಾನಸಕ್ಕೆ ತಲುಪಿಸುವಲ್ಲಿ ಮುಖ್ಯ ಭೂಮಿಕೆಯಾಗಿದ್ದುದು ಬೆಂಗಳೂರಿನ ರಂಗಭೂಮಿ ಮತ್ತು ರಂಗಕರ್ಮಿಗಳು. ಸದ್ಯದ ಸನ್ನಿವೇಶದಲ್ಲಿ ರಂಗ ಚಟುವಟಿಕೆ ಚಳವಳಿಯ ಹಾದಿಯಿಂದ ಅಂತರ ಕಾಯ್ದುಕೊಂಡಿವೆ.ನಗರದ ಒತ್ತಡ, ಬದುಕಿನ ಜಂಜಡ ನಗರದ ಸಂಚಾರದಟ್ಟಣೆಯಿಂದ ನಾಟಕ ಆಸಕ್ತರಿಗೆ ಅಡ್ಡಿಯಾಗುತ್ತಿದೆ. ಸಾಮಾನ್ಯವಾಗಿ ನಾಟಕಗಳು ಪ್ರದರ್ಶನವಾಗುವುದು ಸಂಜೆ- 7 ಗಂಟೆಯಿಂದ. ಈ ಅವಧಿಯಲ್ಲಿ ಸಂಚಾರ ದಟ್ಟಣೆ ಹೆಚ್ಚು. ನಾಟಕವನ್ನು ವೀಕ್ಷಿಸಿ ಮರಳಬೇಕಾದರೆ ರಾತ್ರಿ ಸುಮಾರು 9 ಗಂಟೆ ದಾಟಿರುತ್ತದೆ. ನಗರದ ಒಂದು ಭಾಗದಿಂದ ಮತ್ತೊಂದು ಭಾಗದಲ್ಲಿರುವ ರಂಗಮಂದಿರವನ್ನು ತಲುಪಲು ಹೆಚ್ಚು ಸಮಯ ಬೇಕಾಗುತ್ತದೆ. ನಾಟಕಕ್ಕೆ ಜನ ಬಾರದಿರಲು ಇದೂ ಪ್ರಮುಖ ಕಾರಣ.ಈ ನಡುವೆ ಕೆಲವು ನಾಟಕಗಳು ಪದೇಪದೇ ಮರು ಪ್ರದರ್ಶನಗೊಳ್ಳುತ್ತಿರುವುದು ಆಶಾದಾಯಕ ಬೆಳವಣಿಗೆ. ಆದರೆ ಈ ರೀತಿಯ ಮರುಪ್ರದರ್ಶನ ಹೆಚ್ಚಾಗುವುದನ್ನು ಒಪ್ಪಿಕೊಳ್ಳದವರೂ ಇದ್ದಾರೆ. ಒಂದು ನಾಟಕ ಮರು ಪ್ರದರ್ಶನಗೊಂಡಷ್ಟೂ ಗಟ್ಟಿಯಾಗುತ್ತದೆ. ಹೊಸ ಪ್ರಯೋಗಕ್ಕೆ ಕನಿಷ್ಠ ಮೂರು ತಿಂಗಳಾದರೂ ತಾಲೀಮು ಅವಶ್ಯ ಎನ್ನುವವರು ಕೆಲವರಾದರೆ, ಮರು ಪ್ರದರ್ಶನ ಹೆಚ್ಚಿದಷ್ಟೂ ಹೊಸ ಪ್ರಯೋಗಗಳಿಗೆ ಅವಕಾಶ ತಪ್ಪುತ್ತದೆ ಎನ್ನುವ ರಂಗಕರ್ಮಿಗಳೂ ಇದ್ದಾರೆ.   ನಾಟಕಗಳಿಗೆ ಹಬ್ಬದ ಸ್ಥಿತಿ ಇಲ್ಲ

ಮೊದಲು ರವೀಂದ್ರ ಕಲಾಕ್ಷೇತ್ರವೇ ಪ್ರಮುಖವಾಗಿತ್ತು. ಆದರೆ ಈಗ ರಂಗಚಟುವಟಿಕೆ ಮತ್ತು ಆಡಿಟೋರಿಯಂಗಳು ಗಣನೀಯವಾಗಿ ಹೆಚ್ಚಿದ್ದರೂ ಗಮನ ಸೆಳೆಯುವಂತಥ ನಿರ್ಮಾಣಗಳು ಎದ್ದು ಕಾಣುತ್ತಿಲ್ಲ. ಬಿ.ವಿ. ಕಾರಂತ, ಪ್ರಸನ್ನ ಅವರಂಥವರು ರಂಗಚಟುವಟಿಕೆಗಳಲ್ಲಿ ತೊಡಗಿದ್ದಾಗ ಬೆಂಗಳೂರಿಗೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮನ್ನಣೆಯಿತ್ತು. ನಾಟಕಗಳಿಗೆ ಹಬ್ಬದ ವಾತಾವರಣ ಇರುತ್ತಿತ್ತು. ಆದರೆ ಸದ್ಯದ ಸ್ಥಿತಿಯಲ್ಲಿ ಆ ವಾತಾವರಣ ದೂರವಾಗಿದೆ. ಈಗ ಪಾಸುಗಳನ್ನು ಕೊಟ್ಟೇ ಜನರನ್ನು ಕರೆಯಿಸಬೇಕು. ಪ್ರಧಾನವಾಗಿ ಬೆಂಗಳೂರಿನಲ್ಲಿ ಕಾರ್ಯಾಚರಿಸುವ ರಂಗತಂಡಗಳು ಸರ್ಕಾರದ ನೆರವನ್ನು ಚೆನ್ನಾಗಿಯೇ ಪಡೆಯುತ್ತಿವೆ. ಅಧಿಕಾರಿಗಳ ಪರಿಚಯ, ಸಂಸ್ಕೃತಿಯ ಇಲಾಖೆಯ ನೆರವು ಮತ್ತು ಅವಕಾಶಗಳು ಈ ನಗರಕೇಂದ್ರಿತ ತಂಡಗಳಿಗೆ ಚೆನ್ನಾಗಿಯೇ ಗೊತ್ತು. ಗ್ರಾಮೀಣ ರಂಗತಂಡಗಳಿಗೆ ಮಾಹಿತಿ ಕೊರತೆ, ಅಧಿಕಾರಿಗಳ ಸಂಪರ್ಕ ಮತ್ತಿತರ ಕಾರಣಗಳಿಂದ ಸೌಲಭ್ಯ ತಲುಪುತ್ತಿಲ್ಲ.

ಬೆಂಗಳೂರಿನಲ್ಲಿ ಬದಲಾದ ಸನ್ನಿವೇಶಗಳಲ್ಲಿ ನಟನ ಪಾತ್ರವೂ ಬದಲಾಗಿದೆ. ನಾವು ರಂಗಚಟುವಟಿಕೆಗೆ ಪ್ರವೇಶಿಸಿದಾಗ ಎಚ್‍ಎಂಟಿ, ಎಚ್‍ಎಎಲ್, ಬೆಮೆಲ್ ಮತ್ತಿತರ ಸಂಸ್ಥೆಗಳ ಕಾರ್ಮಿಕರು, ಬ್ಯಾಂಕು, ಎಲ್‍ಐಸಿ ನೌಕರರು ಹೀಗೆ ಸಮಾಜದ ಮಧ್ಯಮ ಮತ್ತು ತಳ ಮಧ್ಯಮ ವರ್ಗದ ಜನರು ನಾಟಕಗಳಲ್ಲಿ ತೊಡಗುತ್ತಿದ್ದರು. ಲಂಕೇಶ್ ಅವರಂಥ ಪ್ರಜ್ಞಾವಂತರೂ ಇರುತ್ತಿದ್ದರು. ರವೀಂದ್ರ ಕಲಾಕ್ಷೇತ್ರದಲ್ಲಿ 5.30ಕ್ಕೆ ಸೇರುತ್ತಿದ್ದರು. ಈ ಸ್ಥಿತಿ ಪೂರ್ಣವಾಗಿ ಬದಲಾಗಿದೆ.ಬೆಂಗಳೂರಿನಲ್ಲಿ ಸಾಮಾಜಿಕ ಸಂಬಂಧಗಳ ಶಿಥಿಲತೆ ಮತ್ತು ಹಣದ ಹರಿವು ರಂಗಭೂಮಿಯನ್ನು ಬದಲಾಯಿಸಿದೆ. ಬೀದಿನಾಟಕಗಳನ್ನು ಸಾಮಾಜಿಕ ಜಾಗೃತಿಗಾಗಿ ಬಳಸುತ್ತಿದ್ದೆವು. ಆದರೆ ಈಗ ಕಂಪೆನಿಗಳು ತಮ್ಮ ಉತ್ಪನ್ನಗಳ ಮಾರಾಟಕ್ಕೆ ಬಳಸುತ್ತಾರೆ. ಇಲ್ಲಿನ ಬಹುರಾಷ್ಟ್ರೀಯ ಕಂಪೆನಿಗಳು ಮತ್ತು ಬಂಡವಾಳಶಾಹಿಗಳ ವಿರುದ್ಧ ನಾಟಕಗಳು ಪ್ರಬಲ ದನಿಯಾಗಿದ್ದವು. ಇಂದು ಯಾರ ವಿರುದ್ಧ ನಾಟಕಗಳನ್ನು ಸಂಘಟಿಸುತ್ತಿದ್ದೆವೋ ಅವರ ಪ್ರಾಯೋಜಕತ್ವ ಕೋರುವ ಮಟ್ಟಕ್ಕೆ ಬಂದಿದ್ದೇವೆ. ಆದರೆ ಪ್ರಸ್ತುತ ರಾಜಕೀಯ ಮತ್ತು ಸಾಮಾಜಿಕ ಸ್ಥಿತಿಗಳು ಬೆಂಗಳೂರು ರಂಗಭೂಮಿಯ ಮೇಲೆ ಪರಿಣಾಮ ಬೀರಿವೆ. ರಂಗಚಟುವಟಿಕೆಗಳಲ್ಲಿ ಬದಲಾವಣೆಯ ಸ್ಪಷ್ಟ ಸೂಚನೆಗಳೂ ಸಿಕ್ಕುತ್ತಿವೆ. 

– ಸುರೇಶ್ ಆನಗಳ್ಳಿ, ಹಿರಿಯ ರಂಗನಿರ್ದೇಶಕಅವರವರೇ ಪ್ರೇಕ್ಷಕರು

ರಂಗಶಂಕರ, ಕೆ.ಎಚ್‌.ಕಲಾಸೌಧ, ರವೀಂದ್ರ ಕಲಾಕ್ಷೇತ್ರ ಹೀಗೆ ಬೆಂಗಳೂರಿನಲ್ಲಿ ರಂಗ ಪ್ರಯೋಗಗಳು ನಡೆಯುವ ಸ್ಥಳಗಳಲ್ಲಿ ಕಾಣಸಿಗುವ ಪ್ರೇಕ್ಷಕ ವರ್ಗ ಬಹುಪಾಲು ಅದೇ ಆಗಿರುತ್ತದೆ. ಆಯ್ದ ಪ್ರೇಕ್ಷಕ ವರ್ಗ ಮಾತ್ರ ಬರುತ್ತಿದ್ದಾರೆ. ನಮ್ಮ ‘ಪ್ರದರ್ಶನ  ಕಲಾ ಸಂಸ್ಥೆ’ ಪ್ರದರ್ಶಿಸುವ ನಾಟಕಗಳ ಟಿಕೆಟಿನ ದರ 50 ರೂಪಾಯಿ. ರಂಗ ಚಳವಳಿ ಅಲ್ಲೊಂದು ಇಲ್ಲೊಂದು ಆಗುತ್ತಿದೆ. ಅದು ಒಗ್ಗೂಡಿ ನಡೆಯಬೇಕು. ನಮ್ಮ ತಂಡದಲ್ಲಿ ಮೂರು ಮಂದಿ ಮಾತ್ರ ವೃತ್ತಿ ಮತ್ತು ಪ್ರವೃತ್ತಿಯಾಗಿ ರಂಗಚಟುವಟಿಕೆಗಳನ್ನು ಕೈಗೊಂಡವರು. ಉಳಿದ ಕಲಾವಿದರೆಲ್ಲ ಎಂಜಿನಿಯರ್‌ಗಳು. ವೃತ್ತಿಯ ಮಾನಸಿಕ ಒತ್ತಡ ತೊಡೆದು ಹಾಕಲು ಮತ್ತು ತಮ್ಮ ಸೃಜನಶೀಲತೆಯನ್ನು ಹೊಡೆದು ಬಡಿದು ಹೊರತರಲು ಅವರು ರಂಗಚಟುವಟಿಕೆಯಲ್ಲಿ ತೊಡಗುತ್ತಾರೆ. ನಗರದಲ್ಲಿ ಕಲಾಸೌಧದಲ್ಲಿಯೇ 150 ತಂಡಗಳು ನೋಂದಣಿ ಮಾಡಿಸಿಕೊಂಡಿವೆ. ಜನರೂ ಹುಮ್ಮಸ್ಸಿನಿಂದ ಬರುತ್ತಾರೆ.

  –ಸತೀಶ್ಚಂದ್ರ, ‘ಪ್ರದರ್ಶನ’  ಕಲಾ ಸಂಸ್ಥೆಯ ಮುಖ್ಯಸ್ಥವೈಭವದ ಕಾಲ ಸನ್ನಿಹಿತ...

ಕಿರುತೆರೆಯಲ್ಲಿ ತೊಡಗಿದ್ದರಿಂದ ನಾಟಕಗಳತ್ತ ಗಮನಹರಿಸಿರಲಿಲ್ಲ. 18 ವರ್ಷಗಳ ನಂತರ, ಡಿ. ಆರಕ್ಕೆ ಪ್ರದರ್ಶಿಸಿದ ‘ನಮ್ಮೊಳಗೊಬ್ಬ ನಾಜೂಕಯ್ಯ’ ನಾಟಕಕ್ಕೆ ಜನರ ಸ್ಪಂದನ ಉತ್ತಮವಾಗಿತ್ತು. ರವೀಂದ್ರ ಕಲಾಕ್ಷೇತ್ರದಲ್ಲಿ 800 ಜನರು ಕೂರುವ ವ್ಯವಸ್ಥೆ ಇದೆ. ಆ ಸಂಖ್ಯೆ ಮೀರಿ ಸ್ಥಳದ ಅಭಾವದಿಂದ ಹಲವರು ವಾಪಸ್ಸಾದರು. ಟಿ.ವಿ. ಮಾಧ್ಯಮದ ಆಕರ್ಷಣೆಯ ಕಾರಣ ರಂಗಭೂಮಿಯ ಚಟುವಟಿಕೆಗಳಿಗೆ ಕೆಲಕಾಲ ಹಿನ್ನಡೆ ಅನುಭವಿಸಿತ್ತು. ಸದ್ಯದ ಬಿಕ್ಕಟ್ಟುಗಳನ್ನು ಮತ್ತು ಸನ್ನಿವೇಶಗಳನ್ನು ಅವಲೋಕಿಸಿದರೆ 70–80ರ ದಶಕದ ರಂಗಭೂಮಿಯ ವೈಭವ ಮತ್ತೆ ಮರುಕಳಿಸುತ್ತಿದೆ.

ನಾನು ರಂಗಭೂಮಿಯಲ್ಲಿ ಸಕ್ರಿಯನಾಗಿದ್ದ ಅವಧಿಯಲ್ಲಿ ನಾಟಕಗಳು ವಿರೋಧ ಪಕ್ಷಗಳ ಸ್ಥಾನ ನಿರ್ವಹಿಸುತ್ತಿದ್ದವು. ಆ ಸಮಯದಲ್ಲಿ ವಿರೋಧ ಪಕ್ಷಗಳು ಪ್ರಬಲವಾಗಿರಲಿಲ್ಲ. ಆ ನಂತರದ ವಿರೋಧ ಪಕ್ಷಗಳು ಪ್ರಬಲವಾದರೂ ಪ್ರಭುತ್ವದ ನಡೆಗಳು ನಾಟಕದ ವಸ್ತುಗಳಾಗುತ್ತಿದ್ದವು. ರಾಜಕೀಯ ಪ್ರಜ್ಞೆಯ ನಾಟಕಗಳಿಗೆ ಹೆಚ್ಚು ಸ್ಪಂದನ ದೊರೆಯುತ್ತಿಲ್ಲ. ಸೂಕ್ಷ್ಮ ಮನಸ್ಸಿನ, ಸಂವೇದನಾ ಪ್ರಧಾನ ರಂಗಪ್ರಯೋಗಗಳು ಹೆಚ್ಚಾಗುತ್ತಿವೆ. ನಗರೀಕರಣ, ಹಳ್ಳಿಗಳ ನಾಶ...ಈ ಪ್ರಕ್ರಿಯೆಗಳು ರಾಜಕಾರಣದ ಚದುರಂಗದ ಆಟಗಳಲ್ಲಿ ಬಳಕೆಯಾಗುತ್ತಿವೆ, ಪ್ರಸ್ತುತತೆಗೆ ಅನುಗುಣವಾಗಿ ಈ ವಿಷಯಗಳು ನಾಟಕದ ವಸ್ತುಗಳಾಗುವ ಅವಶ್ಯಕತೆ ಇದೆ. 

-ಟಿ.ಎನ್‌. ಸೀತಾರಾಂ, ಧಾರಾವಾಹಿ ನಿರ್ದೇಶಕರುಮಾಲ್‌ ಸಂಸ್ಕೃತಿಯಂತಾಗಬಾರದು...

ನಗರದಲ್ಲಿ ನಡೆಯುವ ರಂಗ ಚಟುವಟಿಕೆಗಳಿಗೆ ಹಣ ಬೇಕೇಬೇಕು. ಅದ್ದೂರಿ ನಿರ್ಮಾಣಗಳು ಆಗುತ್ತಿವೆ. ಅದಕ್ಕೆ ತಕ್ಕಂತೆ ಪ್ರಚಾರವೂ ಅಗತ್ಯ. ಹಣಕಾಸು ಮತ್ತಿತರ ಕಾರಣಗಳಿಂದ ಮುಂಚೆ ತಿಂಗಳಿಗೆ ಮೂರ್‍್ನಾಲ್ಕು ನಾಟಕ ನೋಡುತ್ತಿದ್ದವರು ಇಂದು ವಾರಕ್ಕೆ ಒಂದು ನಾಟಕ ನೋಡುತ್ತಿದ್ದಾರೆ. ನಾನೂ ಕಾಲೇಜು ರಂಗತಂಡಗಳಲ್ಲಿ ಇದ್ದವಳು. ಇಲ್ಲಿ ಹೊಸ ಹೊಸ ಪ್ರಯೋಗಗಳು ನಡೆಯುತ್ತವೆ. ಈ ನಾಟಕಗಳು ಜನರಿಗೆ ಕಡಿಮೆ ದರದಲ್ಲಿ ಸಿಗುವ ವ್ಯವಸ್ಥೆ ಆಗಬೇಕು. ಬೆಂಗಳೂರಿನಂಥ ಮಹಾನಗರದಲ್ಲಿ ಸಣ್ಣ ಸಣ್ಣ ಥಿಯೇಟರ್‌ಗಳಿದ್ದರೆ ಉತ್ತಮ. ಒಂದು ಮೂಲೆಯಿಂದ ಮತ್ತೊಂದು ಮೂಲೆಗೆ ಹೋಗಿ ನಾಟಕ ನೋಡುವುದು ಮತ್ತು ನಾಟಕಗಳಲ್ಲಿ ತೊಡಗುವುದು ಕಷ್ಟವಾಗುತ್ತದೆ. ಕೆಲವು ಥಿಯೇಟರ್‌ಗಳೂ ಮಾಲ್‌ ಸಂಸ್ಕೃತಿಯಂತಾಗುತ್ತಿದ್ದು, ತಳ್ಳುಗಾಡಿಯಂತೆ ಭಾವಗಳನ್ನು ನೀಡುತ್ತಿಲ್ಲ.

ಸಾಮಾನ್ಯವಾಗಿ ಎಂಜಿಯರ್‌ಗಳು ನಾಟಕಗಳಲ್ಲಿ ತೊಡಗುತ್ತಿದ್ದಾರೆ. ವೃತ್ತಿ ಮತ್ತು ಪ್ರವೃತ್ತಿಯನ್ನಾಗಿ ನಾಟಕವನ್ನು ತೆಗೆದುಕೊಂಡರೆ ಬದುಕು ಕಷ್ಟಸಾಧ್ಯ. ಟೆಕ್ಕಿಗಳು ಹಣ ತೆತ್ತು ನಾಟಕವನ್ನು ನೋಡುವುದರಿಂದ ನಮಗೂ ಸಹಾಯವಾಗುತ್ತದೆ. ರಂಗನಟರಿಗೆ ಸಂಭಾವನೆ ಸಿಕ್ಕರೆ ಮತ್ತಷ್ಟು ಒಳಿತು. ಜನರ ಮನಸ್ಥಿತಿಯೂ ಬದಲಾಗಿದೆ. ‘200 ರೂಪಾಯಿ ಕೊಟ್ಟು ಬುದ್ಧಿ ಹೇಳಿಸಿಕೊಳ್ಳಬೇಕೆ?’ ಎಂಬ ಭಾವನೆ ಇರುವ ಕಾರಣಕ್ಕೆ ವಿಚಾರವಂತಿಕೆಯ ನಾಟಕಗಳಿಂದ ತುಸು ದೂರವಾಗಿ ಮಜಾ-–ಖುಷಿಯೇ ಪ್ರಮುಖವಾಗುತ್ತಿದೆ.

–ನಿರ್ಮಲಾ ಚೆನ್ನಪ್ಪ, ಕಲಾವಿದೆ

ಪ್ರತಿಕ್ರಿಯಿಸಿ (+)