ಸೋಮವಾರ, ಜೂನ್ 14, 2021
22 °C

ರಾಜಕೀಯ ಪ್ರಾತಿನಿಧ್ಯಕ್ಕೆ ಪಂಚಮಸಾಲಿಗಳ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹರಪನಹಳ್ಳಿ: ಜಿಲ್ಲೆಯಲ್ಲಿಯೇ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ವೀರಶೈವ ಪಂಚಮಸಾಲಿ ಸಮಾಜಕ್ಕೆ ನ್ಯಾಯೋಚಿತವಾದ ರಾಜಕೀಯ ಸ್ಥಾನಮಾನ ಕಲ್ಪಿಸುವಲ್ಲಿ ಆಡಳಿತರೂಢ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷ ಸೇರಿದಂತೆ ಎಲ್ಲ ಪಕ್ಷಗಳಿಂದಲೂ ಅನ್ಯಾಯವಾಗಿದೆ ಎಂದು ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಬಾಗಳಿ ಬಸವಲಿಂಗಪ್ಪ ಅಸಮಾಧಾನ ವ್ಯಕ್ತಪಡಿಸಿದರು.ಭಾನುವಾರ ದಾವಣಗೆರೆ ನಗರದಲ್ಲಿ ಸಮಾಜದ ಜಿಲ್ಲಾ ಘಟಕದ ಪದಾಧಿಕಾರಿಗಳ ಪದಗ್ರಹಣ ಹಾಗೂ ಹರ ಸೈನ್ಯ ಉದ್ಘಾಟನೆಯ ಅಂಗವಾಗಿ ಸ್ಥಳೀಯ ಯುವಘಟಕ ದಾವಣಗೆರೆಗೆ ಹಮ್ಮಿಕೊಂಡಿದ್ದ ಬೈಕ್‌ರ‌್ಯಾಲಿಗೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಾಮಾನ್ಯ ಕ್ಷೇತ್ರಗಳಿಗೆ ಸಂಬಂಧಿಸಿದ ಎಲ್ಲಾ ಪಕ್ಷಗಳ ಟಿಕೆಟ್ ಹಂಚಿಕೆಯಿಂದ ಹಿಡಿದು, ಅಧಿಕಾರದ ಗದ್ದುಗೆಯ ಹಿಡಿದ ಬಿಜೆಪಿಯಿಂದ ನಿಗಮ, ಮಂಡಳಿ ಹಾಗೂ ಪ್ರಾಧಿಕಾರಗಳ ಅಧ್ಯಕ್ಷಗಿರಿ ನೇಮಕಾತಿಯವರೆಗೂ ಸಮಾಜದ ಮುಖಂಡರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಬರುವ ಚುನಾವಣೆಯಲ್ಲಿಯೂ ಇದೇ ಪರಿಪಾಠ ಮುಂದುವರಿದರೆ, ಸಮಾಜ ಎಲ್ಲಾ ರಾಜಕೀಯ ಪಕ್ಷಗಳಿಗೂ ತಕ್ಕಪಾಠ ಕಲಿಸುತ್ತದೆ ಎಂದು ಎಚ್ಚರಿಕೆ ನೀಡಿದರು. ಹರಪನಹಳ್ಳಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮೀಸಲಾತಿ ಪರಿಣಾಮ ಅತ್ಯಧಿಕ ಜನಸಂಖ್ಯೆ ಹೊಂದಿದ್ದರೂ, ಸಮಾಜ ಅವಕಾಶಗಳಿಂದ ವಂಚಿತವಾಗಿತ್ತು. ರಾಜಕೀಯ ಪಕ್ಷಗಳು ಸಮಾಜವನ್ನು ಕೇವಲ ವೋಟ್ ಗಳಿಕೆ ಮಾತ್ರ ಉಪಯೋಗಿಸಿಕೊಳ್ಳದೆ, ಜನಸಂಖ್ಯಾಧಾರಿತವಾಗಿ ಸ್ಥಾನಮಾನ ಕಲ್ಪಿಸುವ ಮೂಲಕ ಸಮಾಜಕ್ಕೆ ಸಾಮಾಜಿಕ ನ್ಯಾಯ ಒದಗಿಸಬೇಕು. ಕ್ಷೇತ್ರ ಪುನರ್‌ವಿಂಗಡನೆಯಿಂದಾಗಿ ಕ್ಷೇತ್ರ ಸಾಮಾನ್ಯವಾಗಿದೆ.ಹೀಗಾಗಿ, ಹೊರಗಿನ ಅಭ್ಯರ್ಥಿಗಳಿಗೆ ಮಣೆಹಾಕದೆ. ಸಮಾಜದ ಸ್ಥಳೀಯ ಅಭ್ಯರ್ಥಿಗಳಿಗೆ `ಬಿ~ ಫಾರಂ ನೀಡಬೇಕು ಎಂಬ ಮನವಿಯನ್ನು ಎಲ್ಲಾ ಪಕ್ಷಗಳ ವರಿಷ್ಠರ ಮುಂದಿಡುತ್ತೇವೆ. ಸಮಾಜದ ಮನವಿಯನ್ನು ತಿರಸ್ಕರಿಸಿದ ಪಕ್ಷಗಳಿಗೆ ಹೇಗೆ ಬುದ್ಧಿ ಕಲಿಸಬೇಕು ಎಂಬುದನ್ನು ಚುನಾವಣೆಯಲ್ಲಿ ತೋರಿಸುತ್ತೇವೆ ಎಂದು ಗುಡುಗಿದರು.ಆರ್ಥಿಕವಾಗಿ ದುರ್ಬಲವಾಗಿರುವ ಸಮಾಜದ ಕಟ್ಟಕಡೆಯ ವಿದ್ಯಾರ್ಥಿಗಳಿಗೂ ವ್ಯಾಸಂಗದ ಅನುಕೂಲತೆ ಕಲ್ಪಿಸುವ ನಿಟ್ಟಿನಲ್ಲಿ ತಾಲ್ಲೂಕು ಕೇಂದ್ರದಲ್ಲಿ ವಸತಿನಿಲಯ ಆರಂಭಿಸಲು ಉದ್ದೇಶಿಸಲಾಗಿದೆ. ಈ ಉದ್ದೇಶಕ್ಕೆ ಈಗಾಗಲೇ ಪಟ್ಟಣದ ಪಟೇಲ್ ಬೆಟ್ಟನಗೌಡ ಕುಟುಂಬವರ್ಗ, ಕೆಎಸ್‌ಆರ್‌ಟಿಸಿ ಬಸ್‌ಡಿಪೋ ಬಳಿ ಎರಡು ಎಕರೆ ಭೂಮಿಯನ್ನು ದಾನ ಮಾಡಿದೆ. ವೀರಶೈವ ಪಂಚಮಸಾಲಿ ಪೀಠದ ಜಗದ್ಗುರುಗಳ ಆಜ್ಞೆ ಹಾಗೂ ಮುಖಂಡರೊಂದಿಗೆ ಸಮಾಲೋಚಿಸಿ ಶೀಘ್ರದಲ್ಲಿಯೇ ನಿಲಯಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಮಾಹಿತಿ ನೀಡಿದರು.ಸಮಾಜದ ಮುಖಂಡರಾದ ಪಟೇಲ್ ಬೆಟ್ಟನಗೌಡ, ಆರುಂಡಿ ನಾಗರಾಜ, ಕಾನಹಳ್ಳಿ ರುದ್ರಪ್ಪ, ಕೆ. ವೀರಣ್ಣ, ಎಚ್. ಮಲ್ಲಿಕಾರ್ಜುನ್, ಕೊಟ್ರಪ್ಪ ಈ ಸಂದರ್ಭದಲ್ಲಿ ಹಾಜರಿದ್ದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.