ಶನಿವಾರ, ಏಪ್ರಿಲ್ 10, 2021
32 °C

ರಾಜ್ಯದ 20 ಕಡೆ ಮೀನು ಮಾರುಕಟ್ಟೆ ಅಭಿವೃದ್ಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬ್ರಹ್ಮಾವರ: ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮ ವತಿಯಿಂದ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಸುಮಾರು ರೂ 17ಲಕ್ಷ ಅಂದಾಜಿನಲ್ಲಿ ಬ್ರಹ್ಮಾವರ ಚಾಂತಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಿಸಲಾಗುವ ನೂತನ ಮೀನು ಮಾರುಕಟ್ಟೆಗೆ ಗುರುವಾರ ಶಿಲಾನ್ಯಾಸ ನೆರವೇರಿಸಲಾಯಿತು.ಶಿಲಾನ್ಯಾಸ ಮಾಡಿದ ಮೀನುಗಾರಿಕಾ ಅಭಿವೃದ್ಧಿ ನಿಗಮ ಅಧ್ಯಕ್ಷ ನಿತಿನ್ ಕುಮಾರ್ ಮಾತನಾಡಿ, ರಾಜ್ಯದ ವಿವಿಧೆಡೆ 20 ಮೀನು ಮಾರುಕಟ್ಟೆಗಳನ್ನು ಅಭಿವೃದ್ಧಿ ಗೊಳಿಸಲು ನಿಶ್ಚಯಿಸಲಾಗಿದೆ. ಇದರಲ್ಲಿ ಉತ್ತರ ಕನ್ನಡದ ನಂದನಗುಡ್ಡೆ, ಕೋಡಿಬಾಳ, ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಯ ಹೆಜಮಾಡಿ, ಕೋಟೇಶ್ವರ, ಮೂಡುಬೆಳ್ಳೆ, ಹುಣ್ಸೆಮಕ್ಕಿ, ವಾರಂಬಳ್ಳಿ, ಬಜ್ಪೆ ಪ್ರದೇಶದಲ್ಲಿ ಕಾಮಗಾರಿಗಳನ್ನು ಶೀಘ್ರದಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಮೀನು ಮಾರುಕಟ್ಟೆಗಳನ್ನು ಅಭಿವೃದ್ಧಿ ಪಡಿಸಲು ಆಯಾ ಪಂಚಾಯಿತಿಗಳ ಮನವಿಯ ಆಧಾರದ ಮೇಲೆ ಅಭಿವೃದ್ಧಿ ನಿಗಮದಿಂದ ತಲಾ ರೂ 10 ಲಕ್ಷ ಅನುದಾನ ನೀಡಲಾಗುತ್ತಿದ್ದು, ಇನ್ನುಳಿದ ಹಣವನ್ನು ಸ್ಥಳೀಯ ಶಾಸಕರ ನಿಧಿ ಅಥವಾ ಪಂಚಾಯಿತಿಯಿಂದ ಭರಿಸಿ ಕಾಮಗಾರಿ ನಡೆಸಲಾಗುವುದು ಎಂದು ಅವರು ತಿಳಿಸಿದರು.ಪ್ರಸ್ತುತ ಇಲ್ಲಿನ ಮೀನುಮಾರುಕಟ್ಟೆಯನ್ನು 78 ಚದರ ಮೀಟರ್ ಸ್ಥಳದಲ್ಲಿ ಆರ್‌ಸಿಸಿ ಮೇಲ್ಛಾವಣಿಯ ಬದಲಾಗಿ ಗ್ಯಾಲ್ ವ್ಯಾಲ್ಯೂಮ್ ಶೀಟ್ ಮಾದರಿಯ ಮೇಲ್ಛಾವಣಿ ನಿರ್ಮಿಸಲು ಉದ್ದೇಶಿಸಲಾಗಿದೆ. ಇನ್ನು ಮೂರು ತಿಂಗಳೊಳಗೆ ಕಾಮಗಾರಿ ಪೂರ್ತಿ ಗೊಳಿಸಲಾಗುವುದು ಮತ್ತು ಪ್ರಸ್ತುತ ಮೀನು ಮಾರಾಟ ಮಾಡುವ ಮೀನುಗಾರರಿಗೆ ಮೀನು ಮಾರಾಟ ಮಾಡಲು ಪಂಚಾಯಿತಿ ವತಿಯಿಂದ ಬದಲಿ ವ್ಯವಸ್ಥೆ ಮಾಡಲಾಗುವುದು. ಕಾಮಗಾರಿ ಮುಗಿದ ಮೇಲೆ ಮಾರುಕಟ್ಟೆಯ ಸಂಪೂರ್ಣ ಜವಾಬ್ದಾರಿ ಸ್ಥಳೀಯ ಪಂಚಾಯಿತಿ ನಿರ್ವಹಿಸುತ್ತದೆ. ಈ ಮೀನು ಮಾರುಕಟ್ಟೆಯಲ್ಲಿ ಸುಮಾರು 16 ಜನ ಮೀನುಗಾರರು ಏಕಕಾಲದಲ್ಲಿ ಮೀನು ಮಾರಾಟ ಮಾಡಲು ಮತ್ತು ಸುಮಾರು 50 ಜನ ಗ್ರಾಹಕರು ಕೊಂಡುಕೊಳ್ಳಲು ಅವಕಾಶವಿರುತ್ತದೆ. ಚರಂಡಿ ವ್ಯವಸ್ಥೆ, ಸ್ವಚ್ಛತೆಗೆ ಹೆಚ್ಚು ಗಮನ ನೀಡಲಾಗುವುದು ಎಂದು ಅವರು ತಿಳಿಸಿದರು.ಶಾಸಕ ಕೆ.ರಘುಪತಿ ಭಟ್, ದ.ಕ ಜಿಲ್ಲಾ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶಪಾಲ್ ಸುವರ್ಣ, ಕೆಎಫ್‌ಡಿಸಿ ಆಡಳಿತ ನಿರ್ದೇಶಕ ವಿ.ಕೆ.ಶೆಟ್ಟಿ, ವ್ಯವಸ್ಥಾಪಕ ನಿರ್ದೇಶಕ ಎಂ.ಡಿ.ಪ್ರಸಾದ್, ಹಿರಿಯ ವ್ಯವಸ್ಥಾಪಕ ಮುದ್ದಣ್ಣ, ಮೈಸೂರು ಟೊಬೆಕೋ ಕಂಪೆನಿ ಅಧ್ಯಕ್ಷ ಬಿ.ಎನ್.ಶಂಕರ ಪೂಜಾರಿ, ಗುತ್ತಿಗೆದಾರ ನಾಗೇಶ್ ಎಂ.ಕಾಂಚನ್, ಉಡುಪಿ ಜಿಲ್ಲಾ ಮೊಗವೀರ ಸಂಘಟನೆಯ ಕಾರ್ಯದರ್ಶಿ ಶಿವರಾಂ ಕೆ.ಎಂ, ಚಾಂತಾರು ಗ್ರಾ.ಪಂ.ಅಧ್ಯಕ್ಷೆ ಜಯಂತಿ ವಾಸುದೇವ್, ಜಿಲ್ಲಾ ಹಸಿ ಮೀನು ಮಾರಾಟಗಾರರ ಸಂಘದ ಅಧ್ಯಕ್ಷ ಬೇಬಿ ಎಸ್.ಸಾಲಿಯಾನ್, ತಾ.ಪಂ.ಸದಸ್ಯೆ ಉಷಾ ಪೂಜಾರ್ತಿ, ಬ್ರಹ್ಮಾವರ ವಲಯದ ಅಧ್ಯಕ್ಷೆ ಸರೋಜಾ, ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಮೋಹನ್, ರಘುಪತಿ ಬ್ರಹ್ಮಾವರ, ನಿಶಾನ್ ರೈ, ಪಂಚಾಯಿತಿ ಸದಸ್ಯರು ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.