ಶುಕ್ರವಾರ, ಏಪ್ರಿಲ್ 23, 2021
22 °C

ರಾಜ್ಯಪಾಲರ ಪರಮಾಧಿಕಾರ: ಸಂಘರ್ಷಕ್ಕೆ ಕಾರಣ?

ಹೊನಕೆರೆ ನಂಜುಂಡೇಗೌಡ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯಪಾಲರ ಪರಮಾಧಿಕಾರ: ಸಂಘರ್ಷಕ್ಕೆ ಕಾರಣ?

ನವದೆಹಲಿ: ಹೈದರಾಬಾದ್- ಕರ್ನಾಟಕ ಭಾಗದ ವಿಶೇಷ ಸ್ಥಾನಮಾನಕ್ಕಾಗಿ ರೂಪಿಸಲಾಗಿರುವ ಸಂವಿಧಾನ ತಿದ್ದುಪಡಿ ಮಸೂದೆ ಅಂಗೀಕಾರವಾದ ಬಳಿಕ ಅಸ್ತಿತ್ವಕ್ಕೆ ಬರಲಿರುವ `ಪ್ರತ್ಯೇಕ ಅಭಿವೃದ್ಧಿ ಮಂಡಳಿ'ಯ ಸದಸ್ಯರ ನೇಮಕವು ರಾಜ್ಯಪಾಲರ ಪರಮಾಧಿಕಾರವಾಗಿದ್ದು ಈ ಅಧಿಕಾರವೇ ರಾಜಭವನ ಮತ್ತು ರಾಜ್ಯ ಸರ್ಕಾರದ ನಡುವೆ ಸಂಘರ್ಷಕ್ಕೆ ಕಾರಣವಾಗಬಹುದೆಂಬ ಕಳವಳ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.

ಹಿಂದುಳಿದಿರುವ ಬೀದರ್, ಗುಲ್ಬರ್ಗ, ಯಾದಗಿರಿ, ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳಿಗೆ ಒಂದೇ ಅಭಿವೃದ್ಧಿ ಮಂಡಳಿ ರಚನೆಯಾಗುವ ಸಾಧ್ಯತೆಯಿದೆ. ಈ ಮಂಡಳಿಗೆ ರಾಜ್ಯಪಾಲರೇ ಅಧ್ಯಕ್ಷರು. ನಿಯಮದಲ್ಲಿ ಅವಕಾಶ ಮಾಡಿದರೆ ಬೇರೆಯವರೂ ಮುಖ್ಯಸ್ಥರಾಗಬಹುದು.

ಸಮಿತಿಯಲ್ಲಿ ಡಜನ್ ಸದಸ್ಯರಿರುವ ಸಾಧ್ಯತೆಯಿದ್ದು, ಅವರನ್ನು ರಾಜ್ಯಪಾಲರೇ ನೇಮಕ ಮಾಡಲಿದ್ದಾರೆ. ಪರಿಣತರು ಹಾಗೂ ಅಧಿಕಾರಿಗಳಿಗೇ ದೊಡ್ಡ ಪಾಲು. ಜನರಿಂದ ಆಯ್ಕೆಯಾದ ಪ್ರತಿನಿಧಿಗಳ ಪಾತ್ರ ಕಡಿಮೆ.

ಅತ್ಯಂತ ಪ್ರಮುಖವಾದ ಕಾನೂನು-ಸುವ್ಯವಸ್ಥೆ ನಿರ್ವಹಣೆ ಹಾಗೂ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳ ವರ್ಗಾವಣೆ ಅಧಿಕಾರ ರಾಜ್ಯದ ನಿಯಂತ್ರಣಲ್ಲಿರುತ್ತದೆ. ಉಳಿದಂತೆ ಅಭಿವೃದ್ಧಿ ಯೋಜನೆಗಳನ್ನು ರೂಪಿಸಿ, ಜಾರಿಗೆ ತರುವ ಅಧಿಕಾರ ಮಂಡಳಿಯದ್ದು.ಶಿಕ್ಷಣ ಮತ್ತು ಉದ್ಯೋಗ ಮೀಸಲಾತಿ ಅದರದ್ದೇ ಜವಾಬ್ದಾರಿ. ಆರು ಜಿಲ್ಲೆಗಳ ಅಭಿವೃದ್ಧಿಗೆ ಮುಂಗಡ ಪತ್ರದಲ್ಲಿ ಹಣ ನಿಗದಿ ಮಾಡಿದರೆ ಸರ್ಕಾರದ ಕೆಲಸ ಮುಗಿಯಿತು. ಮುಂದಿನದು ಮಂಡಳಿ ಹೊಣೆ ಎಂದು ಗೃಹ ಸಚಿವಾಲಯದ ಮೂಲಗಳು ತಿಳಿಸಿವೆ. ಕೇಂದ್ರ ಸರ್ಕಾರದ ಯೋಜನೆಗಳ ಅನುಷ್ಠಾನ ಮತ್ತು ಉಸ್ತುವಾರಿ ಅಭಿವೃದ್ಧಿ ಮಂಡಳಿ ಹೆಗಲಿಗೇ ಬೀಳಲಿದೆ.

ರಾಜ್ಯ ಸರ್ಕಾರದ ಅನುಮತಿ ಪಡೆಯದೆ ಆರು ಜಿಲ್ಲೆಗಳಲ್ಲಿ ಯೋಜನೆಗಳ ಅನುಷ್ಠಾನ ಕುರಿತು ಪರಿಶೀಲಿಸುವಂತೆ ಕೇಂದ್ರ ಗೃಹ ಸಚಿವಾಲಯ ಯೋಜನಾ ಆಯೋಗಕ್ಕೆ ಕೇಳಬಹುದು.

ಮಂಡಳಿಗೆ ಸದಸ್ಯರನ್ನು ನೇಮಿಸುವ ಅಧಿಕಾರ ಹೊಂದಿರುವ ರಾಜ್ಯಪಾಲರಿಗೆ ಅವರನ್ನು ಕಿತ್ತುಹಾಕುವ ಅಧಿಕಾರವೂ ಇರುತ್ತದೆ. ಸದಸ್ಯರೂ ತಾವಾಗಿಯೇ ರಾಜೀನಾಮೆ ಕೊಡಬಹುದು.

ಅಧಿಕಾರಾವಧಿ:  ಖಾಲಿಯಾದ ಜಾಗಕ್ಕೆ ಹೊಸಬರನ್ನು ನೇಮಕ ಮಾಡಬಹುದು. ವಿದರ್ಭ ಅಭಿವೃದ್ಧಿ ಮಂಡಳಿ ಅಧಿಕಾರಾವಧಿ ಎರಡೂವರೆ ವರ್ಷ.  ಹೈದರಾಬಾದ್- ಕರ್ನಾಟಕದ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ ಬಿದ್ದ ಬಳಿಕ ಅಭಿವೃದ್ಧಿ ಮಂಡಳಿ ಅಧಿಕಾರಾವಧಿ ತೀರ್ಮಾನವಾಗಲಿದೆ ಎಂದು ಗೃಹ ಸಚಿವಾಲಯದ ಮೂಲಗಳು ತಿಳಿಸಿವೆ.

ರಾಜ್ಯ ಯೋಜನಾ ಮಂಡಳಿ ಹಿರಿಯ ಅಧಿಕಾರಿ, ಸಂಬಂಧಪಟ್ಟ ವಿಭಾಗದ ಪ್ರಾದೇಶಿಕ ಕಮಿಷನರ್, ರಾಜ್ಯ ಸರ್ಕಾರ ಸೂಚಿಸುವ ಹೆಚ್ಚುವರಿ ಕಾರ್ಯದರ್ಶಿ, ಹಿಂದುಳಿದ ಜಿಲ್ಲೆಗಳನ್ನು ಪ್ರತಿನಿಧಿಸುವ ಒಂದಿಬ್ಬರು ಶಾಸಕರು ಹಾಗೂ ಸ್ಥಳೀಯ ಸಂಸ್ಥೆಗಳ ಒಂದಿಬ್ಬರು ಚುನಾಯಿತ ಸದಸ್ಯು ಅಭಿವೃದ್ಧಿ ಮಂಡಳಿಗೆ ನೇಮಕವಾಗಲಿದ್ದಾರೆ. ರಾಜ್ಯಪಾಲ ಚುನಾಯಿತ ಸದಸ್ಯರನ್ನು ಸರದಿ ಮೇಲೆ ನೇಮಿಸಲು ನಿಯಮದಲ್ಲಿ ಅವಕಾಶ ಕಲ್ಪಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

ಕಳವಳಕ್ಕೆ ಕಾರಣ: ಮಹಾರಾಷ್ಟ್ರದಲ್ಲಿ ರಾಜ್ಯಪಾಲರ ನೇತೃತ್ವದ ಮಂಡಳಿಯಲ್ಲಿ ಚುನಾಯಿತ ಪ್ರತಿನಿಧಿಗಳಿಗೆ ಕನಿಷ್ಠ ಪ್ರಾತಿನಿಧ್ಯ ದೊರೆತಿರುವುದು ರಾಜ್ಯ ಸರ್ಕಾರಕ್ಕೆ ಕಳವಳಕ್ಕೆ ಕಾರಣವಾಗಿದೆ. ಚುನಾಯಿತ ಪ್ರತಿನಿಧಿಗಳನ್ನು ಸಮಾಧಾನಪಡಿಸಲು ಕೇಂದ್ರ ಸರ್ಕಾರ ಅಭಿವೃದ್ಧಿ ಮಂಡಳಿ ಸದಸ್ಯರ ಸಂಖ್ಯೆ ಹೆಚ್ಚಿಸಬಹುದು. ಹಾಗೆ ಮಾಡುವುದೇ ಎಂಬ ಪ್ರಶ್ನೆ ರಾಜ್ಯವನ್ನು ಕಾಡುತ್ತಿದೆ. ಮಹಾರಾಷ್ಟ್ರದ ವಿದರ್ಭ ಮಾದರಿಯನ್ನು ಅಧ್ಯಯನ ಮಾಡಿದ ಬಳಿಕ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಚಿಂತೆಗೊಳಗಾಗಿದ್ದಾರೆ.

ಅಪಸ್ವರ: ಮಹಾರಾಷ್ಟ್ರ ಸರ್ಕಾರ ಮತ್ತು ರಾಜಭವನದ ನಡುವೆ ಸಂಘರ್ಷ ನಡೆಯುತ್ತಿದೆ. ಹಿಂದುಳಿದ ಜಿಲ್ಲೆಗಳಲ್ಲಿ ಯೋಜನೆಗಳು ಸರಿಯಾಗಿ ಅನುಷ್ಠಾನಗೊಳ್ಳುತ್ತಿಲ್ಲ. ಯೋಜನೆಗಳ ಉಸ್ತುವಾರಿ ಸರಿಯಾಗಿಲ್ಲ.

ಯೋಜನೆಗಳಿಗೆ ನಿಗದಿ ಮಾಡಿದ ಹಣ ಸರಿಯಾಗಿ ಬಳಕೆ ಆಗುತ್ತಿಲ್ಲ ಎಂಬ ಆರೋಪಗಳು ಚುನಾಯಿತ ಪ್ರತಿನಿಧಿಗಳಿಂದ ಕೇಳಿ ಬರುತ್ತಿದೆ. ರಾಜಭವನದಲ್ಲಿ ಯೋಜನೆ ಜಾರಿ, ಅನುಷ್ಠಾನ ಮತ್ತು ಮೌಲ್ಯಮಾಪನದ ವ್ಯವಸ್ಥೆಯೇ ಇಲ್ಲ. ಇದರಿಂದಾಗಿ ಅಭಿವೃದ್ಧಿ ಮಂಡಳಿ ಪುನರ‌್ರಚಿಸಬೇಕೆಂಬ ಕೂಗೆದ್ದಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ರಾಜಭವನದ ಆಕ್ಷೇಪ: ಆದರೆ, ರಾಜಭವನ ಹೇಳುವುದೇ ಬೇರೆ. ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸುತ್ತಿಲ್ಲ. ಯೋಜನೆ ಮೌಲ್ಯಮಾಪನ ವರದಿಯನ್ನು ಸಕಾಲಕ್ಕೆ ಸಲ್ಲಿಸುತ್ತಿಲ್ಲ. ಯೋಜನೆಯ ಹಣವನ್ನು ಬೇರೆಡೆಗೆ ತಿರುಗಿಸಲಾಗುತ್ತಿದೆ. ನಿರ್ದಿಷ್ಟ ಯೋಜನೆಗೆ ಕೊಟ್ಟ ಹಣವನ್ನು ಬೇರೆ ಉದ್ದೇಶಗಳಿಗೆ ಖರ್ಚು ಮಾಡುತ್ತಿರುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರುತ್ತಿದೆ.

ವೆಂಕಯ್ಯನಾಯ್ಡು ನೇತೃತ್ವದ ಗೃಹ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿ ಮುಂದೆಯೂ ಮಹಾರಾಷ್ಟ್ರದ ಅಧಿಕಾರಿಗಳು ರಾಜಭವನದ ನೇತೃತ್ವದ ಅಭಿವೃದ್ಧಿ ಮಂಡಳಿಯಲ್ಲಿ ಕೆಲಸ ಕಾರ್ಯಗಳು ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಹೇಳಿದ್ದಾರೆ. ಕೇಂದ್ರ ಸರ್ಕಾರ ವಿದರ್ಭ ಅಭಿವೃದ್ಧಿ ಮಂಡಳಿಗಳ ನ್ಯೂನತೆಗಳನ್ನು ಹೈದರಾಬಾದ್- ಕರ್ನಾಟಕ ಅಭಿವೃದ್ಧಿ ಮಂಡಳಿಯನ್ನು ರಚಿಸುವಾಗ              ಸರಿಪಡಿಸುವುದೇ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.