ಬುಧವಾರ, ಮೇ 18, 2022
27 °C

ರಾಜ್ಯ ಬಜೆಟ್-ಸೋನಿಯಾ ಶಹಬ್ಬಾಸಗಿರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. `ಆಹಾರ ಭದ್ರತೆ ಕಾಯ್ದೆ' ಕುರಿತು ಚರ್ಚಿಸಲು ಕರೆದಿದ್ದ ಸಭೆಯಲ್ಲಿ ಸಿದ್ದರಾಮಯ್ಯ ಪಕ್ಷದ ಅಧ್ಯಕ್ಷರಿಗೆ ಬಜೆಟ್ ಪ್ರತಿಯನ್ನು ನೀಡಿದರು. ಸಂಜೆ ಮುಖ್ಯಮಂತ್ರಿ ಅವರನ್ನು ಕರೆಸಿಕೊಂಡ ಸೋನಿಯಾ `ಉತ್ತಮ ಬಜೆಟ್ ಕೊಟ್ಟಿದ್ದೀರಿ ಎಂದು ಬೆನ್ನು ತಟ್ಟಿದರು' ಎಂದು ಉನ್ನತ ಮೂಲಗಳು ತಿಳಿಸಿವೆ.`ನಿಜಕ್ಕೂ ಒಳ್ಳೆಯ ಬಜೆಟ್ ನೀಡಿದ್ದೀರಿ. ಎಲ್ಲರನ್ನು ತೃಪ್ತಿಪಡಿಸುವ ಕೆಲಸ ಮಾಡಿದ್ದೀರಿ. ನಿಮ್ಮ ಬಜೆಟ್ ನೋಡಿ ಸಂತಸವಾಗಿದೆ. ಬಜೆಟ್‌ನಲ್ಲಿ ಪ್ರಕಟಿಸಿರುವ ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸಿ. ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದು, ನಿಮಗೆ ಅತ್ಯಂತ ಕಡಿಮೆ ಸಮಯವಿದೆ' ಎಂದು ಸೋನಿಯಾ ನೆನಪಿಸಿದ್ದಾರೆ.`ಕೃಷಿ, ನೀರಾವರಿ, ಆರೋಗ್ಯ, ಶಿಕ್ಷಣ, ಮೂಲಸೌಕರ್ಯ ಕ್ಷೇತ್ರಗಳಿಗೆ ಒತ್ತು ನೀಡಿದ್ದೀರಿ. ರೈತರು, ಬಡವರು, ದಲಿತರು, ಮಹಿಳೆಯರು, ಮಕ್ಕಳು ಹಾಗೂ ಹಿಂದುಳಿದ ವರ್ಗಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾರ್ಯಕ್ರಮಗಳನ್ನು ರೂಪಿಸಿದ್ದೀರಿ. ನಿಮ್ಮ ಕಾರ್ಯಕ್ರಮಗಳಿಗೆ ಸಂಪನ್ಮೂಲ ಕ್ರೋಡೀಕರಣವೇ ದೊಡ್ಡ ಸವಾಲು. ಈ ಸವಾಲನ್ನು ಸಮರ್ಥವಾಗಿ ಎದುರಿಸಿ' ಎಂದು ಕಿವಿಮಾತು ಹೇಳಿದರು ಎನ್ನಲಾಗಿದೆ.ಪರಮೇಶ್ವರ್ ಸಂಚಾಲಕ

ರಾಜ್ಯ ಕಾಂಗ್ರೆಸ್ ಪಕ್ಷ- ಸರ್ಕಾರದ ನಡುವೆ ಹೊಂದಾಣಿಕೆಗೆ `ಸಮನ್ವಯ ಸಮಿತಿ' ಮತ್ತು ಪ್ರಣಾಳಿಕೆಯಲ್ಲಿನ ಭರವಸೆಗಳ ಈಡೇರಿಕೆಗೆ `ಅನುಷ್ಠಾನ ಸಮಿತಿ'ಯು ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್‌ಸಿಂಗ್ ನೇತೃತ್ವದಲ್ಲಿ ಶೀಘ್ರ ಅಸ್ತಿತ್ವಕ್ಕೆ ಬರಲಿದೆ. ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಉಭಯ ಸಮಿತಿಗಳ ಸಂಚಾಲಕರಾಗಿರುತ್ತಾರೆಂದು ಮುಖ್ಯಮಂತ್ರಿ ಶನಿವಾರ ಪತ್ರಕರ್ತರಿಗೆ ತಿಳಿಸಿದರು.ಸಮನ್ವಯ ಸಮಿತಿ ಹಾಗೂ ಪ್ರಣಾಳಿಕೆ ಸಮಿತಿ ಸದಸ್ಯರ ಪಟ್ಟಿಯನ್ನು ರಾಜ್ಯದ ಉಸ್ತುವಾರಿ ದಿಗ್ವಿಜಯ್ ಸಿಂಗ್ ಅವರಿಗೆ ತಲುಪಿಸಲಾಗಿದೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಜತೆ ಸಮಾಲೋಚಿಸಿ ಒಪ್ಪಿಗೆ ಪಡೆದ ಬಳಿಕ ಅಧಿಕೃತವಾಗಿ ಪ್ರಕಟವಾಗಲಿದೆ.ರಾಜ್ಯದ ಉಸ್ತುವಾರಿ ಕಾರ್ಯದರ್ಶಿ ಸೆಲ್ವ ಕುಮಾರ್ ಹಾಗೂ ರಾಜ್ಯ ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರು ಉಭಯ ಸಮಿತಿಗಳ ಸದಸ್ಯರಾಗಿರುತ್ತಾರೆ. ಪ್ರಣಾಳಿಕೆ ಅನುಷ್ಠಾನ ಸಮಿತಿಯಲ್ಲಿ ಸಂಪುಟ ಸದಸ್ಯರೊಬ್ಬರು ಇರುತ್ತಾರೆ. ಎಐಸಿಸಿ ಅಧ್ಯಕ್ಷರು ಇಬ್ಬರು ಹಿರಿಯ ನಾಯಕರನ್ನು ನೇಮಕ ಮಾಡಲಿದ್ದಾರೆ.ಸಿದ್ದರಾಮಯ್ಯ ಹಾಗೂ ಪರಮೇಶ್ವರ್ ನಡುವೆ ಆರಂಭವಾಗಿದೆ ಎನ್ನಲಾದ `ಶೀತಲ ಸಮರ'ದ ಹಿನ್ನೆಲೆಯಲ್ಲಿ ಪಕ್ಷ ಮತ್ತು ಸರ್ಕಾರದ ನಡುವಿನ ಸಮನ್ವಯಕ್ಕೆ ಸಮಿತಿ ರಚನೆ ಮಾಡಲಾಗುತ್ತಿದೆ ಎನ್ನುವ ವರದಿಗಳು ಪ್ರಕಟವಾಗಿದ್ದವು. ಆದರೆ, ಕೆಪಿಸಿಸಿ ಅಧ್ಯಕ್ಷರ ಜತೆ ತಮಗೆ ಭಿನ್ನಾಭಿಪ್ರಾಯ ಇದೆ ಎಂಬ ವರದಿಗಳನ್ನು ಸಿದ್ದರಾಮಯ್ಯ ತಳ್ಳಿಹಾಕಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.