ಬುಧವಾರ, ಮೇ 18, 2022
23 °C

ರೇಡಿಯೊ ದೂರದರ್ಶಕ ವಿಸ್ಮಯ

ಎನ್. ವಾಸುದೇವ್ Updated:

ಅಕ್ಷರ ಗಾತ್ರ : | |

`ರೇಡಿಯೊ ದೂರದರ್ಶಕ~ ಎಂದರೇನು?

ಹೆಸರೇ ಸೂಚಿಸುವಂತೆ ಅದು ಒಂದು ವಿಧದ ದೂರದರ್ಶಕ. ಅವಗೆಂಪು ದೂರದರ್ಶಕ, ಚಾಕ್ಷುಕ ದೂರದರ್ಶಕ (ಚಿತ್ರ - 7, 8), ಅತಿ ನೇರಿಳೆ ದೂರದರ್ಶಕ, ಕ್ಷ-ಕಿರಣ ದೂರದರ್ಶಕ (ಚಿತ್ರ - 12)ಗಳಂತೆ ರೇಡಿಯೊ ದೂರದರ್ಶಕವೂ ಖಗೋಳ ವಿಜ್ಞಾನ ಕ್ಷೇತ್ರದ ಒಂದು ವಿಶಿಷ್ಟ ಅದ್ಭುತ ಅತ್ಯವಶ್ಯ ಅತ್ಯುಪಯುಕ್ತ ಸಾಧನ.ನಕ್ಷತ್ರ, ನೀಹಾರಿಕೆ, ಗ್ಯಾಲಕ್ಸಿ (ಕ್ರಮವಾಗಿ ಚಿತ್ರ - 9, 10, 11) ಇತ್ಯಾದಿ ವ್ಯೋಮಣಯಗಳಿಂದ ಹೊಮ್ಮಿಬರುವ `ರೇಡಿಯೊ ತರಂಗ~ಗಳನ್ನು ಗ್ರಹಿಸುವ, ತನ್ಮೂಲಕ ಅಂತಹ ಕಾಯಗಳ ಅಧ್ಯಯನಕ್ಕೆ ನೆರವು ನೀಡುವ ಸಾಧನ ಅದು. ಅಷ್ಟೇ ಅಲ್ಲದೆ ಕೃತಕ ಉಪಗ್ರಹಗಳಿಗೆ ಮತ್ತು ವ್ಯೋಮನೌಕೆಗಳಿಗೆ ಸೂಚನೆಗಳನ್ನು ಕಳುಹಲು, ಅವುಗಳಿಂದ ಮಾಹಿತಿ ಸ್ವೀಕರಿಸಲು ಕೂಡ ರೇಡಿಯೊ ದೂರದರ್ಶಕಗಳೇ ಪ್ರಧಾನ ಸಾಧನ.ಇನ್ನೂ ವಿಶೇಷ ಏನೆಂದರೆ ವಿಶ್ವದಲ್ಲಿ ದೂರದೂರದ ಭೂಮೇಶ್ವರ ನೆಲೆಗಳಲ್ಲಿರಬಹುದಾದ `ಬುದ್ಧಿವಂತ ಜೀವಿ~ಗಳ ಶೋಧದ ಕೆಲಸಕ್ಕೂ ರೇಡಿಯೊ ದೂರದರ್ಶಕಗಳೇ ಮೂಲ ಆಧಾರ. ಅನ್ಯಲೋಕಗಳ ಬುದ್ಧಿವಂತ ಜೀವಿಗಳನ್ನು ಸಂಪರ್ಕಿಸಲು ಜಾರಿಯಲ್ಲಿರುವ ಸುಪ್ರಸಿದ್ಧ `ಸೇಟೆ~ ಕಾರ್ಯಕ್ರಮದ (ಸರ್ಚ್ ಫಾರ್ ಎಕ್ಸ್‌ಟ್ರಾ ಟೆರೆಸ್ಟ್ರಿಯಲ್ ಇಂಟಲಿಜನ್ಸ್) ಮೂಲ ಸಾಧನ ಕೂಡ ಇದೇ.ಇತರ ದೂರದರ್ಶಕಗಳಿಂದ ರೇಡಿಯೊ ದೂರದರ್ಶಕ ಹೇಗೆ ಭಿನ್ನ?

ನಿಮಗೇ ತಿಳಿದಿರುವಂತೆ ನಕ್ಷತ್ರ, ಗ್ಯಾಲಕ್ಸಿಗಳಂತಹ ಎಲ್ಲ ವ್ಯೋಮ ಕಾಯಗಳೂ ಬಗೆಬಗೆಯ ಎಲ್ಲ ಬಗೆಯ ವಿದ್ಯುತ್ಕಾಂತೀಯ ವಿಕಿರಣಗಳನ್ನು ಹೊಮ್ಮಿಸುತ್ತಿವೆ. ಈ ವಿಕಿರಣಗಳು (ರೇಡಿಯೊ ಅಲೆಗಳು ಮೈಕ್ರೋ ಅಲೆಗಳು, ಅವಗೆಂಪು ವಿಕಿರಣ, ದೃಗ್ಗೋಚರ ಬೆಳಕು, ಅತಿ ನೇರಿಳೆ ಕಿರಣ, ಕ್ಷ-ಕಿರಣ ಮತ್ತು ಗಾಮಾ ವಿಕಿರಣ) ಬೇರೆಬೇರೆ ವ್ಯಾಪ್ತಿಯ ತರಂಗಾಂತರಗಳಿಂದಾಗಿ ಭಿನ್ನಭಿನ್ನವಾಗಿವೆ.ವಿದ್ಯುತ್ಕಾಂತೀಯ ರೋಹಿತದಲ್ಲಿ 30 ಸೆಂ.ಮೀ.ಗಿಂತ ಅಧಿಕ ತರಂಗದೂರದ ಅಲೆಗಳ ವಿಕಿರಣ ವರ್ಗವೇ ರೇಡಿಯೊ ಅಲೆಗಳು. ಈ ವರ್ಗದ ವಿದ್ಯುತ್ಕಾಂತೀಯ ಅಲೆಗಳನ್ನಷ್ಟೇ ಗ್ರಹಿಸಬಲ್ಲ ಸಾಧನವೇ ರೇಡಿಯೊ ದೂರದರ್ಶಕ.ವಿಸ್ಮಯ ಏನೆಂದರೆ ಭಿನ್ನಭಿನ್ನ ದ್ರವ್ಯ ಸಂಯೋಜನೆಯ ಬಹುಪದರಗಳ ಭೂ ವಾಯುಮಂಡಲ (ಚಿತ್ರ - 6) ಧರೆಯತ್ತ ಬರುವ ಎಲ್ಲ ವಿದ್ಯುದಯಸ್ಕಾಂತೀಯ ವಿಕಿರಣಗಳನ್ನೂ ನೆಲ ತಲುಪಲು ಬಿಡುವುದಿಲ್ಲ; ಅತಿ ನೇರಿಳೆ ಕ್ಷ-ಕಿರಣ ಮತ್ತು ಗಾಮಾ ಕಿರಣಗಳನ್ನೆಲ್ಲ ತಡೆದು, ಅವಗೆಂಪು ವಿಕಿರಣವನ್ನು ಬಹುಪಾಲು ಹೀರಿ, ದೃಗ್ಗೋಚರ ಬೆಳಕು ಮತ್ತು ರೇಡಿಯೊ ಅಲೆಗಳನ್ನು ಮಾತ್ರ ನೆಲದವರೆಗೆ ಹರಿಯ ಬಿಡುತ್ತದೆ.ಅದರಲ್ಲೂ ದೃಗ್ಗೋಚರ ಬೆಳಕು ವಕ್ರೀಭವನ ಚದರುವಿಕೆ ಇತ್ಯಾದಿ ವಿದ್ಯಮಾನಗಳಿಗೊಳಗಾಗುತ್ತದೆ. ರೇಡಿಯೊ ಅಲೆಗಳು ಮಾತ್ರ ಸಂಪೂರ್ಣವಾಗಿ ಅಸ್ಖಲಿತವಾಗಿ ಭೂನೆಲ ಮುಟ್ಟುತ್ತವೆ. ಹಾಗಾಗಿ ಇತರ ದೂರದರ್ಶಕಗಳಂತೆ ಗರಿಷ್ಠ ಕಾರ್ಯಕ್ಷಮತೆ ರೇಡಿಯೊ ದೂರದರ್ಶಕಗಳನ್ನು ಉಪಗ್ರಹಗಳಂತೆ ಬಾಹ್ಯಾಕಾಶದಲ್ಲಿ ಇರಿಸಬೇಕಿಲ್ಲ (ಚಿತ್ರ - 8, 12); ನೆಲದ ಮೇಲೇ ಸ್ಥಾಪಿಸಿ ಗರಿಷ್ಠ ಸಾಮರ್ಥ್ಯ ಗಳಿಸಬಹುದು.

ಇನ್ನೂ ಒಂದು ಭಿನ್ನತೆ ವಿಶಿಷ್ಟತೆ ಏನೆಂದರೆ ರೇಡಿಯೊ ದೂರದರ್ಶಕಗಳನ್ನು ಬಳಸಿ ಕೃತಕ ಉಪಗ್ರಹಗಳಿಗೆ ವ್ಯೋಮನೌಕೆಗಳಿಗೆ ವ್ಯೋಮಯಾತ್ರಿಗಳಿಗೆ ಸಂಕೇತಗಳನ್ನು - ಸಂದೇಶಗಳನ್ನು ಕಳಹಿಸಬಹುದು, ಪ್ರಸಾರ ಮಾಡಬಹುದು. ಇತರ ದೂರದರ್ಶಕಗಳಿಗೆ ಈ ಸಾಮರ್ಥ್ಯ ಇಲ್ಲ.ರೇಡಿಯೊ ದೂರದರ್ಶಕಗಳ ಸ್ವರೂಪ ಏನು?


ಅತ್ಯಂತ ಸಾಮಾನ್ಯವಾಗಿ ರೇಡಿಯೊ ದೂರದರ್ಶಕಗಳದು ವಿಶಾಲ ಭೋಗುಣಿಯಾಕಾರದ ಸ್ವರೂಪ (ಚಿತ್ರ - 1, 2, 3, 4) ಹತ್ತಾರು ಮೀಟರ್ ವ್ಯಾಸದ ಬೃಹದಾಕಾರದ `ಡಿಶ್~ಗಳು ಅವು. ಬೇಕೆನಿಸಿದ ದಿಕ್ಕಿಗೆ, ಯಾವುದೇ ಕೋನಕ್ಕೆ, ಆಕಾಶದ ಯಾವುದೇ ಕಾಯದ ಕಡೆಗೆ ತಿರುಗಿಸುವುದು ಸಾಧ್ಯವಾಗುವಂತೆ ಅವುಗಳ ಜೋಡಣೆ. ಡಿಶ್‌ನ ಗೋಳ ಕೇಂದ್ರಕ್ಕೆ ಹೊಂದಿಸಿಟ್ಟ `ಫೀಡ್~ಗೆ ಡಿಶ್‌ನ ಮೇಲೆ ಬೀಳುವ ಎಲ್ಲ ರೇಡಿಯೊ ಅಲೆಗಳೂ ಪ್ರತಿಫಲಗೊಂಡು ಕೇಂದ್ರೀಕರಣಗೊಂಡು ವಿಶೇಷ ಕಂಪ್ಯೂಟರ್‌ಗೆ ರವಾನೆಗೊಳ್ಳುತ್ತವೆ; ಆಯಾ ರೇಡಿಯೊ ಮೂಲದ ಚಿತ್ರಣ ಸಿದ್ಧವಾಗುತ್ತದೆ.ರೇಡಿಯೊ ಅಲೆಗಳದು ಅವುಗಳ ಭಾರೀ ತರಂಗಾಂತರಗಳಿಂದ ದುರ್ಬಲ ಪ್ರಕೃತಿ. ಹಾಗಾಗಿ ಯಾವುದೇ ಆಕಾಶಕಾಯದಿಂದ ಬರುವ ರೇಡಿಯೊ ಅಲೆಗಳನ್ನು ಗರಿಷ್ಠ ಪ್ರಮಾಣದಲ್ಲಿ ಗ್ರಹಿಸುವುದು ಅತ್ಯವಶ್ಯ. ಆದ್ದರಿಂದಲೇ ರೇಡಿಯೊ ದೂರದರ್ಶಕಗಳ ಡಿಶ್‌ಗಳು ಸಾಧ್ಯವಾದಷ್ಟೂ ವಿಸ್ತಾರವಾಗಿರುವುದು ಸೂಕ್ತ.ರೇಡಿಯೊ ದೂರದರ್ಶಕಗಳ ಸಾಮರ್ಥ್ಯ ಹೆಚ್ಚಿಸಲು ಹಲವಾರು ಡಿಶ್‌ಗಳನ್ನು ಹರಡಿ ನಿಲ್ಲಿಸಿ ಅವನ್ನೆಲ್ಲ ಒಟ್ಟಾಗುವಂತೆ ಸಂಪರ್ಕಗೊಳಿಸುವ ಕ್ರಮವೂ ಇದೆ. `ರೇಡಿಯೊ ಇಂಟರ್‌ಫೆರಾ ಮೀಟರ್~ಗಳೆಂದೇ ಇಂಥ ವ್ಯವಸ್ಥೆಗಳು ಪ್ರಸಿದ್ಧ. `ನ್ಯೂ ಮೆಕ್ಸಿಕೋ~ದಲ್ಲಿ ಯು.ಎಸ್.ಎ. ಸ್ಥಾಪಿಸಿರುವ `ವೆರಿ ಲಾರ್ಜ್ ಅರ‌್ರೇ (ವಿ. ಎಲ್.ಎ.: ಚಿತ್ರ - 5) ಎಂಬ ಇಂತಹದೊಂದು ಜೋಡಣೆಯಲ್ಲಿ ಒಟ್ಟು ಇಪ್ಪತ್ತೇಳು ಡಿಶ್‌ಗಳಿವೆ. ಪ್ರತಿ ಡಿಶ್‌ನ ವ್ಯಾಸ ಇಪ್ಪತ್ತೈದು ಮೀಟರ್ (82 ಅಡಿ). ಆಂಗ್ಲ ವರ್ಣಮಾಲೆಯ `ವೈ~ ಅಕ್ಷರದಂತೆ ಅಣಿಗೊಳಿಸಿರುವ ಈ ಜೋಡಣೆಯ ಒಟ್ಟು ಉದ್ದ 34 ಕಿ.ಮೀ.! ಹಾಗಾಗಿ 34 ಕಿ.ಮೀ. ವ್ಯಾಸದ ಒಂದೇ ಡಿಶ್‌ನಂತೆ ಈ ರೇಡಿಯೊ ದೂರದರ್ಶಕ ಸಮರ್ಥವಾಗಿದೆ. (ವಿ.ಎಲ್.ಎ.ಯ ನಿರ್ಮಾಣ ವೆಚ್ಚ 1500 ಕೋಟಿ ರೂ.!) ಇದರ ಸಾಮರ್ಥ್ಯವನ್ನೂ ಮೀರಿಸಿದ `ವೆರಿ ಲಾರ್ಜ್ ಬೇಸ್ ಲೈನ್ ಅರ‌್ರೇ~ (ವಿ. ಎಲ್. ಬಿ. ಎ.) ಎಂಬ ಇನ್ನೂ ಒಂದು `ರೇಡಿಯೊ ಇಂಟರ್ ಫೆರಾಮೀಟರ್~ ಕ್ರಿಯಾಶೀಲವಾಗಿದೆ.ರೇಡಿಯೊ ದೂರದರ್ಶಕಗಳ ಸಾಧನೆಗಳು ಏನೇನು?


ಅದೊಂದು ಸುದೀರ್ಘ ಪಟ್ಟಿ. ತುಂಬ ಸಂಕ್ಷಿಪ್ತವಾಗಿ ಅಂಥ ಕೆಲ ಅಂಶಗಳು: ನಮ್ಮ ಗ್ಯಾಲಕ್ಸಿಯಾದ `ಕ್ಷೀರಪಥ~ದ ಸುರಳಿ ಸ್ವರೂಪ (ಚಿತ್ರ - 11) ವನ್ನು ಗುರುತಿಸಿದ್ದು, ನಕ್ಷತ್ರಗಳ ಸ್ಫೋಟದ ಅವಶೇಷಗಳ ಹೇರಳ ಪತ್ತೆ ಸಾಧ್ಯವಾದದ್ದು - ಅವಕ್ಕೆಲ್ಲ ರೇಡಿಯೊ ದೂರದರ್ಶಕಗಳು ನೆರವು ನೀಡಿವೆ.ಅತಿ ವಿಶಿಷ್ಟ, ವಿಚಿತ್ರ, ನಿಗೂಢ ಸ್ವರೂಪಗಳ ನಕ್ಷತ್ರಗಳಾದ ಕ್ಸಾಸಾರ್, ಪಲ್ಸಾರ್‌ಗಳಂತಹವನ್ನು ಹತ್ತಾರು ನೂರು ಸಂಖ್ಯೆಯಲ್ಲಿ ಪತ್ತೆ ಹಚ್ಚಿವೆ; ಅವುಗಳ ಸ್ವಭಾವ- ಸ್ವರೂಪಗಳನ್ನು ಬಯಲಿಗೆಳೆದಿವೆ. ಚಾಕ್ಷುಷ ದೂರದರ್ಶಕಗಳಿಗೆಟುಕದಷ್ಟು ಮಂದಕಾಂತಿಯ, ಅತಿ ದೂರದ ಹತ್ತಾರು ಸಾವಿರ ಕಾಯಗಳನ್ನು ಗ್ಯಾಲಕ್ಷಿಗಳನ್ನು ಪತ್ತೆ ಹಚ್ಚಿವೆ. ನಮ್ಮ ಸೂರ್ಯನೂ ಸೇರಿದಂತೆ ಸಾವಿರಾರು ನಕ್ಷತ್ರಗಳ, ನೀಹಾರಿಕೆಗಳ, ಗ್ಯಾಲಕ್ಸಿಗಳ ದ್ರವ್ಯ ಸಂಯೋಜನೆಯ ವಿವರಗಳನ್ನೂ ಒದಗಿಸಿದೆ.ಹಾಗೆಲ್ಲ ಆಗಿರುವುದರಿಂದಲೇ ರೇಡಿಯೊ ದೂರದರ್ಶಕಗಳು `ರೇಡಿಯೊ ಅಸ್ಟ್ರಾನಮಿ~ ಎಂಬೊಂದು ವಿಶಿಷ್ಟ ಶಾಖೆಯೇ ಖಗೋಳ ವಿಜ್ಞಾನದಲ್ಲಿ ಕವಲೊಡೆಯುವಂತೆ ಮಾಡಿವೆ.

ಎಂಥ ಅದ್ಭುತ ಸಾಧನ! ಅಲ್ಲವೇ?

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.