ಸೋಮವಾರ, ಏಪ್ರಿಲ್ 19, 2021
29 °C

ರೈತರಲ್ಲಿ ಆತ್ಮವಿಶ್ವಾಸ ತುಂಬಲು ಪ್ರವಾಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೈತರಲ್ಲಿ ಆತ್ಮವಿಶ್ವಾಸ ತುಂಬಲು ಪ್ರವಾಸ

ಶಿವಮೊಗ್ಗ: ಬರಗಾಲ ಎದುರಿಸುತ್ತಿರುವ ಜಿಲ್ಲೆಗಳ ಹತ್ತು ದಿನದ ಪ್ರವಾಸ ಮುಗಿಸಿದ ನಂತರ ಎರಡನೇ ಹಂತದ ಪ್ರವಾಸ ಕೈಗೊಳ್ಳುವೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಕಟಿಸಿದರು.ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಭಾನುವಾರ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಜತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಮೊದಲ ಪ್ರವಾಸ ಮುಗಿಸಿದ 10ರಿಂದ 12 ದಿವಸಗಳ ಬಿಡುವಿನ ನಂತರ ಎರಡನೇ ಹಂತದ ಪ್ರವಾಸ ಹಮ್ಮಿಕೊಳ್ಳಲಾಗುವುದು. ಈ ಬಗ್ಗೆ ಮುಖಂಡರ ಜತೆ ಚರ್ಚಿಸಲಾಗುವುದು ಎಂದು ಹೇಳಿದ ಯಡಿಯೂರಪ್ಪ ತಮ್ಮ ಎರಡನೇ ಹಂತದ ಪ್ರವಾಸದ ಸ್ವರೂಪದ ಬಗ್ಗೆ ವಿವರಿಸಲಿಲ್ಲ.ಸರ್ಕಾರ ಬರ ಪರಿಹಾರ ಕಾಮಗಾರಿ ಕೈಗೊಂಡಿದೆ ನಿಜ. ಆದರೆ, ಈ ಸಂದರ್ಭದಲ್ಲಿ ನಾವು ಆರಾಮಾಗಿ ಕಾಲ ಕಳೆಯಬಾರದು. ಯುದ್ಧೋಪಾದಿಯಲ್ಲಿ ಬರ ಪರಿಹಾರ ಕಾಮಗಾರಿ ಅನುಷ್ಠಾನಗೊಳ್ಳಬೇಕು. ಸರ್ಕಾರ ನಾಲ್ಕೈದು ತಿಂಗಳ ಯೋಜನೆ ರೂಪಿಸಿ ಬರ ಎದುರಿಸಬೇಕು. ಮೇವು, ಕುಡಿಯುವ ನೀರಿಗೂ ತೊಂದರೆ ಆರಂಭವಾಗಿದೆ. ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಅವರಲ್ಲಿ ಆತ್ಮವಿಶ್ವಾಸ ತುಂಬುವ ಉದ್ದೇಶದಿಂದ ತಮ್ಮ ಈ ಮೊದಲ ಹಂತದ ಪ್ರವಾಸ ನಡೆಯಲಿದೆ ಎಂದು ಹೇಳಿದರು.ಉದ್ಯೋಗ ಖಾತ್ರಿ ಯೋಜನೆ ಎಲ್ಲ ಜಿಲ್ಲೆಗಳಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಯಡಿಯೂರಪ್ಪ, ಕೇಂದ್ರ ಸರ್ಕಾರ ರೂ 5 ಸಾವಿರ ಕೋಟಿ ನೀಡಲು ಸಿದ್ಧವಿದೆ. ಇದನ್ನು ರಾಜ್ಯ ಸರ್ಕಾರ ಸಮರ್ಪಕವಾಗಿ ಬಳಸಿಕೊಳ್ಳಬೇಕು. ಅಲ್ಲದೇ, ಕೇಂದ್ರ ಸರ್ಕಾರ ಯೋಜನೆ ದುರ್ಬಳಕೆಯಾಗದಂತೆ ಕೆಲವೊಂದು ಮಾರ್ಪಾಡುಗಳನ್ನು ಮಾಡಲು ಮುಂದಾಗಬೇಕು ಎಂದರು.ಬರದ ಹಿನ್ನೆಲೆಯಲ್ಲಿ ಸರ್ಕಾರ ರೈತರ ಸಾಲ ಮನ್ನಾ ಮಾಡಿದೆ. ಕೇಂದ್ರದ ಶರದ್ ಪವಾರ್ ಅವರೇ ರಾಜ್ಯದಲ್ಲಿ ಭೀಕರ ಬರಗಾಲ ಎಂದು ಒಪ್ಪಿಕೊಂಡು, ಘೋಷಣೆ ಮಾಡಿದರೂ ಅನುದಾನ ಬಿಡುಗಡೆ ಮಾಡಿಲ್ಲ. ಬರ ಅಧ್ಯಯನಕ್ಕೆ ಎಷ್ಟೊಂದು ಸಲ ತಂಡ ಕಳುಹಿಸುತ್ತೀರಿ ಎಂದು ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದರು.ಬೋರ್‌ವೆಲ್‌ಗಳು ಇರುವ ಕಡೆ ಕನಿಷ್ಠ ಒಂದು ಎಕರೆ ಮೇವು ಬೆಳೆಯುವುದನ್ನು ಕಡ್ಡಾಯಗೊಳಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ ಅವರು, ಏನು ಬೇಕಾದರೂ ತರಬಹುದು. ಆದರೆ, ಮೇವು ತಕ್ಷಣಕ್ಕೆ ಬೆಳೆಯಲು ಸಾಧ್ಯವೇ ಎಂದು ಪ್ರಶ್ನಿಸಿದರು.ಸಮರ್ಪಕ ಅನುಷ್ಠಾನ: ಇದಕ್ಕೂ ಮೊದಲು ಮಾತನಾಡಿದ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಸರ್ಕಾರ ಸಮರ್ಪಕವಾಗಿ ಬರಪರಿಹಾರ ಕಾಮಗಾರಿ ಕೈಗೊಂಡಿದೆ. ಆದರೂ ಯಡಿಯೂರಪ್ಪ ಅವರು ಪ್ರವಾಸದಲ್ಲಿ ಕಾಣುವ ಕೊರತೆ ಹಾಗೂ ಮುಂದೆ ಕೈಗೊಳ್ಳಬೇಕಾದ ಯೋಜನೆಗಳ ಬಗ್ಗೆ ಆಯಾ ಜಿಲ್ಲಾಧಿಕಾರಿಗಳಿಂದ ವರದಿ ತರಿಸಿಕೊಂಡು, ಅನುಷ್ಠಾನಗೊಳಿಸಲಾಗುವುದು ಎಂದರು.

ಇನ್ನೆಲ್ಲಿಗೆ ಪತ್ರ ಬರೆಯಬೇಕು?

ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ತಮ್ಮ ವಿರುದ್ಧ ಹೈಕಮಾಂಡ್‌ಗೆ ಪತ್ರ ಬರೆದ ಬಗ್ಗೆ ಪ್ರತಿಕ್ರಿಯಿಸಿದ ಅವರು, `ಅದು ನನಗೆ ತಿಳಿದಿಲ್ಲ. ಅವರು ಹೈಕಮಾಂಡ್‌ಗೆ ಬರೆಯದೆ ಇನ್ನೆಲ್ಲಿಗೆ ಪತ್ರ ಬರೆಯಬೇಕು?~ ಎಂದು ಮರು ಪ್ರಶ್ನಿಸಿದರು.

 

ಪಕ್ಷದಲ್ಲಿನ ಗೊಂದಲಗಳ ಬಗ್ಗೆ ಉತ್ತರಿಸಿದ ಅವರು, `ನಾವೂ ಮನುಷ್ಯರೇ; ರಾಜಕೀಯ ಪಕ್ಷಗಳಲ್ಲಿ ಗೊಂದಲಗಳು ಸಹಜ~

-ಬಿ.ಎಸ್. ಯಡಿಯೂರಪ್ಪ

 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.